ಮಾರ್ಕ್ಸ್ ಬಗ್ಗೆ ಒಂದಿಷ್ಟು ರಿಮಾರ್ಕ್ಸ್ …

Share Button

Hema1

ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪೈಪೋಟಿಯಲ್ಲಿ ಎಂಬಂತೆ ಅಭಿನಂದಿಸುವ, ವಿವಿಧ ಕೊಡುಗೆಗಳನ್ನು ಕೊಟ್ಟು ಆದರಿಸುವ ಪದ್ಧತಿ ಈ ನಡುವೆ ಕಂಡುಬರುತ್ತಿದೆ. ಇದು ತಪ್ಪಲ್ಲ, ಅವರವರ ಸಂಭ್ರಮ ಅವರವರಿಗೆ. ಹೆಚ್ಚು ಅಂಕ ಗಳಿಸಿದವರಿಗೆಲ್ಲಾ ಶುಭಾಶಯಗಳು, ಅಭಿನಂದನೆಗಳು.

ಆದರೆ ಅತಿಯಾದ ಈ ಸಡಗರದಲ್ಲಿ, ಉತ್ತಮ ಅಂಕ ಪಡೆದು ಹಲವಾರು ಪ್ರಶಂಸೆಗಳನ್ನೂ ಸವಲತ್ತುಗಳನ್ನೂ ಗಿಟ್ಟಿಸಿಕೊಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ‘ಪ್ರಥಮ ಸ್ಥಾನವನ್ನು ಬಿಟ್ಟುಕೊಡಲೇಬಾರದು’ ಎಂಬ ಒತ್ತಡವನ್ನು ಹೇರಿದಂತಾಗುತ್ತದೆ. ಯಾವುದೋ ಕಾರಣದಿಂದ ಮುಂದಿನ ತರಗತಿಗಳಲ್ಲಿ ಅದೇ ಮಾರ್ಕ್ಸ್ ಪಡೆಯದಿದ್ದರೆ ಅವಹೇಳನೆಗೆ ಗುರಿಯಾಗುವ ಸಾಧ್ಯತೆಯೂ ಇದೆ.

ಇವೆಲ್ಲದರ ನಡುವೆ ಕಡಿಮೆ ಮಾರ್ಕ್ಸ್ ಬಂದವರಿಗೆ ಪರೋಕ್ಷವಾಗಿ ಇನ್ನಷ್ಟು ನೋವು ಕೊಟ್ಟಂತಾಗುತ್ತದೆ.ಅವರ ಪಾಲಕರು ತಮ್ಮ ಮಕ್ಕಳು ಸಾಧಿಸಲಿಲ್ಲ ಎಂದು ಹೀಗಳೆಯುವುದು, ಉತ್ತಮ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ ಎಂದು ಪರಿತಪಿಸುವುದು ಮಾಮೂಲಿ. ಒಟ್ಟಾರೆಯಾಗಿ ಈಗಿನ ವಿದ್ಯಾಭ್ಯಾಸವೂ ಅದಕ್ಕೆ ಸಂಬಂಧಪಟ್ಟವರೆಲ್ಲರೂ ಮಾರ್ಕ್ಸ್ ಎಂಬ ಮಾಯಾಮೃಗದ ಹಿಂದೆ ಓಡುತ್ತಿರುವುದು ಸ್ಪಷ್ಟ.

ಹೆಚ್ಚಿನವರ ವಿದ್ಯಾಭ್ಯಾಸದ ಉದ್ದೇಶ ಉತ್ತಮ ಕೆಲಸವನ್ನು ದೊರಕಿಸಿಕೊಂಡು, ಧಾರಾಳವಾಗಿ ಸಂಪಾದನೆ ಮಾಡಿ, ಸಾಂಸಾರಿಕ-ಸಾಮಾಜಿಕ ಹೊಣೆಗಳನ್ನು ನಿರ್ವಹಿಸಿ, ಸಾಧ್ಯವಾದರೆ ವಿದೇಶ ಪ್ರಯಾಣಗಳನ್ನೂ ಮಾಡಿ, ಒಟ್ಟಿನಲ್ಲಿ ಜೀವನದಲ್ಲಿ ಯಶಸ್ವಿಯಾಗುವುದು ಇತ್ಯಾದಿ. ಜೀವನದಲ್ಲಿ ಯಶಸ್ವಿಯಾಗಲು ಮಾರ್ಕ್ಸ್ ಬೇಕು, ಆದರೆ ಅದೊಂದೇ ಯಶಸ್ಸಿನ ಮೆಟ್ಟಿಲಲ್ಲ. ಇಂದು ವಿವಿಧ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗಳನ್ನು ಮೂಡಿಸಿದ ಹಲವಾರು ದಿಗ್ಗಜರು ತಮ್ಮ ಸಾಧನೆಗಳ ಮತ್ತು ಕೊಡುಗೆಗಳ ಮೂಲಕ ಗುರುತಿಲ್ಪಡುತ್ತಾರೆ, ತಾವು ಗಳಿಸಿದ ಮಾರ್ಕ್ಸ್ ಮೂಲಕ ಅಲ್ಲ. ಉದಾ: ಎಡಿಸನ್, ನ್ಯೂಟನ್, ಗಾಂಧೀಜಿ, ಕುವೆಂಪು, ದ.ರಾ.ಬೇಂದ್ರೆ, ಡಾ.ಅಬ್ದುಲ್ ಕಲಾಂ,ಅಮಿತಾಭ್ ಬಚ್ಚನ್, ಸಚಿನ್ ತೆಂಡುಲ್ಕರ್……..ಹೀಗೆ ಹಲವಾರು ಹೆಸರುಗಳನ್ನು ಸೇರಿಸಬಹುದು..

A+ marks

ವಿಶ್ವದ ಅತಿ ಧನಿಕರ ಪಟ್ಟಿಯಲ್ಲಿರುವ ವಾರೆನ್ ಬಫೆಟ್, ಬಿಲ್ ಗೇಟ್ಸ್, ಭಾರತದ ರತನ್ ಟಾಟಾ, ಅಂಬಾನಿ ಸಹೋದರರು ಎಷ್ಟು ಅಂಕ ಪಡೆದಿದ್ದರೋ ಯಾರಿಗೂ ಗೊತ್ತಿರಲಾರದು, ಯಾಕೆಂದರೆ ಅವರ ಸಿರಿತನವೇ ಅವರಿಗೆ ಅಂಕವಾಗಿದೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿದ ಕೆಲವು ಯುವಪ್ರತಿಭೆಗಳು ತಮ್ಮ ಆಯ್ದ ಕ್ಷೇತ್ರಗಳಲ್ಲಿ ಸಾಧನೆಗಾಗಿ ಗುರುತಿಸಿಕೊಂಡರೇ ಹೊರತು ಗಳಿಸಿದ ಅಂಕಕ್ಕಾಗಿ ಅಲ್ಲ (ಉದಾ: ಸಂಶೋಧನೆ, ಉದ್ಯಮ, ಸಂಗೀತ ,ಟೆಕ್ನಾಲಜಿ, ಚೆಸ್ ಇತ್ಯಾದಿ).

ಮಾರ್ಕ್ಸ್ ಎಂಬ ಒಂದೇ ಮಾನದಂಡದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವುದಿಲ್ಲ . ಮಾರ್ಕ್ಸ್ ಎಂಬುದು ವಿದ್ಯಾರ್ಥಿಯ ಕಲಿಕಾಶಕ್ತಿ, ಏಕಾಗ್ರತೆ, ಸ್ಮರಣಶಕ್ತಿ ಮತ್ತು ಸೀಮಿತ ಅವಧಿಯಲ್ಲಿ ತನ್ನ ಕಲಿಕೆಯನ್ನು ಪ್ರಸ್ತುತಪಡಿಸುವ ಚುರುಕುತನಗಳ ಅಳತೆಗೋಲು ಅಷ್ಟೆ . ಪ್ರತಿಭೆ ಇದ್ದರೂ ಪೂರಕ ವಾತಾವರಣ ಇಲ್ಲದಿರುವುದು, ಅನಾರೋಗ್ಯ, ಆರ್ಥಿಕ ಅಭದ್ರತೆ, ಅಸುರಕ್ಷಿತ ಬಾಲ್ಯ, ವಂಶವಾಹಿಗಳು ಇತ್ಯಾದಿ ಹಲವಾರು ಕಾರಣಗಳಿಂದ ಅಂಕಗಳಿಕೆ ಕಡಿಮೆಯಾಗಬಹುದು. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತದೆಯೇ? ಬಹುತೇಕ ಇಲ್ಲ .

ಪ್ರತಿವರ್ಷವೂ, ಪ್ರತಿ ವಿದ್ಯಾಸಂಸ್ಥೆಯಿಂದಲೂ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಯುತ್ತಮ ಅಂಕ ಗಳಿಸಿ ಬಿಂಕದಿಂದ ಹೊರಬರುತ್ತಾರೆ. ಸಂಬಂಧಿಸಿದ ವಿದ್ಯಾಸಂಸ್ಥೆಯೂ ತಮ್ಮ ಶಾಲೆಯ ಗುಣಮಟ್ಟದ ಅಳತೆಗೋಲಾಗಿ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲಿಗರಾದರು, ಹೆಚ್ಚಿನವರೂ 90 % ಮೇಲೆ ಅಂಕ ಗಳಿಸಿದರು ಇತ್ಯಾದಿ ಹೇಳಿ ಪ್ರಚಾರ ಗಿಟ್ಟಿಸುತ್ತದೆ. ಹಾಗಾದರೆ, ಈ ಪ್ರತಿಭಾವಂತ ಮಕ್ಕಳು ಎಲ್ಲಿಗೆ ಹೋದರು? ಈಗ ಏನಾಗಿದ್ದಾರೆ? ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕ ನಿಜಜೀವನದಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನವಾಯಿತು? ಎಂಬ ಮಾಹಿತಿಯನ್ನು ಸಂಬಂಧಿಸಿದ ವಿದ್ಯಾಸಂಸ್ಥೆಗಳು ವ್ಯವಸ್ಥಿತವಾಗಿ ಕಲೆಹಾಕುತ್ತಿದೆಯೇ ? ಕೆಲವರು ವಿದೇಶದಲ್ಲಿ ದುಡಿಯುತ್ತಿರಬಹುದು.ಇನ್ನು ಕೆಲವರು ಸ್ವದೇಶದಲ್ಲಿಯೇ ವಿವಿಧ ಹುದ್ದೆಗಳಲ್ಲಿ, ಸ್ವಂತ ಉದ್ಯೋಗಗಳಲ್ಲಿ ಅಥವಾ ಪಾರಂಪರಿಕ ಕಸುಬುಗಳಲ್ಲಿ ತೊಡಗಿಸಿಕೊಂಡಿರಬಹುದು. ಈ ರೀತಿ ‘ಸಾಮಾನ್ಯ’ರಾಗಿ ಬದುಕಲು, ಅಸಾಮಾನ್ಯ ಅಂಕ ಯಾಕೆ ಬೇಕು? ಅದಕ್ಕಾಗಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಕೆ ?

ಕಡಿಮೆ ಅಂಕ ಗಳಿಸಿದವರನ್ನು ಸ್ನೇಹಿತರೇ ಅವಗಣಿಸಿ, ಅಧ್ಯಾಪಕರೂ ಮೂದಲಿಸಿ, ಪಾಲಕರೂ ಬೈದು, ಇತರ ಮಕ್ಕಳಿಗೆ ಹೋಲಿಸಿ ……ಹೀಗೆ ಇನ್ನಷ್ಟು ಕೀಳರಿಮೆಗೆ ಗುರಿಯಾಗುವಂತೆ ಮಾಡುತ್ತಾರೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳನ್ನೂ ಕೇಳುತ್ತಿದ್ದೇವೆ.

ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ ನನ್ನ ಅನುಭವದಲ್ಲಿ, ಅಂಕಗಳಿಕೆಗೂ ಕಾರ್ಯಕ್ಷಮತೆಗೂ ನೇರ ಸಂಬಂಧವೇನಿಲ್ಲ. ಉದ್ಯೋಗಕ್ಕೆ ಅರ್ಹತೆಯನ್ನು ನಿರ್ಧರಿಸುವಾಗ ಅಭ್ಯರ್ಥಿಯು ಸಂಬಂಧಿಸಿದ ಪದವಿ ಪಡೆದಿರಬೇಕು ಎಂದು ನಮೂದಿಸುತ್ತಾರೆ . ಇಲ್ಲಿ ಗರಿಷ್ಠ ಅಂಕ ಗಳಿಸಿದವರಿಗೂ ನಿಗದಿತ ಕನಿಷ್ಟ ಅರ್ಹತೆ ಪಡೆದಿರುವವರಿಗೂ ಸಮಾನ ಸ್ಥಾನಮಾನ. ಕನಿಷ್ಟ ಅರ್ಹತೆಯ ಜೊತೆಗೆ ತಂಡದಲ್ಲಿ ಕೆಲಸ ಮಾಡುವ ಕೌಶಲ, ನಾಯಕತ್ವ ಗುಣ, ಶ್ರದ್ಧೆ, ಸಂವಹನ ಸಾಮರ್ಥ್ಯ ಇತ್ಯಾದಿ ಅಪೇಕ್ಷಣೀಯ ಗುಣಗಳನ್ನು ಹೊಂದಿರುವವರು ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ.

