ಕ್ಯಾನ್ಸರ್ ನೋವು ಮರೆಸಿದ ಕವಿತೆ….

Share Button

ಬಾದಾಮಿಯ ಕಾರುಡಿಗಿಮಠ ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ್ಮೇಲೆ ರಾಜೇಶ್ ನಾಯ್ಕ ಅನ್ನೊ ವೈದ್ಯರು ನನಗೆ ‘ಆ ಎಲ್ಲ ರಿಪೋರ್ಟ್ಸ ಪಡೆದುಕೊಂಡು ಭೇಟಿಯಾಗ್ರಿ’ ಅಂತಾ ಹೇಳಿದ್ರು. ಒಂದಂರ್ದ ಗಂಟೆಯಲ್ಲಿ ಎಲ್ಲ ರಿಪೋರ್ಟಗಳನ್ನು ಕಲೆಹಾಕಿಕೊಂಡು ವೈದ್ಯರನ್ನು ಕಂಡೆ, ಎಲ್ಲವನ್ನು ಪರಿಶೀಲಿಸಿ ‘ನಿಮ್ಮ ತಾಯಿಗೆ ಕ್ಯಾನ್ಸರ್ ಆಗಿದೆ, ಅದು ಥರ್ಡಸ್ಟೇಜನಲ್ಲಿದೆ.’ ಅಂತಾ ಹೇಳಿದಾಗ ಆಕಾಶವೇ ಹರಿದು ತಲೆಯ ಮೇಲೆ ಬಿದ್ದಂತಾಯಿತು. ಮಾತು ಬಾರದೆ ತಡವರಿಸುವುದನ್ನು ನೋಡಿದ ವೈದ್ಯರು ‘ಧೈರ್ಯವಾಗಿರಿ ಸದ್ಯ ಈ ಕಾಯಿಲೆಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ, ಆದರೆ ಬಾಗಲಕೋಟ ಅಥವಾ ಹುಬ್ಬಳ್ಳಿಯಲ್ಲಿ ರೇಡಿಯೋ ಥೇರೆಪಿ ಹಾಗೂ ಕೀಮೋ ಥೇರೆಪಿ ಅಂತಾ ಚಿಕಿತ್ಸೆ ಇದೆ ಕೊಡ್ಸಿ’ ಅಂತಾ ಒಂದು ಪತ್ರ ಬರೆದು ಆ ರಿಪೋರ್ಟ್ಸಗೆ ಲಗತ್ತಿಸಿ ಮರಳಿಸಿದರು.

ಒತ್ತರಿಸಿ ಬಂದ ದುಃಖವನ್ನು ಅದುಮಿಹಿಡಿದುಕೊಂಡು ಅವ್ವನೆದಿರು ವಾಸ್ತವವನ್ನು ತೆರೆದಿಡದೆ ‘ಅವ್ವ ನಾಳೆ ಬಾಗಲಕೋಟೆಗೆ ಹೋಗಿ ಅಲ್ಲಿ ನನ್ನ ಗೆಳೆಯರಿಗೆ ಪರಿಚಯವಿರುವ ಒರ್ವ ಡಾಕ್ಟರ್ ಕಂಡು ಬರೋಣ’ ಅಂತಾ ಸಮಾಧಾನ ಪಡಿಸಿ ಮನೆಗೆ ಕರೆದುಕೊಂಡು ಹೋದೆ. ಮನೆಯಲ್ಲಿ ಸ್ವಲ್ಪು ಹೊತ್ತು ಕಳೆದ್ಮೇಲೆ ‘ಅಲ್ಲಾ ಇಲ್ಲಿಯ ಡಾಕ್ಟರ್‍ಗೆ ನನ್ನ ಜಡ್ಡು ಗೊತ್ತಾಗ್ಲಿಲ್ಲಾ ಅಂದ್ರ ಅದೆಂತಹ ಜಡ್ಡು ನಂದು?’ ಅಂತಾ ಅವ್ವ ಸಹಜವಾಗಿ ಪ್ರಶ್ನೆ ಮಾಡಿದಾಗ ಏನು ಹೇಳ್ಬೇಕಂತಾ ತೋಚದೆ ‘ನಾಳೆ ಗೊತ್ತಾಗತ್ತ ನೀ ಹೆಚ್ಚು ತಲಿಕೆಡಿಸ್ಕೊಬ್ಯಾಡ, ಸಮಾಧಾನದಿಂದ ಇರು’ ಅಂತಾ ಹೇಳಿ ನಾನು ಮನೆಯಿಂದ ಹೊರಬಂದೆ.

ಗೆಳೆಯ ಮಾಗುಂಡಪ್ಪ ಮತ್ತು ಖಾದರನ ಬಳಿ ಎಲ್ಲವನ್ನೂ ಹೇಳಿಕೊಂಡು ಅತ್ತುಬಿಟ್ಟೆ, ಅವರ ಅಂತಃಕರಣದ ಮಾತುಗಳು ನನ್ನೊಳಗೊಂದಿಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದವು. ಮರುದಿನ ಬಾಗಲಕೋಟ ಆಸ್ಪತ್ರೆಗೆ ಹೋಗಿ ಅಲ್ಲಿಯ ವೈದ್ಯರ ಜೊತೆ ಚರ್ಚಿಸಿ ರೇಡಿಯೇಶನ್ ಹಾಗೂ ಕೀಮೋ ಥೇರೆಪಿ ಕೊಡಿಸಲು ಒಪ್ಪಿಕೊಂಡೆ. ಅವ್ವನಿಗೆ ನಿಧಾನಕ್ಕೆ ತನ್ನ ಕಾಯಿಲೆ ಅರ್ಥವಾಯಿತು. ಆಗಾಗ ಆಸ್ಪತ್ರೆಯ ಕೌಂಟರ್‍ನಲ್ಲಿ ಕಟ್ಟುವ ದುಡ್ಡಿನ ಕಟ್ಟುನೋಡಿ ಅವ್ವ ನನಗ ಆರಾಮಕ್ಕಿದ್ರಷ್ಟ ದುಡ್ಡು ಖರ್ಚ ಮಾಡು, ಇಲ್ದಿದ್ರ ಯಾಕ ಸುಮ್ನ ಅಷ್ಟೊಂದು ರೊಕ್ಕ ಹಾಳ ಮಾಡ್ತಿ? ಅಂತಾ ಪ್ರಶ್ನೆ ಮಾಡಿದಾಗ ಉತ್ತರಿಸಲಾಗದೆ ಮೌನಕ್ಕೆ ಶರಣಾದೆ, ಆಗ ಪಿ.ಲಂಕೇಶ್‌ರು ಬರೆದ ನನ್ನವ್ವ ಫಲವತ್ತಾದ ಕಪ್ಪುನೆಲ ಕವಿತೆಯ ಸಾಲು ನೆನಪಾಯಿತು.

ಆಮೇಲೆ ಮೊಬೈಲ್ಗೆ ಯಾವ್ದೊ ವಾಟ್ಸಪ್ ಸಂದೇಶ ಬಂದ ಶಬ್ದ, ತೆರೆದು ನೋಡಿದಾಗ ಗೆಳೆಯ ಗಿರೀಶ ಜಕಾಪುರೆಯವರ ಕವಿತೆ ‘ಮಣ್ಣೆಂದರೇನು..?’ ಬಿರುಗಾಳಿಯೊಡನೆ ಹುಡಿಯಾಗಿ ಮೇಲೆದ್ದು, ಸುತ್ತಿ ಸುಳಿದು ಕಣ್ಣಿಗೆ ಸೇರಿದ ಕಣವೆ..? ಮಳೆಗಾಲದ ಒಂದು ಮಧ್ಯಾಹ್ನ ನೆನೆದು ಎರಚಿಕೊಂಡು ಖುಷಿಪಟ್ಟ ರಾಡಿಯೆ..? ಮಣ್ಣೆತ್ತಿನ ಅಮವಾಸ್ಸೆಯೆಂದು ಅಪ್ಪ ಮಾಡಿಕೊಟ್ಟ ಎತ್ತು ಎಂಬ ಘನವೆ..? ಜೀವದ ಗೆಳೆಯ ಸತ್ತಾಗ ದುಃಖ ಅದುಮಿಕೊಂಡು ಹೂತುಬಂದ ಭೂಗರ್ಭವೆ..? ಗೊತ್ತಿಲ್ಲ ..! ಮಣ್ಣೇಂದರೇನು? ತಾನು ಬೆಂದು ನನ್ನ ಹೊಟ್ಟೆಗೆ ರೊಟ್ಟಿ ಸುಟ್ಟುಕೊಡುವ ಕರಕಲಾಗಿ ಕಪ್ಪಿಟ್ಟ ಒಲೆಯೆ..? ಕುಂಬಾರನಿಗೆ ಬದುಕಾಗಿ ನನ್ನ ಗುಡಿಸಲಿನಲ್ಲಿ ನೀರನ್ನು ಅಮೃತವಾಗಿಸುವ ಬಿಂದಿಗಿಯೆ..? ಪುಢಾರಿಗಳಿಗೆ ಆಸ್ತಿಯಾಗಿ, ಯೋಗಿಗಳಿಗೆ ಅಸ್ತಿಯಾಗಿ, ಸೈನಿಕರಿಗೆ ತಾಯಾಗುವ ಭೌತವೆ..? ಗೊತ್ತಿಲ್ಲ..! ಮಣ್ಣೆಂದರೇನು? ಹಿತ್ತಲಿನಲ್ಲಿ ಗುಲಾಬಿಯಾಗುವ, ಮುಳ್ಳು ಜಾಜಿಯಾಗುವ ಭೇದವರಿದ ಜೀವದ್ರವ್ಯವೆ..? ಹಾಗಲಬಳ್ಳಿಯ ಕಹಿಯಾಗಿ, ಮಾವಿನಲಿ ರುಚಿಯಾಗಿ ಸಮರಸದ ಸರಳತೆಯೆ..? ಮಾಳಿಗೆಯಾಗಿ ನೆಲವಾಗಿ ಜಲವಾಗಿ ಹೊಲವಾದ ಅನ್ನದಗುಳೆ..? ಗೊತ್ತಿಲ್ಲ! ಶರೀರ ಅಶರೀರಗಳ ಆದಿ ಅಂತ್ಯವಾಗಿ ಅನಂತವಾಗಿ ಎಲ್ಲ ಸಹಿಸುವ ಸಂತನೆ..? ಹಲವಡೆ ಚರ್ಚು ಮಸೀದಿ ಗುಡಿಗಳಾಗಿ ದೊಂಬಿ ಘರ್ಷಣೆಯ ಮೂಲವೆ..? ‘ಪಾಕಿ’ಗಳು ತನ್ನದೆನ್ನುವ ನಾವು ನಮ್ಮದೆನ್ನುವ ಸ್ವರ್ಗದಡಿಯ ಗಡಿಗಳೆ..? ಗೊತ್ತಿಲ್ಲ! ಮಣ್ಣಿಂದ ಬಂದವರು, ಮಣ್ಣಲ್ಲಿ ಬೆಳೆದವರು ನಾವು. ಮಣ್ಣಲ್ಲಿ ಮಣ್ಣಾಗುವ ನಾವೆ..? ಇಲ್ಲಿಯ ಎಲ್ಲಕ್ಕೂ ಮಣ್ಣೇ ಮೂಲ ಮಣ್ಣೇ ಕೊನೆ. ಅವಿರತದ ಹುಟ್ಟು ಸಾವೆ..? ಮಣ್ಣೆಂದರೆ ಬರೀ ಮಣ್ಣಲ್ಲವೋ ಮರುಳೆ.. ಜೀವ ಅದು, ಮಣ್ಣ ಕಣ ಕಣದಲ್ಲೂ ಜೀವ ಇರುವುದರಿಂದಲೇ ಜೀವ ಹೋದ ಮೇಲೂ ನಮ್ಮನ್ನೂ ಮಣ್ಣಿಗಿಡುತ್ತಾರೆ, ಬೀಜ ಮತ್ತೆ ಮೊಳೆಯಲೆಂದು.. ಜೀವ ಚಿಗುರಲೆಂದು.’

ಬಿರು ಬೇಸಿಗೆಯಲ್ಲಿ ಸುಡುವ ಸೂರ್ಯನ ಕಿರಣಗಳ ಹೊಡೆತಕ್ಕೆ ಚಡಪಡಿಸುವ ನಾನು, ಆಸ್ಪತ್ರೆಯ ಒಳಗಡೆ ಅವ್ವನಿಗೆ ಮತ್ತೆ ಆ ಯಂತ್ರದ ಮೂಲಕ ರೇಡಿಯೆಶನ್ ಅನ್ನೊ ಶಾಕ್ ಟ್ರೀಟ್ಮೆಂಟ್ ಬೇರೆ, ಒಳಗೆ ಮತ್ತು ಹೊರಗೆ ಸುಟ್ಟುಕೊಳ್ಳುವ ಈ ಒದ್ದಾಟದಲ್ಲಿ ಗೆಳೆಯ ಕಳುಹಿಸಿದ ಮಣ್ಣೆಂದರೇನು..? ಪ್ರಶ್ನಾರ್ಥಕ ಕವಿತೆಗೆ ನನ್ನವ್ವ ಅರ್ಥಪೂರ್ಣ ಉತ್ತರವಾಗಿದ್ದಾಳೆ. ಚಿಕಿತ್ಸೆಯ ಫಲವೊ..? ನನ್ನ ಸುದೈವವೊ..? ಗೊತ್ತಿಲ್ಲ ಸದ್ಯಕ್ಕಂತೂ ಗುಣಮುಖಳಾಗಿದ್ದಾಳೆ. ಗೆಳಯನ ಕವಿತೆ ಒಂದಿಷ್ಟು ನನ್ನೊಳಗೂ ನೋವ ಮರೆಸಿ, ಮಣ್ಣಿನ ಋಣ ತೀರಿಸುವ ಕಣ್ಣು ತೆರೆಸಿದೆ..

 

-ಕೆ.ಬಿ.ವೀರಲಿಂಗನಗೌಡ್ರ. , ಸಿದ್ದಾಪುರ 

10 Responses

 1. Hema says:

  ಮನ ತಟ್ಟುವ ಬರಹ . ತಮ್ಮ ಮಾತೃಶ್ರೀಯವರು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

 2. Pallavi Bhat says:

  ನಿಮ್ಮ ನೋವುಗಳ ಅನುಭವ ನನಗೂ ಆಗಿತ್ತು. ಈ ಕಾಯಿಲೆಯನ್ನು ಎದುರಿಸುವ ಶಕ್ತಿ ಆ ದೇವರೇ ಕೊಡಬೇಕಷ್ಟೆ.

 3. Bellala Gopinath Rao says:

  ಹೃದಯಸ್ಪರ್ಶಿ..ಅಮ್ಮನಿಗೆ ಬದಲಿಲ್ಲ, ಬೇಗ ಗುಣಮುಖರಾಗುತ್ತಾರೆ.

 4. Pushpa Nagathihalli says:

  ಮಣ್ಣೆಂದರೇನು ಕವನ ಅರ್ಥವತ್ತಾಗಿದೆ .ಅಮ್ಮ ಗುಣಮುಖರಾಗಲಿ

 5. Shruthi Sharma says:

  ಓದಿ ಕಣ್ಣುಗಳು ತುಂಬಿ ಬಂದುವು. ನಿಮ್ಮ ಗೆಳೆಯನ ಕವನವೂ ತುಂಬಾ ಅರ್ಥಪೂರ್ಣ. ಕಡೆಯಲ್ಲಿ ನಿಮ್ಮ ತಾಯಿ ಗುಣಮುಖರಾದುದು ತಿಳಿದು ಸಮಾಧಾನವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: