ಮನಸಲೆ ಮನಸಾಗುವೆ ನಾನು…
ಮನಸಲೆ ಮನಸಾಗುವೆ ನಾನು, ಹೇಳು ನೀ ಹೇಗಳಿಸುವೆ ನೀನು ?
ಕನಸಲಿ ಕನಸ ಕದಿವೆನಿನ್ನು, ಕಾಣದೆ ಹೇಗಿರುವೆ ನೀನು ?
ಹೃದಯದ ಬಡಿತಕು ತಪ್ಪಿಸುವೆ, ಲಯಬದ್ದ ನಿಯಮ
ಕಾಡುವೆ ಪ್ರೀತಿಯ ಸೂರಗಲ, ಮೀರಿದರು ಸಂಯಮ || ಮನಸಲೆ ||
ತಪ್ಪೇನು ನನ್ನದೀ ಎದೆಯ, ಗಡಿಯಾರ ಸರಕು
ಅಡವಿಟ್ಟು ಕೂತಿದೆ ಕೀಲಿಯನು, ನಿನ್ನಲಿ ಹುಡುಕು
ಅರಿವಿದ್ದೊ ಇರದೆಯೊ ನೀನದರ, ಕೀ ಕೊಡುವ ಒಡತಿ
ಕಳುವಾಗಿ ಹೋಗಿದೆ ನಿನ್ನೊಳಗೆ, ಮತ್ತೆ ಸಿಗದ ರೀತಿ || ಮನಸಲೆ ||
ಕಳುವಲ್ಲ ಕಾಡಲು ನಿನ್ನನ್ನು, ತೊಡೆಯಲು ಬೇಡದ ನೋವನ್ನು
ಅರಿತರು ಅರಿಯದ ಹಾಗೇನು, ನಿನ್ನ ನಡೆಯ ಕಾನೂನು?
ಅವರಿಸಿಕೊಂಡುಬಿಡುವೆ ನಿನ್ನ, ಸಂಚು ಮಾಡೊ ಕೋಟಲೆಗೆ
ದಾರಿ ತಪ್ಪಿಸಿ ಕಂಗಾಲಾಗಿಸುತ, ನಿಲುವೆ ಸತತ ನಿನ್ನಾ ಕಾವಲಿಗೆ || ಮನಸಲೆ ||
ನೀ ಹಾಕಿ ಕುಳಿತೆ ಮನಕೆ ಬೀಗ, ನಿಂತಿದೆ ನನ್ನೆದೆ ಗಡಿಯಾರ
ನೀ ಕದವ ತೆರೆಯದೆ ಸರಾಗ, ನಡೆಯಲೆಂತು ಜೀವದ ವ್ಯಾಪಾರ
ನಾನಾಗುವೆ ಅದರ ಮುಳ್ಳ ಚಲನೆ, ನೀ ಮೌಲ್ಯದ ಅಂಕಿ ಕಣೆ
ಅಪಮೌಲ್ಯವಾಗದಂತೆ ಪರಿಗಣನೆ, ಕಾಯುವೆನೆ ನಿನ್ನಾ ನನ್ನಾಣೆ || ಮನಸಲೆ ||
ಹೇಳಲಿದೆ ಕೋಟಿ ಕೋಟಿ ಮಾತು, ಆಡದಿರುವುದೆ ಉಚಿತ
ಹೇಳದೆಲೆ ಮಾಡುವುದೆ ಒಳಿತು, ಒಳಿತಾಗುವುದು ಖಚಿತ
ಬಿಟ್ಟುಬಿಡೆ ಶಂಕೆ ಅನುಮಾನ, ಕೊಟ್ಟಷ್ಟು ಕೊಡಲಿ ವಿಧಿ
ಸಿಕ್ಕಷ್ಟು ಸಿಗಲಿ ಹಿಡಿವೆ ಬೊಗಸೆ, ಇರುವಷ್ಟು ದಿನ ಸನ್ನಿಧಿ || ಮನಸಲೆ ||
– ನಾಗೇಶ ಮೈಸೂರು