ಗಂಗೋತ್ರಿಯ ಅಂಗಳದಲ್ಲಿ…
ಪೌರಾಣಿಕ ಪಾತ್ರವಾದ ಭಗೀರಥನ ತಪಸ್ಸಿನಿಂದ ಮತ್ತು ಅಪ್ರತಿಮ ಪ್ರಯತ್ನದಿಂದ ಸ್ವರ್ಗದಿಂದ ಭೂಮಿಗಿಳಿದು ಬಂದ ಪಾವನಗಂಗೆಯ ಬಗ್ಗೆ ವರಕವಿ ದ.ರಾ.ಬೇಂದ್ರೆಯವರು ಬರೆದ ‘ಇಳಿದು ಬಾ ತಾಯಿ ಇಳಿದು ಬಾ ‘ ಕವನವನ್ನು ಶಾಲಾದಿನಗಳಲ್ಲಿ ಓದಿದ್ದೇವೆ. ಭೌಗೋಳಿಕವಾಗಿ ಗಂಗಾ ನದಿಯು ಹುಟ್ಟುವ ಮೂಲಸ್ಥಳವಾದ ‘ಗೋಮುಖ’ ಎಂಬಲ್ಲಿನ ಹಿಮ ನೀರ್ಗಲ್ಲು ಗಂಗೋತ್ರಿಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಅಲ್ಲಿಗೆ ದುರ್ಗಮವಾದ ಚಾರಣದ ದಾರಿಯಿದೆ. ಕೆಲವು ಸಾಹಸಪ್ರಿಯ ಚಾರಣಿಗರು ಅಲ್ಲಿಗೆ ಹೋಗುತ್ತಾರೆ.
ಸಾಮಾನ್ಯವಾಗಿ ಪ್ರವಾಸಿಗರು ಗಂಗಾನದಿಯ ಮೂಲ ಎಂದು ಗುರುತಿಸಲ್ಪಡುವ ‘ಗಂಗೋತ್ರಿ’ಗೆ ಬರುತ್ತಾರೆ. ಇಲ್ಲಿಗೆ ಖಾಸಗಿ ವಾಹನದಲ್ಲಿ, ಬಸ್ಸಿನಲ್ಲಿ ಬರಬಹುದು. ಗಂಗೋತ್ರಿಯು, ಹಿಮಾಲಯ ಪರ್ವತಶ್ರೇಣಿಯಲ್ಲಿ, ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ, 10,200 ಅಡಿ ಎತ್ತರದಲ್ಲಿರುವ ಪುಟ್ಟ ನಗರವಾಗಿದೆ. ಪ್ರಸಿದ್ಧ ಚಾರ್ ಧಾಮ್ ಯಾತ್ರೆಯಲ್ಲಿ ಸಿಗುವ ಎರಡನೆಯ ಧಾಮವಾಗಿದೆ. ನಮಗೆ 16 ಸೆಪ್ಟೆಂಬರ್ 2016 ರಂದು ‘ಗಂಗೋತ್ರಿ’ಗೆ ಭೇಟಿ ಕೊಡುವ ಅವಕಾಶ ಲಭಿಸಿತು.
