ಕೀಳರಿಮೆ ಎಂಬ ಶತ್ರು!

Share Button

big-fish-small-pond-inferioty-complex

 

ಮನುಷ್ಯನನ್ನು ಹಿಂಡಿ ಹಿಪ್ಪೆಯಾಗಿಸುವ ಅತಿ ದೊಡ್ಡ ಶತ್ರುವೇ ಕೀಳರಿಮೆ!

ನೀವು ಬೇಕಾದರೆ ಗಮನಿಸಿ, ಜೀವನದಲ್ಲಿ ಒಂದಿಲ್ಲೊಂದು ಸಲವಾದರೂ, ಕೀಳರಿಮೆಯ ಕುಲುಮೆಯಲ್ಲಿ ನರಳದಿರುವ ವ್ಯಕ್ತಿ ನಿಮಗೆ ಸಿಗಲಿಕ್ಕಿಲ್ಲ.
ಇದಕ್ಕೆ ದೊಡ್ಡವ, ಸಣ್ಣವ, ಶ್ರೀಮಂತ, ಬಡವ, ಹೆಣ್ಣು, ಗಂಡು ಎಂಬ ಭೇದವಿಲ್ಲ. ಇದು ನಮ್ಮನ್ನು ನಾವೇ ಹೀಗಳೆಯುವ ಪ್ರಕ್ರಿಯೆ. ಇತರರೊಡನೆ ಹೋಲಿಸಿಕೊಂಡು ಕೊರಗುವ ಸಮಸ್ಯೆ. ಆದರೆ ಇದರಿಂದಾಗುವ ಹಾನಿ ಮಾತ್ರ ಅಷ್ಟಿಷ್ಟಲ್ಲ. ಆದ್ದರಿಂದ ಇತರ ಯಾವುದೇ ಬಾಹ್ಯ ಶತ್ರುವಿನ ದಾಳಿಗಿಂತ, ಕೀಳರಿಮೆಯ ಉಪದ್ರವ ಕಡಿಮೆ ಇಲ್ಲ ಎನ್ನಬಹುದು. ಕೈಕಾಲುಗಳು ಗಟ್ಟಿಯಾಗಿರುವ ಮನುಷ್ಯನಲ್ಲಿಯೂ, ಸುಪ್ತವಾಗಿರುವ ಪ್ರತಿಭೆ, ಸಾಮರ್ಥ್ಯ ಮತ್ತು ಅನಂತ ಸಾಧ್ಯತೆಗಳು ಆತನ ಅರಿವಿಗೆ ಬರದಿದ್ದರೆ, ಅದಕ್ಕೆ ಕೀಳರಿಮೆಯೇ ಮೊದಲ ಮತ್ತು ಕೊನೆಯ ಕಾರಣವಾಗಿರುತ್ತದೆ.

ನಿಮಗೆ ಆಶ್ಚರ್ಯವಾಗಬಹುದು. ಕೀಳರಿಮೆ ಎನ್ನುವುದು ವ್ಯಕ್ತಿತ್ವಕ್ಕೆ ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಉತ್ಪನ್ನಗಳು, ಕಂಪನಿಗಳ ಬ್ರ್ಯಾಂಡ್‌ಗಳ ವರ್ಚಸ್ಸಿನ ಮೇಲೆಯೂ ಪ್ರಭಾವ ಬೀರುತ್ತದೆ! ಉದಾಹರಣೆಗೆ ಟಾಟಾ ಸಮೂಹ 2009 ರಲ್ಲಿ ಭಾರಿ ಪ್ರಚಾರದೊಂದಿಗೆ ` ವಿಶ್ವದ ಅತ್ಯಂತ ಅಗ್ಗದ ಕಾರು, ಕೇವಲ 1 ಲಕ್ಷ ರೂ.ಗೆ ಸಿಗುವ ಕಾರು’ ಎಂಬ ಘೋಷಣೆಯೊಂದಿಗೆ ನ್ಯಾನೊ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಆದರೆ ನ್ಯಾನೊ ಕಾರು ಜನರ ಮನಸ್ಸನ್ನು ಆರಂಭಿಕ ಹಂತದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಆಕರ್ಷಿಸಲಿಲ್ಲ. ಯಾಕೆಂದರೆ ಯಾರ ಗ್ರಹಿಕೆಗೂ ನಿಲುಕದಂತೆ, ನ್ಯಾನೊ ಕಾರಿಗೆ `ಬಡವರ ಕಾರು’ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಯಾರಾದರೂ ತಾವು ಖರೀದಿಸಿದ ಹೊಸ ಕಾರು, ಇರುವುದರಲ್ಲಿ ಅತ್ಯಂತ ಅಗ್ಗದ್ದು ಎಂದು ನೆರೆಹೊರೆಯವರ ಬಳಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆಯೇ? ಜನ ಕಾರು ಖರೀದಿಯನ್ನು ತಮ್ಮ ಆರ್ಥಿಕ ಯಶಸ್ಸಿನ ಮಾನದಂಡವೆಂದು ಭಾವಿಸುತ್ತಾರೆ. ಆದ್ದರಿಂದ ಬಡವರ ಕಾರು ಎಂಬ ಮಾತೇ ಅವರಲ್ಲಿ ಅವ್ಯಕ್ತ ಕೀಳರಿಮೆಗೆ ಕಾರಣವಾಗುತ್ತಿತ್ತು. ಸ್ವತಃ ರತನ್ ಟಾಟಾ ಕೂಡ `ಬಿಬಿಸಿ’ಗೆ ನೀಡಿದ ಸಂದರ್ಶನವೊಂದರಲ್ಲಿ, ಇದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದರು. ಹಾಗೂ ನ್ಯಾನೊ ಕಾರನ್ನು `ಕೈಗೆಟಕಬಲ್ಲ, ಎಲ್ಲ ಅಗತ್ಯಗಳನ್ನು ಹೊಂದಿರುವ, ಕೌಟುಂಬಿಕ ಕಾರು’ ಆಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಕಂಪನಿ ನಂತರ ಕಾರಿನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿತ್ತು.

ಇನ್ನು ವ್ಯಕ್ತಿಗತ ವಿಚಾರದಲ್ಲಿ ಹೇಳುವುದಾದರೆ, ಕೀಳರಿಮೆ ಕಾರಣಗಳು ನೂರೆಂಟು. ` ನಾನು ಗಿಡ್ಡ, ನಾನು ದಪ್ಪ, ಕಪ್ಪಗೆ, ಅತಿಯಾದ ಬೆಳ್ಳಗೆ, ಹಾಡಲು, ಕುಣಿಯಲು ಬರಲ್ಲ, ಬರೆಯಲು ಬರಲ್ಲ, ಹೆಚ್ಚು ಓದಿಲ್ಲ, ಇಂಗ್ಲಿಷ್‌ನಲ್ಲಿ ಮಾತನಾಡಲು ಆಗುತ್ತಿಲ್ಲ, ನಾಲ್ಕು ಜನರ ಎದುರು ಸರಾಗವಾಗಿ ಕುಶಲ ಸಂಭಾಷಣೆ ನಡೆಸಲೂ ಆಗುತ್ತಿಲ್ಲ, ಖ್ಯಾತ ವ್ಯಕ್ತಿಯಾಗಿಲ್ಲ, ವ್ಯಾಪಾರ, ಉದ್ಯೋಗದಲ್ಲಿ ಮಿಂಚಿಲ್ಲ, ಕೈಯಲ್ಲಿ ದುಡ್ಡು ಇಲ್ಲ, ಸ್ವಂತ ಮನೆ, ಮಕ್ಕಳಿಲ್ಲ, ಪ್ರೇಯಸಿ ಕೈಕೊಟ್ಟಳು, ಪ್ರಿಯತಮ ವಂಚಿಸಿದ, ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹೆಂಡತಿ ಪ್ರೀತಿಯಿಂದ ನೋಡುತ್ತಿಲ್ಲ, ಮಕ್ಕಳು ಹೇಳಿದಂತೆ ಕೇಳಲ್ಲ, ಮೈಯಲ್ಲಿ ಕಸುವಿಲ್ಲ, ವಯಸ್ಸಾದರೂ ಮದುವೆ ಆಗಲಿಲ್ಲ‘ ಹೀಗೆ ಕೀಳರಿಮೆಯ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಸ್ವಾರಸ್ಯವೆಂದರೆ ಜೀವನ ಪೂರ್ತಿ ಒಂದೇ ಕಾರಣಕ್ಕಾಗಿ ಕೀಳರಿಮೆ ಇರುತ್ತದೆ ಎಂದು ಹೇಳಲಾಗದು.

ಯಾಕೆ ಹೀಗೆ?
ನೀವು ನೀವಾಗಿರದಿದ್ದರೆ, ಬೇರೆಯವರೊಡನೆ ಹೋಲಿಸಿಕೊಳ್ಳಲು ಶುರು ಮಾಡಿಕೊಳ್ಳುವುದು ದಿಟ. ಈ ಹೋಲಿಕೆಯೇ ಮನುಷ್ಯನಲ್ಲಿ ಕೀಳರಿಮೆ ಅಥವಾ ಮೇಲರಿಮೆಯನ್ನು ಹುಟ್ಟು ಹಾಕುತ್ತದೆ.  “ನಿಸರ್ಗವನ್ನು ಗಮನಿಸಿ. ಅಲ್ಲಿ ಎಲ್ಲವೂ ಸಹಜವಾಗಿರುತ್ತದೆ. ಗುಲಾಬಿ ಅರಳಿ ನಿಂತಾಗ ಸುಂದರವಾಗಿ ಕಾಣುತ್ತದೆ. ಹಾಗಂತ ಅದಕ್ಕೆ ಯಾವುದೇ ಮೇಲರಿಮೆಯಿಲ್ಲ. ನಿಸರ್ಗದಲ್ಲಿ ಸಾವಿರಾರು ಹೂವುಗಳು ಕೀಳರಿಮೆಯಿಲ್ಲದೆ, ಪರಸ್ಪರ ಸ್ಪರ್ಧೆಗೆ ಬೀಳದೆ ಅರಳುತ್ತವೆ. ಇಡೀ ವನ್ಯಜೀವಿ ಸಮೂಹ, ಎಲ್ಲ ಗಿಡ, ಮರಗಳು, ನಕ್ಷತ್ರ ಪುಂಜಗಳು ಬೇರೇನೋ ಆಗುವುದಿಲ್ಲ, ತಮ್ಮಷ್ಟಕ್ಕೇ ಸಹಜವಾಗಿರುತ್ತವೆ. ವಾಸ್ತವವಾಗಿ ಮನುಷ್ಯ ಸಂಕುಲದಲ್ಲೂ ಅಷ್ಟೇ. ಎಲ್ಲರೂ ಸಮಾನ ಪ್ರತಿಭೆ, ಬುದ್ಧಿವಂತಿಕೆ, ಕೌಶಲ್ಯವನ್ನು ಒಳಗೊಂಡಿರುವುದಿಲ್ಲ. ಸಮಾನ ಆರೋಗ್ಯ, ಕ್ರಿಯಾಶೀಲತೆ ಇರುವುದಿಲ್ಲ. ಎಲ್ಲರಿಗೂ ಕವನ ಬರೆಯಲು, ಕಲಾಕೃತಿ ರಚಿಸಲು, ವೀಣೆ ನುಡಿಸಲು ಬಾರದು. ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟತೆಯನ್ನು, ವಿಶೇಷ ಗುಣ, ಶಕ್ತಿ, ಸಾಮರ್ಥ್ಯವನ್ನು ಹೊಂದಿರುವುದರಿಂದ, ಸಮಾನತೆಯಾಗಲಿ, ಮೇಲರಿಮೆ ಅಥವಾ ಕೀಳರಿಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎನ್ನುತ್ತಾರೆ ಓಶೋ! ಎಂಥ ಅದ್ಭುತವಾದ ಮಾತಲ್ಲವೇ ಇದು.

ನಿಮ್ಮೊಳಗಿನ ಅನಂತ ಪ್ರತಿಭೆ, ಸಾಧ್ಯತೆಗಳನ್ನು ಹೊರಗೆಳೆಯಲು ಮುಂದಾಗದಿದ್ದಾಗ ಮನಸ್ಸು ಕುಗ್ಗುತ್ತದೆ. ಅಪಕ್ವವಾಗಿ ಇತರರೊಡನೆ ಹೋಲಿಸಿಕೊಳ್ಳಲು ಆರಂಬಿಸುತ್ತದೆ. ಅಂತಃಸತ್ವ ಬಡವಾಗುತ್ತದೆ. ಅದುವೇ ಕೀಳರಿಮೆಯ ಮೂಲ. ಆಗ ಕೀಳರಿಮೆಯನ್ನು ಮುಚ್ಚಿ ಹಾಕಲು, ಬೇರೆಯವರನ್ನು ಪ್ರಭಾವಿತಗೊಳಿಸಲಿ ಇನ್ನಿಲ್ಲದ ಕಸರತ್ತುಗಳು ಆರಂಭವಾಗುತ್ತದೆ. ತನ್ನ ಸಾಮರ್ಥ್ಯ, ವಿಶೇಷತೆಯ ಬಗ್ಗೆ ದೃಢ ವಿಶ್ವಾಸ, ನಂಬಿಕೆ ಇರುವ ವ್ಯಕ್ತಿ, ಯಾವತ್ತೂ, ಅನ್ಯರ ಜತೆ ಹೋಲಿಸಿಕೊಳ್ಳಲು ಹೋಗುವುದಿಲ್ಲ. ಕೀಳರಿಮೆ ಆತನ ಹತ್ತಿರ ಸುಳಿಯುವುದಿಲ್ಲ. ಹಾಗೂ ಎಲ್ಲರೂ ತನ್ನಂತೆಯೇ ಇರಬೇಕು ಎಂದು ಆತ ಭಾವಿಸುವುದಿಲ್ಲ. ಅಷ್ಟಕ್ಕೂ ಬದುಕಿನ ಸಾರ್ಥಕತೆ ಯಾವುದರಲ್ಲಿದೆ? ಶಾಂತಿ, ನೆಮ್ಮದಿ, ಆನಂದ, ಧನ್ಯತೆಯಲ್ಲವೇ? ಇದು ಸಾಧ್ಯವಾಗಬೇಕಿದ್ದರೆ ಕೀಳರಿಮೆ ಮತ್ತು ಮೇಲರಿಮೆಯ ಪೊರೆಯನ್ನು ಕಳಚಿಕೊಳ್ಳಲೇಬೇಕು ಎಂಬ ಸತ್ಯ ಅರಿವಿಗೆ ಬರಬೇಕು.

ವ್ಯಕ್ತಿಯಾಗಿ ನಾನೊಬ್ಬ ನಿಷ್ಪ್ರಯೋಜಕ ಎಂದು ಭಾವಿಸಿದ್ದರೆ ಅದು ಕೀಳರಿಮೆಯ ಫಲ ಎನ್ನಬಹುದು. ಇತರರಿಗಿಂತ ನಾನೇ ದೊಡ್ಡವನು, ಮೇಲೆ ಎಂಬ ಭಾವನೆ ಇದ್ದರೆ, ಅದುವೇ ಅಪಾಯಕಾರಿ ಮೇಲರಿಮೆ. ಕೀಳರಿಮೆ ಇರುವ ವ್ಯಕ್ತಿಗೆ ಸದಾ ತನ್ನ ಬಗ್ಗೆ ಸಂದೇಹ, ಗೊಂದಲವಿದ್ದರೆ, ಮೇಲರಿಮೆ ಇರುವವನಿಗೆ ತನ್ನ ಬಗ್ಗೆ ಅಗತ್ಯಕ್ಕಿಂತ ಅತಿಯಾದ ವಿಶ್ವಾಸ ಇರುತ್ತದೆ. ಕೆಲವು ಸಲ ಕೀಳರಿಮೆ ಹೊಂದಿರುವಾತ ಮೇಲರಿಮೆಯ ಮುಖವಾಡ ಕೊಟ್ಟು ನಿಲ್ಲಬಹುದು. ಆದರೆ ಅದರಿಂದ ಪ್ರಯೋಜನವಾಗದು.

achieve

ಹಾಗಾದರೆ ಕೀಳರಿಮೆಯಿಂದ ಹೊರಬರುವುದು ಹೇಗೆ?
ನಾವು ಸದಾ ನಮ್ಮನ್ನು ಇತರರೊಡನೆ ಹೋಲಿಸಿಕೊಳ್ಳುವುದನ್ನು ಕೈ ಬಿಡಲೇಬೇಕು. ಇದುವೇ ಕೀಳರಿಮೆಯಿಂದ ಹೊರ ಬರಲು ಮೊದಲ ಹೆಜ್ಜೆ. ಯಾಕೆಂದರೆ ಈ ಹೋಲಿಕೆಯಿಂದಲೇ ಎರಡರಲ್ಲೊಂದು ನಿರ್ಧಾರಕ್ಕೆ ಅಂತಿಮವಾಗಿ ಬಂದು ಬಿಡುತ್ತೇವೆ. ಒಂದೋ ಇತರರಿಗಿಂತ ಮೇಲಿದ್ದೇವೆ ಎಂಬ ಮೇಲರಿಮೆ, ಅಹಂಕಾರ ಮೂಡುತ್ತದೆ. ಅಥವಾ ಇತರರಿಗಿಂತ ಕೆಳಗಿದ್ದೇವೆ ಎಂದು ಕೀಳರಿಮೆಯಿಂದ ಬಳಲಿ ನಿತ್ರಾಣರಾಗುತ್ತೇವೆ. ಆದರೆ ಕೀಳರಿಮೆಯಿಂದ ಬಳಲಿದಾಗ, ಏನಾದರೂ ಸಾಧಿಸಬೇಕು ಎಂಬ ಛಲವಾಗಿ ಪರಿವರ್ತಿಸಬೇಕು. ಇದು ಅಂತರಂಗದ ಸಾಮರ್ಥ್ಯ, ಪ್ರತಿಭೆಯನ್ನು ಪ್ರಕಟಪಡಿಸಲು ಪ್ರೇರೇಪಿಸುತ್ತದೆ. ಆದ್ದರಿಂದ ಯಾವುದು ಮೇಲರಿಮೆ? ಯಾವುದು ಕೀಳರಿಮೆ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಇವೆರಡರಿಂದ ಮುಕ್ತವಾಗಬಹುದು.

 

 

 – ಕೇಶವ ಪ್ರಸಾದ್.ಬಿ.ಕಿದೂರು

(ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

3 Responses

  1. savithri s bhat says:

    ಚೆನ್ನಾಗಿ ಬರೆದಿರುವಿರಿ

  2. basavaraja says:

    ತುಂಬಾ ತುಂಬಾ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: