ಕಾಗದದ ಕುದುರೆ ಮತ್ತು ಗ್ರೀನ್ ರೂಮಿನಲ್ಲಿ

Share Button

Sunitha.jpg

ಹತ್ತು ವರ್ಷಗಳ ಹಿಂದೆ
ಹತ್ತು ಪೈಸೆಯೊಂದು ನನ್ನ
ತುಂಬಾ ಕಾಡಿತ್ತು
ಅಳಿಸಿ, ಅಲ್ಲಾಡಿಸಿ ಬೇರೆಲ್ಲೊ
ನಿಂತು ಛೇಡಿಸಿ ಸತಾಯಿಸಿತು.

ದೀಪ್ತಿ ಭದ್ರಾವತಿ ಅವರ ಮೊದಲ ಕವನ ಸಂಗ್ರಹ ಕಾಗದದ ಕುದುರೆ ಯ ಅಸಾಧಾರಣ ಕಲ್ಪನೆಯ ಸಾಲುಗಳಿವು.
ತೀರಾ ಸರಳವೆನಿಸುವ ವಸ್ತುವಾದರೂ ‘ಹತ್ತು ಪೈಸೆ’ ಎಂಬ ನಿತ್ಯದ ಸಂಗತಿಯೊಂದು ತನ್ನ ವಾಣಿಜ್ಯ ಮೌಲ್ಯ ಕಳಕೊಂಡು ಸಾಮಾಜಿಕ ಪಲ್ಲಟದ ಸಹಜ ರೂಪವಾಗಿ ಸದ್ದಿಲ್ಲದೆ ತನ್ನ ಚಲಾವಣೆಯ ಕಕ್ಷೆಯಾಚೆಗೆ ಹೊಗುತ್ತದೆ. ಆ ಕವಿತೆಯ ಸರಳತೆಯೇ ಆ ರೂಪಕದ ತೀವ್ರತೆಗೆ ಕಾರಣವಾಗಿದೆ ಎಂಬುದು ಜಯಂತ ಕಾಯ್ಕಿಣಿಯವರ ಮುನ್ನುಡಿಯಲ್ಲಿನ ಅರ್ಥವತ್ತಾದ ಸತ್ಯ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ದೀಪ್ತಿ, ಕತೆಗಳೊಂದಿಗೆ ಕವನಗಳನ್ನು ಬರೆದಿದ್ದಾರೆ. ಇವರ ‘ಕಾಗದದ ಕುದರೆ’, ‘ಗ್ರೀನ್ ರೂಮಿನಲ್ಲಿ’ ಎಂಬ ಎರಡು ಕವನ ಸಂಗ್ರಹಗಳು ಪ್ರಕಟವಾಗಿವೆ. ನಾಟಕಗಳಲ್ಲಿ ಅಭಿನಯಿಸುವ ಅವರಿಗೆ ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಕೂಡಾ ಆಸಕ್ತಿ ಇದೆ. ಅವರೀಗ ‘ ಆ ಬದಿಯ ಹೂವು’ ಎಂಬ ಕಥಾ ಸಂಗ್ರಹವನ್ನು ಪ್ರಕಟಿಸುವ ಸಿದ್ಧತೆಯಲ್ಲಿದ್ದು, ಶ್ರೇಷ್ಠ ಬರಹಗಾರ್ತಿಯರ ಸಾಲಿನಲ್ಲಿ ಸ್ಥಾನಪಡೆದಿದ್ದಾರೆ.

ದೀಪ್ತಿಯವರ ಮೊದಲನೇ ಕವನ ಸಂಕಲನ ‘ಕಾಗದದ ಕುದುರೆ’ ಯಲ್ಲಿನ ಕವನಗಳು ಓದುತ್ತಾ ಸೆಳೆದು ಕಲ್ಪನೆಯ ಶಿಖರವನ್ನೇರಿಸಿದ್ದಂತೂ ನಿಜ! ನಾನು ಮತ್ತು ಹತ್ತು ಪೈಸೆ, ಹಾಗೆ ಇದೆ ಆಕಾಶ, ಪೇಟೆ, ಬಾ ಬೆಳಕೇ, ಅವನಿಗೆ, ಅಹಲ್ಯೆಯ ಸ್ವಗತ ಮುಂತಾದ ಸುಮಾರು 36 ಕವಿತೆಗಳನ್ನೊಳಗೊಂಡ ಗುಚ್ಛ ‘ಕಾಗದದ ಕುದುರೆ’. ಹೆಸರೇ ಸಾಹಿತ್ಯಾಸಕ್ತರ ಗಮನ ಸೆಳೆಯುವಂತಿದ್ದು, ಇಲ್ಲಿನ ಕವನಗಳು ಭಾವನೆಗಳ ಮೂಟೆ ಕಟ್ಟಿಸಿ ಬಿಡುತ್ತವೆ.

Kaagadada kudure        Deepti Bhadravathi

ಪ್ರತಿ ನಿತ್ಯ ನಮ್ಮೆಲ್ಲರ ಬಳಿ ಸುಳಿದಾಡುವ ವಿಷಯಗಳನ್ನೇ ವಸ್ತುವಾಗಿಸಿದ ದೀಪ್ತಿ ಅಸಹಜ ಭಾವನೆಗಳ ಹೆಣಿಗೆಯನ್ನು ಕವನಗಳ ಮೂಲಕ ಬಿತ್ತರಿಸಿದ್ದಾರೆ. ಅವರು ಭಾವ ಯಾನದ ಬಗ್ಗೆ ಬರೆಯುತ್ತಾ…

ನವಿರಾಗಿ ಬೆನ್ನು ಉಜ್ಜುತ್ತಾ
ಕುಳಿತಿದ್ದ ಭಾವ ದಡಕ್ಕನೇ
ಎದ್ದು ಎಲ್ಲಿಗೋ ಯಾತ್ರೆ
ಹೊರಡು ಬಿಡುತ್ತದೆ

ಕವನಗಳಲ್ಲಿ ಕವಯಿತ್ರಿಯ ಭಾವ ವೈವಿದ್ಯತೆ, ಚಂಚಲತೆಯನ್ನು ಕ್ರೋಢಿಕರಿಸಿದ ಪರಿ ಆಕರ್ಷಕವಾಗಿದೆ.

‘ನಾನು ನಾನಾಗ ಬೇಕಿದೆ’ ಎಂಬ ಕವಿತೆಯಲ್ಲಿ ಯಾವ ಮೋಹಕ್ಕೂ ಅಪೇಕ್ಷೆ ಪಡದೆ ಪದಗಳಲಿ ಜಗದೊಡತಿಯಾಗುವ ಹಂಗೂ ಇಲ್ಲದೆ ‘ನಾನಾಗಿಯೇ ಬದುಕ ಬೇಕಿದೆ’

ನಾಲ್ಕು ಗೋಡೆಯ ಮಧ್ಯೆ
ಜಡಿದ ಬೀಗದ ನಡುವೆ
ಬೀಗುವ ದೇವತೆಯಾಗುವ
ಬಯಕೆ ನನ್ನದಲ್ಲ
ಎನ್ನುತ್ತಾರೆ.

ದೀಪ್ತಿ ಅವರ ಕವಿತೆಗಳನ್ನು ಓದುತ್ತಿದ್ದರೆ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆದಂತಹ ಅನುಭವ, ಹಿತವಾಗಿ ಕಚಗಿಳಿಯಿಕ್ಕುವಂತಹ ಧಾಟಿ ಎಂದು ಅವರ ಎರಡನೆಯ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿಯವರು ಹೀಗೆ ಮುನ್ನಡಿಸುತ್ತಾ ಪುಳಕಗೊಳಿಸಿದ್ದಾರೆ.

ದೀಪ್ತಿಯವರ ‘ಗ್ರೀನ್ ರೂಮಿನಲಿ’ ಕವನ ಸಂಕಲನದಲ್ಲಿ ಇಳಿಹಗಲು, ಖಾಲಿರೆಕ್ಕೆ, ಛೇ…ಅಕ್ಷಿ ಭಿತ್ತಿ, ತೇಪೆ, ಇಳಿಜಾರು, ಒಂಟಿ ಮೇಜು ಮುಂದುವರಿಯುತ್ತಾ ಸುಮಾರು 51 ಕೋಣೆಗಳಿದ್ದು ಒಂದೊಂದರ ಒಳ ಹೊಕ್ಕಾಗ ಒಂದು ರೀತಿಯ ಭಾವಾವೇಶದ ಆಹ್ವಾನ. ರಾಧಾ ಮಾಧವರ ವಿನ್ಯಾಸಗಳನ್ನು ಒಳಗೊಂಡ ಗಂಡು ಹೆಣ್ಣಿನ ಸಂಬಂಧವನ್ನು

ತಪ್ತ ದ್ವಾರಕೆಯಲಿ ಮಂಕಾಗಿ
ಕೂತಿದ್ದಾನೆ ಮಾಧವ
ರಾಶಿ ರಾಶಿ ಪತ್ರಗಳ ಸುತ್ತಲೂ
ಸುರವಿಕೊಂಡು
ಹದಿನಾರು ಸಾವಿರ ಹೆಂಡಿರ ಓಲೆಗಳಿವು
ಹೊತ್ತು ತಂದವ ಇವನನ್ನೊಮ್ಮೆ ಸುಮ್ಮನೆ
ನೋಡಿ ಕನಿಕರಿಸಿ ಹೋಗಿದ್ದಾನೆ.

ಎಂದು ನಿರೂಪಿಸುತ್ತಾ ಮನೋಜ್ಞವಾಗಿಸಿದ್ದಾರೆ.
ದೀಪ್ತಿಯವರ ಕಾವ್ಯಯಾನಕ್ಕೆ ಉತ್ತಮ ಭವಿಷ್ಯ ದೊರೆಯಲಿ, ಒಳ್ಳೆಯ ಕವಿತೆಗಳನ್ನು ಕೊಡಲಿ ಸಾರಸ್ವತ ಲೋಕದಲ್ಲಿ ಮಿರಿ ಮಿರಿ ಮಿಂಚುವ ತಾರೆಯಾಗಲಿ ಎಂಬುದು ನಮ್ಮೆಲರ ಅಪೇಕ್ಷೆ.

 

 – ಸುನೀತಾ, ಕುಶಾಲನಗರ

 

1 Response

  1. ಆನಂದ್ ಋಗ್ವೇದಿ says:

    ಒಳ್ಳೆಯ ಒಳನೋಟಗಳ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: