ನನ್ನ ಟೀಚರ್ ಹೇಗಿರಬೇಕು ಗೊತ್ತಾ?
ಶಿಕ್ಷಕ ಬದುಕನ್ನು ಬರೆಯುವ ಲೇಖನಿ. ತನ್ನ ಒಡಲಾಳದಲಿ ನೂರು ನೋವಿದ್ದರೂ ಎಲ್ಲ ಮರೆತು ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಹೊಣೆ ಹೊತ್ತು ಶ್ರಮಿಸುತ್ತಾನೆ.ಸ್ವತಃ ಶಿಕ್ಷಕನಾಗಿ ನನ್ನ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಗ್ರಹಿಸಿ ಹೇಳುವುದಾದರೆ, ಶಿಕ್ಷಕ ಮಾರ್ಗದರ್ಶಕನಾಗಿರಬೇಕು. ಕೇವಲ ಪಾಠವನಷ್ಟೇ ಭೋದಿಸದೆ ಬದುಕನ್ನು ನಿರ್ದೇಶಿಸುವಂತವರಾಗಿರಬೇಕು. ತನ್ನ ತರಗತಿಯ ನಿಗದಿ ಪಡಿಸಿದ ಒಂದು ಪಾಠವನ್ನು ಮಾಡದಿದ್ದರೂ ಪರವಾಗಿಲ್ಲ ತನ್ನ ಗರಡಿಯಲ್ಲಿ ತರಬೇತಿಗೊಳ್ಳುತ್ತಿರುವ ಪ್ರತಿ ವಿದ್ಯಾರ್ಥಿಯನ್ನು ಬದುಕಲು ಸನ್ನದ್ದಗೊಳಿಸುವಂತಿರಬೇಕು. ಶಿಕ್ಷಕ ತನ್ನ ಹೊಟ್ಟೆಪಾಡಿಗಿಂತಲೂ ವಿದ್ಯಾರ್ಥಿಗಳ ಭವಿಷ್ಯದ ಬದುಕು ಸಮೃದ್ಧವಾಗಿರುವ ಹಾಗೆ ಬುನಾದಿ ಭದ್ರಪಡಿಸಬೇಕು.
ನನ್ನ ಶಿಕ್ಷಕ ಕವಿಯಾಗಿ ನನ್ನನ್ನು ಕವಿತೆಯಾಗಿ ಚಿತ್ರಿಸುವ ಕನಸುಗಾರನಾರಬೇಕು. ನನ್ನ ಶಿಕ್ಷಕ ವಿಜ್ಞಾನಿಯಾಗಿ ನನ್ನ ಬದುಕನ್ನು ಸಂಶೋಧಿಸಬೇಕು. ನನ್ನ ಶಿಕ್ಷಕ ತನ್ನ ಕಲ್ಪನೆಯ ಮೂಸೆಯಲ್ಲಿ ನನ್ನನ್ನು ಅರಳಿಸಬೇಕು. ಬದುಕಿನ ಎಂಥಹದ್ದೇ ಸನ್ನಿವೇಶದಲ್ಲೂ ಧೃತಿಗೆಡದ ಆತ್ಮವಿಶ್ವಾಸವನ್ನು ಅಚ್ಚೊತ್ತಬೇಕು. ವಿದ್ಯಾರ್ಥಿಯೆಂಬ ಹರಿಯುವ ನೀರನ್ನು ಸಮಾಜದ ವಿವಿಧೋದ್ದೇಶಗಳಿಗೆ ಸಮರ್ಥವಾಗಿ ಬಳಕೆಯಾಗುವಂತೆ ಯೋಜಿಸುವವರಾಗಿರಬೇಕು. ನವರಸಗಳನ್ನು ಸಮರಸದೊಂದಿಗೆ ಬೆರೆಸಿ ಬದುಕಿಗೆ ಮಧುರಾನುಭವವ ಸವಿಸಬೇಕು.ಶಿಕ್ಷಕ ಗೋಪುರವಾಗಿ ವಿದ್ಯಾರ್ಥಿಯನ್ನು ಅದರ ಕಳಶವಾಗಿಸಬೇಕು.
ತನ್ನೊಡಲ ಕುಡಿಗಳ ಹಾರೈಕೆ ಮಾಡೋ ತಾಯಾಗಿ, ತನ್ನ ಬೇರನೇ ನಂಬಿದ ರೆಂಬೆಕೊಂಬೆಗಳ ಸಲಹೋ ತಂದೆಯಾಗಿ, ಅನುಭವಾಮೃತವ ಉಣಬಡಿಸೋ ಅಜ್ಜನಾಗಿ, ಮಡಿಲಲ್ಲಿ ಮಲಗಿಸಿಕೊಂಡು ನೀತಿಕತೆಗಳಿಂದ ನೈತಿಕತೆಯ ಬಿತ್ತುವ ಅಜ್ಜಿಯಾಗಿ, ಜೊತೆಯಲ್ಲಿ ಆಡಿಬೆಳೆದ ಸೋದರತೆಯ ಕುರುಹಾಗಿ, ಒಂದಿಡೀ ಬದುಕಿನ ಮಾರ್ಗಸೂಚಿಯಾಗಿರಬೇಕು ನನ್ನ ಟೀಚರ್.
– ಅಮುಭಾವಜೀವಿ