ಲಂಗರ್ ಅಂದ್ರೆ ಹೀಂಗಿರುತ್ತೆ !

Share Button

hema-14sept-2016

ಸಿಖ್ ಸಮುದಾಯದವರ ಗುರುದ್ವಾರದಲ್ಲಿ ‘ಲಂಗರ್’ ಎಂಬ ಹೆಸರಿನ ದಾಸೋಹ ಪದ್ಧತಿಯಿದೆ. ಇದು ದಾನಿಗಳ ಧನಸಹಾಯ ಮತ್ತು ಸ್ವಯಂಸೇವಕರ ಶ್ರಮದಿಂದ ನಡೆಯುವ ದಾಸೋಹ. ಲಂಗರ್ ನಲ್ಲಿ ಅಡುಗೆ ತಯಾರಿಸುವುದು, ಊಟ ಬಡಿಸುವುದು, ತಟ್ಟೆ ತೊಳೆಯುವುದು …ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮಾಡುತ್ತಾರೆ. ಇವರುಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಉತ್ತಮ ಹುದ್ದೆಯಲ್ಲಿರಬಹುದು, ಬಡವನಿರಬಹುದು, ಬಲ್ಲಿದನಿರಬಹುದು, ಆದರೆ ಲಂಗರ್ ನ ಸ್ವಯಂಸೇವಕರೆಲ್ಲರೂ ಒಂದೇ ಸೇವಾಮನೋಭಾವನೆಯಿಂದ ಕೆಲಸ ಮಾಡುತ್ತಾರೆ.

ಎಪ್ರಿಲ್ 2012ರಲ್ಲಿ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದೆವು. ಅಲ್ಲಿ ಪಾರ್ವತಿ ನದಿ ತೀರದ ‘ಮಣಿಕರಣ್ ‘ ಎಂಬಲ್ಲಿ ಬಿಸಿನೀರಿನ ಬುಗ್ಗೆಯಿದೆ. ಪಕ್ಕದಲ್ಲಿ ಶಿವನ ದೇವಾಲಯವೂ, ಗುರುದ್ವಾರವೂ ಇದೆ. ನಾವು ಗುರುದ್ವಾರಕ್ಕೂ ಭೇಟಿ ಕೊಟ್ಟಿದ್ದೆವು. ಅಲ್ಲಿ ಸಿಖ್ ಗುರುಗಳು ಗ್ರಂಥ ಪಠಣ ಮಾಡುತ್ತಿದ್ದರು. ಸೇರಿದ್ದ ಜನರು, ಜಮಖಾನದಲ್ಲಿ ಕುಳಿತು ನಿಶ್ಶಬ್ದವಾಗಿ ಆಲಿಸುತ್ತಿದ್ದರು. ನಾವು ಸ್ವಲ್ಪ ಸಮಯ ಅಲ್ಲಿ ಕುಳಿತು, ಗುರುಗಳಿಗೆ ವಂದಿಸಿ, ಕಾಣಿಕೆ ಹಾಕಿ ಹೊರಡಲನುವಾದೆವು. ಅಷ್ಟರಲ್ಲಿ ಅಲ್ಲಿದ್ದ ಸ್ವಯಂಸೇವಕರೊಬ್ಬರು ನಮಗೆ ‘ಲಂಗರ್ ‘ ನಲ್ಲಿ ಊಟ ಮಾಡಿರೆಂದು ತಿಳಿಸಿದರು. ಆಗಿನ್ನೂ ಮಧ್ಯಾಹ್ನ 12 ಗಂಟೆ ಆಗಿತ್ತಷ್ಟೆ. ಹಸಿವಿರಲಿಲ್ಲ. ಆದರೂ ಹೊಸ ಅನುಭವ, ಲಂಗರ್ ಹೇಗಿರುತ್ತದೆಯೆಂದು ನೋಡೋಣವೆಂದು ಊಟದ ಹಾಲ್ ಕಡೆಗೆ ಹೊರಟೆವು.

ಗುರುದ್ವಾರಕ್ಕೆ ಬಂದವರಿಗೆಲ್ಲರಿಗೂ ಲಂಗರ್ ನಲ್ಲಿ ಶುಚಿ-ರುಚಿಯಾದ ಭೋಜನವನ್ನು ಬಡಿಸುತ್ತಾರೆ. ಅಲ್ಲಿ ಉಣ್ಣಲು ಕೆಲವು ವಿಶಿಷ್ಟ ನಿಯಮಗಳಿವೆ. ಸ್ತ್ರೀ-ಪುರುಷರೆನ್ನದೆ ಪ್ರತಿಯೊಬ್ಬರೂ ತಲೆಯನ್ನು ದುಪ್ಪಟ್ಟಾ/ಸೆರಗು ಅಥವಾ ಕರವಸ್ತ್ರದಿಂದ ಮುಚ್ಚಬೇಕು. ದುಪಟ್ಟಾ/ಟವೆಲ್ ಇಲ್ಲದವರಿಗಾಗಿ ಮಕಮಲ್ ಟವೆಲ್ ಅನ್ನು ಪ್ರವೇಶದ್ವಾರದಲ್ಲಿಯೇ ಇರಿಸಿದ್ದರು. ಹಾಸಿದ್ದ ಜಮಖಾನದ ಮೇಲೆ ಸಾಲಾಗಿ ಕುಳಿತು, ಆಹಾರವನ್ನು ಪೋಲು ಮಾಡದೆ ಉಣ್ಣಬೇಕು. ನಮಗೆ ಅನ್ನ,ದಾಲ್, ಖಡಿ ಮತ್ತು ಪಲ್ಯವನ್ನು ತಟ್ಟೆಗೆ ಬಡಿಸಿದ್ದರು. ಲೋಟದಲ್ಲಿ ಪಾಯಸವನ್ನೂ ಕೊಟ್ಟಿದ್ದರು. ಅದೇ ರೀತಿ ರೋಟಿಯನ್ನು ಬಡಿಸುತ್ತಾ ಬಂದಾಗ ನಾವು ‘ಅವರು ಬಡಿಸಲಿ’ ಎಂದು ಸುಮ್ಮನೆ ಇದ್ದೆವು. ಆದರೆ ಬಡಿಸುವವರು ‘ಹಾಥ್,ಹಾಥ್’ ಅಂದಾಗ ತಬ್ಬಿಬ್ಬಾದೆವು. ಆಮೇಲೆ ಗೊತ್ತಾದುದೇನೆಂದರೆ, ಅವರು ಚಪಾತಿಯನ್ನು ತಟ್ಟೆಗೆ ಬಡಿಸುವುದಿಲ್ಲ, ಉಣ್ಣುವವರು ಎರಡೂ ಕೈಜೋಡಿಸಿ ಬೊಗಸೆಯೊಡ್ಡಿದಾಗ ರೋಟಿಯನ್ನು ಕೈಗೆ ಹಾಕುತ್ತಾರೆ. ಪ್ರತಿ ಅಡುಗೆಯನ್ನೂ ಪುನ: ವಿಚಾರಿಸಿ, ಹೊಟ್ಟೆ ತುಂಬಾ ಊಟ ಬಡಿಸಿದರು.

langar

ಊಟವಾದ ಮೇಲೆ, ತಟ್ಟೆಯಲ್ಲಿ ಏನಾದರೂ ಉಳಿದಿದ್ದರೆ ಅದನ್ನು ಪಕ್ಕದಲ್ಲಿದ್ದ ಕಸದ ಬುಟ್ಟಿಗೆ ಹಾಕಿ, ತಟ್ಟೆಯನ್ನು ಒಂದು ದೊಡ್ಡ ಸ್ಟೀಲ್ ನ ಟ್ಯಾಂಕ್ ಗೆ ಹಾಕಬೇಕು. ಆ ಟ್ಯಾಂಕ್ ನಲ್ಲಿ ಸೋಪುಯುಕ್ತ ಬಿಸಿನೀರಿತ್ತು. ಅಲ್ಲಿ ನೆನೆದ ತಟ್ಟೆಗಳನ್ನು ಇನ್ನೊಂದು ಟ್ಯಾಂಕ್ ಗೆ ವರ್ಗಾಯಿಸಿ, ಕೊನೆಗೆ ನಲ್ಲಿನೀರಿನಲ್ಲಿ…ಹೀಗೆ ಮೂರು ಹಂತಗಳಲ್ಲಿ ಶುಭ್ರವಾಗಿ ತೊಳೆಯುತ್ತಿದ್ದರು. ಅಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಮತ್ತು ಸ್ವಯಂಸೇವಕರ ನಡಾವಳಿಗಳು ಬಹಳ ಇಷ್ಟವಾಯಿತು.

21 ಸೆಪ್ಟೆಂಬರ್ 2016 ರಂದು, ಉತ್ತರಾಖಂಡ ರಾಜ್ಯದ ‘ನಗರ್ಸು’ ಎಂಬ ಊರಿನಲ್ಲಿ ಒಂದು ದಿನ ತಂಗಿದ್ದೆವು. ನಾವು ಉಳಕೊಂಡಿದ್ದ ಹೋಟೆಲ್ ನ ಎದುರುಗಡೆ ಗುರುದ್ವಾರವಿತ್ತು. ನಾವು ಕೆಲವರು ಅಲ್ಲಿಗೆ ಹೋದೆವು. ಆ ಸಮಯದಲ್ಲಿ ಅಲ್ಲಿ ಒಬ್ಬರು ಸಿಖ್ ಗುರು ಕುಳಿತಿದ್ದರು. ಸಾಮಾನ್ಯವಾಗಿ ಪೀಠದಲ್ಲಿರುವ ಧರ್ಮಗುರುಗಳನ್ನು ಭೇಟಿಯಾಗುವಾಗ ತಲೆಗೆ ಸೆರಗು/ದುಪಟ್ಟಾ ಹೊದ್ದು ಕೂರುವುದು ನಮಗೆ ಗೊತ್ತಿದ್ದ ಪದ್ಧತಿಯಾದುದರಿಂದ ಅವರ ಮುಂದೆ ಹಾಸಿದ್ದ ಜಮಖಾನದಲ್ಲಿ ವಿನಮ್ರವಾಗಿ ತಲೆಬಾಗಿ ಕುಳಿತೆವು.’ನಮಸ್ಕಾರ’ ಹೇಳಬೇಕೆಂದು ನಮ್ಮ ತಲೆಗೆ ಹೊಳೆದಿರಲಿಲ್ಲ!

ಆ ಗುರುಗಳು ನಮ್ಮನ್ನು ಉದ್ದೇಶಿಸಿ ‘ನಿಮಗೆ ನಮಸ್ಕಾರ ಎನ್ನುವ ಕ್ರಮವಿಲ್ಲವೇ’ ಅಂದಾಗ ನಮಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ತಬ್ಬಿಬ್ಬಾದೆವು . ಇದು ನಮ್ಮ ಸಂಸ್ಕೃತಿಯ ವ್ಯತ್ಯಾಸ! ಕೊನೆಗೆ ‘ಹಮ್ ಕೋ ಹಿಂದೀ ಥೋಡಾ…ಕನ್ನಡ…ಮೈಸೂರ್ ಸೆ ಆಯೇ ಹೈ…ಮೈಸೂರ್ ಕರ್ನಾಟಕ ಮೆ ಹೈ…..ಚಾರ್ ಧಾಮ್ ಯಾತ್ರಾ ಕರ್ ರಹೇ ಹೈ.’ ಇತ್ಯಾದಿ ಹಿಂದಿ ಭಾಷೆಯಲ್ಲಿಯೇ ತೊದಲಿದೆವು! ‘ಮೈ ಹಿಂದೀ ಮೆ ಬೋಲ್ ರಹಾಂ ಹೂಂ’ ಅಂತ ಇನ್ನೊಮ್ಮೆ ಅಂದರು! ಆ ಕ್ಷಣ, ನಮಗೆ ಇಲ್ಲಿಗೆ ಬರುವುದು ಬೇಕಿತ್ತಾ ಅನಿಸಿತ್ತು! ಇದೂ ಒಂದು ಸ್ಮರಣಾರ್ಹ ಅನುಭವ!

langar-nagarsu

ನಮ್ಮ ಅನುದ್ದೇಶಿತ ತಪ್ಪನ್ನು ಅರ್ಥಮಾಡಿಕೊಂಡವರಂತೆ ಅವರು ಮಾತು ಮುಂದುವರಿಸಿ, ಸ್ವಲ್ಪ ಕುಶಲೋಪರಿ ಮಾತನಾಡಿ, ವಾಸ್ತವ್ಯಕ್ಕೆ ಏನು ಮಾಡಿಕೊಂಡಿದ್ದೀರಿ, ರೂಮ್ ಗಳು ಬೇಕಾದರೆ ಲಭ್ಯವಿದೆ ಎಂತಲೂ ತಿಳಿಸಿದರು. ‘ಲಂಗರ್ ಮೆ ಖಾನಾ ಖಾಯಿಯೆ’ ಅಂದರು. ಗುರುದ್ವಾರಕ್ಕೆ ಬಂದವರಿಗೆ ಉಚಿತ ಊಟ ಮತ್ತು ವಾಸ್ತವ್ಯ ಕಲ್ಪಿಸುವುದು ಅವರ ಸಂಸ್ಕೃತಿ. ಅವರಿಗೆ ವಂದಿಸಿ, ಧನ್ಯವಾದ ಹೇಳಿ ಎದ್ದೆವು.

ನಾವು ಲಂಗರ್ ನಲ್ಲಿ ತಲೆಗೆ ವಸ್ತ್ರ ಧರಿಸಿ ಊಟಕ್ಕೆ ಕುಳಿತೆವು. ಅನ್ನ, ಸಾರು, ಪಲ್ಯ ತಟ್ಟೆಗೆ ಬಡಿಸಿದರು. ರೋಟಿಗೆ ಬೊಗಸೆಯೊಡ್ಡಬೇಕೆಂದು ಈಗಾಗಲೇ ಗೊತ್ತಾಗಿದ್ದುದರಿಂದ ಹಾಗೆಯೇ ಮಾಡಿದೆವು. ಊಟ ರುಚಿಯಾಗಿತ್ತು. ಉಂಡಾದ ಮೇಲೆ ಬೇಕಿದ್ದವರಿಗೆ ಚಹಾ ಲಭ್ಯವಿತ್ತು. ಇಲ್ಲಿಯೂ ಎರಡು-ಮೂರು ಹಂತದಲ್ಲಿ ತಟ್ಟೆ ತೊಳೆಯುವ ವ್ಯವಸ್ಥೆ ಚೆನ್ನಾಗಿತ್ತು. ಅನತಿ ದೂರದಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅಡುಗೆ ತಯಾರಿ ನಡೆಯುತ್ತಿತ್ತು.

ಅಲ್ಲಿದ್ದ ಕಾಣಿಕೆಡಬ್ಬಿಗೆ ಸ್ವಲ್ಪ ಹಣ ಹಾಕಿ ಬಂದೆವು. ಒಟ್ಟಿನಲ್ಲಿ ಗುರುದ್ವಾರಗಳಲ್ಲಿ ಲಂಗರ್ ದಾಸೋಹದ ನಿರ್ವಹಣೆ ಬಹಳ ವ್ಯವಸ್ಥಿತವಾಗಿ ನಡೆಯುತ್ತದೆ ಅಂತ ಅನುಭವವಾಯಿತು.

(ಚಿತ್ರ ಕೃಪೆ: ಸಾಂದರ್ಭಿಕ, ಅಂತರ್ಜಾಲ)

 

  – ಹೇಮಮಾಲಾ.ಬಿ

2 Responses

  1. Mallikarjunaswamy Hiremath says:

    ಇಂಚಿಂಚೂ ಬಿಡದೇ ಹೇಳಿದ್ದಕ್ಕೆ ಧನ್ಯವಾದಗಳು

  2. Seenu Pappunalmata says:

    ಹೌದು ಮೇಡಂ ಅಲ್ಲಿಯ ವ್ಯವಸ್ಥೆ ಯನ್ನು ಕೇಳಿ ತುಂಬಾ ಸಂತೋಷವಾಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: