ಫೋನಾಯಣದತ್ತ….

Share Button


ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಬ್ಯಾಗ್ ಒಳಗೆ ಕೈ ಹಾಕಿ ಐಡಿ ಕಾರ್ಡ್, ಪರ್ಸ್ ಹಾಗು ಮೊಬೈಲ್ ಇದೆಯೆಂದು ಖಾತರಿ ಪಡಿಸಿಕೊಂಡೆ. ಬಸ್ ಹತ್ತಾಯಿತು. ಫೋನ್ ತೆಗೆದು ನೋಡಿದೆ. ಗೆಳತಿಯ ಮೆಸೇಜ್ ಕಾದಿತ್ತು. ಉತ್ತರಿಸಿದೆ. ಅವಳ ಮರು ಉತ್ತರ ಬಂತು “ಯಾಕೆ ರಿಪ್ಲೈ ಮಾಡಿಲ್ಲ ಇಷ್ಟು ಹೊತ್ತು?” ಜೊತೆಗೆ ಒಂದು ಸಿಟ್ಟಿನ ಮುಖ. ಬರೀ 10 ನಿಮಿಷ ತಡವಾಗಿ ಉತ್ತರಿಸಿದ್ದಕ್ಕಾಗಿ ನಾನು ಅವಳ ಕೋಪಕ್ಕೆ ಗುರಿಯಾಗಬೇಕಾಗಿ ಬಂತು.  ಫೋನ್ ಎಂಬ ಅನಿವಾರ್ಯ ವಸ್ತುವಿನ ಸುಂದರ ಉಡುಗೊರೆ ಅದಾಗಿತ್ತು.

ಅದೊಂದು ಕಾಲದಲ್ಲಿ ಪಕ್ಷಿಗಳೇ ಅಂಚೆ ಅಣ್ಣರಾಗಿದ್ದರು ಎನ್ನಲಾಗುತ್ತದೆ. ಬಹುಶಃ ಅದ್ಯಾವುದೋ ಕಾಲದಲ್ಲಿ ಅವರಲ್ಲಿಯೂ ಜಾಗ್ರತೆ ಹಾಗು ಉದಾಸೀನತೆ ಮೂಡಿ “ಇನ್ನು ನಮ್ಮ ಕೈಯಲ್ಲಿ ಆಗಲ್ಲಾ” ಎಂದು ಮುಷ್ಕರ ಹೂಡಿರಬೇಕು. ಮತ್ತೆ ಆ ಕೆಲಸವನ್ನು ನಮ್ಮವರೇ ಮಾಡಲಾರಂಭಿಸಿದರು. ತಾಳಿ ಓಲೆಗಳು ಕಾಲ ಕ್ರಮೇಣ ಕಾಗದಗಳಾಗಿ ಬದಲಾದವು. ಸ್ವಂತಂತ್ರ್ಯ ಪೂರ್ವ ಭಾರತದ ಕಥೆಗಳಲ್ಲಿ ಅಂದಿನ ಪತ್ರ ವ್ಯವಹಾರಗಳ ಉಲ್ಲೇಖ ಬಹಳಷ್ಟಿದೆ. ಸಂಪರ್ಕದ ಅತಿ ಸುಲಭ ಹಾಗು ವಿಶ್ವಸನೀಯ ಮಾರ್ಗ ಅದಾಗಿತ್ತು.

ನಮ್ಮೆಲ್ಲರ ಮನೆಗಳ ಹಳೆ ಟ್ರಂಕ್ ಪೆಟ್ಟಿಗೆಗಳಲ್ಲಿ ಇನ್ನೂ ಸಿಗಬಹುದು ಶಾಯಿ ಪೆನ್ನುಗಳಲ್ಲಿ ಬರೆದ ಸುಂದರ ಪತ್ರಗಳು. “ಪ್ರೀತಿಯ/ಪೂಜನೀಯ ***** ನಿಮಗೆ ನಾನು ಮಾಡುವ ನಮಸ್ಕಾರಗಳು. ನಿಮ್ಮಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ” ಹೀಗೆಂದು ಪ್ರಾರಂಭವಾಗುವ ಪತ್ರಗಳನ್ನು ಓದುವ ಖುಷಿಯೇ ಬೇರೆ. ಅಪ್ಪ ಬರೆದ ಹಳೇ ಪತ್ರಗಳನ್ನು ಕೆದಕುವ ದುರಭ್ಯಾಸವೂ ನನಗುಂಟು. ನೀವೂ ಹುಡಿಕಿದಲ್ಲಿ, ಅಕ್ಕ-ಭಾವ, ಅಣ್ಣ-ತಂಗಿ, ಗೆಳೆಯ-ಗೆಳೆತಿಯರಿಗೆ ಹಿಂದೆ ನೀವು ಅಥವಾ ನಿಮ್ಮವರು ಬರೆದ ಪತ್ರಗಳು ದೊರೆಯಬಹುದು. ಪ್ರೇಮ ಲೇಖನಗಳು ಸಿಕ್ಕಲ್ಲಿ, ಹಳೇ ಕವಿ ಹೃದಯಗಳ ಪರಿಚಯವೂ ಆಗಬಹುದು.

ಬಹುಕಾಲ ನೆಲೆನಿಂತಿದ್ದ ಅಂಚೆ ವ್ಯವಸ್ಥೆಯ ಜೊತೆಗಾರನಾಗಿ 1902 ರಲ್ಲಿ ಟೆಲಿಗ್ರಾಫ್ ಎಂಬ ಹೊಸ ಮಾಧ್ಯಮವು ಶುರುವಾಯಿತು. ಆದರೂ ಬಹುತೇಕ ವ್ಯವಹಾರಗಳೆಲ್ಲಾ ಇನ್ನೂ ಪತ್ರಗಳ ಮೂಲಕವೇ ಆಗಿತ್ತು. 1933 ರಲ್ಲಿ ರೇಡಿಯೋ ಟೆಲಿಫೋನ್ ಭಾರತದಲ್ಲಿ ಮೊದಲ ಬಾರಿಗೆ ಚಾಲ್ತಿಗೆ ಬಂತು. 1975 ರಲ್ಲೇ ಮೊದಲ ಭಾರತದಲ್ಲಿ ಪಿಸಿಎಂ ಟೆಲಿಫೋನ್ (ದೂರವಾಣಿ) ಎಕ್ಸ್ಚೇಂಜ್ ಶುರುವಾದರೂ, ಅದು ಭಾರತೀಯರ ಮನೆ ಮನೆ ತಲುಪಲು ಮತ್ತೂ 25-30  ವರುಷಗಳೇ ಬೇಕಾದವು. ಅಂದು ದೂರದೂರಲ್ಲಿದ್ದ ಆಪ್ತರಿಗೆ ಕರೆಮಾಡಲು ಇದ್ದಿದ್ದ ವ್ಯವಸ್ಥೆಯೇ ಟ್ರಂಕ್ ಕಾಲ್. ಇದರ ನೇರ ಪರಿಚಯ ನನಗಿಲ್ಲದಿದ್ದರೂ , ಬಹಳಷ್ಟು ಕಥೆಗಳನ್ನು ಕೇಳಿದ್ದೇನೆ.

ದೂರವಾಣಿಗಳು ನಮ್ಮೂರಿಗೆ ಬಂದ ಕಾಲ ನನಗಿನ್ನೂ ನೆನಪಿದೆ. ನಾನು ಶಾಲೆಗೆ ಸೇರಿ 1-2  ವರುಷಗಳಷ್ಟೇ ಆಗಿತ್ತು. ದೂರವಾಣಿಯ ರಿಂಗಣ ತೊಡಗಿದರೆ ಸಾಕು, ನಮ್ಮಜ್ಜನದ್ದು ಶುರುವಾಗುತ್ತಿತ್ತು “ಫೋನು ಫೋನು ಫೋನು” ಎಂಬ ಗಟ್ಟಿಯಾದ ಕಿರುಚಾಟ. ತೋಟದಲ್ಲಿದ್ದರೂ ಚಿಕ್ಕಪ್ಪ ಓಡಿ ಬರಬೇಕಾಗುತಿತ್ತು. ಇನ್ನು ಅಜ್ಜಿ ಮನೆಗೆ ಹೋದಾಗಿನ ಕತೆಯೇ ಬೇರೆ. ಅಮ್ಮನ ಕರೆಗೆ ಹಲವಾರು ಬಾರಿ ಅಜ್ಜಿ ರಿಸೀವರ್ ಅನ್ನು ತಲೆಕೆಳಗಾಗಿ ಹಿಡಿದು ಉತ್ತರಿಸಿದ್ದುಂಟು. ಇಷ್ಟೇ ಏಕೆ, ನಮ್ಮಲ್ಲಿ ಹಲವರು ಫೋನ್ ಹಿಡುಕೊಂಡು ಹಾಕುತಿದ್ದ ಬೊಬ್ಬೆಯ ಬಗ್ಗೆ ಹೇಳಬೇಕೇ!. ಎಷ್ಟು ಗಟ್ಟಿಯಾಗಿ ಕಿರುಚುತ್ತಿದ್ದರೆಂದರೆ ಫೋನಿನ ಅಗತ್ಯವೇ ಇಲ್ಲವೆಂದನಿಸುತಿತ್ತು.

ಮತ್ತೊಂದಷ್ಟು ವರುಷಗಳು ಕಳೆದಂತೆ ಮೊಬೈಲ್ ಫೋನುಗಳ ಆಗಮನವಾಯಿತು. ಫೋನ್ ಎಂದರೆ ಮೊಬೈಲ್ ಫೋನ್ ಎಂದಾಯಿತು. ಹಳೇ ಫೋನುಗಳು “ಲ್ಯಾಂಡ್ ಫೋನ್” ಎಂಬ ಮರುನಾಮಕರಣಕ್ಕೆ ಒಳಗಾದವು. ಮನೆಗೊಂದು ಮಗು, ಮನೆಗೊಂದು ಕಾರು ಎಂದಿದ್ದ ನಮ್ಮ ಜನ ಈಗ ಮಾತ್ರ ಹಾಗನ್ನಲಿಲ್ಲ. ಎಲ್ಲರ ಕೈಗೂ ಬಂತು ಮೊಬೈಲುಗಳು. ಎಲ್ಲೆಂದರಲ್ಲಿ “ಹಲೋ”ಗಳು ಕೇಳತೊಡಗಿದವು.

1995 ರಲ್ಲಿ ಅಂತರ್ಜಾಲವೆಂಬ (ಇಂಟರ್ನೆಟ್) ಎಂಬ ಹೊಸ ರಕ್ಕಸನ ಪ್ರವೇಶವಾಯಿತು. ಎಲ್ಲ ಕೆಲಸಗಳನ್ನು ಸರಳವಾಗಿಸುತ್ತಾ ಅಂತರ್ಜಲವು ಹೊಸ ಯುಗವೊಂದಕ್ಕೆ ನಾಂದಿ ಹಾಡಿತು. ಮಾಹಿತಿಗಾಗಲಿ, ಸಂಪರ್ಕಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದಾಯಿತು.ಕೈ ಒಳಗೆ ನಿಲ್ಲಬಹುದಾದ ಪುಟ್ಟ ಫೋನ್ ನಮ್ಮ ಸರ್ವಸ್ವವೂ ಆಗಿ ಬಿಟ್ಟಿತು. ಕಾಲ ಬದಲಾಗಿದೆ. ಅಂದು ರಿಸೀವರ್ ಅನ್ನು ತಲೆಕೆಳಗಾಗಿ ಹಿಡಿದಿದ್ದ ಅಜ್ಜಿ , ಇಂದು ಕರೆ ಮಾಡಿ “ಎಂತ ಸುದ್ದಿ ಇಲ್ಲೇ ಕೂಸೇ?” ಅಂತ ಬಯ್ಯುತ್ತಾರೆ.  “ವಾಟ್ಸಪ್ಪ್ ಅಲ್ಲಿ ನೋಡಿದೆ , ಕೂದಲು ಕತ್ತರಿಸಿದೆಯಾ?” ಅಂತ ಗದರುತ್ತಾರೆ. ಹೀಗೇ ಹೋದಲ್ಲಿ, 70 ದಾಟಿದ ನಮ್ಮಜ್ಜಿಗೆ ಶೀಘ್ರದಲ್ಲೇ ಒಂದು ಫೇಸ್ಬುಕ್ ಕಾತೆ ತೆರೆಯಬೇಕಾಗಬಹುದು.

ಫೋನು ಈಗ ಬರೀ ಸಂಪರ್ಕ ಮಾಧ್ಯಮವಲ್ಲ.ಸುತ್ತಲಿನ ಪ್ರಪಂಚವನ್ನು ಮರೆಸುವ ಮಾಂತ್ರಿಕನಾಗಿ ಬದಲಾಗಿ ಬಿಟ್ಟಿದೆ. ಫೋನೊಳಗಿನ ಗುಂಪಲ್ಲಿ ಬೆರೆಯುವ ನಮ್ಮ ಗುಂಗು, ಫೋನ ಹೊರಗಿನ ಗುಂಪಲ್ಲಿ ನಮ್ಮನ್ನು ಅನ್ಯನಾಗಿಸುತ್ತಾ ಇದೆ. ಕಾರ್ಯಕ್ರಮಗಳಿಗೆ ಹೋದರೆ ಜನರೊಂದಿಗೆ ಬೆರೆಯುವುದಕ್ಕಿಂತ ಸೆಲ್ಫಿ ಹೊಡೆಯುವುದೇ ಮುಖ್ಯವಾಗಿದೆ. ಬಸ್- ಟ್ರೈನ್ಗಳಲ್ಲಿ ನಾವು ಈಗ ಹೊಸ ಪರಿಚಯಗಳನ್ನು ಮಾಡಿಕೊಳ್ಳಲ್ಲ. ದೂರವಿರುವ ನಮ್ಮವರು ಹತ್ತಿರವಿರುವಂತೆ ಭಾಸವಾದಾಗ , ಹತ್ತಿರವಾಗಬಹುದಾದ ಕೆಲವರು ದೂರವಾಗುತ್ತಾರೆ. ಬೆಸುಗೆ ಬೆಳುಯುತ್ತಿದೆಯೇ ? ಅಥವಾ ಕಳಚಿ ಬೀಳುತ್ತಿದೆಯೇ? . ಉತ್ತರಿಸುವುದಂತೂ ಕಷ್ಟ. ಏನೇ ಆಗಲಿ, ಕಳೆದೊಂದು ಶತಮಾನದಲ್ಲಿ ಆದ ಸಂಪರ್ಕ ಮಾದ್ಯಮದ ಬೆಳವಣಿಗೆ ಸಣ್ಣದಲ್ಲ. ಅದೊಂದು ದಂಥ ಕತೆ ಅಂದರೆ ಅತಿಶಯೋಕ್ತಿ ಅಲ್ಲ.

– ಪಲ್ಲವಿ ಭಟ್ , ಬೆಂಗಳೂರು

 

8 Responses

 1. Shruthi Sharma says:

  ತುಂಬಾ ಚೆಂದದ ಬರಹ.. ಓದಲು ಶುರು ಮಾಡಿದೆ, ಹಾಗೇ ಓದಿಸುತ್ತಾ ಹೋಯಿತು. ಆಗಾಗ “ಹೌದಲ್ವೇ!” ಎಂದೆನಿಸುತ್ತಿದ್ದ ನೈಜತೆ ಇಷ್ಟವಾಯಿತು.

 2. Hema says:

  ಫೋನ್ ಬಂದ ಹೊಸದಿನಗಳ ಸಡಗರ, ಭಯ ನೆನಪಾಯಿತು .ಚೆಂದದ ಬರಹ..

 3. Doddabasappa P says:

  ಲೇಖನ ತುಂಬಾ ಚೆನ್ನಾಗಿದೆ. ಹಳೆಯದೆಲ್ಲ ನೆನಪಾಯಿತು.

 4. Shankari Sharma says:

  ಬರಹ ತುಂಬಾ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: