ಸಾಕು ಮೌನದ ಭಾಷೆ – ಆ. ನಾ. ಪೂರ್ಣಿಮಾ ಕವನ ಸಂಕಲನ

Share Button

Saku mounda bhashe

ಕಳೆದ ಮೂರು ದಶಕಗಳಿಂದ ಕವಿತೆ ಬರೆಯುತ್ತಿರುವ ಗೆಳತಿ ಪೂರ್ಣಿಮಾ ಕವನ ಸಂಕಲನ ತರುವ ಮನಸ್ಸು ಮಾಡಿಯೇ ಇರಲಿಲ್ಲ. ಈಗ ದಿಢೀರನೆ ‘ಸಾಕು ಮೌನದ ಭಾಷೆ’ ಎಂದು ಘೋಷಿಸಿ ಸಂಕಲನದ ಮೂಲಕ ನಮಗೆ ಮುಖಾಮುಖಿಯಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ಆದರೆ ಇದರ ಹಿಂದಿರುವ ಪಯಣ ದೀರ್ಘವಾದುದಷ್ಟೇ ಅಲ್ಲ, ಸಂಯಮಶೀಲವಾದುದು ಮತ್ತು ಬೇಕೋ ಬೇಡವೋ ಎಂಬ ತಾಕಲಾಟದ ಕಟು ಎಚ್ಚರದ್ದು.” – ಹೀಗೆ ರೂಪ ಹಾಸನ ಅವರು ಅ.ನಾ. ಪೂರ್ಣಿಮಾ ಅವರ ‘ ಸಾಕು ಮೌನದ ಭಾಷೆ’ ಕವನ ಸಂಕಲನಕ್ಕೆ ಆಪ್ತವಾಗಿ ಮುನ್ನುಡಿ ಬರೆಯುತ್ತಾರೆ.

ಸ್ವತ; ಮಿತ ಭಾಷಿ, ಸಹೃದಯಿ ಆಗಿರುವ ಅ.ನಾ. ಪೂರ್ಣಿಮಾ ಅವರ ಅಂತರಂಗದ ಪಿಸುಮಾತುಗಳನ್ನು ಮೆಲುವಾಗಿ ಅನಾವರಣಗೊಳಿಸುವ ಕೃತಿ ಇದು. ಮಾಗಿದ, ಪ್ರಬುದ್ಧ ಮನಸ್ಥಿತಿಯ, ಎಲ್ಲೂ ಸಮತೋಲನ ಕಳೆದುಕೊಳ್ಳದ, ಚಿಂತನೆಯ ಮೂಸೆಯಲ್ಲಿ ಮೌನ ಮಾತಾದಾಗ ಹುಟ್ಟಿಕೊಂಡ ಕವನಗಳು ಇವು. ಬದುಕಿನ ಆಗುಹೋಗುಗಳು, ಸಮಾಜದ ಓರೆಕೋರೆಗಳು, ಬಾಳಿನ ಬವಣೆ, ಒಲವು.. ಹೀಗೆ ಅನೇಕ ವಿಚಾರಗಳು ಕವಯಿತ್ರಿಯ ಮನ ತಟ್ಟಿವೆ.

ಪೂರ್ಣಿಮಾರ ಕವಿತೆಗಳು ಯಾವುದೇ ನಿರ್ದಿಷ್ಟ ಕಾವ್ಯ ಪರಂಪರೆಗೆ ಕಟ್ಟು ಬಿದ್ದಿಲ್ಲವಾದರೂ ನವೋದಯದ ಛಾಪು ಹೆಚ್ಚು ಗಾಢವಾಗಿದೆ. ಉದಾಹರಣೆಗೆ, ‘ಬದುಕು’ ಕವನದ ಈ ಸಾಲುಗಳು; ‘ಬಯಲಾಗಬೇಕು, ಬದುಕಾಗಬೇಕು” ಒಡಲಾಳದಾ ಭಾವ ಸಾಕಾರವಾಗಿ’. ಅವರ ಸ್ತ್ರೀ ಪರ ಕಾಳಜಿಯೂ ಕೆಲವು ಕವನಗಳಲ್ಲಿ ಧ್ವನಿಸುತ್ತದೆ. ಉದಾಹರಣೆಗೆ ಚುರುಕಾಗಿ ನೆಗೆದಾಡುತ್ತಿದ್ದ ಬಾಲ್ಯಸಖಿ ಮೌನವಾದುದೇಕೆ ಎಂಬ ‘ಪ್ರಶ್ನೆ’ಎಂಬ ಕವಿತೆ-

‘ ಮೌನ ಚಿಪ್ಪಿನೊಳಗೆ
ಮುತ್ತಾದ ಹೆಣ್ಣೇ
ನೀನು ಪ್ರಶ್ನೆಯಾದುದೇಕೆ?’