ಒಂದೇ ಅಳತೆಯ ರೆಡಿಮೇಡ್ ಬಟ್ಟೆಯನ್ನು ಎಲ್ಲರೂ ಧರಿಸಲಾಗದು. ಏಕರೂಪದ ವಿದ್ಯಾಭ್ಯಾಸದಲ್ಲಿ ಎಲ್ಲರೂ ಪರಿಣಿತರಾಗಲು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಪ್ರತಿಯೊಬ್ಬರಲ್ಲೂ ತನ್ನದೇ ಆದ ವಿಶಿಷ್ಟ ಪ್ರತಿಭೆಯು (Core Competence) ಬಾಲ್ಯದಲ್ಲಿ ಸುಪ್ತವಾಗಿರುತ್ತದೆ.ಮೀನಿನ ವಿಶಿಷ್ಟ ಸಾಮರ್ಥ್ಯ ತಿಳಿಯಬೇಕಿದ್ದರೆ ಅದನ್ನು ನೀರಿನಲ್ಲಿ ಈಜಲು ಬಿಡಬೇಕೆ ಹೊರತು ಮರ ಹತ್ತುವ ಸ್ಪರ್ಧೆಗೆ ಕಳುಹಿಸಬಾರದು!  ವಿದ್ಯಾರ್ಥಿಗಳ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಪಾಲಕರು, ಅಧ್ಯಾಪಕ/ಅಧ್ಯಾಪಕಿಯರು ಲಭಿಸಿದರೆ ಆ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು.

ದೈನಂದಿನ ಉದ್ಯೋಗದಲ್ಲಿ, ನಾವು ಶಾಲಾ ದಿನಗಳಲ್ಲಿ ಕಲಿತ ಪಠ್ಯದ ಯಥಾವತ್ ಬಳಕೆ ಆಗುವುದು ಬಲು ವಿರಳ. ಹೆಚ್ಚಿನ ಉದ್ಯೋಗಸ್ಥರು ಹೇಳುವ ಮಾತು ನಾನು ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲ″. ಇದು ನನ್ನ ಅನುಭವ ಕೂಡ. ಲಾಯರ್ ಆಗುವವರಿಗೆ ಗಣಿತದ Integration, Differentiation ಬೇಕಿಲ್ಲ, ಅಕೌಂಟ್ಸ್ ಮ್ಯಾನೇಜರ್ ಗೆ ರಾಘವಾಂಕನ ಕಾವ್ಯವೂ, ಷಟ್ಪದಿಯ ಛಂದಸ್ಸೂ ಬೇಕಾಗುವುದಿಲ್ಲ. ಆಫೀಸ್ ಅಡ್ಮಿಮಿಸ್ಟ್ರೇಟರ್ ಗೆ ರಸಾಯನಶಾಸ್ತ್ರದ ಫಾರ್ಮುಲಾ ಅಗತ್ಯವೇ ಇಲ್ಲ. ವಿಪರ್ಯಾಸ ಎಂದರೆ ಇವನ್ನೆಲ್ಲಾ ನಮಗೆ ಇಷ್ಟ ಇರಲಿ, ಬಿಡಲಿ, ಕಲಿತರೆ ಮಾತ್ರ ಪದವಿ ಲಭ್ಯ!

100

ಮಕ್ಕಳಿಗೆ ಸಹಜ ಪ್ರತಿಭೆ, ಸ್ಮರಣಶಕ್ತಿಯಿದ್ದು ಆಸಕ್ತಿಯೂ ಜತೆಗೂಡಿ ಉತ್ತಮ ಮಾರ್ಕ್ಸ್ ಬಂದರೆ ಬರಲಿ, ಸಂತೋಷ. ಆದರೆ ಎಲ್.ಕೆ.ಜಿ ಯಿಂದ ಹಿಡಿದು ಕಾಲೇಜು ಪರ್ವದ ವರೆಗೆ ನೂರಕ್ಕೆ ನೂರು ಮಾರ್ಕ್ಸ್ ತೆಗೆಯಲು ಒದ್ದಾಡುವುದೇಕೆ? ವಿದ್ಯಾರ್ಥಿಗಳ ಜತೆಗೆ ಮನೆಮಂದಿಯೆಲ್ಲಾ ಪರೀಕ್ಷೆ ಎಂಬ ಗಂಡಾಂತರವನ್ನು ತಾವಾಗಿಯೇ ಸೃಷ್ಟಿಸಿಕೊಂಡು ಬಳಲಬೇಕೆ ? ನನಗೆ ತಿಳಿದಂತೆ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮೇಲೆ ಈ ಮಟ್ಟದ ಒತ್ತಡವಿರುವುದಿಲ್ಲ. ಹಲವಾರು ವಿಷಯಗಳಲ್ಲಿ ಅವರನ್ನು ಅನುಕರಿಸುವ ನಾವು ಈ ವಿಷಯದಲ್ಲಿಯೂ ಅನುಸರಿಸಿದ್ದರೆ ಬಹುಶ: ಮಕ್ಕಳ ಮತ್ತು ಪಾಲಕರ ಮೇಲಿನ ಒತ್ತಡ ಮತ್ತು ಅನವಶ್ಯಕ ಪೈಪೋಟಿಯಾದರೂ ಕಡಿಮೆಯಾಗುತಿತ್ತು!

ಉದ್ಯೋಗಕ್ಕೆ ಅಥವಾ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿರುವಷ್ಟು ಅರ್ಹತೆ ಹೊಂದಬೇಕು. ಹಾಗೆಂದು ರೇಸ್ ನಲ್ಲಿ ಎಲ್ಲರೂ ಮೊದಲಿಗರಾಗಲು ಸಾಧ್ಯವಿಲ್ಲ, ಈ ಸ್ಪರ್ಧೆ ಬೇಕಾಗಿಯೂ ಇಲ್ಲ, ಮುಖ್ಯವಾಗಿ ವಿದ್ಯಾಭ್ಯಾಸವು ‘ರೇಸ್’ ಅಲ್ಲವೇ ಇಲ್ಲ. ಸ್ಪರ್ಧಾತ್ಮಕವಾದ ಇಲಿಗಳ ರೇಸ್ ( Rat race) ನಲ್ಲಿ ಗೆದ್ದರೂ ಕೂಡ ಆತ/ಆಕೆ ಇಲಿ ಮಾತ್ರವೇ ಆಗಿರುತ್ತಾರೆ ಹೊರತು ವಿಭಿನ್ನವಾಗುವುದಿಲ್ಲ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಮೂಲಭೂತ ಬದಲಾವಣೆ ಬಂದರೆ ಎಲ್ಲರಿಗೂ ನಿರಾಳ.

 

 – ಹೇಮಮಾಲಾ.ಬಿ, ಮೈಸೂರು
(ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

7 Responses

 1. Kiggal Gireesh says:

  ಬಹಳ ಉತ್ತಮವಾದ ಚಿಂತನೆ…ಹೆಚ್ಚು ಅಂಕ ಗಳಿಸುವುದು ಒಂದೇ ಸಾರ್ಥಕಬದುಕಿನ ಅಳತೆಗೋಲಲ್ಲ….

 2. Yashu Vittla says:

  ಅಂಕ ಬಿಂಕವನ್ನು ಹೆಚ್ಚಿಸುತ್ತದೆ. ಸಾಮರ್ಥ್ಯವನ್ನು ಬೆಳೆಸಬೇಕು

 3. Veda Athavale says:

  Yes you are right. Good thoughts. But I feel without motivation children will not think of high goals. so parents must keep a target in front of them . Few years back most of us were from big families where resources were limited . So the motivation was poverty. To come out of it children really worked hard [ I have seen my brothers working hard} . Got academic success. got good jobs I mean made money which wiped their tears. Nowadays there is no such poverty. So there is a danger that child might develop lethargy as his needs are already met. So parents must motivate them to achieve higher goals. Whatever said and done Good institutions will consider MARKS only . Unless changes doesnt happen in Edu. policy level situation will not change. Again my comment is not to criticise you. Just an openion

 4. Madhusudana Maddur says:

  ನಿಮ್ಮ ಮಾತಿಗೆ ಸಹಮತವಿದೆ ಮೇಡಂ

 5. Jayashree B Kadri says:

  Remarkable reflections.

 6. h.s.vathsala says:

  ಬದುಕಿನ ಅರ್ಥ ಏನೆಂಬುದನ್ನು ತಿಳಿಸುವ ವಿಚಾರ ಬಹಳ ಚೆನ್ನಾಗಿ ಮೂಡಿಬಂದಿದೆ ಹೇಮಾ ಅವರೇ.

 7. Hema says:

  ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: