ಪೋಷಕ, ವಯಸ್ಕ, ಬಾಲಕ..
ಇದು ಮನಃ ಸತ್ವಗಳ ಮಾತು
ಪಕ್ವಾಪಕ್ವ ಪ್ರಬುದ್ದ ಬಾಲಿಶ ನಡುವಳಿಕೆ
ವ್ಯಕ್ತಿತ್ವದ ವ್ಯವಹಾರದಲುಂಟಂತೆ ಮೊತ್ತ
ನಾವಾಡುವ ನಡೆನುಡಿ ಸಂಹಿತೆ ಸಮಸ್ತ..
ಏಯ್ ! ನೋಡಲ್ಲವನ ಕೀಟಲೆ ?
ಕೂರು ಬಾರೋ ತೆಪ್ಪಗೆ ಸುಮ್ಮನೆ ಮೂಲೆ
ಕೇಳಪ್ಪ ಹೇಳಿದ ಮಾತು ನಿನಗುತ್ತಮ
ಮಂದೆ ದಿನವೆಲ್ಲ ನುಡಿದಾ ಪೋಷಕ ಶಾಲೆ..
ಸರಿ ಸಮಾನ ಮನಸ್ಕ ಅನಿಸಿಕೆ ವಯಸ್ಕ
ಬಿಚ್ಚಿಟ್ಟರು ಮನದ ಮಾತು ತೆರೆಯದೆ ಪೂರ್ತ
ಗುಟ್ಟಿನ ಹನಿ, ಜುಟ್ಟಿನ ಬಣ್ಣ, ತುಟಿ ರಂಗು
ಅವನವಳಾ ಸಖ್ಯ ಪಿಸುಗುಟ್ಟುತ ರಹಸ್ಯ..
ನೋಡಿದೆಯ ಕರಗಿದರೆಲ್ಲಾ ಮುಖವಾಡ ?
ಕಾಣುವ ಹಸುಗೂಸು ಶಿಶು ಬಾಲಕ ಚೇಷ್ಟೆ !
ಛೇಢನೆ ಕೀಟಲೆ ನಗೆಯುಲ್ಲಾಸದ ವರ್ತನೆ
ತಂದಿಕ್ಕಿದೆ ಗಳಿಗೆ ಮದಿರೆಯಂತೆ ಹಸುಳೆಯ..
ತ್ರಿವೇಣಿ ಸಂಗಮ ಪ್ರತಿ ಮನಸಿನ ಸೂಕ್ತಿ
ಅನುಪಾತದಲದರನಾವರಣ ತಕ್ಕಂತೆ
ಸಾಕಾಗಿದೆ ವಯಸ್ಕ ಪೋಷಕ ನಿತ್ಯ ವೃತ್ತಿ
ಬಾಲಕನಾಗೆ ಮಡಿಲಾಸೆ ಹುಡುಕಿದೆ ಪ್ರವೃತ್ತಿ..
– ನಾಗೇಶ ಮೈಸೂರು
(ಸೂಚನೆ: ವ್ಯಕ್ತಿತ್ವ ವಿಕಸನ ತತ್ವದ ‘ಟ್ರಾನ್ಸ್ಯಾಕ್ಷನ್ ಅನಾಲಿಸಿಸ್’ನಲ್ಲಿ ಬರುವ ಪೇರೆಂಟ್, ಅಡಲ್ಟ್, ಚೈಲ್ಡ್ ಸೈದ್ದಾಂತಿಕ ಹಿನ್ನಲೆಯಲ್ಲಿ ಓದಿ. ಹೆಚ್ಚು ಆಸಕ್ತರಿಗೆ – ಎರಿಕ್ ಬರ್ನೆ ಯವರ ಸುಪ್ರಸಿದ್ದ ಪುಸ್ತಕ ‘ಗೇಮ್ಸ್ ಪೀಪಲ್ ಪ್ಲೇ’ – ಈ ಸಿದ್ದಾಂತದ ಬಗ್ಗೆ ಹೆಚ್ಚು ಬೆಳಕು ಬೀರುವ ಪುಸ್ತಕ )
(Picture source: https://madl.s3.amazonaws.com/images/p-a-c-wants.jpg)