ದಮ್ಮಾಮ್ ನಮ್ಮನು ಕರೆದಾಗ…

Share Button

 

ಕೆಲವು ವರ್ಷಗಳಿಂದ ನನ್ನ ದೊಡ್ಡ ಮಗಳು, ಅಳಿಯ ಮತ್ತು ಮೊಮ್ಮಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಅಳಿಯನಿಗೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದ ದಮ್ಮಾಮ್ ಗೆ ಹೋಗಬೇಕಿದೆ ಅಂತ ತಿಳಿದಾಗ ಕಸಿವಿಸಿಯಾಗಿತ್ತು .ಅಲ್ಲಿನ ನಿಯಮಗಳು ಕಠಿಣ, ಹವಾಮಾನ ಚೆನ್ನಾಗಿಲ್ಲ, ಸ್ತ್ರೀಯರಿಗೆ ಸ್ವಾತಂತ್ಯ್ರವಿಲ್ಲ ಇತ್ಯಾದಿ ಅವರಿವರಿಂದ ಕೇಳಿ ತಿಳಿದಿದ್ದ ನನಗೆ ಮನಸ್ಸಿನಲ್ಲಿ ಅಳುಕು ಶುರುವಾಗಿತ್ತು. ಅಳಿಯನು ತಾನು ಮೊದಲು ಹೋಗಿ, ಅಲ್ಲಿನ ವ್ಯವಸ್ಥೆ , ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂದು ಖಾತ್ರಿಯಾದ ಮೇಲೆ ಮಗಳು ಮತ್ತು ಮೊಮ್ಮಗಳನ್ನೂ ಕರೆದೊಯ್ದಿದ್ದ.

ಕೇರಳದ ಕಾಸರಗೋಡಿನ ಹಳ್ಳಿಯಲ್ಲಿ ವಾಸವಿರುವ ನನಗೆ ಇದುವರೆಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ. ವಿಮಾನದಲ್ಲಿ ಹಾರಾಡಬೇಕೆಂದು ಎಷ್ಟೋ ವರ್ಷದ ಕನಸು . ಅಂಗಳದಲ್ಲಿರುವಾಗ ವಿಮಾನದ ಶಬ್ದ ಕೇಳಿದರೆ ಆಗಸದ ಕಡೆ ತಲೆ ಎತ್ತಿ ನೊಡುತ್ತಿದ್ದೆ. ನನ್ನ ಆಸೆ ಪೂರೈಸುವ ಸಮಯ ಬಂದೇ ಬಿಟ್ಟಿತು. ಸೌದಿ ಅರೇಬಿಯಾಕ್ಕೆ ಹೋದ ಸ್ವಲ್ಪ ಸಮಯದ ನಂತರ ಮಗಳು-ಅಳಿಯ ನಮ್ಮನ್ನು ತಮ್ಮಲ್ಲಿಗೆ ಕರೆದಾಗ ನನಗೆ ಸಂತೋಷ , ಭಯ ಎರಡೂ ಏಕಕಾಲದಲ್ಲಿ ಆಯಿತು.

ಹೊರಡುವ ತಯಾರಿಯಾಗಿ ನನ್ನ ಪತಿ ಶ್ಯಾಮ್ ಭಟ್ ಮತ್ತು ನನಗೆ ಪಾಸ್ ಪೋರ್ಟ್, ವೀಸಾ, ಟಿಕೆಟ್ ಇತ್ಯಾದಿ ಸಿದ್ಧಮಾಡಿಕೊಂಡೆವು. 26/10/2016 ರಂದು ನಮ್ಮ ಮಗಳು ಅಳಿಯ ಇರುವ ಸೌದಿ ಅರೇಬಿಯದ ದಮ್ಮಾಮ್ ನಗರಕ್ಕೆ ಪ್ರಯಾಣ ಮಾಡಿದೆವು. ಸಂಜೆ 6•30 ಗಂಟೆಗೆ ಮಂಗಳೂರಿಂದ ವಿಮಾನ ಹೊರಟಿತು. ಇದು ನನ್ನ ಪ್ರಥಮ ವಿಮಾನ ಪ್ರಯಾಣವಾದುದರಿಂದ ಸೀಟ್ ಬೆಲ್ಟ್ ಧರಿಸುವುದು, ಗಗನಸಖಿಯರ ಓಡಾಟ, ವಿಮಾನದ ಒಳಗೆ ಕೊಡುವ ತಿಂಡಿ ತಿನಿಸು ಇವೆಲ್ಲ ನನಗೆ ಕುತೂಹಲಕಾರಿ ಅಂಶಗಳಾಗಿದ್ದುವು. ಆಕಾಶದಲ್ಲಿ ಎಷ್ಟೋ ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿರುವಾಗ ಕಾಣದ ದೇವರನ್ನು ನೆನೆದು ಸುಮ್ಮನೆ ಕುಳಿತೆ.

ರಾತ್ರಿ 8 ಗಂಟೆಗೆ ನಮ್ಮನ್ನು ಹೊತ್ತ ವಿಮಾನ ಸೌದಿಯ ದಮ್ಮಾಮ್ ಏರ್ ಪೊರ್ಟ್ ತಲಪಿತು. ಪಾಸ್ ಪೋರ್ಟ್, ವೀಸಾ ವನ್ನು ಸಂಬಂಧಿತ ಕೌಂಟರ್ ಗಳಲ್ಲಿ ತೋರಿಸಿ, ನಮ್ಮ ಆಗಮನಕ್ಕೆ ಅಗತ್ಯವಾದ ದಾಖಲೆಗಳ ಪರಿಶೀಲನೆ ಆಯಿತು. ತಿರುಗುವ ಬೆಲ್ಟ್ ನಲ್ಲಿ ಬರುತ್ತಿದ್ದ ನಮ್ಮ ಲಗೇಜನ್ನು ಹಿಡಿದುಕೊಂಡು ಏರ್ ಪೋರ್ಟ್ ನಿಂದ ಹೊರಬಂದೆವು. ನಮ್ಮ ಮಗಳು, ಆಳಿಯ , ಮೊಮ್ಮಗಳು ನಮ್ಮನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಅಲ್ಲಿಯ ನಿಯಮದಂತೆ ಹೆಂಗಸರು ಮಹಿಳೆಯರು ಸಾರ್ವಜನಿಕವಾಗಿ ಕಾಣಿಸುಕೊಳ್ಳುವಾಗ ಬುರ್ಖಾ ತೊಟ್ಟುಕೊಳ್ಳಬೇಕು. ಮಗಳು ನನಗಾಗಿ ಬುರ್ಖಾ ತಂದಿದ್ದಳು. ಮನಸ್ಸಿಲ್ಲದ ಮನಸ್ಸಿಂದ ಬುರ್ಖಾ ಧರಿಸಿದೆ . ಈ ಬುರ್ಖಾ ಧರಿಸುವ ಬಗ್ಗೆ , ನಮ್ಮ ಸಹಪ್ರಯಾಣಿಕರಾಗಿ ಬಂದಿದ್ದ ಕೆಲವರಿಗೆ ಅಸಮಧಾನವಿತ್ತು. ನಮ್ಮನ್ನು ಇತರ ಗಂಡಸರು ನೋಡದಂತೆ ಮಹಿಳೆಯರ ಸುರಕ್ಷೆಗೆ ಈ ಕಾನೂನು ಒಳ್ಳೆಯದು ಅಂತಲೂ ಅನಿಸಿತು. ಫ್ಯಾಷನ್ ಹೆಸರಿನಲ್ಲಿ ಮೊಣಕಾಲಿನವರೆಗೆ ಬಟ್ಟೆ, ತೋಳಿಲ್ಲದ ರವಿಕೆ , ಹೊಟ್ಟೆ ಕಾಣುವ ಅಂಗಿ ಧರಿಸುವುದಕ್ಕಿಂತ ಇದು ವಾಸಿ ಎನಿಸಿದುದು ಸುಳ್ಳಲ್ಲ. ಯಾವುದೇ ದೇಶಕ್ಕೆ ಹೋದ ಮೇಲೆ ಅವರ ನಿಯಮ ಪಾಲಿಸಬೇಕಲ್ಲವೇ.

ಮಗಳ ಮನೆ ಇದ್ದುದು ‘ಆಲ್ ಕೋಭಾರ್ ‘ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ . ಅದು ಡಬಲ್ ಬೆಡ್ ರೂಮ್ ಇದ್ದ ಬಾಡಿಗೆಮನೆ . ಅಲ್ಲಿಯ ಹವಾಮಾನಕ್ಕನುಗುಣವಾಗಿ, ಎ.ಸಿ ವ್ಯವಸ್ಥೆ ಸದಾ ಚಾಲನೆಯಲ್ಲಿರಬೇಕು . ಮರುಭೂಮಿ ಪ್ರದೇಶವಾದುದರಿಂದ ಹಗಲಿನ ವೇಳೆ ಸೆಖೆ. ನವೆಂಬರ್‍ ನಿಂದ ನಾಲ್ಕು ತಿಂಗಳುಗಳ ಕಾಲದ ಚಳಿಗಾಲದಲ್ಲಿ ಉಷ್ಣಾಂಶವು 4  ಡಿಗ್ರಿ ಸೆಲ್ಸಿಯಸ್  ವರೆಗೂ ಇಳಿಯುತ್ತದೆ. ಆಗ ಮನೆಯನ್ನು ಬೆಚ್ಚಗಿಡಲು ಹೀಟರ್‍ ನ್ನು ಉಪಯೋಗಿಸಬೇಕಾಗುತ್ತದೆ.

ಅಲ್ಲಿಯ ಜೀವನಶೈಲಿ ನೋಡಿ ನಮಗೆ ಆಚ್ಚರಿ ಆಯಿತು . ಶಾಲಾ ಮಕ್ಕಳಿಗೆ ಶುಕ್ರವಾರ ರಜೆ, ಎಲ್ಲರಿಗೂ ಶನಿವಾರ ರಜೆಯಿರುತ್ತದೆ. ರಸ್ತೆಗಳಲ್ಲಿ ಕಾರುಗಳದ್ದೇ ಓಡಾಟ. ಶಾಲಾ ಮಕ್ಕಳ ಬಸ್ಸುಗಳು ಮಾತ್ರ ರಸ್ತೆಯಲ್ಲಿ ಕಾಣಿಸುತ್ತವೆ. ನಮ್ಮ ಇಂಡಿಯದ ಕ್ರಮದಂತೆ ಎಲ್ಲಾ ಸಾಂಬಾರ ಪದಾರ್ಥಗಳು ಸಿಗುತ್ತವೆ. ಇಂಡಿಯಾದ ಮಾಲ್ ಗಳಲ್ಲಿ ತುರಿದ ತೆಂಗಿನಕಾಯಿ, ಇಲ್ಲಿನ ತರಕಾರಿಗಳು ಕೊನೆಗೆ ಹೆಚ್ಚಿದ ಹಲಸಿನಕಾಯಿಯ ತುಂಡು ಕೂಡ ಕಾಣಸಿಕ್ಕಿದುವು! ಭಾರತೀಯ ಆಹಾರಗಳ ಲಭ್ಯವಿರುವ ‘ ಲುಲುಮಾಲ್ ‘ ಬಹಳ ದೊಡ್ಡ ವಿಸ್ತಾರವಾಗಿದೆ. ‘ಸಖಸಾಖರ’ ಎಂಬ ಕೇರಳೀಯರ ಹೋಟೆಲ್ ನಲ್ಲಿ ಕುಚ್ಚಿಲಕ್ಕಿಯ ಊಟವೂ ಲಭ್ಯವಿತ್ತು. ಅಂಗಡಿಗಳನ್ನು ನಿರ್ವಹಿಸುವವರಲ್ಲಿ ಹಲವಾರು ಮಂದಿ ‘ಮಲೆಯಾಳಿಗರು’ ಇದ್ದರು.

ನಮ್ಮ ಮೊಮ್ಮಗಳಿಗೆ ಹೊರಗಡೆಗೆ ಹೋಗುವುದು, ಹೋಟೆಲ್ ನಲ್ಲಿ ಊಟ ಮಾಡುವುದೆಂದರೆ ಬಹಳ ಇಷ್ಟ. ನಾವೆಲ್ಲರೂ ಜತೆಯಾಗಿ ಒಂದೆರಡು ಬಾರಿ ಪಿಕ್ನಿಕ್ ಮಾಡಿದೆವು. ಮನೆಯಲ್ಲಿ ಸಿದ್ಧ ಮಾಡಿದ ಅಡುಗೆಯನ್ನು ಹೊರಗಡೆ ಹಸಿರು ಹುಲ್ಲುಹಾಸಿನ ಮೇಲೆ ಕುಳಿತು ಊಟ ಮಾಡಿದೆವು. ಒಂದೆರಡು ಬಾರಿ ಇಂಡಿಯಾದ ಹೋಟೆಲ್ ಗೂ ಹೋದೆವು . ಅಲ್ಲಿ ಸಿಗುವ ಮೊಸರು ಬಹಳ ರುಚಿ ಇತ್ತು. ರೋಟಿಯ ಬೃಹತ್ ಗಾತ್ರ ನೋಡಿ ಆಶ್ಚರ್ಯವಾಯಿತು. ಅದನ್ನು ಒಬ್ಬರಿಗೆ ತಿನ್ನಲು ಸಾಧ್ಯವಿಲ್ಲದಷ್ಟು ದೊಡ್ಡದಿತ್ತು.

ಮಗಳ ಮನೆ ಇದ್ದ ದಮ್ಮಾಮ್ ದ್ವೀಪದ ಸುತ್ತುಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟೆವು.ಮರುಭೂಮಿ ಪ್ರದೇಶ, ಅಲ್ಲಾಸ್ ವಾಟರ್ ಫೌಂಟೇನ್ ಇತ್ಯಾದಿಗಳಿಗೆ ಭೇಟಿಕೊಟ್ಟೆವು. ಬಹ್ರೈನ್ ಗೆ ಹೋಗುವ ಮಾರ್ಗದಲ್ಲಿ ಪ್ರಯಾಣಿಸಿದೆವು.

ಮರುಭೂಮಿ ಪ್ರದೇಶವಾದುದರಿಂದ ಎಲ್ಲೆಡೆ ಕರ್ಜೂರದ ಮರಗಳಿದ್ದುವು.ಅಲ್ಲಿಯ ವಾತಾವರಣ ಬಹಳ ಬಿಸಿಲು. ಅಲ್ಲಿ ನಮಗೆ ಹೊರ ಹೊಗಬೇಕೆಂದರೆ ನಮ್ಮ ಪಾಸ್ ಫೋರ್ಟು ವೀಸ . ಎಲ್ಲ ನಮ್ಮ ಕೈಯಲ್ಲಿಯೇ ಬೇಕು ಅದು ಇಲ್ಲದಿದ್ದರೆ ಮತ್ತೆ ನಮ್ಮ ಪಾಡು ನಾಯಿಪಾಡು.

ಒಂದು ದಿನ ನಮ್ಮ ಮೊಮ್ಮಗಳಿಗೆ ಅಜ್ಜನೊಂದಿಗೆ ಸೇರಿ ಗಾಳಿಪಟ ಹಾರಿಸಬೇಕೆಂಬ ಆಸೆಯಾಯಿತು. ಅವರಿಬ್ಬರೂ ಸೇರಿ ಅಂಗಡಿಯೊಂದರಿಂದ ಗಾಳಿಪಟವನ್ನು ತಂದರು. ಬಹಳ ಹುಮ್ಮಸ್ಸಿನಿಂದ ಗಾಳಿಪಟ ಹಾರಿಸುತ್ತಿದ್ದ ಅಜ್ಜ-ಮೊಮ್ಮಗಳ ಆಟ ನೋಡಿ ಎಲ್ಲರೂ ಖುಷಿಪಟ್ಟೆವು. ಅಂತಹ ಮರುಭೂಮಿಯಲ್ಲಿಯೂ ಹಸಿರು ಹುಲ್ಲು, ಹೂ ಗಿಡಗಳನ್ನು ಬೆಳೆಸಿದ ಇವರ ಸಾಧನೆಗೆ ಜೈ ಎನ್ನಬೇಕು .

ಇಲ್ಲಿ ಸ್ವಚ್ಚತೆ ಬಹಳ ಆದ್ಯತೆ. ಈ ಶ್ರಮ ಮತ್ತು ಶಿಸ್ತನ್ನು ನಾವು ಕಲಿಯಬೇಕು.

ನಾವು  ಪ್ರವಾಸಿ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿದ್ದೆವಾದುದರಿಂದ ಮರಳಿ ಭಾರತಕ್ಕೆ ಬರುವ ಸಮಯ ಸನ್ನಿಹಿತವಾಯಿತು. ವಿದೇಶದಲ್ಲಿ ಕೆಲವು ದಿನಗಳನ್ನು ಸಂತೋಷವಾಗಿ ಕಳೆದ ಸವಿನೆನಪಿನೊಂದಿಗೆ,  ಅಳಿಯ, ಮಗಳು, ಮೊಮ್ಮಗಳಿಗೆ ವಿದಾಯ ಹೇಳಿ,ದಮ್ಮಾಮ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡುವ ವಿಮಾನವನ್ನು ಹತ್ತಿ, ಮರಳಿ ನಮ್ಮ ಮನೆ ಸೇರಿದೆವು.

 

 – ಆಶಾಸಾವಿತ್ರಿ, ಕಾಸರಗೋಡು ಜಿಲ್ಲೆ

9 Responses

 1. savithrisbhat says:

  ನಿಮ್ಮ ಆ ಸವಿನೆನಪು ಓದುವಾಗ,ನನಗೂ ನನ್ನ ವಿದೇಶ ಪ್ರಯಾಣ ನೆನಪಾಯಿತು.ಲೇಖನ ನಿರೂಪಣೆ ಸರಳವಾಗಿ ಇಷ್ಟವಾಯಿತು .

 2. Jayashree b kadri says:

  ಕುತೂಹಲದ ಕಣ್ಣಿನಿಂದ ಎರಡು ದೇಶಗಳ ಸಾಂಸ್ಕೃತಿಕ, ಭೌಗೋಲಿಕ ವ್ಯತ್ಯಾಸಗಳನ್ನು ಗಮನಿಸಿ ಪರಿಭಾವಿಸಿದ್ದೀರಿ. ಚೆನ್ನಾಗಿದೆ ಬರಹ.

 3. Shruthi Sharma says:

  ವಾಹ್! ತುಂಬ ಉತ್ತಮವಾಗಿ ನಿರೂಪಿಸಿದ್ದೀರಿ. ಓದುತ್ತಾ ನನಗೂ ಹೋಗಿ ಬಂದಂತಾಯಿತು. ಬರೆಯುತ್ತಿರಿ 🙂

 4. keshava prasad says:

  ಬಹಳ ಸೊಗಸಾದ ಲೇಖನ .
  ನನಗೂ ಹೋಗಿ ಬಂದಂತಾಯಿತು.

 5. Narayana Bhat says:

  ಲೇಖನ ಚೆನ್ನಾಗಿದೆ. ಲೇಖಕರಿಗೂ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತಂದ ಪ್ರಕಾಶಕರಿಗೂ ಅಭಿನಂದನೆಗಳು.

 6. dr harshitha says:

  ತುಂಬಾ ಚೆನ್ನಾಗಿದೆ ಲೇಖನ ….

 7. Shankari Sharma says:

  ಪ್ರವಾಸ ಕಥನ ಚೆನ್ನಾಗಿದೆ…

 8. ಆಶಾ says:

  Thanks to everyone

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: