ಪಿತ್ತಜನಕಾಂಗ (ಲಿವರ್) ದಾನ..

Share Button

Hema-07112011

ಆಕೆ ನನ್ನ ಸಹೋದ್ಯೋಗಿ. ನಲುವತ್ತರ ಆಸುಪಾಸಿನ ವಯಸ್ಸು. ಸಾಧುಸ್ವಭಾವದವಳು, ಬಹಳ ದೈವಭಕ್ತೆ. ಬ್ಯಾಂಕೊಂದರಲ್ಲಿ ಉದ್ಯೋಗದಲ್ಲಿದ್ದ ಪತಿ, ಕಾಲೇಜಿನಲ್ಲಿ ಓದುತ್ತಿರುವ ಮಗ, ಸ್ವಂತ ಮನೆ ಹೊಂದಿದ್ದು ತೃಪ್ತ ಜೀವನ ನಡೆಸುತ್ತಿದ್ದರು.

ಈ ಸಂಸಾರಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ತಾಪತ್ರಯಗಳು ಎದುರಾದದ್ದು ಮನೆಯ ಯಜಮಾನನ ಅನಾರೋಗ್ಯದ ಮೂಲಕ. ಹಲವಾರು ವೈದ್ಯಕೀಯ ತಪಾಸಣೆ ಮಾಡಿದ ಮೇಲೆ ಆಕೆಯ ಮನೆಯವರ ಪಿತ್ತಜನಕಾಂಗಕ್ಕೆ ( ಲಿವರ್) ಹಾನಿಯಾಗಿದೆಯೆಂದೂ, ದಾನಿಗಳು ಯಾರಾದರೂ ಇದ್ದರೆ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿದರೆ, ಬದುಕಿ ಉಳಿಯಬಹುದು ಎಂದು ತಿಳಿಯಿತು. (ಸಾಮಾನ್ಯವಾಗಿ ಲಿವರ್ ತೊಂದರೆಗೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ಹೇಳುತ್ತಾರಾದರೂ, ಇವರು ಎಂದೂ ಮದ್ಯ ಸೇವಿಸಿದವರಲ್ಲ. ಬಾಲ್ಯದ ಯಾವುದೋ ಅನಾರೋಗ್ಯದಿಂದಾಗಿ ಈ ತೊಂದರೆ ಉಂಟಾಗಿತ್ತಂತೆ).

ಇದ್ದ ಉಳಿತಾಯ, ಆದಾಯ, ಇನ್ಶೂರೆನ್ಸ್ ಎಲ್ಲವೂ ಚಿಕಿತ್ಸೆಗೆ ಬೇಕಾಯಿತು. ಕೊನೆಗೆ ವೈದ್ಯಕೀಯ ಮಾರ್ಗದರ್ಶನ ಮತ್ತು ಆಪ್ತರ ಸಲಹೆ ಪಡೆದು, ಬಹಳಷ್ಟು ಆಲೋಚನೆ ಮಾಡಿ, ಹೇಗೋ ಸುಮಾರು 30 ಲಕ್ಷ ಹೊಂದಿಸಿ, ತನ್ನ ಲಿವರ್ ನ ಒಂದು ಭಾಗವನ್ನು ಗಂಡನಿಗೆ ದಾನ ಮಾಡಲು ನಿರ್ಧರಿಸಿದಳು. ಇಬ್ಬರೂ ಯಶಸ್ವಿ ಶಸ್ತ್ರಚಿಕಿತ್ಸೆಗೊಳಪಟ್ಟು, 3-4 ತಿಂಗಳ ನಂತರ ತಂತಮ್ಮ ಕೆಲಸಕ್ಕೆ ಹೋಗುವಷ್ಟು ಆರೋಗ್ಯವಂತರಾದರು . ಆ ಸಂದರ್ಭದಲ್ಲಿ, ಈ ಕುಟುಂಬ ಅನುಭವಿಸಿದ ದೈಹಿಕ, ಮಾನಸಿಕ ಮತ್ತು ಅರ್ಥಿಕ ಸವಾಲುಗಳು ಅಷ್ಟಿಷ್ಟಲ್ಲ. ಆದರೂ ಕೊನೆಯಲ್ಲಿ ಯಶಸ್ಸು ಸಿಕ್ಕಿತಲ್ಲಾ ಎಂಬ ನೆಮ್ಮದಿ ಇತ್ತು.

ಈ ವಿಚಾರವನ್ನು ಯಾಕೆ ಹೇಳುತ್ತಿದ್ದೇನೆಂದರೆ, ಹೆಚ್ಚಿನವರಿಗೆ ರಕ್ತದಾನ, ನೇತ್ರದಾನ. ಕಿಡ್ನಿ ದಾನದ ಬಗ್ಗೆ ಗೊತ್ತಿರುತ್ತದೆ. ಆದರೆ ಬದುಕಿರುವಾಗಲೇ ‘ಲಿವರ್ ದಾನ’ ಮಾಡಿದವರ ಬಗ್ಗೆ ಅಷ್ಟಾಗಿ ಕೇಳಿ ಬರುತ್ತಿಲ್ಲ. ಪಿತ್ತಜನಕಾಂಗವು ಶರೀರದ ಅತ್ಯಂತ ಸಂಕೀರ್ಣ ಅಂಗಗಳಲ್ಲೊಂದು. ಲಿವರ್ ದಾನ ಮಾಡುವ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ, ಗೊತ್ತಿದ್ದರೂ ದಾನ ಮಾಡಲು ಬಹಳ ಮಾನಸಿಕ ಸ್ಥೈರ್ಯ ಬೇಕು. ಲಿವರ್ ಅಗತ್ಯವುಳ್ಳ ವ್ಯಕ್ತಿಯೊಂದಿಗೆ ತೀರಾ ಹತ್ತಿರದ ಭಾವನಾತ್ಮಕ ಸಂಬಂಧ ಇದ್ದರೆ ಮಾತ್ರ ಇದಕ್ಕೆ ಮನಸ್ಸು ಸಜ್ಜುಗೊಳ್ಳುವುದು ಸಾಧ್ಯ. ಆಪರೇಷನ್ ಸಮಯದಲ್ಲಿ ಅಥವಾ ನಂತರ ತನ್ನ ಅರೋಗ್ಯಕ್ಕೆ ಏನಾದರೂ ತೊಂದರೆಯಾದರೆ ಎಂಬ ಆತಂಕ ದಾನಿಯನ್ನು ಕಾಡಿಯೇ ಕಾಡುತ್ತದೆ.

ಹಲವಾರು ವೈದ್ಯಕೀಯ ತಪಾಸಣೆಗಳ ನಂತರ, ಬಹಳಷ್ಟು ಕೌನ್ಸೆಲ್ಲಿಂಗ್ ಆದ ನಂತರ ಈ ಶಸ್ತ್ರಚಿಕಿತ್ಸೆ ನಡೆಯುತ್ತದೆ. ದಾನಿಯ ಶರೀರದಿಂದ ಲಿವರ್ ನ ನಿರ್ಧಿಷ್ಟ ಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ, ಪಡೆಯಲಿರುವವರ ಶರೀರದಲ್ಲಿ ಜೋಡಿಸಲಾಗುತ್ತದೆ. ದಾನಿಯ ಶರೀರದಲ್ಲಿ, ಉಳಿದ ಲಿವರ್ ನ ಭಾಗವು 2-3 ತಿಂಗಳಲ್ಲಿ ಬೆಳೆಯುತ್ತದೆ. ಪಡೆದವರ ಶರೀರದಲ್ಲಿಯೂ 2-3 ತಿಂಗಳಲ್ಲಿ ಹೊಂದಿಕೊಂಡು ಬೆಳೆಯುತ್ತದೆ. ಒಟ್ಟಾರೆಯಾಗಿ ಬಹಳ ಸಂಕೀರ್ಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ‘ಆಧುನಿಕ ಸಾವಿತ್ರಿ’ ಯಾದಳು ನನ್ನ ಗೆಳತಿ. ಇದು ಎರಡು ವರ್ಷ ಹಿಂದಿನ ವಿಚಾರ. ಇವರ ಪ್ರಯತ್ನ ಮತ್ತು ಯಶಸ್ಸಿನಿಂದಾಗಿ ನಾವೂ ‘ಪಿತ್ತಜನಕಾಂಗ (ಲಿವರ್) ದಾನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವಂತಾಯಿತು.

ಲಿವರ್ ದಾನ ಮಾಡುವ ಶಸ್ತ್ರ ಚಿಕಿತ್ಸೆಯ ನಂತರ ಅಕೆಯ ಅರೋಗ್ಯ ಸುಸ್ಥಿತಿಯಲ್ಲಿದೆ. ಚುರುಕಾಗಿ ಮನೆ-ಅಫೀಸು ಕೆಲಸಗಳನ್ನು ನಿಭಾಯಿಸುತ್ತಾಳೆ. ಯಜಮಾನರೂ ಹುಷಾರಾಗಿದ್ದಾರೆ ಅನ್ನುತ್ತಿದ್ದಳು.ಎಲ್ಲ ಸರಿಹೋಯಿತು ಅಂತ ಅಂದುಕೊಳ್ಳುತ್ತಿರುವಾಗ ದೈವೇಚ್ಛೆ ಬೇರೆಯೇ ಇತ್ತು.

ಪತ್ನಿಯಿಂದ ಲಿವರ್ ದಾನ ಪಡೆದು ಬದುಕಿದ ಅವರು, ಎರಡು ವರ್ಷಗಳ ನಂತರ (24/03/2016) ಹೃದಯಾಘಾತದಿಂದ ನಿಧನರಾದರು. ನನ್ನ ಗೆಳತಿಯ ಪರಿಶ್ರಮ ಮತ್ತು ತ್ಯಾಗವನ್ನು ಗೌರವಿಸಲಾದರೂ ದೇವರು ಆಕೆಯ ಪತಿಗೆ ಇನ್ನಷ್ಟು ಆಯುಸ್ಸು ಕೊಡಬೇಕಿತ್ತು,ಎಂಬ ನೋವು ಕಾಡುತ್ತಿದೆ.

 – ಹೇಮಮಾಲಾ.ಬಿ

4 Responses

 1. Manju Raju says:

  ಆ ದಿಟ್ಟ ಮಹಿಳೆ, ಮಗನಿಗೆ ದುಃಖ ಸಹಿಸಿ ಕೊಳ್ಳುವ ಆತ್ಮ ವಿಶ್ವಾಸ ಬರಲಿ ಎಂದು ಬಯಸುವೆ

 2. Mohini Damle says:

  ಛೇ….ದೇವರು ಸ್ವಲ್ಪ ಕರುಣೆ ತೋರಬೇಕಿತ್ತು.

 3. Shruthi Sharma says:

  🙁

 4. raghu says:

  ದೇವರ ಆಟ ಬಲ್ಲವರು ಯಾರು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: