ಚಕ್ರಮುನಿ….ವಿಟಮಿನ್ ಗಳ ರಾಣಿ…!!!

Share Button

chakramuni-sauropus-androgynus

“ಹಿತ್ತಲ ಗಿಡ ಮದ್ದಲ್ಲ”..ಗಾದೆ ಮಾತು ಎಷ್ಟು ಸರಿ ಎಂದರೆ,  ನಿಜವಾಗಿಯೂ  ನಮ್ಮ ಹಿತ್ತಲಿನಲ್ಲಿ ಇರುವ ಸಾಮಾನ್ಯ ಸಸ್ಯಗಳ ಔಷಧೀಯ ಉಪಯೋಗಗಳು ನಮಗೆ ತಿಳಿದಿರುವುದಿಲ್ಲ ಅಲ್ಲವೇ? ಈಗ ನಾನು ಹೇಳ ಹೊರಟಿರುವುದು ಅಂಥಹ ಒಂದು ಸಸ್ಯದ ಬಗ್ಗೆ, ವಿಟಮಿನ್ ಗಳ ಆಗರವಾದ ಈ ಚಕ್ರಮುನಿ ಸಾಮಾನ್ಯವಾಗಿ ವಿಟಮಿನ್ ಸೊಪ್ಪು ಎಂದೇ ಕರೆಯಲ್ಪಡುತ್ತದೆ.ಇದು ಸಾಧಾರಣವಾಗಿ ಕಂಡರೂ ಸಾಧಾರಣ ಗಿಡವಲ್ಲ..!!

ಹಳ್ಳಿಗಳಲ್ಲಿ ಇಂದಿಗೂ ತೋಟದ ಬೇಲಿ, ಬದುಗಳಲ್ಲಿ ಈ ಗಿಡ ಕಾಣಸಿಗುತ್ತವೆ. ಆದರೆ ಅದರ ಮಹತ್ವ ಹೆಚ್ಚಿನವರಿಗೆ ತಿಳಿದಂತೆ ಕಾಣುವುದಿಲ್ಲ.ಸುಮಾರು ವರ್ಷಗಳ ಹಿಂದಿನ ಮಾತು..ನಮ್ಮ ಮನೆಯ ಚಿಕ್ಕ ತೋಟದಲ್ಲಿ ನಮ್ಮತ್ತೆ ನಟ್ಟಿದ್ದ ಗಿಡ ಪೊದರಿನಂತೆ ಒಂದು ಕಡೆ ಬೆಳೆದಿತ್ತು.ಆದರ ಬಗ್ಗೆ ಜಾಸ್ತಿ ತಿಳುವಳಿಕೆ ಆವಾಗ ಇರಲಿಲ್ಲ ನೋಡಿ…ಆದರೂ ಆರೋಗ್ಯಕ್ಕೆ ಒಳ್ಳೆಯದೆಂದು ಗೊತ್ತಿತ್ತು. ಆರೋಗ್ಯಕ್ಕೆಒಳ್ಳೆಯದೆಂದರೆ ಏನು ಮಾಡಲೂ ತಯಾರಲ್ವಾ….ಹಾಗಾಗಿ ಗಿಡದ ತುಂಡುಗಳನ್ನು ತೋಟದಲ್ಲಿ ಅಲ್ಲಲ್ಲಿ ಗುಂಪಾಗಿ ನಟ್ಟಾಯಿತು.ಜಾಸ್ತಿ ಆರೈಕೆ ಬೇಡದ ಈ ಗಿಡ ಬಹು ಬೇಗ ಬೆಳೆಯುತ್ತದೆ. ಅದರ .ಮೃದುವಾದ ಚಿಗುರನ್ನು, ಸಾಧಾರಣ ೩ಇಂಚಿನಷ್ತು ಉದ್ದಕ್ಕೆ ತೆಗೆದು ಉಪಯೋಗಿಸಬಹುದು. ಇಂದಿಗೂ ತಪ್ಪದೆ ವಾರಕ್ಕೊಮ್ಮೆ ಉಪಯೋಗ ಇದ್ದೇ ಇದೆ.

ನಮ್ಮ ಹವಾಮಾನದಲ್ಲಿ ಬೆಳೆಯುವ ಇದು ಸರ್ವಕಾಲಿಕ ಸಸ್ಯವಾಗಿದ್ದು ಹಚ್ಚಹಸಿರು ಬಣ್ಣದ ಎಲೆಗಳಿಂದ ಕೂಡಿದೆ.ಗಿಡವು ಸಾಧಾರಣ ೫ಅಡಿಗಿಂತಲೂ ಎತ್ತರಕ್ಕೆ ಬೆಳೆಯ ಬಲ್ಲುದು.ಬಲಿತ ಎಲೆಗಳ ಅಡಿಭಾಗದಲ್ಲಿ ಬಿಳಿಬಣ್ಣದ ಕಾಯಿಗಳಾಗುತ್ತವೆ.ದಿನ ಕಳೆದಂತೆ ಅವು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಇದರ ಎಳೆ ಚಿಗುರು ಸಿಹಿ ರುಚಿಯಿಂದ ಕೂಡಿದ್ದು ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ.ಗಿಡವನ್ನು ಎತ್ತರಕ್ಕೆ ಬೆಳೆಯಲು ಬಿದದೆ ಆರ್ಧಕ್ಕೇ ಕತ್ತರಿಸಿದರೆ ಸಾಕಷ್ಟು ನೀರೂ ಹಾಕುತ್ತಿದ್ದರೆ ಪ್ರತೀ ವಾರೊಕ್ಕೊಮ್ಮೆ ಚಿಗುರು ಕೊಯ್ಯಬಹುದು.ಮಲ್ಟಿವಿಟಮಿನ್ ಗಳು ನಮ್ಮ ಹಿತ್ತಿಲಲ್ಲೇ ವರ್ಷವಿಡೀ ಲಭ್ಹ್ಯ ನೋಡಿ..!!

chakramuni-soppu

ಇದರ ಬಹು ಉಪಯುಕ್ತತೆಯನ್ನು ಕಂಡೇ ಇದಕ್ಕೆ ವಿಟಮಿನ್ ಸೊಪ್ಪು ಎಂದು ಹೆಸರಿಸಿರಬೇಕು. ಹೆಚ್ಚಿನ ಎಲ್ಲಾ ವಿಟಮಿನ್ ಗಳ ಆಗರವಾಗಿರುವ ಇದರಲ್ಲಿ ಪ್ರಮುಖವಾಗಿ  ವಿಟಮಿನ್ ಎ ಅಂಶ ಹೇರಳವಾಗಿದೆ.ರಕ್ತದ ಕೊರತೆಯನ್ನು ನಿವಾರಿಸಿ ರಕ್ತ ವೃದ್ಧಿಗೆ ನೆರವಾಗುವುದು.ಕಣ್ಣಿನ ನರಗಳನ್ನು ಬಲಗೊಳಿಸಿ ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ.ಬಾಯಿ ಹುಣ್ಣು,ಚರ್ಮದಲ್ಲಿ ಹುಣ್ಣು ಆಗದಂತೆ ತಡೆಯುತ್ತದೆ.ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕರಿಸುತ್ತದೆ.ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸಲು ಹಾಗೂ ಹಲ್ಲು,ವಸಡುಗಳ ರಕ್ಷಣೆಯಲ್ಲಿ ಸಹಕಾರಿಯಾಗಿದೆ. ಇಷ್ಟೆಲ್ಲಾ ಉಪಯುಕ್ತತೆಗಳನ್ನು ಹೊಂದಿರುವ ಸಸ್ಯನಮ್ಮೆಲ್ಲರ ಹಿತ್ತಿಲಲ್ಲಿ ಸದಾ ಸ್ಠಾನ ಪಡೆದರೆ ಎಷ್ಟು ಚೆನ್ನ ಅಲ್ಲವೇ?? ಇಂತಹ ಉಪಯುಕ್ತ ಸಸ್ಯವನ್ನು ನೆಟ್ಟು ನಮ್ಮ ಆರೋಗ್ಯವನ್ನು ವೃಧ್ಧಿಸಿಕೊಳ್ಳೋಣ..ಏನಂತೀರಿ?

ಇನ್ನು ಇದರಿಂದ ತಯಾರಿಸಬಹುದಾದಂತಹ ಸುಲಭದ ಅಡುಗೆಗಳ ಬಗ್ಗೆ ತಿಳಿಯೋಣ .ಅಲ್ವಾ..ಚಕ್ರಮುನಿ ಸೊಪ್ಪಿನ ಯಾ ಚಿಗುರಿನ ಪಲ್ಯ,ತಂಬುಳಿ,ಚಟ್ನಿ ಎಲ್ಲಾ ತುಂಬಾ ರುಚಿಯಾಗಿರುತ್ತದೆ.ಯಾವುದನ್ನೇ ಮಾಡಿದರೂ ಅದರ ಕಡು ಹಸಿರು ಬಣ್ಣ ಕೊಂಚವೂ ಮಾಸುವುದಿಲ್ಲ.

ಪಲ್ಯ: ಸಣ್ಣಗೆ ಹಚ್ಚಿದ ಚಿಗುರನ್ನು ಬದಿಯಲ್ಲಿಡಿ,ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಅದಕ್ಕೆಸಾಸಿವೆ,ಉದ್ದಿನ ಬೇಳೆ,ಜೀರಿಗೆ ಕರಿಬೇವು ಹಾಕಿ ಹುರಿದ ಮೇಲೆ ಹಚ್ಚಿಟ್ಟ ಚಿಗುರನ್ನು ಸೇರಿಸಿ.ಅದಕ್ಕೆ ಸ್ವಲ್ಪ ಅರಸಿನ ಪುಡಿ ರುಚಿಗೆ ತಕ್ಕಷ್ಟು ಖಾರ ಪುಡಿ ಯಾ ಹಸಿಮೆಣಸಿನ ಕಾಯಿ,ಉಪ್ಪು ಸೇರಿಸಿ. ಬೆಂದ ಮೇಲೆ ಸ್ವಲ್ಪ ತೆಂಗಿನಕಯಿ ತುರಿ ಹಾಕಿದರೆ ರುಚಿಯಾದ ಪಲ್ಯ ತಯಾರ್…ಹಾಗೆಯೇ,ಯಾವುದೇ ಪಲ್ಯ ಮಾಡುವಾಗ ಅದಕ್ಕೇ ಹಚ್ಚಿಟ್ಟ ಚಿಗುರನ್ನು ಹಾಕಿ ಪಲ್ಯ ಮಾಡಿದರೆ ತುಂಬಾ ರುಚಿಯಾಗಿರುತ್ತದೆ.

chakramuni-soppu-palya

 

ತಂಬುಳಿ ಮತ್ತು ಚಟ್ನಿ: ಸೊಪ್ಪನ್ನು,ಖಾರಕ್ಕೆ ತಕ್ಕಷ್ಟು ಹಸಿಮೆಣಸಿನ ಜೊತೆ, ಬಾಣಲೆಯಲ್ಲಿ ಎಣ್ಣೆ ಹಾಕದೆಯೇ ಚೆನ್ನಾಗಿ ಬಾಡಿಸಿ. ಸ್ವಲ್ಪ ತೆಂಗಿನ ತುರಿ ಜೊತೆ ಸೇರಿಸಿ ಸಣ್ಣಗೆ ರುಬ್ಬಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಮಜ್ಜಿಗೆ ಸೇರಿಸಿ. ಬೇಕಾದಷ್ಟು ತೆಳ್ಳಗೆ ಮಾಡಿಕೊಂಡು ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಕೊಟ್ಟರೆ ಆರೋಗ್ಯಕರವಾದ ತಂಬುಳಿ ರೆಡಿ. ಬಾಡಿಸಿದ ಸೊಪ್ಪು ಮತ್ತು ತೆಂಗಿನ ತುರಿ ಜೊತೆ ಸ್ವಲ್ಪ ಹುಳಿ, ರುಚಿಗೆ ತಕ್ಕಷ್ಟು ಉಪ್ಪುಹಾಕಿ ರುಬ್ಬಿ ಕರಿಬೇವಿನ ಜೊತೆ ಸಾಸಿವೆ ಒಗ್ಗರಣೆ ಜಡಿದರೆ ಚಟ್ನಿ ಸವಿಯಲು ಸಿಧ್ಧ….ದೋಸೆ,.ಇಡ್ಲಿ ತಯಾರಿದೆ ತಾನೆ?? ಹಾಗೆಯೇ ಯಾವುದೇ ತರಕಾರಿಯ ಸಾಂಬಾರ್ ಮಾಡುವಾಗ ಇದನ್ನೂ ಹಚ್ಚಿ ಹಾಕಿದರೆ ರುಚಿಯಾದ ಸುಪರ್ ಸಾಂಬಾರ್ ಊಟಕ್ಕೆ ಸಿಧ್ಧ.

cahkramuni-soppu-tambuli

 – ಶಂಕರಿ ಶರ್ಮ, ಪುತ್ತೂರು

8 Responses

 1. Hema says:

  ಉಪಯುಕ್ತ ಮಾಹಿತಿ . ನಮ್ಮ ಮನೆಯ ಹಿತ್ತಲಿನಲ್ಲಿ ಚಕ್ರಮುನಿ ಗಿಡವನ್ನು ನೆಡಬೇಕು ಅಂದುಕೊಂಡೆ.

  • Shankari Sharma says:

   ತುಂಬಾ ಒಳ್ಳೇದಾಯ್ತು..!! ಮೆಚ್ಚುಗೆಗಾಗಿ ಧನ್ಯವಾದಗಳು.

 2. savithri s bhat says:

  ನಮ್ಮಲ್ಲಿಯೂ ಈ ಗಿಡ ಇದೆ .ನೀವು ನೆನಪಿಸಿದ್ದು ತುಂಬಾ ಒಳ್ಳೆದಾಯಿತು .ನಾಳೆಯೇ ತಂಬುಳಿ ಮಾಡುವೆ.

 3. ಶ್ರೀನಿವಾಸ ಶರ್ಮ ೆಸ್ says:

  ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ, ದಯವಿಟ್ಟು ತಿಳಿಸಿ, ನನಗೂ ಬೇಕಾಗಿದೆ.

 4. ಶ್ರೀನಿವಾಸ ಶರ್ಮ ೆಸ್ says:

  ಇದರ ಹೆಸರು ಬೇರೇನಾದರೂ ಇದೆಯೇ, ದಯವಿಟ್ಟು ತಿಳಿಸಿ

  • Hema says:

   ಇಂಗ್ಲೀಷ್ ಹೆಸರು – ಮಲ್ಟಿವಿಟಮಿನ್ ಪ್ಲಾಂಟ್ ,
   ವೈಜ್ಞಾನಿಕ ಹೆಸರು – sauropus androgynus (L.) Merr.
   ಆಯುರ್ವೇದ ಗಿಡಮೂಲಿಕಾ ಸಸ್ಯಗಳು ಸಿಗುವ ಫಾರಂ ನಲ್ಲಿ ಚಕ್ರಮುನಿ ಸೊಪ್ಪಿನ ಗಿಡಗಳು ಸಿಗಬಹುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: