ಉಪ್ಪು, ಖಾರ, ಮತ್ತೊಂದಿಷ್ಟು ಕಾಳಜಿ!
ಬೆಂಗಳೂರಿನ ಮಧ್ಯಭಾಗದ ಹಾಗೂ ಸುತ್ತಮುತ್ತಲ ನಿವಾಸಿಗಳಲ್ಲಿ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ಗೆ ಹೋಗದವರು ವಿರಳ. ತಿಂಡಿ ಪ್ರಿಯರು, ಶಾಪಿಂಗ್ ಪ್ರಿಯರು, ಭಕ್ತರು, ಕಲಾರಾಧಕರು ಎಲ್ಲರಿಗೂ ಮಲ್ಲೇಶ್ವರಂ ಎಂಬ ಸ್ಥಳದ ಜೊತೆ ಅದೇನೋ ಒಂದು ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ.
ಹೀಗೆ ಮಲ್ಲೇಶ್ವರಂ ಎಂಟನೇ ಕ್ರಾಸ್ ನಲ್ಲಿ ಅಡ್ಡಾಡುವ ಅಭ್ಯಾಸವಿರುವವರಿಗೆ ಖಂಡಿತವಾಗಿಯೂ ತಿಳಿದಿರಬಹುದಾದಂತಹ ಹೆಸರು ’ಸಾಯಿ ಶಕ್ತಿ’. ಸಾಧಾರಣವಾಗಿ ತೆರೆದಿರುವ ಎಲ್ಲಾ ಹೊತ್ತಿನಲ್ಲೂ ಈ ಉತ್ತರ ಭಾರತ ಶೈಲಿಯ ಸಸ್ಯಾಹಾರಿ ಹೋಟೆಲ್ ನಲ್ಲಿ ಗ್ರಾಹಕರು ಕಾಣಸಿಗುತ್ತಾರೆ. ಇದು ಇಲ್ಲಿನವರಿಗೂ ಅಚ್ಚುಮೆಚ್ಚಿನದಾಗಲು ಕಾರಣ, ತಮ್ಮದೇ ಗುಂಪಿನ ಉತ್ತರ ಭಾರತದ ಗೆಳೆಯನ ಮನೆಯಲ್ಲಿನ ಹಿತವಾದ ಊಟ ಉಂಡಂತೆ ಅನಿಸುವ ಇಲ್ಲಿನ ಆಹಾರ. ಹೊಟ್ಟೆಗೆ ಖಂಡಿತಾ ಭಾರವಲ್ಲ. ಜೇಬಿಗಂತೂ ಮೊದಲೇ ಅಲ್ಲ!
ಅತ್ಯಂತ ಮೆದುವಾದ ರೋಟಿ, ಚಪಾತಿ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಇಲ್ಲಿ ಪ್ರೋಟೀನ್ ಚಪಾತಿ, ಪ್ರೋಟೀನ್ ಪರಾಠ ಕೂಡಾ ಲಭ್ಯ. ಗೋಧಿ ಹಿಟ್ಟಿನೊಂದಿಗೆ ಇತರ ಕಾಳುಗಳ ಹಿಟ್ಟುಗಳನ್ನು ಸೇರಿಸಿ ಮಾಡುವ ಪ್ರೋಟೀನ್ ಚಪಾತಿಗಳು ಕೂಡಾ ತುಂಬ ಮ್ರುದು, ರುಚಿ. ಇವಲ್ಲದೆ ಬೆಂಡೆ ಕಾಯಿಗಳನ್ನು ಸೀಳಿ, ಉದ್ದುದ್ದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಖಾರದೊಂದಿಗೆ ಹುರಿದು ತಯಾರಿಸಲಾಗುವ ಭಿಂಡಿ ಚಿಲ್ಲಿ ಕೂಡಾ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದಿದೆ. ಅನ್ನದ ಐಟಂಗಳನ್ನು ಇಷ್ಟಪಡುವವರಿಗಾಗಿಯೆಂಬಂತಿರುವ ಪುದೀನ ರೈಸ್ ಅತ್ಯಂತ ಹದವಾದ ಪುದೀನದ ಘಮದೊಂದಿಗೆ ಹಿತವೆನಿಸುವುದು. ಬೇರೆ ಬೇರೆ ರೀತಿಯ ಮಿಲ್ಕ್ ಶೇಕ್ ಗಳು ಕೂಡಾ ಫೇಮಸ್ ಆಗಿರುವ ಇಲ್ಲಿ ರೋಸ್ ಮಿಲ್ಕ್ ಗೆ ಬೇಡಿಕೆ ಜಾಸ್ತಿ. ಒಟ್ಟಾರೆಯಾಗಿ ಹೇಳುವುದಾದರೆ, ಸರಳವಾದ ವ್ಯವಸ್ಥೆಗಳಲ್ಲೇ ರುಚಿಯಾದ ಆಹಾರ ಉಣಬಡಿಸಿ ಜನಪ್ರಿಯತೆಯನ್ನು ಪಡೆದಿರುವ ಹೋಟೆಲ್ ಗಳಲ್ಲೊಂದು ಸಾಯಿ ಶಕ್ತಿ. ಹಸಿದ ಹೊಟ್ಟೆಗೆ ಹಿತವಾದ ಆಹಾರ ಒದಗಿಸುವಲ್ಲಿ ದಶಕಗಳ ಹಿಂದೆಯೇ ಯಶಸ್ವಿಯಾಗಿ ಅದೇ ರೀತಿಯ ಅಥವಾ, ಹಿಂದಿಗಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ನಿಭಾಯಿಸಿಕೊಂಡು ಬಂದಿರುವುದು ಇವರ ವಿಶೇಷತೆ.
’ಸಾಯಿ ಶಕ್ತಿ’ಯ ಹಿಂದಿನ ಶಕ್ತಿ ಯಾರೆಂದು ಹುಡುಕುತ್ತಾ ಹೋದಾಗ ಸಿಕ್ಕವರು ಶ್ರೀ ವಿಜಯ್ ಕುಮಾರ್ ಮಿಶ್ರಾ. ಇವರನ್ನು ಮಾತನಾಡಿಸಿದಾಗ ತಿಳಿದದ್ದೇನೆಂದರೆ ನಲುವತ್ತು ವರ್ಷಗಳಿಂದ ಹೋಟೆಲ್, ಕ್ಯಾಟರಿಂಗ್ ಹಾಗೂ ಆಹಾರ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ ಪರಿಸರ ಸ್ನೇಹಿಯೂ ಆದ ಇವರು ಮಲ್ಲೇಶ್ವರಂನ ಹಲವಾರು ಮರಗಳನ್ನು ಉಳಿಸುವತ್ತ ನಡೆದ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಇವರು ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕರಲ್ಲೊಬ್ಬರೂ ಹೌದು. ಸ್ವತಃ ಪಾಕ ಪ್ರವೀಣರಾಗಿರುವ ವಿಜಯ್ ಕುಮಾರ್ ಮಿಶ್ರಾರವರು ತಮ್ಮ ಉತ್ತಮ ಹಾಸ್ಯಪ್ರಜ್ನೆಯೊಂದಿಗೆ ಮಾತಾಡುತ್ತಾ ತಾವು ಸಾಗಿ ಬಂದ ಹಾದಿಯನ್ನು ನೆನಪಿಸುತ್ತಾರೆ.
“ಸಾಧಾರಣವಾಗಿ ಮದುವೆಯಾದ ಬಳಿಕ ಹುಡುಗರ ಹೊರಗಿನ ಊಟಕ್ಕೆ ಕಡಿವಾಣ ಬೀಳುತ್ತದೆಯೆಂದು ಹೇಳುತ್ತಾರೆ. ಆದರೆ ನಮ್ಮಲ್ಲಿ ಬಂದು ಊಟ ಮಾಡುತ್ತಿದ್ದ ಬಾಚುಲರ್ ಹುಡುಗರು ಮುಂದೆ ಮದುವೆಯಾದ ಬಳಿಕ ತಮ್ಮ ಪತ್ನಿಯನ್ನೂ ಕರೆತಂದು ಜತೆಯಲ್ಲಿ ಊಟ ಮಾಡುವುದು ನಮ್ಮ ಹೋಟೆಲಿನ ವಿಶೇಷತೆ“ ಎಂದು ನಗುತ್ತಾರೆ ಅವರು.
ಪಾಕಶಾಲೆಯಲ್ಲಿ ಬೇರೆ ಬೇರೆ ರೀತಿಯ ಪ್ರಯೋಗ-ಪರೀಕ್ಷೆಗಳನ್ನೂ ನಡೆಸುವುದು ಇವರ ಹವ್ಯಾಸ. ಸ್ವತಃ ಯೋಗಾಭ್ಯಾಸಿಯಾಗಿರುವ ಇವರು, ಶುಚಿ – ರುಚಿಯಾದ ಆಹಾರ ಮಾತ್ರವಲ್ಲ, ಗ್ರಾಹಕನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಪೌಷ್ಟಿಕಾಂಶ ಭರಿತ ಅಡುಗೆಗಳನ್ನು ತಯಾರಿಸುವುದರತ್ತವೂ ಕಾಳಜಿ ವಹಿಸುತ್ತಾರೆ.
ವಿಜಯ್ ಕುಮಾರ್ ಮಿಶ್ರಾರವರು ತಮ್ಮ ಅಡುಗೆ ಮನೆಯನ್ನು ಪರಿಚಯಿಸುತ್ತಾ ಹೋದಂತೆ, ಮನಸ್ಸಿಗೂ ಮುದ ನೀಡುವ ಅಲ್ಲಿನ ಆಹಾರದ ಗುಟ್ಟು – ಉತ್ತಮ ಗುಣಮಟ್ಟದ ತರಕಾರಿಗಳು, ಒಳ್ಳೆಯ ಎಣ್ಣೆ, ಕೃತಕ ಬಣ್ಣ ಸೇರಿಸದ, ಕಲಬೆರಕೆಯಿಲ್ಲದ, ಸದಾ ಶುಚಿಯಾಗಿರುವ ಅಡುಗೆ ಮನೆ ಎಂಬುದು ಮನದಟ್ಟಾಗುತ್ತದೆ. ಗ್ರಾಹಕನ ಆರೋಗ್ಯದ ಜೊತೆ ಚೆಲ್ಲಾಟವಾಡುವ ಪ್ರವೃತ್ತಿ ತಮ್ಮ ಹೋಟೆಲ್ ನಲ್ಲಿ ಯಾವತ್ತಿಗೂ ಸಲ್ಲುವುದಿಲ್ಲ ಎಂದು ಇವರು ತಿಳಿಸುತ್ತಾರೆ. ಅಪಾರ ಮೌಲ್ಯಗಳನ್ನೂ ಶಿಸ್ತನ್ನೂ ಪಾಲಿಸುತ್ತಾ ಆಹಾರದಲ್ಲಿ ಆರೋಗ್ಯವಿದೆ ಎಂದು ಪ್ರತಿಪಾದಿಸುವ ಇವರ ರೀತಿ ಮೆಚ್ಚುಗೆಯಾಗುತ್ತದೆ.
ಆಹಾರ ತಯಾರಿಯ ಗುಣಮಟ್ಟ ಮಾತ್ರವಲ್ಲ, ಜೊತೆಯಲ್ಲಿ ಅಪ್ಪಟ ಮನೆ ಅಡುಗೆಯ ಸ್ವಾದ, ಸತ್ಯಯುತ ಆಹಾರ ತಯಾರಿಕೆ ಗ್ರಾಹಕರ ಪ್ರೀತಿ ಗಳಿಸುವಲ್ಲಿ ಅಪಾರ ಕೊಡುಗೆಯನ್ನೀಯುತ್ತಿದೆ. ಸಾಧಾರಣ ಪಂಜಾಬಿ ಮನೆಯೊಂದರಲ್ಲಿ ತಯಾರಿಸುವ ರಾಜ್ಮಾ, ದಾಲ್ ಇನ್ನಿತರ ಅಡುಗೆಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ತಯಾರಿಸಿ ನಮ್ಮ ಗ್ರಾಹಕರಿಗೆ ಬಡಿಸುತ್ತೇವೆ, ಅದೇ ಇಲ್ಲಿನ ಸ್ಪೆಷಲ್ ಅಡುಗೆಗಳೆಂದು ಕರೆಯಲ್ಪಡುತ್ತವೆ ಎನ್ನುವ ಇವರ ಮಾತು ಇಲ್ಲಿನ ಆಹಾರ ಹೇಗಿಷ್ಟು ಆಪ್ತವಾಗುತ್ತದೆ ಎನ್ನುವುದಕ್ಕೆ ಉತ್ತರವಾಗುತ್ತದೆ. ಮೂಲತಃ ನಾರ್ಥ್ ಇಂಡಿಯನ್ ಅಡುಗೆಗೆ ಗೋಡಂಬಿ ಅರೆದು ಬೆರೆಸುವ ಮಸಾಲ ಬಳಸುವುದಿಲ್ಲ. ಆದರೆ ಇಂದು ಬಹಳಷ್ಟು ಕಡೆಗಳಲ್ಲಿ ಈ ರೀತಿಯ ತಪ್ಪು ವಿಧಾನಗಳಿಂದ ಆಹಾರ ತಯಾರಿಸಲಾಗುತ್ತಿದ್ದು ಇದು ಗ್ರಾಹಕನ ಜೇಬಿಗೂ ಆರೋಗ್ಯಕ್ಕೂ ಪೆಟ್ಟನ್ನೀಯುತ್ತದೆ ಎನ್ನುತ್ತಾರೆ ಇವರು. ಅಪ್ಪಟ ಭಾರತೀಯ ಶೈಲಿಯ ಆಹಾರ ಉತ್ತಮ ಆರೋಗ್ಯಕ್ಕೂ ಮೂಲ ಎಂದು ಮಾತು ಮುಗಿಸುತ್ತಾರೆ ವಿಜಯ್ ಕುಮಾರ್ ಮಿಶ್ರಾ.
ಕುಟುಂಬ ಸಮೇತ ಅಲ್ಲಿಗೆ ಬಂದಿದ್ದ ಖಾಯಂ ಗ್ರಾಹಕ ಜಿ. ಕುಮಾರ್ ಅವರು ತಾವು ೨೦೦೬ ರಿಂದ ವಾರಕ್ಕೊಮ್ಮೆಯಾದರೂ ಬಂದು ಇಲ್ಲಿ ಊಟ ಮಾಡುತ್ತಿದ್ದು, ಇದುವರೆಗೂ ಅಲ್ಲಿನ ಊಟದ ರುಚಿಯಲ್ಲಿ ಯಾವುದೇ ಏರುಪೇರಾಗಿಲ್ಲ ಎನ್ನುತ್ತಾರೆ. ಮಡದಿ-ಮಕ್ಕಳು ಎಲ್ಲರೂ ಸಾಯಿಶಕ್ತಿಯ ಊಟವನ್ನು ಬಹಳವೇ ಮೆಚ್ಚುತ್ತಾರೆ ಎಂಬುದು ಇವರ ಉವಾಚ. ಇದರೊಂದಿಗೆ ವೇಗದ ಸೇವೆಯನ್ನೂ ತುಂಬಾ ಕಡಿಮೆ ದರದಲ್ಲಿ ಲಭಿಸುವ ರುಚಿಯಾದ ಊಟವನ್ನೂ ಹೊಗಳುತ್ತಾರೆ.
ನೀವೂ ಇಲ್ಲಿಗೆ ಭೇಟಿ ಕೊಟ್ಟಲ್ಲಿ, ಈ ಮೊದಲೇ ತಿಳಿಸಿದ ಭಿಂಡಿ ಚಿಲ್ಲಿ, ಪುದೀನ ರೈಸ್ ಜೊತೆ ಪ್ರೊಟೀನ್ ಚಪಾತಿ – ರಾಜ್ಮಾ, ಗ್ರೀನ್ ಪೀಸ್ ಮಸಾಲ ಅಥವಾ ದಾಲ್ ಅನ್ನು ಸವಿಯಲು ಮರೆಯದಿರಿ.
ವಿಳಾಸ:
ಸಾಯಿ ಶಕ್ತಿ ವೆಜಿಟೇರಿಯನ್,
56/1, 8ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ,
ಮಲ್ಲೇಶ್ವರಂ,
ಬೆಂಗಳೂರು – 560003
ಸಮಯ:
ಬೆಳಗ್ಗೆ 11.30 ರಿಂದ ಮಧ್ಯಾಹ್ನ 3.00
ಸಂಜೆ 6.30 ರಿಂದ ರಾತ್ರಿ 10.30
– ಶ್ರುತಿ ಶರ್ಮಾ, ಬೆಂಗಳೂರು.
Saishakti (veg) Brand Ambassidor, smt Shruti.. tks for all details.
ಸಾಯಿ ಶಕ್ತಿ ಹೋಟೆಲ್ ಪರಿಚಯಿಸಿದ ನಿಮಗೆ ಧನ್ಯವಾದಗಳು. ಅಲ್ಲಿನತಿಂಡಿತಿನಸುಗಳ ವಿವರಣೆ ಕೇಳಿದರೆ ತಿನಬೇಕೆನಿಸುತ್ತದೆ. ಆದರೆ ಹೋಗಲು ಸಾಧ್ಯವಿಲ್ಲ.