ಪುಸ್ತಕನೋಟ-‘ಮಂದಹಾಸ’
ಶ್ರೀಮತಿ ರುಕ್ಮಿಣಿಮಾಲಾ ಅವರ ಲಘು ನಗೆ ಬರಹಗಳ ಸಂಕಲನ ‘ಮಂದಹಾಸ’ ವನ್ನು ಒಂದು ಬಾರಿ ಓದಿದೆ. ಒಂದು ಬಾರಿ ಎಂದು ಯಾಕೆ ಹೇಳಿದೆನೆಂದರೆ, ಹಾಸ್ಯ ಬರಹಗಳ ಶೈಲಿಯೇ ಹಾಗೆ. ಹಲವು ಬಾರಿ ಓದಿಸುತ್ತದೆ ಮತ್ತು ಪ್ರತಿ ಬಾರಿಯೂ ಹೊಸ ದೃಷ್ಟಿಕೋನದಲ್ಲಿ ಹಾಸ್ಯದ ಸೆಲೆ ಗೋಚರಿಸಿ ನಗೆಯುಕ್ಕಿಸುತ್ತದೆ.
ನಮ್ಮ ದಿನನಿತ್ಯದ ಘಟನೆಗಳನ್ನು ಗಮನಿಸಿ ಅವುಗಳಲ್ಲಿ ಅಡಕವಾದ ಸರಳ, ಸಹಜ, ವಿಷಯಗಳಲ್ಲಿ ಮಾತ್ರವಲ್ಲದೆ, ಕಿರಿಕಿರಿ ಹುಟ್ಟಿಸುವ ವಿಷಯಗಳಲ್ಲೂ ಹಾಸ್ಯದ ಅಂಶವನ್ನು ಕಂಡು ಸೊಗಸಾಗಿ ನಿರೂಪಿಸಿದ್ದಾರೆ. ಉದಾ: ಸೊಳ್ಳೆ ಷಿಕಾರಿ , ಬಾಳೆಗಿಡ ಹೆಂಗಸರು ಕಡಿಯಬಾರದೆ?
‘ಅಣ್ಣ-ತಂಗಿ ಸಲ್ಲಾಪ’ , ‘ಅತ್ತೆಯಂದಿರ ಒಡನಾಟ’ ಇತ್ಯಾದಿ ಬರಹಗಳು ಹಾಸ್ಯದ ಜತೆಗೆ ಇತ್ತೀಚೆಗೆ ಮರೆಯಾಗುತ್ತಿರುವ ಕೂಡುಕುಟುಂಬದ ಅವಿಭಾಜ್ಯ ಸದಸ್ಯರ ನಡುವೆ ಇರುತ್ತಿದ್ದ ಅನ್ಯೋನ್ಯತೆ ಮತ್ತು ಬಾಂಧವ್ಯದ ಬಗ್ಗೆಯೂ ಬೆಳಕು ಚೆಲ್ಲುತ್ತವೆ.
ಪ್ರತಿಯೊಂದನ್ನೂ ಕುತೂಹಲದಿಂದ ಗಮನಿಸುವ ಲೇಖಕಿಯವರಿಗೆ ಅಡುಗೆಮನೆಯೊಳಗಿನ ಸಂಶೋಧನೆಗಳು, ಮನೆ ಸಹಾಯಕಿಯ ಸಂವಾದಗಳು, ಕೆಲವು ಬರಹಗಳಿಗೆ ಸಹಜ ಮೂಲವಸ್ತುಗಳಾಗಿವೆ.
ಇವರ ‘ಮಜ್ಜಿಗೆ ವಿರೋಧಿಗಳ ಸಂಘ’ಕ್ಕೆ ಬೆರಳೆಣಿಕೆಯಷ್ಟೂ ಸದಸ್ಯರು ಸಿಗದಿರಲಿ ಎಂದು ಮಜ್ಜಿಗೆಪ್ರಿಯಳಾದ ನನ್ನ ಹೃತ್ಫೂರ್ವಕ ಹಾರೈಕೆ! ಒಟ್ಟಾರೆಯಾಗಿ, ‘ಮಂದಹಾಸ’ವನ್ನು ಓದಿದವರಿಗೆಲ್ಲರಿಗೂ, ಬಿರುಬಿಸಿಲಿನಲ್ಲಿ ದಣಿದು ಮನೆಗೆ ಬಂದಾಗ, ಹದವಾಗಿ ಉಪ್ಪು-ಖಾರ-ಶುಂಠಿ-ನಿಂಬೆಹಣ್ಣಿನ ರಸ ಸೇರಿಸಿದ ಒಂದು ಚೊಂಬು ನೀರುಮಜ್ಜಿಗೆಯನ್ನು ಸೀದಾ ಗಟಗಟನೇ ಗಂಟಲಿಗೇ ಸುರಿದು ಕುಡಿದಾಗ ಸಿಗುವಷ್ಟೇ ಸಂತೋಷ ಸಿಕ್ಕಿ ‘ಮಂದಹಾಸ’ ಬೀರುವುದರಲ್ಲಿ ಸಂಶಯವಿಲ್ಲ!
ಬರಹಕ್ಕೆ ಪೂರಕವಾಗಿ ಶ್ರೀ ಜೀವನ್ ಶೆಟ್ಟಿ ಅವರು ರಚಿಸಿದ ರೇಖಾಚಿತ್ರ-ವ್ಯಂಗ್ಯಚಿತ್ರಗಳು ಸೊಗಸಾಗಿ, ನಗೆಗೆ ಸಾಥ್ ಕೊಟ್ಟಿವೆ.
ಶ್ರೀಮತಿ ರುಕ್ಮಿಣಿಮಾಲಾ ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಮೂಡಿಬರಲಿ ಎಂದು ಸುರಹೊನ್ನೆಯ ಆಶಯ.
– ಹೇಮಮಾಲಾ.ಬಿ
ಪುಸ್ತಕ ಓದಿ ತುಂಬ ಚೆನ್ನಾಗಿ ಪರಿಚಯಿಸಿದ್ದಕ್ಕೆ ಧನ್ಯವಾದ ಹೇಮಾಮಾಲಾ.