ದೇವರ ಪತ್ರ
ಮಧ್ಯಾಹ್ನದ ಊಟ ಮುಗಿಸಿ ಒಂದರ್ಧ ತಾಸು ವಿರಮಿಸುವ ರಾಯರು ಮನೆಯ ಗೇಟಿಗೆ ಕಟ್ಟಿರುವ ಅಂಚೆ ಡಬ್ಬಿಯಲ್ಲಿ ಏನಾದರೂ ಪತ್ರಗಳಿವೆಯೇ ಎಂದು ನೋಡುವುದು ಅವರ ದೈನಂದಿನ ಕಾಯಕ. ಈ ಈಮೈಲು, ಮೊಬೈಲುಗಳ ಭರಾಟೆಯಲ್ಲಿ ಪತ್ರಗಳು ಬರುವುದೇ ನಿಂತು ಹೋಗಿದೆ. ಪತ್ರಗಳಿದ್ದರೂ ಕೆಇಬಿಯ ಬಿಲ್ಲು, ನೀರಿನ ಬಿಲ್ಲು, ಯಾರದೋ ವೈಕುಂಠ ಸಮಾರಾಧನೆಯ ಪೋಸ್ಟ್ ಕಾರ್ಡುಗಳು, ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳ ಕರೆಯೋಲೆಗಳು ಇತ್ಯಾದಿತ್ಯಾದಿಗಳು. ಅಂದು ಹಾಗೆಯೇ ಆಯಿತು, ಒಂದೆರಡು ವೈಕುಂಠ ಸಮಾರಾಧನೆಗಳ ಕಾರ್ಡುಗಳು, ನೀರಿನ ಬಿಲ್ಲಿನ ಜತೆಯಲ್ಲಿ ತಿಳಿ ನೀಲಿ ಬಣ್ಣದ ಒಂದು ಅಂತರ್ದೇಶೀಯ ಪತ್ರ. ಪತ್ರದ ಮೇಲೆ ಶ್ರೀ ಮುಕುಂದರಾವ್, ಕೆಳಗೆ ಸರಿಯಾಗಿ ನಮೂದಿಸಿದ ವಿಳಾಸ. ಹಿಂಬದಿಯಲ್ಲಿ ಕಳುಹಿಸಿದವರ ವಿಳಾಸದಲ್ಲಿ ಭಗವಂತ, ದೇವರ ಮ, ಅಂಚೆ : ಅಮರಾವತಿ ಎಂದಿತ್ತು.
ರಾಯರು ಕುತೂಹಲದಿಂದ ಪತ್ರವನ್ನು ತೆರೆದು ನೋಡಿದರು. ವಿಚಿತ್ರ, ಆ ಅಂತರ್ದೇಶೀಯ ಪತ್ರದಲ್ಲಿ ಇದ್ದದ್ದು ಎಸ್ಸೆಮ್ಮೆಸ್, ಈಮೇಲ್‌ನಲ್ಲಾದರೆ ಎರಡು ಸಾಲುಗಳಲ್ಲಿ ಕಳುಹಿಸಬಹುದಾದಷ್ಟು ಚಿಕ್ಕ ಸಂದೇಶ. ರಾಯರು ಕುತೂಹಲದಿಂದ ಆ ಸಾಲುಗಳ ಮೇಲೆ ಕಣ್ಣಾಡಿಸಿದರು. ನಿಮಗೆ ಈ ಪತ್ರ ತಲುಪಿದ ಐದನೇ ದಿವಸ ಬರುತ್ತೇವೆ. ಎಲ್ಲ ವ್ಯವಹಾರಗಳನ್ನು ಚುಕ್ತಾಗೊಳಿಸಿ ಸಿದ್ಧವಾಗಿರಿ. ಎದೆಯಲ್ಲೊಂದು ಸಣ್ಣ ಛಳಕು ಬಂದ ಅನುಭವ ರಾಯರಿಗೆ. ಪತ್ರ ಓದಿದ ರಾಯರು ಮುಗುಳ್ನಕ್ಕರು, ಅಂತಹ ಜೀವನಾನುಭವ ಅವರದು. ಬಡಪೆಟ್ಟಿಗೆ ಹೆದರುವ ಆಸಾಮಿಯಲ್ಲ. ಸಂಜೆ ಆಫೀಸು ಮುಗಿಸಿ ಬಂದ ಮಗನ ಕೈಗೆ ಪತ್ರವಿತ್ತರು.
ಪತ್ರವನ್ನೋದಿದ ಮಗನೆಂದ..ಅಪ್ಪ ಇದು ಯಾರೋ ಮಾಡಿದ ಕೀಟಲೆ. ಇದನ್ನು ಗಂಭೀರವಾಗಿ ಪರಿಗಣಿಸಬೇಡ. ರಾಯರು ಮಗನ ಮಾತನ್ನು ಒಪ್ಪಲಿಲ್ಲ. ಇದನ್ನೊಂದು ದೈವಿಕ ಸೂಚನೆಯೆಂದೇ ಪರಿಗಣಿಸಿದ ರಾಯರು ತಮ್ಮ ಮಗನಿಗೆ ಎಲ್ಲವನ್ನು ವಿವರಿಸಿದರು. ತಮ್ಮೆಲ್ಲ ವ್ಯಾವಹಾರಿಕ ಬಂಧನಗಳಿಂದ ತಾವು ಮುಕ್ತರಾಗಲು ಬಯಸಿ ಅದಕ್ಕಾಗಿ ಏನೆಲ್ಲವನ್ನು ಮಾಡಬೇಕೊ ಅದನ್ನೆಲ್ಲ ಮುಂದಿನ ನಾಲ್ಕು ದಿನಗಳಲ್ಲಿ ತಾವು ಮಾಡಿ ಮುಗಿಸಬೇಕಾಗಿದೆಯೆಂದು ತಿಳಿಸಿದರು.
ಮಗ ಒಲ್ಲದ ಮನಸ್ಸಿನಿಂದ, ನನಗೇನೂ ತೋಚುತ್ತ್ತಿಲ್ಲ. ನೀನು ಬೇಸರಗೊಳ್ಳಬಾರದೆಂದು ನೀನು ಹೇಳುವುದನ್ನೆಲ್ಲ ಮಾಡಲು ನಾನು ಸಿದ್ಧನಾಗಿದ್ದೇನೆ ಅಂದ. ಮುಂದಿನೆರಡು ದಿನಗಳಲ್ಲಿ ಮುಕುಂದರಾಯರು ಮಗನ ಹೆಸರಿಗೆ ತಮ್ಮ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿದರು. ಸ್ಟುಡಿಯೋಗೆ ಹೋಗಿ ತಮ್ಮ ಭಾವಚಿತ್ರವನ್ನು ತೆಗೆಸಿಕೊಂಡರು. ಮಗನಿಗೆ ತಮ್ಮ ನಂತರ ತಮ್ಮ ಹೆಂಡತಿ ಶಾಂತಮ್ಮನವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದರು.
ಮುದ್ದು ಮಗನೆಂದ, ಏನಪ್ಪಾ ಹಾಗಂತಿಯಾ… ನಾವೇನು ಅಮ್ಮನ್ನ ಚೆನ್ನಾಗಿ ನೋಡಿಕೊಳ್ಳೊಲ್ವೇ? ಈಗ ನೀನಿರುವ ಇದೇ ಕೋಣೆ ಇನ್ನು ಮುಂದೆಯೂ ಅವರದೇ ಅಪ್ಪ. ನಾವಿಬ್ಬರೂ ದುಡಿವಾಗ ಮೂರು ಹೊತ್ತು ಊಟ, ವರುಷಕ್ಕೊಂದೆರಡು ಜತೆ ಬಟ್ಟೆ ಅಮ್ಮಂಗೆ ಕೊಡೊಕ್ಕೆ ನಮ್ಕೈಲಾಗಲ್ವೇ? ಅವರಂತು ಬಿಟ್ಟಿ ಅನ್ನ ತಿನ್ನುವವರಲ್ಲ. ಮೊಮ್ಮಕ್ಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡೊಲ್ಚೆ? ಅವರ ಬಗ್ಗೆ ನೀನೇನೂ ತಲೆ ಕೆಡಿಸಕೋಬೇಡ! ರಾಯರು ಮನಸ್ಸಿನಲ್ಲೇ ಅಂದುಕೊಂಡರು, ಭೇಷ್ ಮಗನೆ! ತಾಯಿಯ ಮೇಲೆ ಎಂತಹ ಪ್ರೀತಿ! ಎಂತಹ ಲೆಕ್ಕಾಚಾರ, ವ್ಯವಹಾರ ಚತುರತೆ. ಮುಂದಿನೆರಡು ದಿನಗಳಲ್ಲಿ ರಾಯರು ತಮ್ಮ ಸಂಬಂಧಿಕರನ್ನೆಲ್ಲ ದೂರವಾಣಿಯ ಮೂಲಕ ಸಂಪರ್ಕಿಸಿ ಉಭಯಕುಶಲೋಪರಿ ವಿಚಾರಿಸಿದರು. ಬೆಳಗ್ಗಿನ ಹೊತ್ತಿನ ತನ್ನ ವಾಕಿಂಗ್ ಗೆಳೆಯರನ್ನೆಲ್ಲ ಮಾತನಾಡಿಸಿ ಸಂಭ್ರಮಿಸಿದರು. ಒಟ್ಟಿನಲ್ಲಿ ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿಶ್ಚಿಂತರಾಗಿದ್ದರು.
ಅಂದು ಪತ್ರದಲ್ಲಿ ತಿಳಿಸಿದಂತೆ ಐದನೆಯ ದಿನ. ದಿನವೂ ನೂರೆಂಟು ಸುದ್ದಿಗಳನ್ನು ಹೇಳುತ್ತ, ನಡು ನಡುವೆ ಹೆಂಡತಿಯನ್ನು ರೇಗಿಸದೆ ರಾಯರಿಗೆ ನಿದ್ದೆ ಬಾರದು. ಇಂದು ಮಾತು ಬಾರದವರಂತೆ ರಾಯರು ಮಲಗಿಬಿಟ್ಟರು. ರಾಯರ ಮನದ ಬೇಗುದಿ ಅವರ ಜೀವದ ಜೀವ ಶಾಂತಮ್ಮನಿಗೆ ತಿಳಿಯದಿರದೆ? ಗಂಡನ ತಲೆ ಹೊಕ್ಕ ಹುಳ ಏನು ಎಂಬುದನ್ನು ಉಪಾಯದಿಂದ ಅರಿತೇ ಬಿಟ್ಟರು ಶಾಂತಮ್ಮ! ಏನ್ರೀ….ಇದು, ಇಷ್ಟು ಸಣ್ಣ ವಿಷಯಕ್ಕೆಲ್ಲ ತಲೆ ಮೇಲೆ ಆಕಾಶ ಬಿದ್ದವರ ಹಾಗೆ ಇದ್ದೀರಲ್ಲ. ಹೆಸರು, ವಿಳಾಸವಿರದ ಅಮಾಯಕ ಪತ್ರಕ್ಕೆ ಇಷ್ಟು ತಲೆ ಕೆಡಿಸಿಕೊಳ್ತೀರಲ್ಲ್ಲ! ಎಂತೆಂತಹದೊ ಸಮಸ್ಯೆಗಳನ್ನು ಬದುಕಿನಲ್ಲಿ ನೀವು ಧೈರ್ಯವಾಗಿ ನಿಭಾಯಿಸಿಲ್ವೆ? ಇದು ನಿನಗರ್ಥವಾಗೊಲ್ಲ ಶಾಂತೂ.. ರಾಯರೆಂದರು. ಅರ್ಥವೂ ಇಲ್ಲ, ಅನರ್ಥವೂ ಇಲ್ಲ. ಎಲ್ಲಿ…ಇಲ್ಬನ್ನಿ..ನಿಂ ತಲೆಯಿಡಿ ಇಲ್ಲಿ. ಸಣ್ಣ ಮಗುವನ್ನು ತೋಳತೆಕ್ಕೆಯಲ್ಲಿ ಬಳಸುವಂತೆ ಶಾಂತಮ್ಮ ರಾಯರನ್ನು ಬಳಸಿಕೊಂಡರು. ರಾಯರು ಪುಟ್ಟ ಮಗು ನಿದ್ರಿಸುವಂತೆ ಶಾಂತಚಿತ್ತರಾಗಿ ನಿದ್ರಿಸಿದರು.
ಸ್ನಾನ ಮಾಡಿ ಮುಂಜಾನೆಯ ಸುಪ್ರಭಾತವನ್ನು ಗುನುಗುತ್ತ ಇದ್ದ ಶಾಂತಮ್ಮನವರಿಗೆ ಮನೆಯ ಮುಂದೆ ಕಾರೊಂದು ನಿಂತ ಶಬ್ದ. ನೋಡಿದರೆ ಕಾರಲ್ಲಿ ಬಂದವಳು ಮಗಳು ಶೀಲಾ. ಮಗಳು ಬಂದಳೆಂಬ ಸಂಭ್ರಮ ಬೇರೆ. ಮನೆಯೊಳಗೆ ಕಾಲಿರಿಸುವ ಮೊದಲೇ ಮಗಳ ಮೊದಲ ಪ್ರಶ್ನೆ ಏನಮ್ಮಾ, ಅಪ್ಪ ಹೇಗಿದ್ದಾರೆ?
ಏನಾಗಿದೆ ಅವರಿಗೆ ಗುಂಡುಕಲ್ಲಿನ ಹಾಗಿದ್ದಾರೆ.. ಶಾಂತಮ್ಮ ಏನನ್ನೂ ತೋರಗೊಡದೆ ಮಗಳಿಗೆ ಉತ್ತರಿಸಿದರು.
ಮತ್ತೆ ಅತ್ತಿಗೆ ಏನೋ ಫೋನ್ ಮಾಡಿ ಯಾವುದೋ ಪತ್ರದ ವಿಚಾರ ತಿಳ್ಸಿದ್ರು. ಅಪ್ಪ ಯಾಕೋ ಮಂಕಾಗಿದ್ದಾರೆ ಅಂದ್ರು.
ಮಂಕು ಇಲ್ಲ, ಸೋಂಕು ಇಲ್ಲ…, ಯಾರ್‍ದೋ ಕೀಟ್ಲೆ ಕಣೆ ಅದು.
ಆದರೂ ಅಮ್ಮ….ನಾನೊಮ್ಮೆ ಆ ಪತ್ರ ನೋಡ್ಬೇಕು… ಪತ್ರ ನಿಧಾನವಾಗಿ ನೋಡುವಿಯಂತೆ. ಮೊದಲು ಒಳಗೆ ಹೋಗಿ ಕೈಕಾಲು ತೊಳ್ದು ಹೊಟ್ಟಗೇನಾರ ಹಾಕ್ಕೊ. ಬರಿ ಇವ್ಳೊಬ್ಳೆ ಅಪ್ಪನ್ನ ಕಂಡೊವ್ಳು! ಶಾಂತಮ್ಮ ಪ್ರೀತಿಯಿಂದ ರೇಗಿದರು ಮಗಳ ಮೇಲೆ.