ಭಗೀರಥನಿಂದಾಗಿ ಭೂಮಿಗಿಳಿದ ಗಂಗೆಗೆ ಇಲ್ಲಿ ‘ಭಾಗೀರಥಿ’ ಎಂಬ ಹೆಸರು. ಇದೇ ನದಿಯು ಮುಂದೆ ಅಲಕನಂದಾ ನದಿಯೊಂದಿಗೆ ದೇವಪ್ರಯಾಗದಲ್ಲಿ ಸಂಗಮವಾದ ಮೇಲೆ ಗಂಗಾ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಗಂಗೋತ್ರಿಯಲ್ಲಿ ‘ಗಂಗಾಮಾಯಿ’ ಯ ಮಂದಿರವಿದೆ. ಇದನ್ನು ಜನರಲ್ ಅಮರ್ ಸಿಂಗ್ ಥಪಾ ಅವರು ಕಟ್ಟಿಸಿದರಂತೆ. ಇಲ್ಲಿಯೂ ವರ್ಷದ ಆರು ತಿಂಗಳುಗಳ ಕಾಲ ಮಾತ್ರ ದೇವಾಲಯವು ತೆರೆದಿರುತ್ತದೆ ಮತ್ತು ಚಳಿಗಾಲದಲ್ಲಿ ಮುಚ್ಚಿರುತ್ತದೆ . ದಾರಿಯುದ್ದಕ್ಕೂ ಪೂಜಾಸಾಮಗ್ರಿಗಳು ಮತ್ತು ಗಂಗಾಜಲವನ್ನು ತುಂಬಿಸಿ ಒಯ್ಯಲು ಸಾಧ್ಯವಾಗುವಂತಹ ವಿವಿಧ ವಿನ್ಯಾಸದ ಕರಂಡಕಗಳು ಮಾರಾಟಕ್ಕೆ ಲಭ್ಯವಿದ್ದುವು. ನಾವು ಗಂಗೋತ್ರಿಗೆ ತಲಪಿದ ಸಮಯ ಸಂಜೆಯಾಗಿತ್ತು. ಅಲ್ಲಿ ಸಂಜೆ ಆರು ಗಂಟೆಗೆ ‘ಗಂಗಾರತಿ’ ಜರಗುತ್ತದೆಯೆಂದು ಕೇಳಿದ್ದೆವು. ಆದರೆ ನಾವು ತಲಪುವಾಗ ತಡವಾಗಿದ್ದುದರಿಂದ ಗಂಗಾರತಿಯನ್ನು ನೋಡಲಾಗಲಿಲ್ಲ.
ಗಂಗಾಮಾತೆಯ ಮಂದಿರಕ್ಕೆ ಭೇಟಿಕೊಟ್ಟೆವು. ಭಾಗೀರಥಿ ನದಿತೀರದಲ್ಲಿ ಅಡ್ಡಾಡಿ, ತಲೆಗೆ ನೀರು ಪ್ರೋಕ್ಷಿಸಿಕೊಂಡೆವು. ಫೋಟೊ ಕ್ಲಿಕ್ಕಿಸುತ್ತಾ ಆಚೀಚೆ ನೋಡುತ್ತಿದ್ದಾಗ, ‘ಭಗೀರಥನು ತಪಸ್ಸು ಮಾಡಿದ ಸ್ಥಳ’ ಎಂಬ ಫಲಕವಿದ್ದ ಪುಟ್ಟ ಗುಡಿಯೊಂದನ್ನು ಕಂಡೆವು. ಅಲ್ಲಿ ಪೂರ್ವಿಕರಿಗೆ ತರ್ಪಣ ಕೊಡುವ ವ್ಯವಸ್ಥೆ ಮಾಡಲಾಗುವುದೆಂಬ ಬರಹವಿತ್ತು. ಇದ್ದಕ್ಕಿಂದ್ದಂತೆ ನನಗೆ ದಶಕಗಳ ಹಿಂದೆಯೇ ಅಕಾಲ ಮೃತ್ಯುವಿಗೀಡಾದ ನನ್ನ ಅಪ್ಪ ಮತ್ತು ಅಣ್ಣನ ನೆನಪು ಒತ್ತರಿಸಿ ಬಂತು. ನಾನು ಅಷ್ಟೇನೂ ಆಸ್ತಿಕಳಲ್ಲದಿದ್ದರೂ, ಈ ಪುಣ್ಯಕ್ಷೇತ್ರದಲ್ಲಿ ಅವರಿಗೆ ತರ್ಪಣ ಕೊಡಬಹುದಿತ್ತು ಅನಿಸಿತು. ಆದರೆ ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳು ಯಾವುದೇ ಅಪರಕಾರ್ಯಗಳಲ್ಲಿ ಪಾಲ್ಗೊಳ್ಳುವ ಪದ್ಧತಿಯಿಲ್ಲ. ನಮ್ಮ ತಂಡದಲ್ಲಿದ್ದ ಹಿರಿಯ ದಂಪತಿಗಳು ತಮ್ಮ ಪೂರ್ವಿಕರಿಗೆ ತರ್ಪಣ ಕೊಡುತ್ತಿರುವುದನ್ನು ನೋಡಿದೆ. ನಮ್ಮ ಮನೆಯಿಂದ ನಾನೊಬ್ಬಳೇ ಬಂದಿದ್ದೆ. ಇಲ್ಲಿ ಹೀಗೊಂದು ಸಾಧ್ಯತೆಯಿದೆ ಎಂದು ಗೊತ್ತಿರಲಿಲ್ಲ ಹಾಗಾಗಿ ಏನೂ ತೋಚದೆ ಪೆಚ್ಚಾಗಿ, ಆ ಪುಟ್ಟ ಗುಡಿಯ ಮುಂದೆ ನಿಂತೆ.
ಅಷ್ಟರಲ್ಲಿ ಅಲ್ಲಿದ್ದ ಅರ್ಚಕರು ನನ್ನನ್ನು ಗಮನಿಸಿ ತಾವಾಗಿಯೇ ‘ಅಕೇಲೀ ಆಯಿ ಹೋ ಬೇಟಿ’ ಅಂದರು. ‘ಹಾಂ, ಜೀ, ಮೇರೆ ಬಾಪ್ ಔರ್ ಭೈಯಾ ಕೊ ತರ್ಪಣ್ ಕರ್ ಸಕೂಂ’ ಅಂದೆ. ‘ಜರೂರ್’ ಅಂದರು. ನನ್ನನ್ನು ಭಗಿರಥನ ತಪೋಸ್ಥಳದ ಮುಂದೆ ಕೂರಲು ಹೇಳಿದರು. ನನ್ನ ಕೈಗೆ ಒಂದು ಬೊಗಸೆ ನೀರು ಸುರಿದು, ಗೋತ್ರ-ಹೆಸರು-ನಕ್ಷತ್ರ ಹೇಳಿಸಿ, ಸಂಕಲ್ಪ ಮಾಡಿಸಿದರು. ನನ್ನ ಅಣ್ಣ, ಅಪ್ಪ, ತಂದೆಯ ಮತ್ತು ತಾಯಿಯ ಕಡೆಯಿಂದ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿ, ಮದುವೆಯಾಗಿ ಸೇರಿದ ಮನೆಯ ಮಾವ-ಅತ್ತೆ…….ಹೀಗೆ ಮೂರು ತಲೆಮಾರಿನ ಪೂರ್ವಿಕರಲ್ಲಿ ಮರಣ ಹೊಂದಿದವರ ಹೆಸರನ್ನು ಮಾತ್ರ ಹೇಳಿಸಿದರು. ಒಂದೆರಡು ಸಂಸ್ಕೃತದ ಶ್ಲೋಕಗಳನ್ನು ಪಠಿಸಿ, ನನ್ನ ಕೈಗೆ ಇನ್ನೊಮ್ಮೆ ನೀರು ಹಾಕಿ, ಅಲ್ಲಿದ್ದ ಕುಂಡಕ್ಕೆ ಸುರುವಲು ತಿಳಿಸಿದರು. ತಮ್ಮ ಕೈಯನ್ನು ಇನ್ನೊಮ್ಮೆ ನೀರಿನಲ್ಲಿ ಮುಳುಗಿಸಿ, ನನ್ನ ತಲೆಯ ಮೇಲಿರಿಸಿ ‘ಸಕುಟುಂಬಸ್ಯ, ಸಪರಿವಾರಸ್ಯ ಸಮಸ್ತಾ: ಸನ್ಮಂಗಳಾನಿ ಭವಂತು’ ಅಂತ ಆಶೀರ್ವದಿಸಿದರು.
ತಟ್ಟೆ-ದಕ್ಷಿಣೆ ಎಂದು ಹಪಹಪಿಸುವ, ಕಾಣಿಕೆ ಮೊತ್ತ ಕಡಿಮೆಯಾದರೆ ದುರುಗುಟ್ಟಿ ನೋಡುತ್ತಾ ಸಿಡುಕುವ ಕೆಲವು ಅರ್ಚಕರನ್ನು ಈಗಾಗಲೇ ಬೇರೆ ಕೆಲವು ದೇವಾಲಯಗಳಲ್ಲಿ ನೋಡಿದ್ದ ನನಗೆ, ಆರತಿ ತಟ್ಟೆಯನ್ನೇ ಇರಿಸದಿದ್ದ ಹಾಗೂ ಶಾಂತವಾಗಿ ಸಾವಧಾನ ದನಿಯಲ್ಲಿ ಮಾತನಾಡುತ್ತಿದ್ದ ಈ ಅರ್ಚಕರನ್ನು ನೋಡಿದಾಗ ಗೌರವ ಭಾವನೆ ಬಂತು. ನಾನಾಗಿಯೇ ಒಂದಿಷ್ಟು ಹಣವನ್ನು ಅವರ ಕೈಗೆ ಕೊಟ್ಟು, ನಮಸ್ಕರಿಸಿದೆ. ಹಸನ್ಮುಖರಾಗಿ ಆಶೀರ್ವಾದ ಮಾಡಿದರು. ಈ ಬಗ್ಗೆ ಆಮೇಲೆ ಮನೆಯಲ್ಲಿ ಹೇಳಿಕೊಂಡಾಗ, ಪಿತೃಪಕ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ, ಗಂಗೋತ್ರಿಯಂತಹ ಪುಣ್ಯಕ್ಷೇತ್ರದಲ್ಲಿ ಪಿತೃಗಳಿಗೆ ತರ್ಪಣ ಕೊಡುವ ಅವಕಾಶ ಲಭಿಸಿದ್ದು ಸುಯೋಗ, ಬಹಳ ಒಳ್ಳೆಯದಾಯಿತೆಂದು ಸಂತೋಷಪಟ್ಟರು. ಹೀಗೆ ಅನಿರೀಕ್ಷಿತವಾಗಿ ತರ್ಪಣಕಾರ್ಯ ಸಂಪನ್ನವಾಗಿ ಧನ್ಯತಾಭಾವ ಪಡೆದೆ.
ಅಂದು ಗಂಗೋತ್ರಿಯಲ್ಲಿಯೇ ಉಳಕೊಂಡೆವು. ಬಹಳ ಚಳಿ ಇತ್ತು. ಬೆಳಗ್ಗೆ ಎದ್ದು, ಸ್ನಾನ ಮುಗಿಸಿ ಪುನ: ಮಂದಿರ ಮತ್ತು ಸುತ್ತು ಮುತ್ತಲಿನ ಸ್ಥಳಗಳನ್ನು ವೀಕ್ಷಿಸಿದೆವು. ಆಸಕ್ತರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಗಂಗಾಜಲವನ್ನು ತುಂಬಿಸಿಕೊಂಡೆವು. ಅಂಗಡಿಯೊಂದರಲ್ಲಿ ಚಹಾ-ಆಲೂಪರಾಟಾ ಸೇವಿಸಿ ಗಂಗೋತ್ರಿಗೆ ವಿದಾಯ ಹೇಳಿದೆವು.
– ಹೇಮಮಾಲಾ.ಬಿ
ಗಂಗೋತ್ರಿ ಕಥನ ಓದಿ ಕಣ್ಣೀರು ಬಂತು ! ಧನ್ಯೋಸ್ಮಿ ಹೇಮಾ….
ಬಹಳ ಹಿಂದೆಯೇ ಗೋಮುಖವನ್ನೂ ಸಹ ಚಾರಣ ಯಾತ್ರೆಯಲ್ಲಿ ಸಂದರ್ಶಿಸುವ ಅವಕಾಶ ಸಿಕ್ಕದ್ದು ನನ್ನ ಅದೃಷ್ಟ ಅಲ್ಲಿಗೆ ಮೊದಲ ಬಾರಿ ತಲುಪಿದ ಕ್ಷಣ ನನ್ನ ಜೀವನದ ಅತ್ಯಂತ ಅಮೂಲ್ಯ ಮತ್ತು ನೆನಪಿನಲ್ಲುಳಿದ ಕ್ಷಣಗಳು
ಓದಿ ಕಣ್ಮನ ತುಂಬಿತು
ವೆರಿ ನೈಸ್ ರೆಂಡರಿಂಗ್ ಹೇಮಾ,
ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