ವೈಶಿಷ್ಟ ಪೂರ್ಣ ಊರು “ಕುಂದ ಗೋಳ “
ಸಂಗೀತ ,ಶಿಲ್ಪಕಲೆ ಹಾಗು ಸಾಮರಸ್ಯ ಭಾವನೆಗಳ ತವರೂರಾದ “ನನ್ನ ಕುಂದಗೋಳ “ಕುರಿತು ಬರೆಯಲು ಹೆಮ್ಮೆ ಅನ್ನಿಸುತ್ತದೆ . ಪೂರ್ವದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಕುಂದಗೋಳವು ಈ ಕೆಳಗಿನ ಸಂಗತಿಗಳಿಗೆ ಪ್ರಸಿದ್ಧವಾಗಿದೆ.
ಸಂಗೀತ :– ಗಾನ ಗಂಧರ್ವ, ಸವಾಯಿ ಗಂಧರ್ವರು(ಮೂಲ ಹೆಸರು -ರಾಮಭಾವೂ ಕುಂದಗೋಳಕರ ) ಜನಿಸಿದ ಊರು . ಇವರ ಪಟ್ಟ ಶಿಷ್ಯರಾದ ಪದ್ಮ ವಿಭೂಷಣೆ ಶ್ರೀಮತಿ ಗಂಗೂಬಾಯಿ ಹಾನಗಲ್ , ಮತ್ತು ಭಾರತ ರತ್ನ ಪಂಡಿತ ಭೀಮಸೇನ ಜೋಷಿ ಯವರು ದೇಶ ವಿದೇಶಗಳಲ್ಲಿ ಸಂಗೀತ ಪ್ರಚುರಪಡಿಸಿ ನಮ್ಮೂರಿನ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಪ್ರತಿ ವರ್ಷ ಆಕ್ಟೋಬರ್ ತಿಂಗಳಲ್ಲಿ ಎರಡು ದಿನ ಅಹೋರಾತ್ರಿ ಜರಗುವ ಸವಾಯಿ ಗಂಧರ್ವರ ಸ್ಮೃತಿ ಮಹೋತ್ಸವಕ್ಕಾಗಿ . ಸ್ಥಳೀಯ ಮತ್ತು ಹೊರರಾಜ್ಯಗಳ ಕಲಾವಿದರು ಆಗಮಿಸುತ್ತಾರೆ, ಮೊದಲು ಈ ಕಾರ್ಯಕ್ರಮ ಶ್ರೀಮಂತ ನಾಡಗೀರ ಅವರ ಭವ್ಯ ವಾಡೆಯಲ್ಲಿ ನಡೆಯುತ್ತಾ ಇತ್ತು. ಈಗ ಟ್ರಸ್ಟ್ ಮೂಲಕ ಹೊಸದಾಗಿ ನಿರ್ಮಿಸಲಾದ ಸವಾಯಿ ಗಂಧರ್ವರ ಕಟ್ಟಡದಲ್ಲಿ ಜರುಗುತ್ತ ಇದೆ ಇವರ ಸಂಗೀತ ಪರಂಪರೆಯನ್ನು ಪಂಡಿತ ಅಶೋಕ ನಾಡಗೀರ, ಪಂಡಿತ ಕೃಷ್ಣೇಂದ್ರ ವಾಡೀಕರ, ಪಂಡಿತ ಜಯತೀರ್ಥ ಮೇವುಂಡಿ ಮುಂತಾದ ಕಲಾವಿದರು ಯಶಸ್ವಿಯಾಗಿ ಮುಂದುವರೆಸುತ್ತ ಇದ್ದಾರೆ .
ಶಿಲ್ಪಕಲೆ :- ನಮ್ಮೂರಲ್ಲಿ 12 ನೆಯ ಶತಮಾನದಲ್ಲಿ ಕಿಲ್ಲೆಯಲ್ಲಿ , ಅಮರ ಶಿಲ್ಪಿ ಜಕ್ಕಣಾಚಾರ್ಯರು ಕರೀ ಕಲ್ಲಿ ನಲ್ಲಿ ನಿರ್ಮಿಸಿದ “ಶಂಭುಲಿಂಗೇಶ್ವರ “ ದೇವಸ್ಥಾನ ಇದ್ದು, ಪ್ರತಿ ಕಂಭದ ಕೆತ್ತನೆ,ನುಣಪು . ಹಾಗು ಛತ್ತುಗಳಲ್ಲಿಯ ವಿವಿಧ ವಿನ್ಯಾಸ ,ನಂದಿ ಮೂರ್ತಿಯ ಕೆತ್ತನೆಗಳನ್ನೂ ವರ್ಣಿಸುವದು ಅಸಾಧ್ಯ , ಇವನ್ನೆಲ್ಲ ನೋಡಿಯೇ ಆನಂದಿಸಬೇಕು ,ಇನ್ನೊಂದು ವಿಶೇಷವೆಂದರೆ ಯುಗಾದಿಯ ದಿನಾ ಸೂರ್ಯನ ಮೊದಲ ಕಿರಣಗಳು ಈಶ್ವರನಮೇಲೆ ಬೀಳುವಂತೆ ಕಟ್ಟಲಾಗಿದೆ.
ಸಾಮರಸ್ಯ ಜೀವನ :- ಕುಂದಗೋಳದ ಕಾರ ಹುಣ್ಣಿವೆಯಂದು ಬ್ರಹ್ಮದೇವರ ಉತ್ಸವ ಜರಗುತ್ತದೆ,. ಇದರಲ್ಲಿ ಎಲ್ಲ ಕೋಮಿನ ಜನರು ಉತ್ಸಾಹದಿಂದ ಭಾಗವಹಿಸುತ್ತಾರೆ, ಮನೆ ಮನೆಗೆ ಸುಣ್ಣ ಬಣ್ಣ ಮಾಡಿಸಿ, ಎತ್ತುಗಳ ಮೆರವಣಿಗೆ , ಎರಡು ಕರಿಭಂಡಿಗಳಲ್ಲಿ ವೀರಗಾರರಪ್ರಯಾಣ ನಂತರ ಕರೋಗಲ್ಲ ಓಣಿಯಿಂದ ಬ್ರಹ್ಮದೇವರ ಗುಡಿ ಯವರೆಗೆ ಅವರಿಂದ ಪಾದಯಾತ್ರೆ, ಬೇಡಿಕೊಂಡ ಅಪಾರ ಭಕ್ತವೃಂದದವರಿಂದ ದೀಡ ನಮಸ್ಕಾರ ಮುಂತಾದವುಗಳಿಂದ ಇಡೀ ಊರೇ ಸಂಭ್ರಮಿಸುತ್ತದೆ. ಅದರಂತೆ ನಮ್ಮೂರ “ಮೊಹರಂ” ಹಬ್ಬವು ಸಹಾ ಹಿಂದೂ,ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿದ್ದು ,ಡೋಲಿಗಳ ಮೆರವಣಿಗೆ, ಅವುಗಳ ಮುಂದೆ ಹೆಜ್ಜಿ ಮ್ಯಾಳಗಳ ಕುಣಿತ ,ಇತ್ತ್ಯಾದಿಗಳು ವರ್ಣನಾತೀತ , ಕುಂದಗೋಳವು ತಾಲೂಕ ಕೇಂದ್ರವಾಗಿದ್ದು ಹುಬ್ಬಳ್ಳಿಯಿಂದ 20 ಕಿಲೋಮೀಟರು ಅಂತರದಲ್ಲಿದೆ, ಹುಬ್ಬಳ್ಳಿಯಿಂದ ಸಾಕಷ್ಟು ಸಾರಿಗೆ ಬಸ್ಸುಗಳ ಅನುಕೂಲತೆ ಇದೆ ಅಲ್ಲದೆಹುಬ್ಬಳ್ಳಿ ಯಿಂದ ರೈಲ್ವೇ ಸಂಪರ್ಕವು ಇದ್ದು ,ಮೇಲೆ ನಮೂದಿಸಿದ ನಮ್ಮೂರ ಎಲ್ಲ ಉತ್ಸವಗಳಲ್ಲಿ ಭಾಗವಹಿಸಲು ಕುಂದಗೋಳ ಜನತೆಯ ಪರವಾಗಿ ಆದರದ ಬಿನ್ನಹ.
– ರಂಗಣ್ಣ ನಾಡಗೀರ , ಕುಂದಗೋಳ ,
ಹಾಲಿವಸ್ತಿ ಉಣಕಲ್ ,(ಹುಬ್ಬಳ್ಳಿ )
ರಂಗಣ್ಣ ನಾಡಿಗೇರ್ ಅವರು ಬರೆದ ಕುಂದಗೋಳದ ವೈಭವ,ವಿವರಣೆ, ಪ್ರಸಿದ್ಧಿ ಕುರಿತು ಓದಿದೆ.
ಸಂತೋಷವಾಯಿತು.
ಲೇಖಕರಿಗೆ ಅಭಿನಂದನೆಗಳು.
ಇನ್ನೂ ಸಾಕಷ್ಟು ವಿಷಯ ಬೇಕಾಗಿತ್ತು.
ಸಂಗೀತ, ಸವಾಯಿಗಂಧರ್ವರ, ನಾಡಗೀರ ವಾಡಾದ ಸಹಾಯ ಇತ್ಯಾದಿ ಕುರಿತು ಬಹುಶಃ ಮುಂದಿನ ದಿನಗಳಲ್ಲಿ ಬರೆಯಲಿ ಎಂದು ಆಶಿಸುತ್ತೇನೆ.