ಪೂರ್ಣಿಮಾರ ಕವನಗಳನ್ನು ಸಾಮಾಜಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ನೆಲೆಗಳಲ್ಲಿ ನಾನು ಗುರುತಿಸುತ್ತೇನೆ.
‘ಹಾಳು ಬಿದ್ದ ಬಾವಿಗಳು’ ಕವನದಲ್ಲಿನ ತಣ್ಣನೆಯ ವ್ಯಂಗ್ಯ,ಸಮಾಜದಲ್ಲಿನ ನಿಷ್ಕರುಣ ಸಂವೇದನಶೀಲತೆಯನ್ನು ಅತಿ ಸಮರ್ಥವಾಗಿ ಬಿಂಬಿಸುತ್ತದೆ.

‘ಹಾಳು ಬಿದ್ದ ಬಾವಿಗಳು
ಕತೆಗಳನ್ನು ಹುಟ್ಟಿಸುತ್ತವೆ
ಶೀಲಗೆಟ್ಟ ಹೆಣ್ಣಿನ ಕತೆ
ನಿರುದ್ಯೋಗಿ ಯುವಕನ ಕತೆ
ಬದುಕನ್ನು ಈಸಲಾಗದೆ ಸೋತವರ ಕತೆ”

ಎಷ್ಟೊಂದು ಆರ್ತವಾಗಿ, ವಾಸ್ತವಿಕವಾಗಿವೆ ಈ ಸಾಲುಗಳು!
ನ್ನು ಕವಯಿತ್ರಿಯ ಆಧ್ಯಾತ್ಮಿಕ ಅರಸುವಿಕೆ ‘ಹುಡುಕಾಟ’ ಕವಿತೆಯಲ್ಲಿದೆ. ಆಗೊಮ್ಮೆ ಈಗೊಮ್ಮೆ ಕೆಲವು ಕವಿತೆಗಳು ಉಪದೇಶವೇನೋ ಎಂಬಂತೆ ಭಾಸವಾದರೂ ಅವುಗಳಲ್ಲಿನ ನೈತಿಕ ಪ್ರಜ್ನೆ, ಸಾಮಾಜಿಕ ವಾಸ್ತವ ನಿಜವಾದುದೇ ಆಗಿವೆ. ಕಟು ಆತ್ಮ ವಿಮರ್ಶೆಯ, ಒಳಿತು ಕೆಡುಕುಗಳ ಬಗ್ಗೆ ಗಾಢವಾಗಿ ಧ್ಯಾನಿಸಿ ಬರೆದ ಕವಿತೆಗಳು ಇವು. ಕೆ ವಿ ತಿರುಮಲೇಶ್ ಅವರ ‘ಬೆಕ್ಕು’ ಕವನವನ್ನು ನೆನಪಿಸುವ ‘ಮಾರ್ಜಾಲ ಪ್ರವೇಶ’ ಕಸಿವಿಸಿಗೊಂಡ ಮನದ ವಿಭ್ರಮೆಯನ್ನು ಅತಿ ಶಕ್ತವಾಗಿ ಬಿಂಬಿಸುತ್ತದೆ.

‘ಯಾವ ಗಳಿಗೆಯಲ್ಲಿ ಒಳ
ಹೊಕ್ಕಿತೋ ಕಳ್ಳ ಬೆಕ್ಕು
ಮನಸ್ಸೆಲ್ಲ ಅಸ್ತವ್ಯಸ್ತ’

ಇನಿತಾದರೂ ಸದ್ದು ಮಾಡದೆ
ಒಳ ಹೊಕ್ಕಾಗ
ಇಟ್ಟಿದ್ದ ಹಾಲನ್ನು ಕುಡಿದು
ಮನಸೋ ಇಚ್ಛ್ಚೆ
ಮಿಯಾಂವ್ ಎಂದಾಗಲೇ ಎಚ್ಚರ. “

‘ನಿನ್ನ ನೆನಪುಗಳು’, ‘ಕಾಮನ ಬಿಲ್ಲು’, ಹೊತ್ತಿಗೆಯ ಪುಟಗಳಲ್ಲಿ’ ಹೀಗೆ ಅನೇಕ ಒಲವಿನ ಗೀತೆಗಳಿವೆ. ಅಹಲ್ಯೆಯ ಕತೆಯನ್ನು ಧನಾತ್ಮಕವಾಗಿ ನೋಡುವ ಹೊಸ ದೃಷ್ಟಿಕೋನದ ಕವಿತೆ ‘ಅಹಲ್ಯೆಗೆ’.

ಎಷ್ಟೋ ಕಲ್ಲುಗಳಿವೆ ಈ ನಾಡಿನಲ್ಲಿ
ನವೆಯುತ್ತಾ ಬಿದ್ದಿವೆ ನಿಟ್ಟುಸಿರ ಚೆಲ್ಲಿ’
‘ಬಿದ್ದಿ‌ರುವ ಕಲ್ಲುಗಳು ಏಳುವುದಿಲ್ಲ ನಿನ್ನಂತೆ
ಹೆಣ್ಣಾಗಿ ಹುಟ್ಟುವುದೇ ಶಾಪವಂತೆ
ನೀನು ಹಾಗಲ್ಲ
ಮತ್ತೆ ಹೆಣ್ಣಾದವಳು , ಪತಿವ್ರತೆ
ಹಾಗೆ ನೆನೆದರೆ ಅಹಲ್ಯೆ, ನೀನೇ ಪುಣ್ಯವಂತೆ’

ಎಲ್ಲೂ ಹದ ತಪ್ಪದ, ನಿತ್ಯ ಕಾಣುವ ರೂಪಕಗಳಲ್ಲಿಯೇ ಹೊಸತನದ ಲಯ ಕಂಡುಕೊಳ್ಳುವ ಕಾಣ್ಕೆ ಕವಯಿತ್ರಿಯದು. ಉದಾಹರಣೆಗೆ ‘ಬಲೆ ಜೇಡ ಮತ್ತು ನಾನು’

ಎಲ್ಲೋ ಮೂಲೆಯಲ್ಲಿ
ಸಿಕ್ಕ ಅವಕಾಶದಲ್ಲಿ
ಹೆಣೆದ ಬಲೆಯೊಳಗೆ ಜೇಡ ಮತ್ತು ನಾನು
ಬಲೆ ಎನ್ನುವುದು ಜೀವಂತ
ಆತ್ಮಾಭಿಮಾನದ ಪ್ರತೀಕ”

ಅ.ನಾ. ಪೂರ್ಣಿಮಾ ಅವರ ಈ ಕವನ ಸಂಕಲನ ಒಂದು ಅರ್ಥಪೂರ್ಣ ಓದಿನ ಅನುಭವ ಕೊಡುತ್ತದೆ. ಸುಂದರವಾದ ರೇಖಾ ಚಿತ್ರಗಳು ಇವಕ್ಕೆ ಇನ್ನಷ್ಟು ಮೆರುಗು ಕೊಟ್ಟಿವೆ. ಹಾಗೆಯೇ ಹಿರಿಯ ಲೇಖಕಿ, ಸಂಶೋಧಕಿ ಡಾ. ಯು. ಮಹೇಶ್ವರಿಯವರ ಹಿನ್ನುಡಿ ಕೂಡ. ವೈದೇಹಿಯವರನ್ನು ಹೋಲುವ ಅ.ನಾ. ಪೂರ್ಣಿಮಾ ಅವರು ಇನ್ನೂ ಅನೇಕ ಕೃತಿಗಳನ್ನು ರಚಿಸಲಿ, ಅವರ ಮೌನ ಮಾತಾಗಿ ಕಾವ್ಯವಾಗಲಿ ಎಂದು ಹಾರೈಕೆ.

 

 – ಜಯಶ್ರೀ ಬಿ. ಕದ್ರಿ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: