ಅಪರಿಚಿತ ಊರಲ್ಲಿ ಹಿತ್ತಾಳೆ ಪಾತ್ರೆ ತುಂಬಾ ಚಹಾ!

Share Button

ಚಾರಣದ ಉದ್ದೇಶದಿಂದ ತಿರುಗಾಡುವಾಗ ಅನಿರೀಕ್ಷಿತವಾಗಿ ಲಭಿಸುವ ಅನುಭವಗಳು ಸಾಕಷ್ಟು. 30 ಡಿಸೆಂಬರ್ 2016 ರಂದು, ಒಡಿಶಾದ ‘ಚಿಲಿಕಾ ಸರೋವರ’ದ ಪರಿಸರದಲ್ಲಿ 7 ಕಿ.ಮೀ ದೂರ ನಡೆಯುತ್ತಾ ‘ಮಾಲಿಂಗಪಟ್ಣ’ ಎಂಬ ಪುಟ್ಟ ಊರು ಸೇರಿದ ಮೇಲೆ, ಅಲ್ಲಿ ಚಹಾ ಕೇಳಿ ಪಡೆದ ಕಥೆಯಿದು..

ಮಧ್ಯಾಹ್ನ ಒಂದು ಗಂಟೆಗೆ ಮಾಲಿಂಗಪಟ್ಣ ತಲಪಿದೆವು. ನಾವು ಅಲ್ಲಿನ ‘ಭಭಕುಂಡಲೇಶ್ವರ’ ದೇವಸ್ಥಾನದಲ್ಲಿ ಇರಬೇಕೆಂದೂ, ಮೂರು ಗಂಟೆಗೆ ಅಲ್ಲಿಗೆ ಮುಂದಿನ ಕ್ಯಾಂಪ್ ನ ಲೀಡರ್ ಬರುತ್ತಾರೆಂದೂ ತಿಳಿಸಿದ್ದರು. ಇದು ‘ಭವಕುಂಡಲೇಶ್ವರ’ ಇರಬಹುದು, ಆದರೆ ಒಡಿಶಾದಲ್ಲಿ ‘ವ’ ಅಕ್ಷರದ ಬದಲು ‘ಭ’ ಬರೆಯುತ್ತಾರೆ. ಶಾಂತವಾದ ಪರಿಸರದಲ್ಲಿರುವ ಈ ಪುರಾತನ ದೇವಸ್ಥಾನವು ಬಲು ಸುಂದರವಾಗಿದೆ. ಅಲ್ಲಿನ ಅರ್ಚಕರು ತಿಳಿಸಿದ ಪ್ರಕಾರ ಶ್ರೀರಾಮನು ಈ ಸ್ಥಳದಲ್ಲಿ ಶಿವನನ್ನು ಪೂಜಿಸಿದನಂತೆ. ಕಳಿಂಗ ಶಿಲ್ಪವಿನ್ಯಾಸದಲ್ಲಿ 11 ನೆಯ ಶತಮಾನದಲ್ಲಿ ಕಟ್ಟಲಾದ ಮಂದಿರವಿದು. ಮಂದಿರದ ಒಳ ಹೊಕ್ಕು ದರ್ಶನ, ಪ್ರದಕ್ಷಿಣೆ ಮುಗಿಸಿಯಾಯಿತು, ಎದುರಗಡೆ ಇದ್ದ ಕಲ್ಲಿನ ಮಂಟಪದಲ್ಲಿ ಕುಳಿತು ಬುತ್ತಿಯೂಟ ಉಂಡಾಯಿತು. ಸಣ್ಣ ನಿದ್ದೆಯನ್ನೂ ಮಾಡಿಯಾಯಿತು. ಪಕ್ಕದಲ್ಲಿದ್ದ ತಾಳೆ ಮರಗಳ ತೋಪಿನಲ್ಲಿ ಪಟ ಕ್ಲಿಕ್ಕಿಸಿಯಾಯಿತು. ಕ್ಯಾಂಪ್ ಲೀಡರ್ ಬರಲು ಇನ್ನೂ ಸಮಯವಿತ್ತು.

 

 

ಆಗ ಅಲ್ಲಿ ನಮ್ಮ ತಂಡದವರನ್ನು ಹೊರತುಪಡಿಸಿ 3-4 ಮಂದಿ ಮಾತ್ರ ಇದ್ದರು. ಬೇರೇನೂ ಕೆಲಸವಿಲ್ಲದೆ ಸುಮ್ಮನೆ ಆತ್ತಿತ್ತ ನೋಡುತ್ತಿರುವಾಗ ಮಂದಿರಕ್ಕೆ ಹೊಂದಿಕೊಂಡಿರುವ ಸಣ್ಣ ಅಡುಗೆಕೋಣೆಯಲ್ಲಿ ಅರ್ಚಕರು ಅಡುಗೆ ತಯಾರಿಯಲ್ಲಿರುವುದು ಕಾಣಿಸಿತು. ಒಬ್ಬ ಅರ್ಚಕರು ಸೌದೆಒಲೆಯ ಉರಿ ಹಚ್ಚಿ ಪಾತ್ರೆ ಇಡುತ್ತಿದ್ದರು. ಇನ್ನೊಬ್ಬ ಅರ್ಚಕರು ಈಳಿಗೆಮಣೆಯಲ್ಲಿ ತರಕಾರಿ ಹೆಚ್ಚುತ್ತಿದ್ದರು. ಅವರ ಬಳಿ ಹೋಗಿ, ಅದೂ ಇದೂ ಹರಟಿದಾಗ ಅವರು ನೈವೇದ್ಯಕ್ಕಾಗಿ ‘ಕಿಚಡಿ’ ತಯಾರಿಸುತ್ತಿದ್ದಾರೆಂದೂ, ಮೂರು ಗಂಟೆಗೆ ‘ಮಹಾಪ್ರಸಾದ ಭೋಜನ’ ಇರುತ್ತದೆಯೆಂದೂ ಗೊತ್ತಾಯಿತು. ಯಾವ ಊರಿನವರು, ಎಲ್ಲಿಗೆ ಹೋಗುತ್ತಿದ್ದೀರಿ, ಬಸ್ಸು ಇದೆಯಲ್ಲಾ, ಯಾಕೆ ನಡೆಯುತ್ತೀರಿ, ಇತ್ಯಾದಿ ವಿಚಾರಿಸಿದರು. ನಮ್ಮ ಊರು, ಪರಿಚಯ, ನಡೆಯಬೇಕೆಂಬುದೇ ಚಾರಣದ ಉದ್ದೇಶ ಇತ್ಯಾದಿ ಹರಟಿದೆ.

ಮಾತಿನ ಮಧ್ಯೆ ‘ಭೈಯಾ, ಇದರ್ ಚಾಯ್ ಕಾ ದೂಕಾನ್ ಸಾಮ್ನೆ ಮೆ ಹೋಗಾ ಕ್ಯಾ , ಹಮ ಕೊ ಚಾಯ್ ಮಿಲೇಗಾ?’ ಅಂತ ಕೇಳಿದೆ. ಅವರು ನಗುತ್ತಾ ‘ ಇದರ್ ದೂಕಾನ್ ನಹೀಂ’ ಅಂದರು. ಛಲ ಬಿಡದ ತ್ರಿವಿಕ್ರಮನಂತೆ, ನಮ್ಮ ತಂಡದವರಿಗೆ ಚಹಾ ಬೇಕಾದರೆ ತಯಾರಿಸಿ ಕೊಡಲು ಸಾಧ್ಯವೇ ಅಂದೆ. ನಗುತ್ತಾ ‘ದೂದ್ ನಹಿಂ ಹೈ .. …. ಮಿಲ್ಕ್ ಕಾ ಪೌಡರ್ ಹೈ.. ಕೋಶಿಶ್ ಕರೂಂಗಾ ‘ ಅಂದರು. ಪುನ: ನಮ್ಮ ತಂಡದವರು ಕುಳಿತಿದ್ದಲ್ಲಿಗೆ ಬಂದು, ಚಹಾ ಬೇಕಿದ್ದವರು ಕೈಯೆತ್ತಿ ಎಂದಾಗ ಹೆಚ್ಚಿನವರೂ ಕೈ ಎತ್ತಿದ್ದರು! ನಾನು ಅರ್ಚಕರ ಬಳಿ ಮಾತನಾಡಿದ ವಿಚಾರವನ್ನು ವಿವರಿಸಿ, ಹಾಲಿನ ಪುಡಿ ಹಾಕಿದ ಚಹಾ ಅಭ್ಯಂತರವಿಲ್ಲವೆಂದಾದರೆ ಅರ್ಚಕರು ತಯಾರಿಸಿಕೊಡುವರು ಎಂದೆ. ಪುನ: ಅರ್ಚಕರ ಬಳಿ ಹೋಗಿ ನಮ್ಮ ಸಮ್ಮತಿಯನ್ನು ತಿಳಿಸಿ 17 ಕಪ್ ಚಹಾ ಇರಲಿ ಅಂದೆವು.

ಸ್ವಲ್ಪ ಸಮಯದ ನಂತರ ಕಿರಿಯ ಅರ್ಚಕರು ಚಹಾ ತುಂಬಿದ ಹಿತ್ತಾಳೆಯ ಪಾತ್ರೆಯೊಂದಿಗೆ ಬಂದರು. ಲೋಟದ ಗಾತ್ರದ ಕಡೆ ಏನೂ ಗಮನ ಕೊಡದೆ, ಲವಲೇಶವೂ ವ್ಯಾಪಾರಿ ದೃಷ್ಟಿಯಿಲ್ಲದೆ, ಹಿತ್ತಾಳೆಯ ಸೌಟಿನಿಂದ ಚಹಾವನ್ನು ಲೋಟಗಳಿಗೆ ಸುರಿದು ಕೊಟ್ಟರು. ಚಹಾ ಬಹಳ ರುಚಿಯಾಗಿತ್ತು. ಅರ್ಚಕರ ಬಳಿ ಚಹಾಕ್ಕೆ ಎಷ್ಟು ದುಡ್ಡಾಯಿತು ಅಂತ ಕೇಳಿದಾಗ ಆವರು ಮೊತ್ತವನ್ನು ಹೇಳಲೇ ಇಲ್ಲ. ಈಗಿನ ಕಾಲದಲ್ಲಿ ‘ಹೀಗೂ ಉಂಟೆ’ ! ಪುನ: ಕೇಳಿದಾಗ ಸಂಕೋಚದಿಂದ ‘ಮಿಲ್ಕ್ ಪೌಡರ್ ಕಾ ದಾಮ್ ಕುಛ್ ದೀಜಿಯೆ’ ಅಂದರು! ಅವರು ತಂದಿದ್ದ ಪಾತ್ರೆಯಲ್ಲಿ ಇಪ್ಪತ್ತು ಕಪ್ ಚಹಾ ಇದ್ದಿರಬಹುದು ಎಂಬ ಅಂದಾಜಿನಲ್ಲಿ ನಾವು 200 ರೂ ಕೊಟ್ಟೆವು. ‘ ಕಿತನಾ ವಾಪಸ್ ದೇನಾ ಹೈ’ ಅಂದರು! ‘ಏ ಆಪ್ ಕೆ ಲಿಯೆ, ಲೀಜಿಯೆ, ಚಾಯ್ ಬಹುತ್ ಅಚ್ಚಾ ಥಾ, ಥ್ಯಾಂಕ್ಸ್’ ಅಂದಾಗ ಹಿರಿಯ-ಕಿರಿಯ ಅರ್ಚಕರಿಬ್ಬರೂ ಅಚ್ಚರಿ ಮತ್ತು ಸಂತೋಷದಿಂದ ನಮ್ಮನ್ನು ಬೀಳ್ಕೊಟ್ಟರು.

ಅಪರಿಚಿತ ಊರಲ್ಲಿ, ಸೌದೆಯ ಒಲೆಯಲ್ಲಿ , ಹಿತ್ತಾಳೆಯ ಪಾತ್ರೆಯಲ್ಲಿ ಕಾಯಿಸಿದ ಚಹಾ ಲಭಿಸಿದುದು ನಮಗೆ ಕಾಲವನ್ನು ಕನಿಷ್ಟ 30 ವರ್ಷ ಹಿಂದಕ್ಕೆ ತಿರುಗಿಸಿದ ಅನುಭವವಾಯಿತು. ಚಾರಣದ ಗೀಳು ಹಿಡಿಸಿಕೊಂಡು, ಬಸ್ಸಿನ ಸೌಲಭ್ಯ ಇದ್ದರೂ ಬೆನ್ನಿಗೆ ಬ್ಯಾಗ್ ತಗಲಿಸಿಕೊಂಡು, ಬಿಸಿಲಿನಲ್ಲಿ ನಡೆದು ಬಂದ ಪರವೂರಿನವರಾದ ನಾವು ಅವರಿಗೆ ‘ವಿಚಿತ್ರ ಮನುಷ್ಯ’ರಂತೆ ಕಂಡಿರಬೇಕು!

 

ಹೇಮಮಾಲಾ.ಬಿ

5 Responses

 1. Yaali Yaa says:

  ನಿಮ್ಮಾನುಭವ ಅಧ್ಬುತ …ಮರೆತೇ ಹೋಗಿದ್ದ ಹಿತ್ತಾಳೆ ಪಾತ್ರೆಗಳ ಕಲರವ…nicey

 2. Raghunath Krishnamachar says:

  ದೇಗುಲದ ಪೂಜಾರಿಗಳಿಂದ ಚಹ ಮಾಡಿಸಿಕೊಂಡ ಸಾಹಸಕ್ಕೆ ಸಲಾಂ!

 3. savithrisbhat says:

  ಸೂಪರ್ ಚಹಾ ಕುಡಿದ ಅನುಭವ ನಿಮ್ಮದು .ಅಟ್ಟದಿಂದ ಹಿತ್ತಾಳೆ ಪಾತ್ರೆ ತೆಗೆಯೋಣ ಅನ್ನಿಸಿತು .

 4. Shruthi Sharma says:

  ಬರಹಕ್ಕೆ ತಲೆಬರಹವನ್ನು ಕೊಡುವ ನಿಮ್ಮ ಕಲೆಗೆ ಸಲಾಂ! ಓದುತ್ತಾ ಅವರ ಒಳ್ಳೆಯತನಕ್ಕೆ ತಲೆದೂಗಿದೆ. ನಿಮ್ಮ ಚಾರಣದ ಅನುಭವಗಳೂ ಅವನ್ನು ಬರಹಕ್ಕಿಳಿಸುವ ರೀತಿಯೂ ಒಂದಕ್ಕಿಂತ ಒಂದು ಸುಂದರ.. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: