ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 6

Share Button

ಜೋಮ್ ಸಮ್ ನಿಂದ ಮುಕ್ತಿನಾಥದತ್ತ  ..

22 ಫೆಬ್ರವರಿ 2017 ರಂದು  ಜೋಮ್ ಸಮ್ ನಿಂದ 28  ಕಿ.ಮೀ ದೂರದಲ್ಲಿರುವ  ಮುಕ್ತಿನಾಥಕ್ಕೆ ಹೋಗಬೇಕಿತ್ತು.    06 ಗಂಟೆಯಿಂದ ಸ್ನಾನಕ್ಕೆ ಬಿಸಿನೀರು ಬರುತ್ತದೆ ಅಂತ ಹೋಟೆಲ್ ಮಾಲಿಕ ಹೇಳಿದ್ದರಾದರೂ, ಬಿಸಿನೀರು ಬರಲಿಲ್ಲ.  ಅನಿವಾರ್ಯವಾಗಿ, ಚಳಿಯಿದ್ದರೂ ತಣ್ಣೀರಿನಲ್ಲಿಯೇ ಸ್ನಾನ ಮುಗಿಸಿ, ಕಾಫಿ ಕುಡಿದು ಸಿದ್ದರಾವೆವು.  08 ಗಂಟೆಗೆ ಬಂದ ಎರಡು ಜೀಪುಗಳಲ್ಲಿ ನಮ್ಮ ತಂಡವು ಮುಕ್ತಿನಾಥಕ್ಕೆ ಹೊರಟಿತು. ಈ ಮಾರ್ಗವು ತಕ್ಕಮಟ್ಟಿಗೆ ಚೆನ್ನಾಗಿದೆ. ದಾರಿಯಲ್ಲಿ ಅಲ್ಲಲ್ಲಿ ಮೇಯುತ್ತಿದ್ದ ಚಮರೀ  ಮೃಗಗಳನ್ನು ಕಂಡೆವು.  ಗಂಡಕೀ ನದಿ ಎದುರಾಯಿತು. ನದಿಗೆ ಅಲ್ಲಲ್ಲಿ ತೂಗು ಸೇತುವೆಗಳನ್ನು ಕಟ್ಟಿದ್ದರು.  ಈ ನದಿಯಲ್ಲಿ ಸಿಗುವ  ಸಾಲಿಗ್ರಾಮ ಶಿಲೆಗಳನ್ನು ಶ್ರೇಷ್ಠ ಎಂದು ಪೂಜಿಸಲಾಗುತ್ತದೆ.

ಮಸ್ತಾಂಗ್ ಪ್ರದೇಶದಲ್ಲಿ, ಡ್ರೈವರ್ ಜೀಪನ್ನು ಗಂಡಕಿ ನದಿಗೆ ಇಳಿಸಿ,  ನೀರಿಲ್ಲದ ಜಾಗದಲ್ಲಿ  ಸುಮಾರು 1 ಕಿ.ಮೀ ದೂರ ಜೀಪು ಪಯಣಿಸಿ ಪುನ: ಏರುದಾರಿ ಹತ್ತಿತು.  ಹಾಗಾದರೆ, ನದಿಯಲ್ಲಿ ನೀರು  ತುಂಬಿ ಹರಿಯುತ್ತಿರುವ ಸಂದರ್ಭಗಳಲ್ಲಿ ಮುಕ್ತಿನಾಥಕ್ಕೆ ಹೋಗುವುದು  ಹೇಗೆ? ಬೇರೆ ದಾರಿ ಇದೆಯೆ? ಮುಕ್ತಿನಾಥ ವರ್ಷವಿಡೀ ತೆರೆದಿರುತ್ತದೆಯೇ?  ಎಂದು ಜೀಪಿನ ಡ್ರೈವರ್ ಗೆ ಕೇಳಿದೆ. ನದಿಯಲ್ಲಿ ನೆರೆ ಬಂದಾಗ ಬೇರೆ ದಾರಿಯಲ್ಲಿ ಹೋಗುತ್ತೇವೆಂದೂ, ಇದು ಸಮೀಪದ ದಾರಿಯೆಂದೂ, ಮುಕ್ತಿನಾಥವು ವರ್ಷವಿಡೀ ತೆರೆದಿರುತ್ತದೆಯೆಂದೂ ತಿಳಿಸಿದ.

ಈ ರಸ್ತೆಯೂ ಬಹಳ  ಕೆಲವೆಡೆ ಕಿರಿದಾಗಿತ್ತು.  ಅಲ್ಲಲ್ಲಿ ಹಿಮ ಕರಗಿದ ನೀರು ಮಣ್ಣಿನೊಂದಿಗೆ ಸೇರಿ ಕೆಸರು ಸೃಷ್ಟಿಯಾಗಿತ್ತು. ಅಲ್ಲಿ ಒಂದು ಜೀಪಿನ ಚಕ್ರ ಸಿಕ್ಕಿ ಹಾಕಿಕೊಂಡಿತ್ತು. ಇತರ ಜೀಪುಗಳ ಡ್ರೈವರ್ ಗಳ  ಸಹಾಯದಿಂದ ಕೊನೆಗೂ ಆ ಜೀಪು ಮುಂದುವರಿದು ನಮಗೆ  ಹೋಗಲು ಸಾಧ್ಯವಾಯಿತು. ಇನ್ನೂ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಮಾರ್ಗ ಮಧ್ಯೆ ಮಣ್ಣಿನ ದಿಬ್ಬ ಸೃಷ್ಟಿಯಾಗಿತ್ತು. ಮಕ್ಕಳು ಜಾರು ಬಂಡೆ ಹತ್ತಿ ಇಳಿಯುವಂತೆ ನಾವೂ ಜೀಪಿನ ಸಮೇತವಾಗಿ ಹತ್ತಿ ಇಳಿದೆವು! ನೇಪಾಳದ ಎಲ್ಲಾ ಡ್ರೈವರ್ ಗಳು ಅದ್ಭುತ  ವಾಹನ ಚಾಲನೆಯ ಕೌಶಲವುಳ್ಳವರು ! ಇಲ್ಲಿನ ಮಳೆ, ಕೆಸರಿನಲ್ಲಿ ಚಕ್ರ ಹೂತುಕೊಳ್ಳುವುದು, ಬೆಟ್ಟದ ಮಣ್ಣು ಜರಿದು ಬಿದ್ದು ಮಾರ್ಗ ಮುಚ್ಚಿರುವುದು ಇವೆಲ್ಲಾ ಇವರಿಗೆ ಅಡೆಚಣೆಗಳು ಅನಿಸುವುದೇ ಇಲ್ಲ!    ಮಾರ್ಗಮಧ್ಯೆ ಯಾವುದಾದರೂ ಜೀಪು ತೊಂದರೆಗೀಡಾದರೆ, ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿ, ಮತ್ತೊಂದು ಕಡೆಯಲ್ಲಿ  ಇರುವ ಜೀಪಿಗೆ ಹತ್ತಿಸಿ, ರಿಲೇ ಪದ್ಧತಿಯಂತೆ ಗುರಿ ಮುಟ್ಟಿಸುವ ಸಂವಹನ ಮತ್ತು ಸಾಮರಸ್ಯ  ಎಲ್ಲಾ  ಜೀಪು ಡ್ರೈವರ್ ಗಳಿಗೆ ಇವೆ, ಮತ್ತು ಅದು ಅಲ್ಲಿಯ ಪರಿಸರದಲ್ಲಿ ಅನಿವಾರ್ಯ ಕೂಡ.

ಹೀಗೆ ಕೌತುಕಮಯವಾದ ಒಂದು ಗಂಟೆ  ರಸ್ತೆಪ್ರಯಾಣದ ನಂತರ ಮುಕ್ತಿನಾಥಕ್ಕೆ ತಲಪಿದೆವು.    ಹಿಮಗಿರಿಗಳ ನಡುವೆ ಅವಿತುಕೊಂಡಿರುವ ತಕ್ಕಮಟ್ಟಿಗೆ ಸಮತಟ್ಟಾಗಿರುವ ಸಣ್ಣ ಪೇಟೆ ಅದು.  ಹತ್ತಾರು ಮನೆಗಳು, ಕೆಲವು ಸಣ್ಣ ಅಂಗಡಿಗಳು ಇದ್ದುವು. ಜೀಪು ನಿಲ್ಲಿಸಿದ ಜಾಗದಿಂದ ಸುಮಾರು 1.5  ಕಿ.ಮೀ  ಕಾಲುದಾರಿಯಲ್ಲಿ ನಡೆದರೆ ಮುಕ್ತಿನಾಥದ ದೇವಾಲಯ ಸಿಗುತ್ತದೆ.

(ಮುಂದುವರಿಯುವುದು)

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 5 : http://52.55.167.220/?p=13831

 

– ಹೇಮಮಾಲಾ.ಬಿ

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: