ಹಿಮಾಲಯದ ಸನ್ನಿಧಿಯಲ್ಲಿ – ಚಾರ್ಧಾಮ ಪ್ರವಾಸ-ಭಾಗ 7

Share Button

Rukminimala

ಕೇದಾರನಾಥನಿಗೆ ವಿದಾಯ
೧೮-೯-೨೦೧೬ರಂದು ಬೆಳಗ್ಗೆ ೫.೧೫ ಕ್ಕೆ ನಾವು ಕೋಣೆ ಖಾಲಿ ಮಾಡಿ ದೇವಾಲಯಕ್ಕೆ ಬಂದೆವು. ದೇವಾಲಯದ ಪಕ್ಕದಲ್ಲೇ ವಿಶಿಷ್ಟವಾಗಿ ಟೆಂಟ್ ಮಾದರಿಯ ವಸತಿಗೃಹ ನಿರ್ಮಿಸಿದ್ದಾರೆ.

ಹಿಮದ ನಡುವೆ ಕೇದಾರನಾಥ ಬೆಟ್ಟ ಪ್ರದೇಶ ನಯನಮನೋಹರವಾಗಿ ಕಾಣುತ್ತದೆ. ಅದನ್ನು ಬೆಳಗಿನಝಾವ ನೋಡುವುದೇ ಸೊಬಗು. ಬೆಳಗ್ಗೆ ಹಿಮಪರ್ವತ ಶುಭ್ರ ಬಿಳಿಯಾಗಿ ಸೂರ್ಯನ ಬೆಳಕು ಬಿದ್ದು ಹೊಳೆಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಅದನ್ನು ನೋಡುತ್ತಲೇ, ಕ್ಯಾಮರಾದಲ್ಲಿ ಭದ್ರವಾಗಿ ಹಿಡಿದಿಡುತ್ತಲೇ ೬.೧೫ಕ್ಕೆ ಅಲ್ಲಿಂದ ನಿರ್ಗಮಿಸಿದೆವು.

1

2

9

ಕೇದಾರದಿಂದ ಗೌರಿಕುಂಡಕ್ಕೆ ನಡಿಗೆ
ಕೇದಾರದಿಂದ ಗೌರಿಕುಂಡಕ್ಕೆ ೧೬ಕಿಮೀ ನಡೆಯಬೇಕು. ನಡೆಯುವ ದಾರಿಯನ್ನು ೨೦೧೪ರಲ್ಲಿ ಹೊಸದಾಗಿ ನಿರ್ಮಿಸಿದ್ದಾರೆ. ೨೦೧೩ರಲ್ಲಿ ಸಂಭವಿಸಿದ ಪ್ರಳಯದಲ್ಲಿ ಹಳೆಯ ದಾರಿ ಕೊಚ್ಚಿ ಹೋಗಿದೆ. ದೇವಾಲಯದ ಎದುರು ಬಲಭಾಗದಲ್ಲಿ ಹಳೆಯ ದಾರಿ ಅಲ್ಲಲ್ಲಿ ಕೊಚ್ಚಿ ಹೋದದ್ದು ಕಾಣುತ್ತಿತ್ತು. ಈಗ ಎಡಭಾಗದಲ್ಲಿ ದಾರಿ ನಿರ್ಮಿಸಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ೧೬ ಕಿಮೀ ದೂರದ ದಾರಿಯನ್ನು ಬಹಳ ಸೊಗಸಾಗಿ ಅನುಕೂಲಕರವಾಗಿ ನಿರ್ಮಿಸಿದ್ದು ಶ್ಲಾಘನೀಯ. ಉತ್ತರಾಖಂಡದ ಸರ್ಕಾರದ, ಹಾಗೂ ಕಾರ್ಮಿಕರ ಈ ಕೆಲಸವನ್ನು ಮುಕ್ತಕಂಠದಿಂದ ಮೆಚ್ಚಲೇಬೇಕು. ಇದರ ಹಿಂದಿರುವ ಕತೃಶಕ್ತಿಗೆ ನಮ್ಮೆಲ್ಲರ ಸೆಲ್ಯೂಟ್ ಸಲ್ಲಲೇಬೇಕು. ಸಾಕಷ್ಟು ಅಗಲವಾಗಿ ಸಿಮೆಂಟ್, ಅಲ್ಲೇ ಲಭ್ಯವಿರುವ ಕಲ್ಲು ಹಾಕಿ ಚೆನ್ನಾಗಿ ನಿರ್ಮಾಣ ಮಾಡಿದ್ದಾರೆ. ಕುದುರೆಗೂ ನಡೆಯಲು ತೊಡಕಾಗದಂತೆ ದಾರಿ ರೂಪಿಸಿದ್ದಾರೆ. ಕಾಲುದಾರಿಯನ್ನು ಪೌರಕಾರ್ಮಿಕರು ಆಗಾಗ ಗುಡಿಸುತ್ತ ಚೊಕ್ಕಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ದಾರಿಯಲ್ಲಿ ಕಸ ಅಂದರೆ ಕುದುರೆಲದ್ದಿ ಇರುತ್ತದೆ ಅಷ್ಟೆ. ಅದನ್ನು ಆಗಾಗ ತೆಗೆದು ದಾರಿ ಚೊಕ್ಕ ಮಾಡುತ್ತಾರೆ. ಅಲ್ಲಲ್ಲಿ ಜರಿದ ಕಡೆ ಪುನರ್ನಿಮಾಣ ಮಾಡುವ ಕಾಮಗಾರಿ ನಡೆಯುತ್ತಲಿತ್ತು.

