ಮಲ್ಲೇಶ್ವರಂ ಎಂಬ ಬೆಂಗಳೂರಿನ ಮೆರುಗು.

Share Buttonಬೆಂಗಳೂರಿನ ಮಲ್ಲೇಶ್ವರಂನ ತಿರುವುಗಳಲ್ಲಿ ನಡೆಯುತ್ತಾ ವಾಪಸು ಮೆಟ್ರೋ ನಿಲ್ದಾಣಕ್ಕೆ ಬಂದಾಗ ಯಾವತ್ತೂ ಸುಸ್ತೆನಿಸಿದ ನೆನಪಿಲ್ಲ. ಲೆಕ್ಕ ಹಾಕಿ ನೋಡಿದರೆ ಎನಿಲ್ಲವೆಂದರೂ ಒಟ್ಟು ಮೂರೂಮುಕ್ಕಾಲು ಕಿಲೋಮೀಟರ್ ಸುತ್ತು ಹೊಡೆದಿದ್ದರೂ ಸುಸ್ತೇ ಆಗಿಲ್ಲವಲ್ಲಾ ಎಂದು ಅಚ್ಚರಿಪಡುತ್ತೇನೆ. ಅಲ್ಲಿನ ಬೀದಿಗಳ ಗಮ್ಮತ್ತು ಸವಿಯುತ್ತಿದ್ದರೆ ಅದು ಆಯಾಸದ ನೆನಪು ಕೂಡಾ ಬರಗೊಡುವುದಿಲ್ಲ.

ಹಳೆ ಬೆಂಗಳೂರೆಂದು ಕರೆಯಲಾಗುವ ಮಲ್ಲೇಶ್ವರಂನ ಸೊಬಗು, ದಿನವೂ ಸ್ವಚ್ಚಗೊಳಿಸಿದ ರಸ್ತೆಗಳನ್ನು ನೋಡಿದಾಗ ಇಂದಿನ ಬೆಂಗಳೂರು ಪೂರ್ಣವಾಗಿ ಹೀಗಿದ್ದರೆಷ್ಟು ಚೆನ್ನ ಎಂದು ಅನಿಸದಿರುವುದಿಲ್ಲ. ಮಿಂದು ತಪ್ಪದೇ ಒಂದು ಮೊಳ ಮಲ್ಲಿಗೆ ಮುಡಿದು ದೇವಸ್ಥಾನಕ್ಕೆ ಭೇಟಿ ಕೊಡುವ, ಚೀಲ ಹಿಡಿದು ತರಕಾರಿ ಮಾರುಕಟ್ಟೆಯಲ್ಲಿ ಹೆಜ್ಜೆ ಹಾಕುವ ಮಹಿಳೆಯರು, ಸಂಜೆಯಾಗುತ್ತಿದ್ದಂತೆ ರಸ್ತೆಬದಿ ಶಾಪಿಂಗ್ ಹೊರಟ ಹುಡುಗಿಯರು, ಬಾಳೆಲೆಯಿಂದ ಹಿಡಿದು ಪೂಜಾ ಸಾಮಾಗ್ರಿ, ಗ್ರಂಥಿಕೆ ಅಂಗಡಿ, ಚಾಟ್, ದೇಸೀ ತಿಂಡಿಗಳು, ಜೊತೆಗೆ ಅದೆಲ್ಲಿಂದಲೋ ತೇಲಿ ಬರುವ ಹೂಗಳ ಘಮ..! ಒಟ್ಟಾರೆಯಾಗಿ ಚೆಂದದ ಪ್ರಪಂಚ ಬಿಚ್ಚಿಕೊಳ್ಳುತ್ತದೆ.

ಹೀಗೆ ಮಲ್ಲೇಶ್ವರಂನ ಎಂಟನೇ ಅಡ್ಡರಸ್ತೆಯ ಅಡ್ಡಾಟ ಬಹುತೇಕರಿಗೆ ಪ್ರಿಯ. ಒಂದೆಡೆ ಫುಟ್ ಪಾತ್ ಮೇಲಿನ ಕುರ್ತಾ, ಚಪ್ಪಲಿ, ಬ್ಲೌಸ್, ಟಾಪ್,ಬ್ಯಾಗ್ ಇತ್ಯಾದಿ ಮಾರುವ ಅಂಗಡಿಗಳು ಹಲವರ ಪ್ರಧಾನ ಆಕರ್ಷಣೆಯಾಗಿದ್ದರೆ, ಇನ್ನೊಂದೆಡೆ ಬ್ರಾಂಡೆಡ್ ಷೋರೂಂಗಳೂ ಲಭ್ಯ. ಬೃಹತ್ ಚಿನ್ನದ ಮಳಿಗೆಗಳು ಒಂದೆಡೆ ಜನರಿಂದ ಗಿಜಿಗುಡುತ್ತಿದ್ದರೆ ಮೇಲೊಂದು ಕೊಡೆ ಮಾತ್ರ ಹಾಕಿರುವ ರಸ್ತೆಯ ಪಕ್ಕದಲ್ಲಿ ಅಗ್ಗದ ದರದಲ್ಲಿ ಮಾರಾಟವಾಗುವ ಫ಼್ಯಾನ್ಸಿ ಒಡವೆಗಳಿಗೂ ಇಲ್ಲಿ ಒಳ್ಳೆಯ ಬೇಡಿಕೆ. ಸೀರೆ ಪ್ರಿಯರಿಗೆ ಅನೇಕ ದೊಡ್ಡ ಪುಟ್ಟ ಮಳಿಗೆಗಳೂ ಇಲ್ಲಿ ಕಣ್ಸೆಳೆಯುತ್ತವೆ. ಅದೆಷ್ಟೋ ದೂರದಿಂದ ಬಂದು ಮಲ್ಲೇಶ್ವರಂನ ಬ್ರಾಡ್ ವೇ ಯಲ್ಲಿ ರವಿಕೆ ಹೊಲಿಸಿಕೊಳ್ಳುವ ಸೀರೆಪ್ರಿಯೆಯರನ್ನೂ ನೋಡುತ್ತೇವೆ. ಕಾಲೇಜು ಹುಡುಗಿಯರು ಹೆಚ್ಚಾಗಿ ಮುತ್ತಿಗೆ ಹಾಕುವ ಫ಼್ಯಾನ್ಸಿ ಸ್ಟೋರ್ ಗಳು, ಚಪ್ಪಲಿ ಅಂಗಡಿಗಳು ಸಂಜೆಯ ಬಣ್ಣದಲ್ಲಿ ಇನ್ನೂ ಮೆರುಗು ಪಡೆಯುತ್ತವೆ.

ಬರವಿಲ್ಲದ ವೈವಿಧ್ಯತೆಯಿರುವ ಖಾದ್ಯಗಳಿಗೂ ಹೆಸರು ಮಾಡಿದ ಸ್ಥಳ ಇದು ಎಂದರೂ ತಪ್ಪಿಲ್ಲ. ಪ್ರತಿ ವೀಕೆಂಡ್ ಸಂಜೆ ಮಲ್ಲೇಶ್ವರಂಗೆ ಭೇಟಿ ಕೊಡುವುದು ಕೆಲವರ ಚಟವಾದರೆ, ಹೋಗಿ ಅಲ್ಲಿನ ತಮ್ಮ ತಮ್ಮ ಪ್ರೀತಿಯ ತಿಂಡಿಯನ್ನು ತಪ್ಪದೇ ಸವಿದು ಬರುವುದು ಇನ್ನು ಹಲವರ ಅಭ್ಯಾಸ. ಅದು ಪುಟ್ಟ ಲಸ್ಸಿ ಅಂಗಡಿಯಿರಲಿ, ತಮ್ಮ ಮೆಚ್ಚಿನ ಗಾಡಿಯ ಭೇಲ್ ಪುರಿ ಆಗಲಿ, ವೀಣಾ ಸ್ಟೋರ್ಸ್ ನ ಮೆದು ಇಡ್ಲಿಯಿರಲಿ, ಅಯ್ಯರ್ ಮೆಸ್ ನ ಅಚುಕಟ್ಟಾದ ಊಟವಿರಲಿ, ಮೈಯ್ಯಾಸ್ ನ ಕಾಫಿಯೇ ಇರಲಿ, ಭಾನುವಾರದ ಸ್ಪೆಷಲ್ ಅಕ್ಕಿರೊಟ್ಟಿ ಆಗಿರಲಿ ಎಲ್ಲವೂ ಸವಿದವರ ಅಚ್ಚುಮೆಚ್ಚು. ಸುಖಾಸುಮ್ಮನೆ ಮಲ್ಲೇಶ್ವರಂನ ಬೀದಿಗಳಲ್ಲಿ ನಡೆಯುತ್ತಿದ್ದರೆ ಅದೆಲ್ಲಿಂದಲೋ ತುಪ್ಪದ ಪರಿಮಳ, ಇನ್ನೆಲ್ಲಿಂದಲೋ ಆಗಷ್ಟೇ ಮಾಡಿದ ಫ಼ಿಲ್ಟರ್ ಕಾಫಿಯ ಘಮಘಮ, ಯಾವುದೋ ಮನೆಯಿಂದ ಇಂಗಿನ ಒಗ್ಗರಣೆಯ ಘಂ..! ಇತ್ಯಾದಿ ಮನದೊಳಗಡೆ ತಮ್ಮ ಛಾಪನ್ನೊತ್ತುತ್ತವೆ.

“ಸ್ಟ್ರೀಟ್ ಶಾಪಿಂಗ್” ಇಷ್ಟಪಡುವ ಅನೇಕರಿಗೆ ಮಲ್ಲೇಶ್ವರಂ ಎಂಟನೇ ಅಡ್ಡರಸ್ತೆ ಹಬ್ಬವೇ ಸರಿ. ಬೆಂಗಳೂರಿನ ಹಲವೆಡೆಗಳಲ್ಲಿ ಇವೆಲ್ಲಾ ಲಭ್ಯವಿದ್ದರೂ ಮಲ್ಲೇಶ್ವರಂ ನಗರದ ಮಧ್ಯಭಾಗದಲ್ಲಿ ಇರುವುದರಿಂದ ಇಲ್ಲಿಗೆ ತರಹೇವಾರಿ ರೀತಿಯ, ಆಯ್ಕೆಯ ಜನರು ಬೇರೆ ಬೇರೆ ಪ್ರದೇಶಗಳಿಂದ ಬರುವುದನ್ನು ಕಾಣಬಹುದು.

ಅತ್ಯಂತ ಅಪರೂಪದ ಕೆಲ ತರಕಾರಿಗಳು ಮಲ್ಲೇಶ್ವರಂನ ತರಕಾರಿ ಮಾರುಕಟ್ಟೆಯಲ್ಲಿ ಸಿಕ್ಕಾಗ ನಾನು ಸಿಕ್ಕಾಪಟ್ಟೆ ಖುಷಿಯಾಗುತ್ತೇನೆ. ಅಡುಗೆಗಳನ್ನು ದುಪ್ಪಟ್ಟು ರುಚಿಯಾಗಿಸುವ ಎಳೆಯ, ಫ಼್ರೆಷ್ ತರಕಾರಿಗಳು ಇಲ್ಲಿ ಯಾವಾಗಲೂ ಸಿಕ್ಕುತ್ತವೆ.

ಶಾಪಿಂಗ್, ಈಟಿಂಗ್ ಇವೆಲ್ಲಾ ಒಂದು ವರ್ಗಕ್ಕೆ ಸೇರಿದರೆ, ಕಲೆಗಳತ್ತ ಅಪಾರ ಒಲವುಳ್ಳವರಿಗೂ ಮಲ್ಲೇಶ್ವರಮ್ ಬೆಂಗಳೂರಿನ ಪ್ರಿಯ ಜಾಗಗಳಲ್ಲೊಂದು. ಕಲಾತ್ಮಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಇಲ್ಲಿನ ಚೌಡಯ್ಯ ಮೆಮೋರಿಯಲ್ ಹಾಲ್ ಖ್ಯಾತ ಪಿಟೀಲು ವಾದಕ ದಿವಂಗತ ತಿರುಮಕುಡಲು ಚೌಡಯ್ಯನವರ ಸ್ಮರಣಾರ್ಥವಾಗಿದ್ದು ಇದನ್ನು ಪಿಟೀಲಿನ ಆಕಾರದಲ್ಲಿ ಕಟ್ಟಲಾಗಿದೆ. ಯಾವುದೇ ಕಾರ್ಯಕ್ರಮವಿರಲಿ, ಪ್ರಾರಂಭಕ್ಕೂ ಮೊದಲೇ ಬಂದು ಮುಗಿದ ಬಳಿಕ ಹಿಂದಿರುಗುವ ಸ್ಥಳೀಯರು ಸೇರಿದಂತೆ ಹೊರವಲಯದ ಕಲಾಸಕ್ತರನ್ನು ಇಲ್ಲಿ ಕಾಣಬಹುದು. ಸಂಗೀತಕ್ಕೆ ತಲೆದೂಗುತ್ತಾ ತನಿಯಾವರ್ತನಕ್ಕೆ ತಾಳ ಸೇರಿಸುತ್ತಾ ಆಸ್ವಾದಿಸುವ ನೂರಾರು ಕಲಾಸ್ವಾದಕರನ್ನು ಇಲ್ಲಿ ಕಾಣಸಿಗುತ್ತಾರೆ.

ಕಾಡು ಮಲ್ಲೇಶ್ವರನ ದೇವಸ್ಥಾನದಿಂದಾಗಿ ಇಲ್ಲಿಗೆ ಮಲ್ಲೇಶ್ವರಂ ಎಂಬ ಹೆಸರು ಬಂದಿದ್ದು, ಇಲ್ಲಿ ಪುರಾತನ ವೈಶಿಷ್ಟ್ಯಪೂರ್ಣವಾದ ಹಲವು ದೇವಾಲಯಗಳು ಈಗಲೂ ಮೂಲರೂಪದಲ್ಲಿ ಇರುವುದು ವಿಶೇಷ. ಇಲ್ಲಿಯ ದೇವಾಲಯಗಳಿಗೆ ಭೇಟಿ ಕೊಡುವ ಭಕ್ತರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅತ್ತ ಪೇಟೆಯೂ ಅಲ್ಲ ಹಳ್ಳಿಯೂ ಅಲ್ಲದೆ ಶಾಂತತೆಯನ್ನೂ ಧನಾತ್ಮಕತೆಯನ್ನೂ ಹೊಂದಿರುವ ಇಲ್ಲಿ ದೇವಾಲಯಗಳು ಕೂಡಾ ಒಂದರ್ಥದಲ್ಲಿ ವಾತಾವರಣವನ್ನು ಸುಂದರವಾಗಿಡಲು ಸಹಕರಿಸುತ್ತವೆ.

ಮೈಸೂರಿನಲ್ಲಿ ಎರಡು ವರ್ಷಗಳ ಕಾಲ ಇದ್ದು ಮೈಸೂರೆಂದರೆ ಅತಿಯಾಗಿ ಇಷ್ಟಪಡುವ ನನಗೆ ಮೈಸೂರಿನ ತಣ್ಣನೆಯ ರಸ್ತೆಗಳು, ಮರಗಳ ತಂಪು, ದೇವರಾಜ ಮಾರುಕಟ್ಟೆಯ ಸುಗಂಧ, ಜಿಟಿಆರ್ ನ ಮಸಾಲೆದೋಸೆಯ ಪರಿಮಳ, ಮೈಸೂರು ಕಾಫಿ, ಸಂಗೀತ ಕಛೇರಿಗಳ ತರಂಗ ಇವೆಲ್ಲವನ್ನೂ ಮತ್ತೆ ನೆನಪಿಸುವುದು ಬೆಂಗಳೂರಿನ ಮಲ್ಲೇಶ್ವರಂ. “ಇದು ಬೆಂಗಳೂರೊಳಗೊಂದು ಮಿನಿ ಮೈಸೂರು” ಎಂದುಕೊಳ್ಳುತ್ತಿರುತ್ತೇನೆ..

 

– ಶ್ರುತಿ ಶರ್ಮಾ, ಬೆಂಗಳೂರು.

 

5 Responses

 1. Lathika Bhat says:

  ವಾವ್…ಮಲ್ಲೇಶ್ವರದಲ್ಲಿ ಒಂದು ರೌಂಡ್ ಶಾಪಿಂಗ್ ಮಾಡಿ ಬಂದ ಹಾಗೆ ಅನ್ನಿಸಿತು. ಮೂರುವರ್ಷಗಳಿಂದ ಶಾಪಿಂಗ್ ಬಿಟ್ಟ ನನಗೆ ಒಂದು ಕಾಲತ್ತಿಲ್ ಮಲ್ಲೇಶ್ವರಂ ನೆಚ್ಚಿನ ಶಾಪಿಂಗ್ ತಾಣವಾಗಿತ್ತು. ಧನ್ಯವಾದ ಶ್ರುತಿ.

 2. Sudha Bhat says:

  ನಿಜ. Bangalore ಎಷ್ಟೇ ಬೆಳದ್ರ್ ಕೂಡ ಇವತ್ತಿಗೂ ಮಲ್ಲೇಶ್ವರಂ ಹೋಗಿ ಸುತ್ತಿ ಬರೋದೇ ಈಗಲೂ ಇಷ್ಟ

 3. ನಾನು ಮಲ್ಲೇಶ್ವರದ ಪರಮ ಫ್ಯಾನ್

 4. ಹರ್ಷ says:

  ಮಲ್ಲೇಶ್ವರ ದ ಬಗ್ಗೆ ನನಗಿರುವ ಭಾವನೆ ಯ ದರ್ಪಣದ ಹಾಗ್ ಇದೆ . ಕಾಡು ಮಲ್ಲೇಶ್ವರ, ದಕ್ಷಿಣ ಮುಖಿ ನಂದಿ ದೇವಸ್ಥಾನ ಎಲೆ ಮರೆಯ ಕಾಯಿ . ಇವುಗಳ ಉಲ್ಲೇಖ ನಿಮ್ಮ blog ನ ಮೆರಗನ್ನು ದುಪ್ಪಡಿ ಮಾಡುವುದು

 5. ಸಾವಿತ್ರಿ ಭಟ್ says:

  ವಾವ್..ಮಲ್ಲೇಶ್ವರಂ ಸುತ್ತಿದಂತೆ ಅನಿಸಿತು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: