ಕನಸಿನ ಜಾಡು ಹಿಡಿದು…

Share Button

Smitha Amritaraj-05082016

ಪ್ರತಿ ನಿತ್ಯದ ದಿನದ ಕಾಯಕದಲ್ಲಿ ನಿದ್ರಿಸುವುದೂ ಒಂದು. ಈ ನಿದ್ರೆಯೆಂಬುದು ಬದುಕಿನ ನಿಶ್ಚಿಂತೆಯ ಕ್ಷಣಗಳನ್ನು ಒದಗಿಸಿಕೊಡಬಲ್ಲಂತಹ ಅದ್ಭುತ ತಾಣ.ನಿದ್ರಾದೇವಿಯ ಆಲಿಂಗನದಲ್ಲಿರುವಂತಹ ಒಂದು ಸುಮಧುರ ಸಮಯದಲ್ಲಿ ಕನಸುಗಳು ಬೀಳುತ್ತವೆಯೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಕಾಣದ ಕನಸುಗಳೇ ಕೈಗೆಟುಕದ್ದನ್ನು,ದಕ್ಕದ್ದನ್ನು ಎಲ್ಲವನ್ನೂ ಪೂರೈಸಿಕೊಂಡು ,ಬದುಕಿನ ಸಮಸ್ತ ಖುಷಿಗಳನ್ನು ಆ ಸಮಯದಲ್ಲಿ ನಮ್ಮ ಇದಿರು ತಂದು ಗುಡ್ಡೆ ಹಾಕಿ ಬಿಡುತ್ತದೆ. ಹಾಗಾದರೆ ಕನಸೆಂದರೆ ಏನು? ಕನಸೆಂದರೆ ಎಲ್ಲರಿಗೂ ಅನುಭವಿಸಿ ಗೊತ್ತಿದೆ. ಹಾಗಂತ ಸ್ಪಷ್ಟವಾಗಿ ಯಾರಿಗೂ ವಿವರಣೆಗೆ ದಕ್ಕುವುದಿಲ್ಲ.ಇದೇ ಕನಸಿನ ವೈಶಿಷ್ಟ್ಯ. ಕನಸಿಗೆ ಎಲ್ಲೆಯಾದರೂ ಎಲ್ಲಿದೆ?ಪ್ರಾಣಿ ಪಕ್ಷಿಗಳೂ ಕನಸು ಕಾಣುತ್ತವೆಯಾ..? ಗೊತ್ತಿಲ್ಲ. ಆದರೆ ಭೂಲೋಕದಲ್ಲಿ ಕನಸು ಕಾಣದ, ಕನಸು ಬೀಳದ ಮನುಜರಿರಲಾರರು ಅಂತ ನನ್ನ ಅನಿಸಿಕೆ. ವಿಶೇಷವೆಂದರೆ ಕನಸುಗಳು ಎಲ್ಲರಿಗೂ ಒಂದೇ ತೆರನಾಗಿ ಬೀಳುವುದಿಲ್ಲ. ವಯಸ್ಸಿಗನುಗುಣವಾಗಿ ಅವರವರ ಮನೋಧರ್ಮಕ್ಕನುಗುಣವಾಗಿ ಕನಸುಗಳು ಬೀಳುತ್ತವೆಯೆಂಬುದು ನಾವು ಹೇಳಿ ಕೇಳಿ ಅನುಭವಿಸಿ ತಿಳಿದುಕೊಂಡ ಸಂಗತಿ.

ಎಳೆ ಪಾಪು,ಇನ್ನೂ ನಗು ಮೂಡಿಸಲು ಅರಿಯದ ಹೊತ್ತಲ್ಲಿ,ತುಟಿಯಂಚಲ್ಲಿ ಕಿರುನಗು ಸೂಸುತ್ತಾ ಗಾಡ ನಿದ್ದೆ ಹೋಗಿದೆ ಅಂದಾಗ,ನಾವುಗಳು ಮಗು ಎಷ್ಟು ಚೆಂದ ಕನಸು ಕಾಣುತ್ತಾ ಮಲಗಿದೆ ನೋಡು..! ಅಂತ ಮನೆ ಮಂದಿಯನ್ನೆಲ್ಲಾ ಎಳೆದು ತಂದು ಅಪೂರ್ವ ನಿಧಿಯೊಂದನ್ನು ಕಂಡಂತೆ ಸಂಭ್ರಮಿಸುತ್ತೇವೆ. ಅಸಲಿಗೆ ಮಗು ನಕ್ಕದ್ದಾದರೂ ಏಕೆ? ಅದು ಕನಸ ಕಂಡಿತಾ..? ಯಾರಿಗೊತ್ತು? ಬದುಕೇ ಒಂದು ಕನಸಿನಂತಿರುವಾಗ ,ಕನಸಿಗೆ ಕಾರಣ ಬಗೆಯುವುದಾದರೂ ಹೇಗೆ?. ಆದರೂ ಹಗಲು ಹೊತ್ತು ನಡೆದ ಘಟನಾವಳಿಗಳು,ಸುಪ್ತ ಪ್ರಜ್ಞೆಯೊಳಗೆ ಮಥಿಸಿದ ಭಾವಗಳೆಲ್ಲವೂ ನಿದಿರೆಯ ಹೊತ್ತಿನಲ್ಲಿ ಕನಸಿನಂತೆ ತೆರೆದುಕೊಳ್ಳುತ್ತಾ ಹೋಗುತ್ತದೆಯೆಂದು ಸಂಶೋಧಕರು ಸಂಶೋಧಿಸಿ ವರದಿ ಒಪ್ಪಿಸುತ್ತಲೇ ಬಂದಿದ್ದಾರೆ. ಮತ್ತು ಆ ಹೇಳಿಕೆಗಳು ಕಾಲ ಬದಲಾದಂತೆ ಆಗಾಗ್ಗೆ ಮಾರ್ಪಾಟುಗೊಳ್ಳುತ್ತಲೇ ಇರುತ್ತದೆ ಕೂಡ. ಅಂದರೆ ನಿಖರವಾದ ಸತ್ಯ ಯಾವುದು? ಬಿಡಿ. ಇದು ಕನಸಿಗಷ್ಟೇ ಸಂದ ವಿಚಾರ. ಹಾಗಾಗಿ ಅದನ್ನು ಗಹನವಾಗಿ ತೆಗೆದುಕೊಳ್ಳುವ ಹಾಗಿಲ್ಲ.ಹಾಗಂತ ಹಗುರವಾಗಿ ಪರಿಗಣಿಸಿ ಉಡಾಫೆ ಮಾಡುವಂತೆಯೂ ಇಲ್ಲ.ಆದರೂ ಹಾಗೇ ಬಂದು ಹೀಗೇ ತೇಲಿ ಹೋಗುವ ಕನಸುಗಳಿಗೆ ಗಂಭೀರ ಚರ್ಚೆಯ ಬಿಗು ಬೇಲಿ ಬೇಕೇ? ಎಂಬ ಪ್ರಶ್ನೆ ಕನಸಿನಂತೆ ಕಾಡುತ್ತದೆ ಕೂಡ.

ಜೀವನದಲ್ಲಿ ಏನೆಲ್ಲಾ ದುರಂತಗಳನ್ನು ಅನುಭವಿಸಿದರೂ ,ಅರೆಗಳಿಗೆಯಾದರೂ ಕನಸಿನಲ್ಲಿ ತೇಲಿ ಹೋಗದ ಜೀವಗಳು ಇರಲಿಕ್ಕಿಲ್ಲ.ಬದುಕಲ್ಲಿ ಕನಸಂತೆ ಬಂದು ಹೋದವರು,ಕನಸಿನಲ್ಲಿ ಬಂದು ನನಸಾಗಿ ನಿಂತವರು..ಕನಸಿನರಮನೆಯ ಕಟ್ಟುತ್ತಾ ಬದುಕ್ಕನ್ನ ಕೆಡವಿಕೊಂಡವರು…ಇವುಗಳೆಲ್ಲದರ ನಡುವೆಯೂ ನಾವು ಕನಸುಗಳ ಕಾಣುತ್ತಾ ಕನಸಿನಂತೆ ಬದುಕು ಕಳೆದು ಹೋಗುತ್ತಿರುವುದು ಸುಳ್ಳಲ್ಲ.ಏನೇ ಆದರೂ ಕನಸಿನ ಕತೆಗಳನ್ನು,ರೋಚಕ ಅನುಭವಗಳನ್ನು, ಅದು ತಂದು ಕೊಟ್ಟ ಅಪರಿಮಿತ ಮುದವನ್ನು ಅವರಿವರು ರಸವತ್ತಾಗಿ ವರ್ಣಿಸುವಾಗ ,ನಾವು ಕನಸೊಳಗೆ ತೇಲಿ ಹೋಗುತ್ತಾ ಹೌದೇ..? ಅಂತ ಅನ್ನಿಸದೇ ಇರಲಾರದು. ಈ ಕನಸುಗಳು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿವೆಯೆಂದರೆ, ಬೀಳುವ ಕನಸುಗಳ ಜಾಡು ಹಿಡಿದು ಹೋಗುವರುಂಟು.ಕನಸಿನಲ್ಲಿ ಇಂತಹ ವಿಷಯಗಳು ಹಾದು ಹೋದರೆ ಒಳಿತು.ಇಂತವು ಬಿದ್ದರೆ ಕೆಡುಕು ಅಂತ ಫಲ ಜ್ಯೋತಿಷಿಗಳಂತೆ ಶಕುನ ನುಡಿಯುವರುಂಟು.

ಕನಸಿನಲ್ಲಿ ಮರಣ ಸಂಬಂಧಿತ ವಿಚಾರಗಳು ಬಿದ್ದರೆ ಒಳ್ಳೆಯದು ಅಂತನೂ,ಅವರಿಗೆ ಮತ್ತೆ ಆಯುಷ್ಯ ಗಟ್ಟಿ ಇದೆ ಅಂತನೂ ಒಂದು ವಾಡಿಕೆ.ಹಾಗಾದ ಮೇಲೆ ಇಂತಹ ಕನಸು ಬಿದ್ದವರ ಕತೆ ಮತ್ತೆ ಕೇಳಬೇಕೆ? ಇನ್ನು ತನಗೆ ಪೂರ್ಣ ಆಯುಷ್ಯ ಅನ್ನೋ ಭದ್ರ ನಂಬಿಕೆಯನ್ನು ಒಳಗೊಳಗೆ ಇಟ್ಟುಕೊಂಡು ಧೈರ್ಯದಲ್ಲಿ ಬದುಕುತ್ತಿರುತ್ತಾರೆ.ಇಂತಹ ಆಶಾಭಾವಗಳನ್ನು ಹುಟ್ಟು ಹಾಕುವ ಕನಸಿಗೆ ನಮೋ ನಮೋ ಅನ್ನಲೇ ಬೇಕು ತಾನೆ.ಇನ್ನು ಕನಸಿನಲ್ಲಿ ಆಕಸ್ಮಿಕವಾಗಿ ಎಲ್ಲಿಯಾದರೂ ಹಾವು ಪ್ರತ್ಯಕ್ಷ ಆಯಿತೋ..? ಹೋಯಿತು.ಮತ್ತೆ ಅವನ ಕತೆ ಗೋವಿಂದವಾಗಿ ಗ್ರಹಚಾರವೇ ಕೆಟ್ಟು ಹೋದಂತಾಗಿ ಬಿಡುತ್ತದೆ. ಆಮೇಲೆ ಆ ದೋಷ,ಈ ದೋಷ,ನಾಗದೋಷ ಅಂತ ಸಿಕ್ಕ ಸಿಕ್ಕ ದೋಷವೆಲ್ಲಾ ಎಡರಿಕೊಂಡು,ನಂತರ ಸಂಬಂಧಪಟ್ಟ ದೇವಸ್ಥಾನಕ್ಕೆ ಹೋಗಿ ಹಾವಿನ ಬೆಳ್ಳಿ ಮೊಟ್ಟೆ, ಅಥವಾ ಬೆಳ್ಳಿಯ ಸರ್ಪದ ಹೆಡೆ ಅರ್ಪಿಸಿ ಪಾವನರಾಗಿ, ಪರಿಹಾರ ಕಂಡುಕೊಳ್ಳಬಹುದೆಂದು ಅವರಿವರು ತಲೆಗೊಂದರಂತೆ ಪುಕ್ಕಟೆ ಸಲಹೆಗಳನ್ನು ನೀಡುತ್ತಲೇ ಬರುತ್ತಾರೆ. ಇಂತಹ ಹೇಳಿಕೆಗಳಿಂದ ಕೆಲವರ ಜೀವನವಿಡೀ ಮಾಡದ ಪಾಪ ಪರಿಹಾರದಲ್ಲೇ ಕಳೆದು ಹೋಗಿ ಬಿಡುತ್ತದೆ. ಇನ್ನು ಕೆಲವು ಪುಕ್ಕಲರಿಗಂತೂ ಈ ಹೇಳಿಕೆಗಳು ಮತ್ತಷ್ಟೂ ಹೆದರಿಕೆ ಹುಟ್ಟಿಸಿದರೆ, ಆ ಹೆದರಿಕೆಗೆ ಮತ್ತೆ ಕನಸಿನಲ್ಲಿ ಪ್ರತಿನಿತ್ಯ ಹಾವುಗಳು ಕಾಣಿಸಿಕೊಂಡರೂ ಆಶ್ಚರ್ಯವೇನಿಲ್ಲ.ಹೀಗೆ ಪ್ರತಿಯೊಬ್ಬನಿಗೂ ಸಾಮಾನ್ಯವಾಗಿ ಖುಷಿ ಮೂಡಿಸುವ,ದಿಗಿಲು ಹುಟ್ಟಿಸುವ ಕನಸುಗಳು ಬಿದ್ದೇ ಬಿದ್ದಿರುತ್ತವೆ.

ನಮಗೆ ಎಳವೆಯಲ್ಲಂತೂ ಕಳ್ಳ-ಕಾಕರ ಕನಸುಗಳೇ ಜಾಸ್ತಿ ಬೀಳುತ್ತಿದ್ದದ್ದು.ಕನಸಿನಲ್ಲಿ ಬರುವ ಕಪ್ಪು ಮುಸುಕುಧಾರಿ ಕಳ್ಳರು ಗಾಢ ಕತ್ತಲೆಯೊಳಗೆ ಕಪ್ಪು ಕಾರಿನಲ್ಲಿ ನಮ್ಮನ್ನು ತುಂಬಿಸಿ ಕರೆದೊಯ್ಯುವುದು,ಚಿತ್ರ ಹಿಂಸೆ ಕೊಡುವುದು,ಭಯದಿಂದ ನಾವು ಬೊಬ್ಬೆ ಹಾಕುವಾಗ ಸ್ವರವೇ ಹೊರಡದೆ ಕೊನೇಗೆ ,ಕನಸು ಹರಿದು ಎಚ್ಚರಗೊಂಡಾಗ ಪೂರ್ತಿ ಬೆವೆತು ಹೋಗುವುದು ..ಇವೆಲ್ಲಾ ನಡೆದೇ ಇರುತ್ತಿತ್ತು. ಕೊನೆ ಕೊನೆಗೆ ನಾವು ಈ ಕನಸುಗಳಿಗೆ ಎಷ್ಟು ಒಗ್ಗಿ ಹೋಗಿರುತ್ತಿದ್ದೆವೆಂದರೆ,ಕನಸಿನ ಕೊನೇ ಹಂತಕ್ಕೆ ಬರುವಾಗ ಇದು ಕನಸೇ ಅಂತ ಗೊತ್ತಾಗಿ, ನಾವೇ ಧೈರ್ಯದಿಂದ ಕಳ್ಳನನ್ನು ಓಡಿಸುವುದು,ಅವನು ಹೆದರಿ ಕಂಗಾಲಾಗಿ ನಮ್ಮ ಪಾದದಡಿಯಲ್ಲಿ ಬಿದ್ದು ಕ್ಷಮೆ ಯಾಚಿಸುವುದು..ಹೀಗೆ ಕನಸಿನ ಲೋಕದಲ್ಲಿ ನಾವುಗಳು ಹೀರೋಗಳಾಗಿಬಿಡುತ್ತಿದ್ದೆವು.ಮತ್ತೆ ಅವುಗಳೆಲ್ಲವನ್ನೂ ಸಹಪಾಠಿಗಳ ಮುಂದೆ ರಸವತ್ತಾಗಿ ವರ್ಣಿಸದಿದ್ದರೆ..ಮತ್ತೆ ರಾತ್ರೆ ಕನಸುಗಳು ಬಿದ್ದೀತೇ..?

dreams

ಹೀಗೆ ರಾತ್ರೆ ಪೂರ ಕನಸು ಕಾಣುತ್ತಾ,ಎಚ್ಚೆತ್ತ ಬಳಿಕವೂ ಕಂಡ ಕನಸಿನ ಗುಂಗಿನಲ್ಲೇ ಇದ್ದರೆ ,ತರಗತಿಯಲ್ಲಿ ಪಾಠ ಕೇಳುವಾಗ ಮತ್ತೆ ನಿದ್ದೆ ತೂಗದೆ ಇರುತ್ತದೆಯಾ? ಅದು ಬೇರೆ ಲೆಕ್ಕದ ಪಾಠ ಮಾಡುವಾಗ ಇನ್ನಿಲ್ಲದ ನಿದ್ದೆ ಆವರಿಸ್ಕೊಂಡು ಬೆಲ್ಲ ತೂಗುತ್ತಾ ಇರುವಾಗ,ಮೇಷ್ಟ್ರು ಕೈಯಿಂದ ತಲೆಗೆ ಮೊಟಕಿ,ಏನು ನಿದ್ದೆ ಮಾಡ್ತಾ ಕನಸು ಕಾಣುವುದಾ..? ಅಂತ ಅಬ್ಬರಿಸಿ ನುಡಿಯುವಾಗ..ಹೌದು! ಕೂಡಿಸಿ,ಕಳೆದರೂ ತಾಳೆಯಾಗದ ಈ ಲೆಕ್ಕಕ್ಕಿಂತ, ಅಹಾ! ಕನಸೇ ಎಷ್ಟು ಚೆಂದ ಅಂತ ಲೆಕ್ಕ ಮಾಸ್ತರರ ಕೋಲು ನೋಡಿಕೊಂಡು ಹೇಳುವ ಧೈರ್ಯ ಯಾರಿಗೆ ತಾನೇ ಇರಬಹುದು? ಇನ್ನು ಕಾಲೇಜಿಗೆ ಬಂದಿಳಿದ ಮೇಲೆ ಕೇಳಬೇಕೇ? ಹದಿಹರೆಯದ ವಯಸ್ಸೆಂದರೆ ಅದು ರಂಗು ರಂಗಿನ ಕನಸಿನ ಲೋಕ.ಇನ್ನು ಅಲ್ಲಿ ಕನಸು ಕಾಣದೇ ಇದ್ದರೆ,ಕನಸು ಬೀಳದೇ ಇದ್ದರೆ ಆ ವಯಸ್ಸಿಗೇ ಅಪಚಾರ ಬಗೆದಂತೆ.ಎಷ್ಟೋ ಸಲ ವಿಧ್ಯಾರ್ಥಿಗಳು ಗಹನವಾಗಿ ಪಾಠ ಕೇಳುವಂತೆ ನಟಿಸಿದರೂ,ಯಾವುದೋ ಲೋಕದಲ್ಲಿ ಕನಸಿನ ಚುಂಗು ಹಿಡಿದು ಮುಳುಗಿರುತ್ತಿದ್ದ ಸತ್ಯ, ಅಧ್ಯಾಪಕರು ಪ್ರಶ್ನೆ ಎಸೆದಾಗ ದಕ್ಕಿ ಬಿಡುತ್ತಿತ್ತು.ಹೆಚ್ಚಿನವರ ಮುಖ ಈ ಸಮಯದಲ್ಲಿ ಹುಳ್ಳ ಹುಳ್ಳಗಾಗಿ ಸಣ್ಣಗಾಗಿ ಬಿಡುತ್ತಿತ್ತು.ಅಧ್ಯಾಪಕರಂತೂ ಮನಸ್ಸಿನೊಳಗೆ ಕೈ ಹಾಕಿ ತೆಗೆದವರಂತೆ ಸತ್ಯವನ್ನೇ ಜಾಲಾಡಿಸಿ ಬಿಡುತ್ತಾರೆ.ಯಾಕೆಂದರೆ ಅದು ಅವರ ಅನುಭವದಿಂದ ಅದ್ದಿ ತೆಗೆದ ಮಾತಾದರಿಂದ ಅದನ್ನು ತಳ್ಳಿ ಹಾಕುವಂತಿಲ್ಲ.

ಬೆಳಕಿಲ್ಲದ ದಾರಿಯಲ್ಲಿ ಬೇಕಾದರೆ ನಡೆಯಬಹುದು.ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ ಅಂತ ಚಿಂತಕರೇ ನುಡಿ ಮುತ್ತುಗಳನ್ನು ಉದುರಿಸಿದ ಮೇಲೆ ಕನಸುಗಳನ್ನು ಕಾಣದಿದ್ದರೆ ಹೇಗೆ ಹೇಳಿ? ಆದರೆ ನಿದ್ರೆಯೊಳಗೆ ರಮ್ಯ ಕನಸುಗಳನ್ನು,ಸೋಮಾರಿಯಂತೆ ಹಗಲು ಕನಸು ಕಾಣುವುದರ ಬಗ್ಗೆ ಅವರುಗಳು ಹೇಳಿರುವುದಲ್ಲ ಅಂತ ಎಲ್ಲರಿಗೂ ಗೊತ್ತೇ ಇದೆ.ಭವಿಷ್ಯದ ಗುರಿ ನಿರ್ಮಾಣ ಮಾಡುವ ಸುಂದರ ಕನಸುಗಳ ಬಗ್ಗೆ ಅವರುಗಳ ವ್ಯಾಖ್ಯಾನ ಇದ್ದರೂ, ಸೋತು ಸುಣ್ಣವಾದಾಗ,ನಿರಾಶೆಯಿಂದ ಕುಗ್ಗಿ ಹೋದಾಗ,ಇಂತಹ ಸಣ್ಣ ಪುಟ್ಟ ಕನಸುಗಳು ಮನಸ್ಸನ್ನ ಹಗುರಗೊಳಿಸುವ ಹಾಗಿದ್ದರೆ, ಅಂತಹ ಹಗಲು ಕನಸು ಕಾಣುವುದರಲ್ಲಿ ತಪ್ಪೇನಿಲ್ಲ ಅಂತ ನಾವುಗಳು ಸುಮ್ಮಗೊಂದು ತೀರ್ಮಾನಕ್ಕೆ ಬಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.

ಇನ್ನು ರಾತ್ರೆಯ ಕನಸಿನಲ್ಲಿ ಕೆಲವು ಮಕ್ಕಳಿಗೆ ಹಾಸಿಗೆ ಒದ್ದೆ ಮಾಡುವ ಅಭ್ಯಾಸವಿರುತ್ತದೆ. ಎಷ್ಟೇ ಮುಂಜಾಗರುಕತೆ ತೆಗೆದುಕೊಂಡರೂ ಬೆಳಗ್ಗೆ ಎದ್ದು ನೋಡುವಾಗ ಮಾತ್ರ ಹಾಸಿಗೆ ಒದ್ದೆ ಮುದ್ದೆ.ಇನ್ನು ಕೆಲವರಿಗಂತೂ ಕನಸಿನಲ್ಲಿ ಎದ್ದು ನಡೆಯುವ ಅಭ್ಯಾಸವಿರುತ್ತದೆ.ನಡು ರಾತ್ರೆಯಲ್ಲಿ ಬಾಗಿಲು ತೆರೆದು ಎಲ್ಲಿಯೆಲ್ಲೋ ಕನಸಿನಲ್ಲಿ ತಿರುಗಿ ,ಮತ್ತೆ ಏನೂ ಗೊತ್ತಿರದವರ ಹಾಗೆ ಹಾಸಿಗೆಗೆ ಬಂದು ಮಕ್ಕಳಂತೆ ಬಿದ್ದುಕೊಂಡು ಗಡದ್ದಾಗಿ ನಿದ್ದೆ ಹೊಡೆಯುವುದಿದೆ.ಮತ್ತೊಂದಷ್ಟು ಜನರು ಕನಸಿನಲ್ಲಿ ಮಾತನಾಡುವುದು ಕೇಳುವುದೇ ಸೊಗಸು.ಮಜ ಅಂದರೆ ನಾವು ಕೇಳಿದ್ದಕ್ಕೆಲ್ಲಾ ಚಾಚು ತಪ್ಪದೇ ಸ್ಪಷ್ಟವಾಗಿ ಉತ್ತರಿಸುತ್ತಾ ಹೋಗುತ್ತಾರೆ.ಇನು ಕೆಲವರಂತೂ ಪೋನಿನಲ್ಲಿ ಸಂಭಾಷಿಸುವುದು,ಅಳುವುದು, ನಗುವುದು ಹೀಗೆ ಒಂದೊಂದು ತೆರನಾದ ಅಭ್ಯಾಸವಿರುತ್ತದೆ. ಕುಲುಕಿಸಿ ಎಬ್ಬಿಸಿ ಕೇಳಿದರೆ, ಏನಿಲ್ಲ ಕನಸು ಬಿತ್ತು ಅಂತ ತಣ್ಣಗೆ ನುಡಿದು ಗುಡಿ ಹೊದ್ದು ಮಲಗಿಬಿಡುತ್ತಾರೆ.ಇವೆಲ್ಲಾ ನಗು ತರಿಸಿ ತಮಾಷೆಯಂತೆ ಕಂಡರೂ ಇಂತಹ ಕನಸಿನ ಕನವರಿಕೆಗಳೆಲ್ಲಾ ಕಳವಳಕಾರಿ ಮತ್ತು ಅಪಾಯಕಾರಿ. ಇಂತಹುವುಗಳೆಲ್ಲಾ ನಮ್ಮ ಗಮನಕ್ಕೆ ಬಂದಾಗ ಜಾಗೃತರಾಗಿ ಸೂಕ್ತ ತಜ್ಞರ ಮಾರ್ಗದರ್ಶನ ಮತ್ತು ಸಲಹೆ ಪಡೆಯದಿದ್ದರೆ ಈ ಕನಸಿನ ಕನವರಿಕೆಗಳು ಹಳಿ ತಪ್ಪಿ ಪ್ರಾಣಾಂತಿಕವಾಗಿ ಬಿಡುವ ಅಪಾಯಗಳೂ ಕೂಡ ಇಲ್ಲದಿಲ್ಲ.

ನನ್ನ ಪರಿಚಿತರೊಬ್ಬರಿಗೆ ನಿದ್ದೆಯಲ್ಲಿ ತನ್ನ ಕರಿಮಣಿ ಕಳೆದು ಹೋಗಿರುವುದಾಗಿ ಕನಸು ಬಿದ್ದು,ಕನಸಿನಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲವಂತೆ. ಇದಾದ ನಂತರ ಕೆಲವು ದಿನಗಳ ಬಳಿಕ ಅವರ ಪತಿ ಆಕಸ್ಮಿಕವಾಗಿ ತೀರಿಕೊಂಡ ಬಳಿಕ ತಾನು ಕಂಡ ಕನಸಿಗೂ ,ವಾಸ್ತವದಲ್ಲಿ ಜರುಗಿದ ಘಟನೆಗೂ ತಾಳೆ ಹಾಕಿ ಖಿನ್ನರಾಗುತ್ತಿದ್ದರು.ಅಂದರೆ ಕನಸು ಕೆಲವೊಮ್ಮೆ ಭವಿಷ್ಯ ನುಡಿಯುತ್ತದೆಯಾ?ಅಥವ ಇವೆಲ್ಲಾ ಕಾಕತಾಳೀಯ ಸಂಭವನೀಯತೆಗಳಾ?ಇವೆಲ್ಲಾ ಇನ್ನೂ ಉತ್ತರಕ್ಕೆ ಸಿಗದ ಹುಡುಕಾಟದ ವಿಚಾರಗಳು.ಇವಕ್ಕೆಲ್ಲಾ ತಲೆಕೆಡಿಸಿಕೊಂಡು ಕುಳಿತರೆ, ಮತ್ತೆ ಯಾರಿಗೂ ನಿದ್ದೆಯೇ ಬರದೆ,ಕನಸೂ ಬೀಳದೇ ಕೂಡ ಇರಬಹುದು.

ಹಾಗೆ ,ನನಗೂ ಕೂಡ ಎಲ್ಲರಂತೆ ಕನಸು ಬೀಳುತ್ತದೆ.ಅದು ಸ್ವಲ್ಪ ಹೆಚ್ಚೇ ಎಂದರೂ ಕೂಡ ತಪ್ಪಲ್ಲ.ನನ್ನ ಈ ಕನಸಿನ ಜಾಡು ಹಿಡಿದು ಹೊರಟರೆ, ಇತ್ತೀಚೆಗೆ ನನಗಂತೂ ಯಾವತ್ತೂ ನದಿಯಲ್ಲಿ ಬಟ್ಟೆ ತೇಲಿ ಹೋಗುವ ಕನಸುಗಳು ಬೀಳುತ್ತಲಿರುತ್ತವೆ.ಇದಕ್ಕೆ ಕಾರಣವೂ ಇಲ್ಲದಿಲ್ಲ.ನಾನು ಪ್ರತಿನಿತ್ಯ ನದಿಗೆ ಬಟ್ಟೆ ತೊಳೆಯಲು ಹೋಗುತ್ತೇನೆ.ಏನೇ ಒತ್ತಡಗಳಿದ್ದರೂ,ಅನಿವಾರ್ಯತೆಗಳಿದ್ದರೂ ಇದೊಂದು ಕಾರ್ಯಕ್ರಮವನ್ನು ನಾನು ರದ್ದು ಮಾಡುವುದಿಲ್ಲ. ಈ ಕೆಲವು ದಿನಗಳಿಂದಂತೂ ಕನಸಿನ ತುಂಬಾ ನದಿ ,ಬಟ್ಟೆ,ತೇಲಿಹೋಗುತ್ತಿರುವ ಬಕೀಟು ಇದೇ ಚಿತ್ರಣಗಳು.ಜೊತೆಗೆ ತೇಲಿ ಹೋಗುವ ಬಟ್ಟೆಗಳನ್ನು ನಾನು ಹಿಡಿಯಲೆತ್ನಿಸಿದಷ್ಟೂ ಬಟ್ಟೆಗಳು ರಭಸದಿಂದ ತೇಲುವುದೂ,ನದಿಯ ಪಾತ್ರ ಹಿರಿದಾಗುತ್ತಾ ಹೋಗುವುದು ನಡೆದೇ ಇದೆ.ನಿನಗೆ ಯಾವ ಕೆಲಸ ನಿಲ್ಲಿಸಿದರೂ,ಬಟ್ಟೆ ತೊಳೆಯುವುದನ್ನು ಮಾತ್ರ ಒಂದು ದಿನವೂ ಮುಂದೂಡುವುದಿಲ್ಲವಲ್ಲ?ಅದಕ್ಕೆ ಕನಸಿನಲ್ಲೂ ಕೂಡ ನಿನಗೆ ಇದೇ ಕನವರಿಕೆ ಇರಬೇಕು.ಹಾಗಾಗಿ ಬಟ್ಟೆಗಳೆಲ್ಲಾ ತೇಲಿ ಹೋಗಿ ನಿನ್ನ ಕೆಲಸವನ್ನು ಹಗುರಗೊಳಿಸುತ್ತಿವೆ.ಹೋಗಲಿ ಬಿಡು.ಒಳ್ಳೆಯದೇ ಆಯಿತು.ಬಟ್ಟೆ ತೊಳೆಯುವ ಕೆಲಸ ಕಮ್ಮಿ ಆಯಿತು ನೋಡು ಅಂತ ನನ್ನ ಗೆಳತಿಯರು ನನ್ನ ಕನಸಿನ ಕತೆ ಕೇಳಿ ಚುಡಾಯಿಸುತ್ತಲೇ ಇರುತ್ತಾರೆ.ಇದು ಸಾಧ್ಯವಾ..? ಅಂತ ನಾನು ಬರಿದೇ ನಕ್ಕು ಹಗುರವಾಗುತ್ತಿದ್ದೇನೆ.

ರಾತ್ರೆ ಹೊತ್ತು ಗಡದ್ದಾಗಿ ಊಟಮಾಡಿದರೆ ಓತಪ್ರೋತವಾಗಿ ಕನಸುಗಳು ಬೀಳುತ್ತವೆ ಅಂತ ಹಿರಿಯರು ಹೇಳುವ ಮಾತಿದೆ ತಮಾಷೆಯೆಂದರೆ,ನಾವು ಬದುಕುವುದೇ ಹೊಟ್ಟೆ ತುಂಬಾ ತಿನ್ನಲು.ದುಡಿಯುವುದೇ ಹೊಟ್ಟೆ ತುಂಬಾ ಉಣ್ಣಲು. ಅರೆ ಹೊಟ್ಟೆಯಲ್ಲಿ ಮಲಗಿ ಬೀಳುವ ಕನಸಿಗೆ ಕಡಿವಾಣ ಹಾಕುವುದು ತರವೇ? ಉಣ್ಣುವ ಊಟಕ್ಕೂ ಬೀಳುವ ಕನಸಿಗೂ ಸಂಬಂಧ ಇದೆ ಅಂತ ಹೇಳುತ್ತಾ,ಲಾಗಾಯ್ತಿನಿಂದ ಹಿರಿ ತಲೆಮಾರುಗಳು ರಾತ್ರೆ ಹೊತ್ತು ಹಾಗಲಕಾಯಿ ಪಲ್ಯ ಸೇವಿಸಬಾರದು ಅಂತ ಆಜ್ಞೆ ಮಾಡಿಬಿಟ್ಟಿದ್ದಾರೆ.ಬಹುಷ: ಬೀಳುವ ಕನಸು ಹಾಗಲಕಾಯಿಯಂತೆ ತುಂಬಾ ಕಹಿಯೇ ಇರಬೇಕು.ಇಲ್ಲದಿದ್ದರೆ ಅದನ್ನು ರಾತ್ರೆ ಹೊತ್ತು ಸೇವಿಸಬಾರದು ಅಂತ ಫರ್ಮಾನು ಹೊರಡಿಸುತ್ತಿರಲಿಲ್ಲವೇನೋ..?

ನಮ್ಮಮನೆಯಲ್ಲಂತೂ ಈವತ್ತು ರಾತ್ರೆ ಊಟಕ್ಕೆ ಹಾಗಲಕಾಯಿ ಪಲ್ಯ ಬಿಟ್ಟರೆ ಬೇರೇನೂ ಪದಾರ್ಥ ಉಳಿದಿಲ್ಲ.ತಿನ್ನುವುದಾ..? ಬೇಡವಾ..? ಅಂತ ಗೊಂದಲಕ್ಕೆ ಬಿದ್ದಿರುವೆ.ಇರಲಿ.ಇವತ್ತು ತಿನ್ನುವುದು ಗ್ಯಾರಂಟಿ ಅಂತ ಪಣ ತೊಟ್ಟಂತೆ ಶಪಥ ಮಾಡಿರುವೆ.ತಿಂದ ಮೇಲೆ ಯಾವ ಕನಸು ಬಿತ್ತು ಅಂತ ತಿಳಿಯುವ ಕುತೂಹಲ ನಿಮಗಿದ್ದರೆ ,ಖಂಡಿತಾ ನಾಳೆ ಹೇಳುವೆ.ಅಲ್ಲಿವರೆಗೂ ನೀವೆಲ್ಲಾ ಸುಖ ನಿದ್ದೆ ಹೋಗಿ.ನಿಮಗೊಂದು ಸುಂದರವಾದ ಕನಸು ಬೀಳುವಂತಾಗಲಿ.

child-dream

– ಸ್ಮಿತಾ ಅಮೃತರಾಜ್. ಸಂಪಾಜೆ

3 Responses

  1. Ranganath Nadgir says:

    ಸುಂದರ ಹಾಗು ಮನಮುಟ್ಟುವ ಲೇಖನ .

  2. girish says:

    ಹಾಯ್ ಮೆಡಮ್ ನನ್ನ ಕನಸಿನಲ್ಲಿ ಅಲ್ಲಾವುದ್ದೀನ್ ದೀಪ ಸಿಕ್ಕಿರುತದೆ ಅದು ತುಂಬ ಚಿಕ್ಕದಾಗಿರುತದೆ ನನ್ನ ಕೈಯನು ಒಂದು ಹುಳು ಕಚ್ಚುವ ಹಾಗೆ ಕಚ್ಚುತ್ತದೆ ಇದರ ಅರ್ಥ ಏನೆಂದು ತಿಳಿಸುವಿರಾ

  3. ರಮೇಶ್ says:

    ಕನಸಿನಲ್ಲಿ ಬಂಗಾರದ ನಾಣ್ಯ ಗಳು ಕಂಡರೆ ಏನು ಅರ್ಥ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: