ರವಿ ಬರುವ ಹಾದಿಯಲ್ಲಿ…
ಕಣ್ಣು ತೆರೆಯಿತೊಂದು ಹಗಲು
ಬಣ್ಣ ಬಳಿದ ಹೊನ್ನ ಮುಗಿಲು
ರವಿಯು ಬರುವ ಹಾದಿಯಲ್ಲಿ
ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ
ಇರುಳಿನೊಡೆಯ ಚಂದಿರಗೆ
ವಿಶ್ರಾಂತಿ ನೀಡಲು ಬಂದ ಭಾಸ್ಕರ
ಕವಿದ ಕತ್ತಲೆಗೆ ಮುಕ್ತಿ ಹಾಡಿ
ಬೆಳಕಿನೊಸಗೆ ತಂದ ನೇಸರ
ಮುದುಡಿದ ತಾವರೆಯು ನಕ್ಕಿತು
ಅಲೆಗಳಿಗೆ ಹೊಂಬಣ್ಣ ಬಳಿಯಿತು
ಮರಗಿಡಗಳ ತಲೆ ನೇವರಿಸಿ
ಹೊಸ ಚೈತನ್ಯದ ಪುಳಕ ತಂದಿತು
ರವಿಯು ಬರೆದ ಚಿತ್ರ ಕಾವ್ಯವನು
ಹಕ್ಕಿ ಉಲಿಯಿತು ಇಂಪು ಗಾನದಲಿ
ಬೆರಗುಗೊಂಡಿತು ಈ ಜಗವು
ನವೋಲ್ಲಾಸದ ಬೀದಿಯಲಿ
ಶುಭೋದಯದ ನವಕಿರಣದಿಂದ
ಜಗದ ಚೆಲುವಾಯ್ತು ನವೀಕರಣ
ದಿನವೆಲ್ಲ ರವಿಗೆ ರಾಜಮರ್ಯಾದೆ
ಜಗವು ಅದರಿಂದ ಹಿಗ್ಗಿ ನಲಿದಿದೆ
-ಅಮುಭಾವಜೀವಿ