ಬೆಳಗಿನಿಂದ ಅಪ್ಪನ ಮಾತು ಕತೆಯನ್ನು ಗಮನಿಸುತ್ತಿದ ಮಗಳಿಗೆ ಅಪ್ಪ ಒಂದಿಷ್ಟು ಆತಂಕ ಪಡದಿರುವುದನ್ನು ನೋಡಿ ಅಚ್ಚರಿಯೆನಿಸಿತು. ಮಧ್ಯಾಹ್ನದ ಊಟ ಮುಗಿಸಿದ ಶೀಲಾ ಅಪ್ಪನ ರೂಮಿನೊಳಗೆ ಹಣಕಿzಳು. ರಾಯರು ಶಾಂತಚಿತ್ತರಾಗಿ ಭಗವದ್ಗೀತೆಯನ್ನು ಓದುತ್ತಿದ್ದಾರೆ. ಒಂದಷ್ಟು ಸಮಾಧಾನವೆನಿಸಿತು ಅವಳಿಗೆ. ಆದರೂ..ಅನಿಸಿತವಳಿಗೆ, ಮುಂದೆ ಹೇಗೋ ಏನೋ.. ಈ ಸಲ ಬರಿಗೈಯ್ಯಲ್ಲಿ ಹೋಗಬಾರದು. ರೂಮಿಗೆ ಹೋದ ಶಾಂತಳನ್ನು ಎಂದಿನಂತೆ ಪ್ರೀತಿಯಲ್ಲೇ ಮಾತನಾಡಿಸಿದರು ರಾಯರು. ಉಭಯ ಕುಶಲೋಪರಿಗಳಾಗಿ ಮೇಲೆ ಯಾರೂ ಅಪ್ಪನ ಸನಿಹ ಇಲ್ಲದ ವೇಳೆಯಲ್ಲಿ ಮಗಳು ಶೀಲಾ ಅಪ್ಪನಿಗೆ.. ಅಪ್ಪಾ..ನಾಳೆ ಅಣ್ಣನ ಹೆಸರಿಗೆ ನಿನ್ನ ಬ್ಯಾಂಕ್ ಬ್ಯಾಲೆನ್ಸ್ ಎಲ್ಲ ಟ್ರಾನ್ಸ್ಪರ್ ಮಾಡಿದ್ದೀಯಂತೆ….?
ಹೌದು ಪುಟ್ಟಿ… ಅವನೇ ತಾನೇ ಈ ಮನೆಗೆ ಮುಂದೆ ವಾರಸುದಾರ?
ಮತ್ತೆ ಹೋದಸಲ ಬಂದಾಗ ನನಗೇನೊ ನೀನು ಮಾತು ಕೊಟ್ಟಿದ್ದಿ…ನೆನಪಿದೆ ತಾನೇ? ಮತ್ತೆ ಎಲ್ಲ ಎಡವಟ್ಟಾದೀತು. ಅಣ್ಣ ನೀನೆಣಿಸಿದಷ್ಟು ಸಾಚಾ ಅಲ್ಲ. ಅತ್ತಿಗೆ ಮಾತಿಗೆ ತಲೆಯಾಡಿಸುವ ಕೋಲೆ ಬಸವನವ!
ನಿಮ್ಕಡೆ ಹೇಗೋ….? ರಾಯರು ಮಗಳನ್ನು ಕೆಣಕಿದರು!
ಥೂ ಹೋಗಪ್ಪ…, ನಾನ್ಯೇನೋ ಹೇಳೊಕ್ಹೋದ್ರೆ ನೀನೇನೋ ಕೇಳ್ತಾ ಇದ್ದೀಯಾ. ಒಟ್ನಲ್ಲಿ ನನ್ಗೆ ಅನ್ಯಾಯವಾಗ್ಬಾರ್‍ದು.
ನೋಡಮ್ಮ, ಹಾಗೇನೂ ಆಗುವುದಿಲ್ಲ…. ನಾನೀಲ್ವೆ? ನಾನೀಗಾಗಲೆ ಎಲ್ಲ ವ್ಯವಸ್ಥೆ ಮಾಡಿದ್ದೀನಿ. ನೀನು ನೆಮ್ಮದಿಯಿಂದಿರು ಎಂದು ರಾಯರು ಮಗಳಿಗೆ ಅಭಯವಿತ್ತರು.
ಅವರು ಮಗನ ಖಾತೆಗೆ ತನ್ನ ಉಳಿತಾಯವನ್ನು ಬದಲಾಯಿಸುವ ಮೊದಲೇ ಮಗಳ ಖಾತೆಗೆ ಹತ್ತು ಲಕ್ಷ ರೂಪಾಯಿಗಳನ್ನು ಜಮೆ ಮಾಡಿದ್ದರು. ಜತೆಯಲ್ಲಿ ಹೆಂಡತಿಯ ಖಾತೆಗೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಜಮೆ ಮಾಡಿದ್ದರು. ಐದನೆಯ ದಿನ ರಾತ್ರಿ ರಾಯರು ಪತ್ನಿಯೊಂದಿಗೆ ಊರ ಸುದ್ದಿಯನ್ನೆಲ್ಲ ಮಾತನಾಡಿ, ಹೆಂಡತಿಯನ್ನು ನಗಿಸುತ್ತ ತಾನೂ ನಗುತ್ತ ಗೆಲುವಾಗಿಯೇ ಇದ್ದರು.
ಎಲ್ಲಿ ನಿಮ್ ಕೈ ಕೊಡಿ. ಇವತ್ತು ನಾವಿಬ್ರು ಕೈ ಕೈ ಹಿಡಿದೇ ಮಲಗೋಣ, ಶಾಂತಮ್ಮ ರಾಯರ ಕೈಯನ್ನ ತನ್ನೆಡೆಗೆ ಎಳೆದುಕೊಂಡರು.
ಏನೇ ಶಾಂತು ಇದು..! ಗಂಡನ ಮೇಲೆ ಇವತ್ತು ಎಲ್ಲಿಲ್ಲದ ಪ್ರೀತಿ!
ಹೌದು ಮತ್ತೆ, ಇವತ್ತು ಐದನೇ ದಿನ ತಾನೆ? ನಿಮಗೆ ಬಂದ ಪತ್ರದಲ್ಲಿರುವಂತೆ ದೇವಲೋಕದಿಂದ ಯಾರಾದರೂ ಅಪ್ಸರೆ ಬಂದು ನಮ್ಮೆಜಮಾನ್ರನ್ನ ಕರ್‍ಕೊಂಡು ಹೋದ್ರೆ ನಾನೇನಪ್ಪ ಮಾಡ್ಲಿ… ಶಾಂತಮ್ಮ ನಕ್ಕು ರಾಯರ ಕೈಯ್ಯನ್ನು ಅಮುಕಿದರು. ಇಷ್ಟು ವಯಸ್ಸಾದ್ರೂ ನಿನ್ ತಮಾಷೆಗೇನೂ ಕಮ್ಮಿಯಿಲ್ಲ…ಬಿಡು, ರಾಯರು ಹುಸಿ ಮುನಿಸು ತೋರಿದರು. ರಾಯರ ಕೈಯ್ಯಲ್ಲಿ ಕೈಯ್ಯಿರಿಸಿ ಶಾಂತಮ್ಮ ಹಾಯಾಗಿ ನಿದ್ರಿಸಿದರು.
ನಡು ರಾತ್ರಿಯಲ್ಲಿ ರಾಯರ ಕೋಣೆಯ ಬಾಗಿಲು ಮೆಲ್ಲಗೆ ತಟ್ಟಿದ ಸದ್ದು. ರಾಯರು ಹೆಂಡತಿಯ ಕೈಯ್ಯನ್ನು ಬಿಡಿಸಿಕೊಂಡು ಮೆಲ್ಲನೆದ್ದು ಕೋಣೆಯ ಬಾಗಿಲು ತೆರೆದರು..
ರಾಯ್ರೆ ನಾನು ಬಂದಿದ್ದೀನಿ…ನಾನ್ಹೇಳಿದಂತೆ ರೆಡಿಯಾಗಿದ್ದೀರಿ ತಾನೆ? ನಿಜವಾಗಿಯೂ ಪತ್ರದಲ್ಲಿ ಬರೆದಿದ್ದಂತೆ ಆಗಿತ್ತು.
ರಾಯರು ಭಯ ಪಡಲಿಲ್ಲ. ಸರಿಯಪ್ಪ.. ನಾನೇನೋ ರೆಡಿ..ಹೋಗೋಣವೆ?
ನೋಡಿ ಸರ್ ಪಲ್ಲಕ್ಕಿ ತಂದಿದ್ದೀವೆ. ರಾಯರಿಗೆ ನಂಬಲಾಗಲಿಲ್ಲ. ನಿಜವಾಗಿಯೂ ಬಂಗಾರದ ಪಲ್ಲಕ್ಕಿ. ಪಲ್ಲಕ್ಕಿಯ ಮೇಲೊಂದು ಶ್ವೇತ ಛತ್ರ! ಹೊರುವುದಕ್ಕೆ ನಾಲ್ಕು ಜನ ದೇವದೂತರು. ಜೊತೆಯಲ್ಲಿ ಹರಿವಾಣದಲ್ಲಿ ಅರಿಶಿನ ಕುಂಕುಮಗಳನ್ನು ತುಂಬಿ, ಮಲ್ಲಿಗೆಯ ಹಾರವಿರಿಸಿಕೊಂಡ ಇಬ್ಬರು ಅಪ್ಸರೆಯರು!
ರಾಯರದು ಸ್ವಲ್ಪ ಕೀಟಲೆ ಮಾಡುವ ಸ್ವಭಾವ. ಅವರು ಅಪ್ಸರೆಯರೆಡೆ ಕೈ ತೋರಿಸಿ ದೇವದೂತರಿಗಂದರು, ಇದೆಲ್ಲ ನನ್ಗೆ ಆಗ್ಬರೋಲ್ಲಪ್ಪ.. ಸುಮ್ನೆ ಇವರೆಲ್ಲ ಯಾಕೆ ಬೇಕಿತ್ತು..? ನಡಿರಿ…ಹೋಗೋಣ. ಇವ್ಳಿಗೆಚ್ಚರ ಆದ್ರೆ ಮತ್ತೆ ನಿಮ್ಕೆಲ್ಸ ಕಷ್ಟ! ಸಾವಿತ್ರಿಯಂತೆ ನಿಮ್ ಹಿಂದೆ ಬಂದಾಳು! ರಾಯರು ಕಚ್ಚೆ ಪಂಚೆ ಸರಿಪಡಿಸಿಕೊಂಡು ಹೊರಡಲನುವಾದರು.
ಸರ್ ನೀವಲ್ಲ, ಅಲ್ನೋಡಿ…ನಮಗೆ ಅಮ್ಮನವರು ಬೇಕು…, ದೇವದೂತರೆಂದರು..!
ರಾಯರು ತಿರುಗಿ ನೋಡಿದರು ಮಂಚದೆಡೆ.
ಹಾಸಿಗೆಯ ಮೇಲೆ ಮಲಗಿದ್ದ ಅವರ ಪತ್ನಿ ಶಾಂತಮ್ಮನನ್ನು ದಿಟ್ಟಿಸಿದರು. ರಾಯರ ಪತ್ನಿ ಶಾಂತಮ್ಮ ಶಾಂತವಾಗಿ ಮಲಗಿದ್ದಾರೆ, ಮತ್ತೆ ಏಳದ ಹಾಗೆ.
ಮುತ್ತಿನ ಮಣಿಗಳಂತೆ ಹಣೆಯಲ್ಲಿ ಬೆವರ ಸಾಲು… ಕಾಸಿನಗಲದ ಕುಂಕುಮ, ಅರಿಶಿನ ಹಚ್ಚಿದ ಗಲ್ಲಗಳು..
ಶಾಂತೂ ರಾಯರು ಕಿರಿಚಿಕೊಂಡದ್ದನ್ನು ಕೇಳಿ ಮಗ-ಸೊಸೆ ಓಡಿ ಬಂದರು ಪಕ್ಕದ ಕೋಣೆಯಿಂದ.
ರಾಯರು ಪತ್ನಿಯ ಮೃತ ದೇಹವನ್ನು ಎವೆಯಿಕ್ಕದೆ ನೋಡತೋಡಗಿದರು..
ಏನ್ರೀ….ಹಾಗೆ ನೋಡ್ತಾ ಇದೀರ… ಇಷ್ಟಕ್ಕೆಲ್ಲ ಹೆದರ್ತಾರೇನ್ರಿ…ನಾನ್ಹೆಳ್ಳಿಲ್ವೆ ನಿಮಗೆ…, ನಾನೇ ನಿಮಗಿಂತ ಮೊದಲು ಅಂತ. ನೀವು ನಿಧಾನವಾಗಿ ಬನ್ನಿ.. ನಿಮಗಾಗಿ ನಾನಲ್ಲಿ ಕಾಯ್ತಾ ಇರ್ತೀನಿ….
– ದಿವಾಕರ ಡೋಂಗ್ರೆ ಎಂ.
ದೇವರ ಪತ್ರ…ಕತೆ.. ಸುಸೂತ್ರವಾಗಿ ಓದಿಸಿಕೊಂಡು ಹೋಗುತ್ತದೆ…ಚೆನ್ನಾಗಿದೆ