ತಾರೆಗೊಂದು ಕೋರಿಕೆ
ಚಿತ್ತಾರ ಆಗಸದ ಪತ್ತಲದ ಜರಿ ಹೊಳಪೆ
ಹೊತ್ತು ಮೂಡುವ ಮೊದಲು ಇಳಿದು ಬಾರೆ
ಮುತ್ತಿನಂದದಿ ನೀ ಜಗತ್ತಿನಲಿ ಮಿನುಗುತಿರೆ
ಉತ್ತಮರು ಮೆಚ್ಚಿಹರು ಕೇಳೆ ತಾರೆ.
ಸಿರಿಯ ಸ್ವರ್ಗದ ಹರಳೆ ಮಿರುಗು ಮೊಗ್ಗಿನ ಮುಗುಳೆ
ಹರಿಯ ಮುದ್ದಿನ ಮಗಳೆ ನಲಿದು ಬಾರೆ.
ಇರುಳ ದೀಪದ ಬೆರಳೆ ತಿರೆಗೆ ಮಿಂಚಿನ ತಿರುಳೆ
ಹಿರಿದು ಹೊಗಳಿಕೆ ನಿನಗೆ ಬೇಕೆ ಬೇರೆ?
ಪುಟ್ಟಕಂದನ ತೂಗುತೊಟ್ಟಿಲಿನ ಮೇಲೊಮ್ಮೆ
ಇಟ್ಟು ನಿನ್ನನು ನಾನು ನೋಡಲೇನೇ?
ಬೊಟ್ಟುಕಾಡಿಗೆಯ ಮಗು ಬಿಟ್ಟಕಣ್ಣರಳಿಸುತ
ದಿಟ್ಟಿಸಲು ನಿನ ಹಾಡ ಹಾಡಲೇನೇ?
ಹೊಳೆವ ಹೊನ್ನಿನ ಮಣಿಯೆ ನಿಶೆಯ ಚಿನ್ನದ ಗಣಿಯೆ
ಇಳಿದು ಬಾರೊಮ್ಮೆ ನೀನಿಳೆಯ ಮೇಲೆ.
ತೊಳೆದು ಜಡತೆಯ ಭ್ರಮವ ಕಳೆದು ಕವಿದಿಹ ತಮವ
ಬೆಳಗೆಮ್ಮ ಬಾಳನ್ನು ತೋರಿ ಲೀಲೆ.
ಮಿನುಗುತಾರೆಯೆ ಬಂದುಬಿಡುವೊಮ್ಮೆ ಈ ಧರೆಗೆ
ಹೃದಯಪದಕದ ಒಳಗೆ ನಿನ್ನನಿಡುವೆ.
ಅನುಗಾಲ ನನ್ನೊಳಗೆ ಜ್ಯೋತಿಯಾಗಿರು ನೀನು
ನಿನ್ನ ಬೆಳಕಲಿ ನಾನು ಮುನ್ನಡೆಯುವೆ.
– ಭಾವನಾ
ಕವಿತೆ ಚೆನ್ನಾಗಿದೆ
ಸಂಗೀತ ರವಿರಾಜ್