ಜೋಗತಿ ಜೋಳಿಗೆ : ಸಾರಾ ಅಬೂಬಕರ್ ಪ್ರಶಸ್ತಿ ವಿಜೇತ ಕೃತಿ
ಹೊಸ ಅಲೆಯ ಬರಹಗಾರ್ತಿಯರಲ್ಲಿ ಅನುಪಮಾ ಪ್ರಸಾದ್ ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು. ಶಿರಸಿ ಮೂಲದವರಾಗಿರುವ ಇವರು ಪ್ರಸ್ತುತ ಕಾಸರಗೋಡು ಸಮೀಪದ ಪೆರ್ಣೆಯಲ್ಲಿ ವಾಸವಾಗಿದ್ದಾರೆ. ‘ಚೇತನಾ’, ‘ಕರವೀರದ ಗಿಡ’, ‘ದೂರ ತೀರ’, ‘ಜೋಗತಿ ಜೋಳಿಗೆ’ ಇವರ ಕಥಾ ಸಂಕಲನಗಳು. ‘ಮನಸು ಮಾಯೆಯ ಹಿಂದೆ’ , ‘ಕೆನ್ನೀರು’ ಎಂಬ ರೇಡಿಯೋ ನಾಟಕಗಳನ್ನೂ ರಚಿಸಿರುವರು.
ಇವರ ಕಥಾ ಸಂಕಲನಗಳಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪುರಸ್ಕಾರ, ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪುರಸ್ಕಾರ-ಇತ್ಯಾದಿಗಳು ದೊರೆತಿವೆ. ಇದೀಗ ಸಾರಾ ಅಬೂಬಕರ್ ಪ್ರಶಸ್ತಿಯ ಗರಿಮೆ ಮುಡಿಗೇರಿಸಿಕೊಂಡಿರುವ ಕೃತಿ ‘ಜೋಗತಿ ಜೋಳಿಗೆ‘. ಈ ನಿಟ್ಟಿನಲ್ಲಿ ಕೃತಿಯ ಬಗೆ ಒಂದಿಷ್ಟು ಮಾತು.
ಪ್ರಸ್ತುತ ಕಾಲ ಘಟ್ಟದಲ್ಲಿ ಬರಹ ಒಂದು ಅಭಿವ್ಯಕ್ತಿ ಮಾಧ್ಯಮದಂತೆಯೇ ಪ್ರತಿಭಟನೆಯ ಮಾರ್ಗವೂ ಹೌದು. ಹೆಣ್ಣು ಮಕ್ಕಳ ಬರವಣಿಗೆಯಲ್ಲಿ ಅಷ್ಟೇನು ಸತ್ವವಿಲ್ಲ ಎಂಬ ಮಾತುಗಳ ನಡುವೆಯೇ ಗಟ್ಟಿ ಚಿಂತನೆಯ, ಸಮಾಜದ ಕುಂದು ಕೊರತೆಗಳನ್ನು, ಅದರಲ್ಲಿನ ಅಸಮಾನತೆಯನ್ನು ಗಮನಿಸುತ್ತಲೇ ಜೀವನ್ಮುಖಿಯಾಗಿರುವ ಕತೆಗಳು ಇವು. ಹೆಚ್ಚಿನ ಕತೆಗಳೂ ದಮನಿಸಲ್ಪಟ್ಟ ಹೆಣ್ಣು ಮನಸ್ಸುಗಳ ಆಕ್ರಂದನಕ್ಕೆ, ಶೋಷಿತರ ಒಳಬಂಡಾಯಕ್ಕೆ ದನಿಯಾಗಿರುವುದು ಇಲ್ಲಿನ ವಿಶಿಷ್ಟತೆ. ಎಲ್ಲೋ ಒಂದು ಕಡೆ ಅಸಹಜವೇನೋ ಎಂಬಂತೆ ಭಾಸವಾದರೂ ಅವರ ಹೆಚ್ಚಿನ ಕತೆಗಳಲ್ಲಿ ವಾಸ್ತವ ಪ್ರಪಂಚದ, ಅದರಲ್ಲೂ ಹೇಳಲಾಗದೆ ಅದುಮಿಡುವ, ಗೌರವ, ಮರ್ಯಾದೆಯ ಹೆಸರಿನಲ್ಲಿ ಮುಚ್ಚಿಹೋಗುವ ಅನೇಕ ವಿಷಯಗಳನ್ನು ಅವರು ಒಂದು ರೀತಿಯ ಸಹಾನುಭೂತಿಯಿಂದ, ಆತ್ಮಮರುಕವಿರದ ಪಾತ್ರಗಳ ಮೂಲಕ ಪ್ರತಿಪಾದಿಸುತ್ತಾರೆ.
ಇದರಲ್ಲಿ ನನ್ನನ್ನು ಹೆಚ್ಚು ಕಾಡಿದ ಕತೆ ‘ಜೋಗತಿ ಜೋಳಿಗೆ‘ ಹಾಗೂ ‘ಇಸುಮುಳ್ಳು’. ಕಾಸರಗೋಡು ಕಡೆಯ ಹವ್ಯಕ ಸಮುದಾಯದವರು ಬಳಸುವ ಹವ್ಯಕ ಭಾಷೆ, ‘ಕಾಮ’, ‘ಹಸಿವು’, ‘ಬಡತನ’, ‘ರೊಚ್ಚು’ ‘ಹಂಗು’ ಈ ಅಂಶಗಳನ್ನು, ಅವು ತಂದೊಡ್ಡುವ ದೈನ್ಯ ಅಂತೆಯೇ ಅವನ್ನು ಮೀರಬಹುದಾದ ದಾರಿಗಳನ್ನು ಅವು ಅತ್ಯಂತ ಸಕಾರಾತ್ಮಕವಾಗಿ ಕಟ್ಟಿಕೊಡುತ್ತವೆ. ಜಾಗತೀಕರಣ, ಕಂಪ್ಯೂಟರೀಕರಣದ ಮೊದಲು ಹೆಚ್ಚಿನ ಹವ್ಯಕ ಕುಟುಂಬಗಳು ಈ ರೀತಿಯ ಯಾಜಮಾನ್ಯ ಪದ್ಧತಿ, ಅಲ್ಲಿನ ಅಂತರ್ಗತ ಕ್ರೌರ್ಯಕ್ಕೆ ಸಿಲುಕಿದ್ದವು . ಇವನ್ನು ಅತಿ ಸಮರ್ಥವಾಗಿ, ಒಂದು ರೀತಿಯ ‘ಸಬ್ ವರ್ಸಿವ್’ ವಿಧದಲ್ಲಿ ತನ್ನ ಸ್ತ್ರೀ ಪರ ಧೋರಣೆಯನ್ನು ಪ್ರತಿಪಾದಿಸಲು ಬಳಸಿಕೊಂಡಿದ್ದಾರೆ.
ಇನ್ನು ಬಡ ದಲಿತ ಮಹಿಳೆ ಸಾಕುತಾಯಿಯಾಗಿ ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವ ‘ಡೇಗೆ’, ಕೋಮುಸಮಸ್ಯೆಯಂತಹ ಸೂಕ್ಶ್ಮ ವಿಷಯವನ್ನು ಪ್ರತಿಪಾದಿಸುವ ‘ಸೈತಾನನ ಬಲೆ’, ‘ಟ್ರಾನ್ಸ್ ಜೆಂಡರ್‘ಗಳ ಬಗ್ಗೆ ಅತ್ಯಂತ ಮಾನವೀಯತೆಯಿಂದ ಬರೆದ ‘ಆ ಜೀವದ ಅಪೂರ್ಣ ಸ್ವಗತಗಳು’, ಲೇಖಕಿಯವರ ಸಾಮಾಜಿಕ ಕಳಕಳಿಯನ್ನೂ, ಅಂಚಿಗೆ ತಳ್ಳಲ್ಪಟ್ಟವರ ಬಗೆಗಿನ ತುಡಿತವನ್ನೂ ದಟ್ಟ ವಿವರಗಳೊಂದಿಗೆ ಚಿತ್ರಿಸುತ್ತವೆ.,
ವೈದೇಹಿಯವರ ಕುಂದಗನ್ನಡದಷ್ಟೇ ಹವ್ಯಕ ಭಾಷೆಗೂ ಸೊಗಡಿದೆ,ಬನಿಯಿಂದ ಕೂಡಿದ ಧ್ವನಿಶಕ್ತಿಯಿದೆ ಎಂದು ಇವರ ಕಥೆಗಳಿಂದ ಅರಿವಾಗುತ್ತದೆ. ತೊಂಭತ್ತರ ದಶಕದ ಜಾಗತೀಕರಣದ ನಂತರದ ತಲ್ಲಣಗಳನ್ನೂ ಇವರು ಗಮನಿಸಿ ಇನ್ನಷ್ಟು ಕೃತಿಗಳನ್ನು ರಚಿಸಲಿ ಎಂದು ಹಾರೈಕೆ.
.
– ಜಯಶ್ರೀ ಬಿ ಕದ್ರಿ
.
ಶ್ರೀಮತಿ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು
ದನ್ಯವಾದಗಳು ನಿಮ್ಮ ಪ್ರೀತಿ-ವಿಶ್ವಾಸಕ್ಕೆ.
ಅನುಪಮಾ ಪ್ರಸಾದ್.