11

6

ದಾರಿಯ ಸೊಬಗು

ಸುನಂದ ಅವರಿಗೆ ನಡೆಯಲು ಸಾಧ್ಯವಾಗದೆ ಇರುವುದರಿಂದ ಕುದುರೆಯಲ್ಲಿ ಕಳುಹಿಸುವುದು ಎಂದು ತೀರ್ಮಾನವಾಯಿತು. ಆದರೆ ಒಂದುಕಿಮೀ. ದೂರ ಬಂದರೂ ಕುದುರೆಯ ಸುಳಿವಿಲ್ಲ. ನಾನು, ಪೂರ್ಣಿಮಾ, ವಿಠಲರಾಜು, ರಂಗನಾಥ ಇಷ್ಟು ಮಂದಿ ಸುನಂದ ಅವರನ್ನು ಕುದುರೆಯಲ್ಲಿ ಕೂರಿಸುವವರೆಗೆ ಒಟ್ಟಿಗೇ ಹೆಜ್ಜೆ ಹಾಕುತ್ತಲಿದ್ದೆವು. ಬಾಕಿದ್ದವರೆಲ್ಲ ಮುಂದೆ ಹೋಗಿದ್ದರು. ಕುದುರೆ ಕಾದರೆ ಆಗದು. ಅವರು ಒಂದು ಹೆಜ್ಜೆ ಮುಂದೆ ನಡೆಯುವುದೂ ಕಷ್ಟ. ಡೋಲಿಯಲ್ಲಿ ಕೂರಿಸಿ ಕಳುಹಿಸಿಬಿಡಿ. ದರ ಎಷ್ಟು ಮಾತಾಡಿ ಎಂದು ವಿಠಲರಾಜು ಅವರಿಗೆ ಹೇಳಿದೆವು. ಸುನಂದ ನಡೆಯುವುದು ಕಂಡು ಅವರ ಪರಿಸ್ಥಿತಿ ವಿಠಲರಾಜು ಅವರಿಗೂ ಅದಾಗಲೇ ಮನವರಿಕೆಯಾಗಿತ್ತು. ಕೂಡಲೇ ಅವರು ಒಪ್ಪಿ ಡೋಲಿಯವನಲ್ಲಿ ಚರ್ಚೆ ಮಾಡಿ ಸಾವಿರದ ಐನೂರು ರೂಪಾಯಿಗೆ ಒಪ್ಪಿಸಿ ಅವರನ್ನು ಡೋಲಿಯಲ್ಲಿ ಕೂರಿಸಿ ನಿರಾಳವಾಗಿ ನಡಿಗೆ ಮುಂದುವರಿಸಿದೆವು.
ದಾರಿಯುದ್ದಕ್ಕೂ ಸುತ್ತಲೂ ಪರ್ವತಶ್ರೇಣಿಗಳು. ಆದರೆ ಮರಗಳಿಲ್ಲ. ಕುರುಚಲು ಸಸ್ಯಗಳು. ತೊರೆಗಳು, ಝರಿಗಳು ಹಿಮಚ್ಛಾದಿತ ಬೆಟ್ಟಗಳು, ಮಧ್ಯೆ ಮಂದಾಕಿನಿ ನದಿ ಬಳುಕುತ್ತ ಸಾಗುವುದನ್ನು ನೋಡುತ್ತ ನಡೆಯುವುದೇ ಅದ್ಭುತ ಅನುಭವ. ನಾನೂ, ಪೂರ್ಣಿಮಾ ಸೊಗಸಾಗಿ ಕಂಡದ್ದನ್ನೆಲ್ಲ ಕ್ಯಾಮರಾದಲ್ಲಿ ತುಂಬುತ್ತ, ಆಹಾ ಎಂಥ ಚಂದ ಈ ಹೂ, ಇದನ್ನೇ ಪೂಜೆಗೂ ಬಳಸಬಹುದಲ್ಲ, ಒಹೋ ಇಲ್ಲಿ ಕುದುರೆಗೆ ನೀರು ಕುಡಿಯಲು ಎಂಥ ವ್ಯವಸ್ಥೆ ಮಾಡಿದ್ದಾರೆ ನೋಡಿ ಎಂದು ಪ್ಲಾಸ್ಟಿಕ್ ಡಬ್ಬವನ್ನು ಕತ್ತರಿಸಿ ನೀರಿಟ್ಟದ್ದನ್ನು ತೋರಿಸುತ್ತ, ಪೂರ್ಣಿಮಾ ಅವರು ಕಷ್ಟಸುಖಗಳನ್ನು ಹೇಳುವುದನ್ನು ಆಲಿಸುತ್ತಲೇ ದಾರಿ ಸವೆಸಿದೆವು. ಅತ್ತ ಕಡೆಯಿಂದ ನಡೆಯುತ್ತ ಬರುವ ಜನ ಕಮ್ಮಿ ಇದ್ದರು.ಜನರು ಏದುಸಿರು ಬಿಡುತ್ತ ಬರುವುದು ಕಂಡಾಗ ಜೈ ಭೋಲೆನಾಥ ಎನ್ನುತ್ತಿದ್ದರು. ನಾವೂ ಜೈ ಎನ್ನುತ್ತಿದ್ದೆವು.ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸಿದ್ದಾರೆ. ಕೆಲವೆಡೆ ತುರ್ತು ಹೆಲಿಪ್ಯಾಡ್ ಗಳಿವೆ.dscn1338

12

ಕೆಲವು ಕಿಲೋಮೀಟರು ದೂರದಲ್ಲಿ ಒಂದೆರಡು ಅಂಗಡಿ ಹೊಟೇಲುಗಳಿವೆ. ದಾರಿ ಮಧ್ಯೆ ಸಿಗುವ ಹೊಟೇಲಿನಲ್ಲಿ ಪರೋಟ ತಿಂದೆವು. ರೂ. ೧೫ಕ್ಕೆ ಒಂದು ದೊಡ್ಡ ಆಲೂಪರೋಟ ಕೊಡುತ್ತಾರೆ. ರೂ. ೧೦ಕ್ಕೆ ಚಹಾ. ಅಲ್ಲಿ ತುಸು ವಿಶ್ರಮಿಸಿ ನಡಿಗೆ ಮುಂದುವರಿಸಿದೆವು. ಆಗ ಮಲೆನಾಡಿನ ಕಡೆಯವರೊಬ್ಬರು ಬರಿಗಾಲಲ್ಲಿ ನಡೆಯುತ್ತ ಆ ಹೊಟೇಲಿಗೆ ಬಂದರು. ಅವರು ಗೋಮುಖಕ್ಕೆ ೨೧ ಕಿಮೀ ನಡೆದು ಹೋಗಿ ನೋಡಿ ಬಂದದ್ದಂತೆ. ಅಲ್ಲಿಗೆ ಹೋಗುವುದು ತುಂಬ ಕಷ್ಟ ಈಗ ದಾರಿ ದುರ್ಗಮವಾಗಿದೆ ಎಂದರು. ಇನ್ನು ಕೇದಾರಕ್ಕೆ ನಡೆದು ಹೋಗಿ ಅಲ್ಲಿಂದ ಹೊರಟು ವೈಷ್ಣೋದೇವಿಗೆ ಹೋಗಲಿದೆಯಂತೆ. ‘ನೀವು ಬರಿಗಾಲಲ್ಲಿ ನಡೆಯುವುದಾ? ಕಷ್ಟವಾಗುವುದಿಲ್ಲವೆ?’ ಎಂದು ಕೇಳಿದೆ. ಅದಕ್ಕವರು, ‘ಹೌದು. ಕಷ್ಟ ಏನೂ ಆಗುವುದಿಲ್ಲ. ಅದೇ ಒಳ್ಳೆಯದು. ಬರಿಗಾಲಾದಾರೆ ಚಪ್ಪಲಿ, ಶೂ ಕಿತ್ತೋಗುವುದು, ಕಾಲಿಗೆ ಅದು ಸರಿ ಆಗದೆ ಇರುವುದು ಇಂಥ ಯಾವ ತಾಪತ್ರಯವೂ ಇಲ್ಲ’ ಎಂದು ನುಡಿದರು. ಸುಮಾರು ಎರಡು ತಿಂಗಳು ಅವರ ಯಾತ್ರೆಯಂತೆ. ಅವರ ಊರಲ್ಲಿ ಒಂದು ದೇವಾಲಯದಲ್ಲಿ ಅರ್ಚಕರಾಗಿದ್ದಾರಂತೆ. ಮಗಳು ಮೈಸೂರಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಳಂತೆ. ಅವರು ಪ್ರತೀ ವರ್ಷ ಹೀಗೆ ಯಾತ್ರೆ ಬರುತ್ತಿರುತ್ತಾರಂತೆ. ಅವರ ಸಾಹಸ ಕೇಳಿ ಅವರಿಗೆ ಶುಭ ಹಾರೈಸಿ ವಿದಾಯ ಹೇಳಿ ಬಿರುಸಾಗಿ ಹೆಜ್ಜೆ ಹಾಕಿದೆವು. ಅಲ್ಲಲ್ಲಿ ಗೌರಿಕುಂಡಕ್ಕೆ ಇಂತಿಷ್ಟು ಕಿಮೀ ಎಂದು ಫಲಕ ಹಾಕಿದ್ದಾರೆ. ಅದನ್ನು ನೋಡಿಡಾಗಲೆಲ್ಲ ಇನ್ನು ಇಷ್ಟೇ ನಡೆದರಾಯಿತು ಎಂಬ ಭಾವನೆ ಉದಿಸಿ ನಡೆಯಲು ಹುರುಪು ಬರುತ್ತಿತ್ತು.

ಸರಕು ಸಾಗಣೆಯ ನೋಟ
ಅಲ್ಲಿ ಸರಕು ಸಾಗಣೆಗೆ ಕುದುರೆ ಹಾಗೂ ಹೇಸರಗತ್ತೆಯನ್ನೇ ಅವಲಂಬಿಸಿದ್ದಾರೆ. ಕುದುರೆಮೇಲೆ ಜಲ್ಲಿ, ಕಬ್ಬಿಣ, ಸಿಮೆಂಟು, ಪೈಪ್, ಮರಳು, ಮರದ ದಿನ್ನೆ, ಪ್ಲೈವುಡ್ ಹಲಗೆಗಗಳು ಇತ್ಯಾದಿ ಹೊರಿಸುತ್ತ ಸಾಗುವುದನ್ನು ನೋಡಿದೆವು. ಕುದುರೆಗೆ ಒಮ್ಮೆಲೇ ಸುಮಾರು ೨೦೦ಕಿಲೊ ಭಾರ ಹೊರುವ ತಾಕತ್ತು ಇದೆಯಂತೆ. ಕುದುರೆ ಪ್ಲೈವುಡ್ ಹೊತ್ತು ಸಾಗುವಾಗ ಮಾತ್ರ ಅದರ ಮೈ ಕಾಣುವುದೇ ಇಲ್ಲ. ವಿಚಿತ್ರವಾಗಿ ಕಾಣುತ್ತದೆ.

10

 

hore1

ಮಾನವ ಪರಿಶ್ರಮ
ಕುದುರೆ, ಹೇಸರಗತ್ತೆ ಮೇಲೆ ಸಾಮಾನು ಸಾಗಿಸುವ ದೃಶ್ಯ ನೋಡಿದ್ದೆವಲ್ಲ. ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕರು ಬೃಹತ್ ಗಾತ್ರದ ಉದ್ದವಾದ ಕಬ್ಬಿಣದ ತುಂಡೊಂದನ್ನು ಹೆಗಲಲ್ಲಿ ಹೊತ್ತು ಬೆಟ್ಟ ಹತ್ತುತ್ತ ಸಾಗುತ್ತಿರುವುದು ಕಂಡು ಒಮ್ಮೆಲೆ ನಾವು ಸ್ತಬ್ಧರಾಗಿ ನಿಂತೆವು. ಅಬ್ಬ ಸಾಕಷ್ಟು ಭಾರವಿರುವ ಇದನ್ನು ಹೊತ್ತು ಬೆಟ್ಟ ಹತ್ತುತ್ತಾರಲ್ಲ. ನಮಗೆ ನಮ್ಮ ಬೆನ್ನಿನಲ್ಲಿ ಹೊತ್ತಿರುವ ಸಣ್ಣ ಚೀಲವೇ ಮಣಭಾರವೆನಿಸುತ್ತದೆ. ಚೀಲವೇನು? ನಮ್ಮ ದೇಹವೇ ಹೊರೆಯೆನಿಸುತ್ತದೆ. ಅಂತದ್ದರಲ್ಲಿ ಅವರ ಈ ಕಾರ್ಯ ನೋಡಿ ನಾವು ಮೂಕವಿಸ್ಮಿತರಾದೆವು. ಅವರನ್ನು ಕೃತಜ್ಞತಾಭಾವದಿಂದ ನೋಡಿದೆವು. ಅಲ್ಲಲ್ಲಿ ಇಳಿಸಿ ವಿಶ್ರಾಂತಿ ಪಡೆದು, ಪುನಃ ಹೊತ್ತು ಮುಂದೆ ಸಾಗುತ್ತಿದ್ದರು. ಅವರ ಈ ಶ್ರಮದಿಂದಲೇ ತಾನೆ ಯಾತ್ರಿಕರು ಸುಖವಾಗಿ ಈ ದಾರಿಯಲ್ಲಿ ನಡೆಯುತ್ತಿರುವುದು. ಅಲ್ಲಲ್ಲಿ ಕಬ್ಬಿಣದ ಸೇತುವೆಗಳಿವೆ. ಸೇತುವೆ ಕಟ್ಟಲು ಈ ಕಬ್ಬಿಣದ ತುಂಡುಗಳನ್ನು ಸಾಗಿಸುತ್ತಿರಬೇಕು ಎಂದು ಭಾವಿಸಿದೆವು.

manava-shrama

dscn1345
ನಾವು ಅಲ್ಲಲ್ಲಿ ಕೂತು ವಿಶ್ರಮಿಸಿ, ದ್ರಾಕ್ಷೆ, ಕಡ್ಲೆಕಾಯಿಚಿಕ್ಕಿ ತಿಂದು, ಹರಿಯುವ ನೀರನ್ನು ಕುಡಿದು ಶಕ್ತಿ ಸಂಚಯನ ಮಾಡಿಕೊಳ್ಳುತ್ತ ನಡೆದೆವು. ಅಂತೂ ಮಧ್ಯಾಹ್ನ ೧೧.೨೫ಕ್ಕೆ ಗೌರಿಕುಂಡ ತಲಪಿದೆವು. ಬೆಳಗ್ಗೆ ೬.೧೫ಕ್ಕೆ ಹೊರಟು ೧೬ಕಿಮೀ ದೂರವನ್ನು ಕ್ರಮಿಸಲು ನಾವು ಆರೇಳು ಮಂದಿ ತೆಗೆದುಕೊಂಡ ಅವಧಿ ಐದು ಗಂಟೆ ಹತ್ತು ನಿಮಿಷ.

ಗೌರಿಕುಂಡ
ಗೌರಿಕುಂಡ ಸಣ್ಣ ಪೇಟೆ. ಅಲ್ಲಿ ಹೊಟೇಲು ಅಂಗಡಿಗಳು ವಾಸದ ಮನೆಗಳು, ಕಾಣುತ್ತವೆ. ಈಗ ಮೊದಲಿನ ಗೌರಿಕುಂಡ (ಬಿಸಿನೀರಕುಂಡ)ಇಲ್ಲ. ಕೊಚ್ಚಿ ಹೋಗಿದೆಯಂತೆ. ನದಿ ಪಕ್ಕ ಬಿಸಿನೀರು ಒಂದು ಪೈಪಿನಲ್ಲಿ ಬರುತ್ತದೆ. ಅಲ್ಲಿ ಸ್ನಾನ ಮಾಡಬಹುದು. ಅದಕ್ಕೆ ತಕ್ಕ ವ್ಯವಸ್ಥೆ ಇಲ್ಲ. ಹಾಗಾಗಿ ನಾವು ಅಲ್ಲಿ ಸ್ನಾನ ಮಾಡಲಿಲ್ಲ. ನಡೆದು ಸುಸ್ತಾಗಿ ಯಾರಿಗೂ ಸ್ನಾನ ಮಾಡುವ ಹುರುಪು ಕೂಡ ಇರಲಿಲ್ಲ.
ಅಲ್ಲಿ ಗೌರಿ ದೇವಾಲಯ ಇದೆ. ಹೊರಭಾಗದಲ್ಲಿ ಗೌರಿ ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡಿದ ಒಂದು ಸುಂದರ ಮೂರ್ತಿ ಇದೆ. ಶಿವನಿಗೆ ತನ್ನ ತಂದೆ ದಕ್ಷ ಅವಮಾನ ಮಾಡಿದನೆಂದು ಶಿವನ ಮಡದಿ ಸತಿ ಅಗ್ನಿಗೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ಅನಂತರ ಹಿಮವದ್‌ರಾಜನ ಮಗಳಾಗಿ ಮರುಜನ್ಮ ಪಡೆದು ಶಿವನನ್ನು ವರಿಸಲು ಗೌರಿಕುಂಡದಲ್ಲಿ ಕಠಿಣವಾದ ತಪಸ್ಸು ಮಾಡಿ ಶಿವನ ಮನಗೆಲ್ಲುತ್ತಾಳೆ ಎಂಬುದು ಪುರಾಣ ಕಥೆ.

dscn1355

dscn1356

 

ದೇವಾಲಯ ನೋಡಿ ನಾವು ಏಳೆಂಟು ಮಂದಿ ಅಲ್ಲೇ ನೆರಳಲ್ಲಿ ಕೂತು ವಿಶ್ರಮಿಸಿದೆವು. ಎಲ್ಲರೂ ಅಲ್ಲಿ ಬಂದು ಸೇರುವಾಗ ಮಧ್ಯಾಹ್ನ ಗಂಟೆ ಒಂದು ಆಗಿತ್ತು. ಅಲ್ಲಿಂದ ಜೀಪ್ ಇರುವಲ್ಲಿಗೆ ನಡೆದು ಎರಡು ಜೀಪಿನಲ್ಲಿ ಸೋನುಪ್ರಯಾಗಕ್ಕೆ ಬಂದೆವು. ಅಲ್ಲಿ ನಮ್ಮ ಬಸ್ ನಮಗಾಗಿ ಕಾದಿತ್ತು.

…………………..ಮುಂದುವರಿಯುವುದು

ಈ ಪ್ರವಾಸಕಥನದ ಹಿಂದಿನ ಭಾಗಗಳು ಇಲ್ಲಿವೆ :

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 6  http://52.55.167.220/?p=13142

 

 – ರುಕ್ಮಿಣಿಮಾಲಾ, ಮೈಸೂರು

,

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: