ಮಕ್ಕಳ ಸಾಹಿತ್ಯ ಕೃಷಿಕ – ಶ್ರೀ ಗುರುರಾಜ ಬೆಣಕಲ್

Share Button

ಲೇಖಕರೊಂದಿಗೆ ಶ್ರೀ ಗುರುರಾಜ ಬೆಣಕಲ್

 

‘ನೋಡೋಕೆ ಭಾರೀ ದೊಡ್ಡ ಕುಳಾ
ನಮ್ಮಯ ರಂಗೂ ಮಾಮ
ಬೆಳ್ಸಿದ್ದಾನೆ ತನ್ನ ದೇಹಾನ
ಇಲ್ಲ ಲಂಗೂ ಲಗಾಮ!’

ಮೊನ್ನೆ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯನ ಪುಟ್ಟ ಮಗ ಪುಸ್ತಕವೊಂದನ್ನು ಓದುತ್ತಾ ತಮಾಷೆಯಲ್ಲಿ ಹಾಡುತ್ತಿದ್ದ!  “ಯಾವ್ದು ಪುಟ್ಟಾ ಪುಸ್ತಕ?” ಅಂತ ಕೇಳಿದೆ. ತೋರಿಸಿದ. ನೋಡಿದೆ. “ಹೂವೇ ಹೂವೇ” ಅನ್ನುವ ಮಕ್ಕಳ ಕವಿತೆಗಳ ಪುಟಾಣಿ ಪುಸ್ತಕ. ಶ್ರೀ ಗುರುರಾಜ ಬೆಣಕಲ್ ಲೇಖಕರು.

ಕಳೆದ ತಿಂಗಳಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ನಾನು ಹೋಗಿದ್ದು ನೆನಪಾಯಿತು.  ಬಿಡುವಿನಲ್ಲಿ ಒಬ್ಬ ಯುವಕ ಶ್ವೇತವಸ್ತ್ರಧಾರಿ ಹಿರಿಯರೊಬ್ಬರನ್ನು ಮಾತಾಡಿಸಲು ತೊಡಗಿದ್ದ.

“ಸರ್.. ನೀವು ಗುರುರಾಜ ಬೆಣಕಲ್ ಅಲ್ವ?”

ಅವರು ಅವನನ್ನೆ ಗಹನವಾಗಿ ನೋಡುತ್ತ “ಹೌದು” ಅಂದರು! ಯುವಕನಿಗೆ ತುಂಬಾ ಖುಷಿ. ತನ್ನನ್ನು ಪರಿಚಯಿಸಿಕೊಳ್ಳುತ್ತಾ ಹೇಳುತ್ತಿದ್ದ, “ಸರ್.. ನಾನು ಚಿಕ್ಕವನಿದ್ದಾಗಿನಿಂದ ನಿಮ್ಮ ಪುಸ್ತಕಗಳನ್ನು ಓದಿದ್ದೇನೆ. ಇತ್ತೇಚಿಗೆ ಹುಬ್ಬಳ್ಳಿಯಲ್ಲಿ ನಿಮ್ಮ ಕತೆಗಳ ಮತ್ತು ಕವಿತೆಗಳ ಪುಸ್ತಕಗಳು ಬಿಡುಗಡೆ ಆಗಿವೆ ಅಲ್ವ?” ಬೆಣಕಲ್ ಬಹಳ ಖುಷಿಯಿಂದ ಆ ಯುವಕನೊಡನೆ ಸಂಭಾಷಣೆಯಲ್ಲಿ ತೊಡಗಿಬಿಟ್ಟರು!

ಕಾರ್ಯಕ್ರಮ ಮುಗಿದಮೇಲೆ ಅವರಿಗೆ ನನ್ನ ಪರಿಚಯಿಸಿಕೊಂಡೆ. ನಾನು ಅವರ ಅನೇಕ ಕತೆ, ಕವನಗಳನ್ನು ಪತ್ರಿಕಗಳಲ್ಲಿ ಓದಿದ್ದೆ. ಶಿಶು ಸಾಹಿತ್ಯದಲ್ಲಿ ಗುರುರಾಜ ಬೆಣಕಲ್ ದೊಡ್ಡ ಹೆಸರು. ಅವರಿಗೀಗ ವಯಸ್ಸು ಎಪ್ಪತ್ತು ಆದರೆ ಏಳು ವರ್ಷಗಳ ಮಗುವಿನ ಕುತೂಹಲ, ಸರಳತೆ ಮತ್ತು ಜೀವನೋತ್ಸಾಹ ಉಳಿಸಿಕೊಂಡಿದ್ದಾರೆ. ಮಾತಾಡತೊಡಗಿದರೆ ನಮ್ಮೊಡನೆ ಮಕ್ಕಳಾಗುತ್ತಾರೆ. ಇಂದಿಗೂ ಮಕ್ಕಳ ಆದರ್ಶಗಳೇನಿರಬೇಕೆಂಬ ಕನಸುಗಳನ್ನು ತಮ್ಮ ಲೇಖನಿಯಲ್ಲಿ ಮೂಡಿಸುತ್ತಿರುತ್ತಾರೆ.

ಬೆಣಕಲ್ಲರ ಪರಿಚಯವಾದ ಮೇಲೆ, ಅವರ ಸಂದರ್ಶನಕ್ಕೆಂದು ಅವರ ಮನೆಗೂ ಭೇಟಿ ಕೊಟ್ಟಿದ್ದೇನೆ. ಅವರೊಂದಿಗೆ ಕಳೆದ ಮೌಲಿಕ ಸಮಯ, ಸಂಭಾಷಣೆ, ಅವರು ಹಾಡಿದ ಕೆಲವು ಕವನಗಳ ಸಾಲುಗಳನ್ನು ಇಲ್ಲಿ ದಾಖಲಿಸಿದ್ದೇನೆ.

ಬೆಣಕಲ್ಲರು ತಮ್ಮ ನೆನಪಿನ ಸುರುಳಿ ಬಿಚ್ಚಿ ಮಾತಾಡತೊಡಗಿದರು. ತಮಗೆ ಸ್ಪೂರ್ತಿ ತುಂಬಿ ಶಿಶು ಸಾಹಿತ್ಯಕ್ಕೆ ಒತ್ತು ನೀಡಲು ಪ್ರೇರೇಪಿಸಿದ ಬಹಳ ಮಂದಿ ಹಿರಿಯ ಸಾಹಿತಿಗಳನ್ನು ನೆನೆದರು.

“ಸರ್.. ನಿಮ್ಮ ಕೆಲವು ಪದ್ಯಗಳನ್ನು ವಾಚಿಸುತ್ತೀರ?” ಎಂದು ಆಸೆ ತೋರಿದೆ. ಹಾಡಿಯೂ ಬಿಟ್ಟರು!

‘ಹೀಗಿರಬೇಕು’ ಅನ್ನುವ ಕವನದ ಸಾಲುಗಳು ಮಧುರವಾಗಿ ಹಾಡಿದರು.

ಹೇಗೆ ವನದಲಿ
ಪಕ್ಷಿಯು ಕೂಡಿರುವಂತೆ
ಬಿಸಿಲು ಚಳಿ ಮಳೆ ತಾ ಸಹಿಸುತ
ದಿನವಿಡಿ ನಲಿವಂತೆ

ಚೆಲುವ ತಾರೆಗಳು
ಮುಗಿಲಲಿ ತಾವಿರುವಂತೆ
ಎನಿತ್ತೊ ಕತ್ತಲೆ ಇದ್ದರೂ ಬಾನಲಿ
ಚಕಮಕ ಹೊಳೆವಂತೆ

ಹೀಗೆ ಪ್ರಕೃತಿಯ ಉದಾಹರಣೆಗಳನ್ನು ಕೊಡುತ್ತಾ ಹಾಡು ಮುಗಿಸಿದರು,

ಇವುಗಳ ಹಾಗೆ ಯಾರು ಇರುವರೊ
ಅವರ ಬಾಳದು ಚಂದ
ಅವರ ಹೆಸರು ಬೆಳಗಿದೆ ಜಗದಲಿ
ಬಲು ಒಲುಮೆಯಿಂದ

ಹಾಗೆಯೆ ಮತ್ತೊಂದು ಕವನ ಹಾಡಿದರು,

ಅಮ್ಮ ನನಗೆ ರೆಕ್ಕೆ ತೊಡಿಸು
ಹಾರುವೆ ನಾ ನಭಕೆ
ನನಗೆ ಆಗಿದೆ ಮುಗಿಲು ಸುತ್ತುವ
ಅಂದಚಂದದ ಬಯಕೆ

ಓಡುವ ಮೋಡದ ಜಾಡನು ಹಿಡಿದು
ಚಂದಿರ ಲೋಕಕೆ ಹೋಗಿ
ಅಲ್ಲಿ ಸುಂದರ ಮನೆಯನು ಕಟ್ಟಿ
ಕರೆಯುವೆ ನಿನ್ನನು ಕೂಗಿ!

ನನ್ನ ಕೇಳುವ ಉತ್ಸಾಹ ಕಂಡು  ‘ಅಪ್ಪ’ ಅನ್ನುವ ಕವಿತೆಯನ್ನೂ ಹಾಡಿಬಿಟ್ಟರು.

ಮೇಲು ನೋಟಕೆ ಅಪ್ಪನು ಕಠಿಣ
ಪ್ರೀತಿ ಪ್ರೇಮಕೆ ಅಲ್ಲವೊ ಜಿಪುಣ
ಅವನು ನಮ್ಮನು ತೀಡುವ ರೀತಿ
ಅಮ್ಮನಂತಲ್ಲವು ಅವನದೇ ರೀತಿ

ಅಪ್ಪನು ಇರುವ ಹುಳಿ ಮೊಸರಿನ ಹಾಗೆ
ಅದಕಿದೆ ಹಾಲಿನ ಮೂಲದ ಒಸಗೆ
ಅಪ್ಪನು ತಾ ಎಳೆ ನೀರಿನ ಕಾಯಿ
ಹೊರಗಡೆ ಚಿಪ್ಪು ಒಳ ಸಿಹಿ ಬಾವಿ

’ಈ ಜಗ ಸೋಜಿಗ’  ಅನ್ನುವ ಕವನ ಎಷ್ಟು ಚೆಂದ ನೋಡಿ.

ಸುಂದರ ಸುಂದರ ಸುಂದರ ಈ ಜಗ
ಕಣ್ಣರಳಿಸಿ ನೋಡೋ
ಇದರೊಡಗೂಡಿ ಇದರೊಡನಾಡಿ
ನೀ ನಲಿದಾಡೊ!

ಸಮಯಕೆ ಸರಿಯೆ ಸೂರ್ಯನು ಮೂಡುವ
ಆ ಸೊಗಸನು ನೋಡೋ
ಮುಗಿಲ ರಂಗಿನ ಓಕುಳಿ ಆಟದ
ಸಂತಸವನು ಕೂಡೊ

’ಚಕ್ರ” ಅನ್ನುವ ಕವಿತೆ ಮಕ್ಕಳ ಯೋಚನೆಗಳನ್ನು ಗಹನಕ್ಕೆ ಹಚ್ಚುತ್ತದೆ.

ಸೂರ್ಯ ಚಂದ್ರ ಭೂಮಿ ಗ್ರಹಗಳು
ಇರುವುವು ದುಂಡು ದುಂಡು
ಚಕ್ರವಿರುವ ಯಂತ್ರ ಹುಟ್ಟಿದುವೆ
ಅವುಗಳ ಆಕಾರ ಕಂಡು !

ಕೇವಲ ಚಕ್ರ ಎನ್ನಲಿ ಬೇಡ
ಅವುಗಳು ಅದ್ಭುತ ಯಂತ್ರ
ಇವುಗಳ ಒಳಗೆ ತಾ ಅಡಗಿಹುದು
ಜಗದ ಪ್ರಗತಿಯ ತಂತ್ರ

ಪರೀಕ್ಷೆಯಲ್ಲಿ ನಕಲು ಮಾಡುವ ಬಗೆಗೂ ಅವರಿಂದ ಬೋಧನೆಯುಂಟು:

ನಕಲನು ಮಾಡುತ ಪಾಸಾಗುವುದು
ಮುಂದಿನ ವರ್ಗಕೆ ನೀ ಸಾಗುವುದು
ಸರಿಯಲ್ಲವು ಮಗು ಇಂತಹ ಕೆಲಸ
ಕಠಿಣವಾಗುವುದು ಮುಂದಿನ ದಿವಸ

ಬೆಣಕಲ್ ಜನಿಸಿದ್ದು ಬಾಗಲಕೋಟೆಯಲ್ಲಿ 7 ಮಾರ್ಚ್ 1947ರಲ್ಲಿ.  ಆದರೆ, 2017ರಲ್ಲಿ ಹುಟ್ಟಿದ ಮಗುವಿನೊಂದಿಗೂ ಸ್ನೇಹಿಯಾಗುವ ಮುಗ್ಧತೆ ಮತ್ತು ಲವಲವಿಕೆ. ಪದವೀಧರರಾದ ಅವರು ಸರ್ಕಾರೀ ನೌಕರಿಯಲ್ಲಿದ್ದವರು.  ಈಗ ಬೆಂಗಳೂರಿನಲ್ಲಿ ತಮ್ಮ ಮಕ್ಕಳೊಂದಿಗೆ ಸುಖೀ ಜೀವನ ಸಾಗಿಸುತ್ತಿದ್ದಾರೆ. ನಲ್ವತ್ತಕ್ಕೂ ಹೆಚ್ಚಿನ ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಕವನ, ಕತೆ, ರೋಚಕ ಪ್ರಸಂಗಗಳು, ಒಗಟುಗಳು ಹೀಗೆ ಮಕ್ಕಳ ಆಸಕ್ತಿ ತಣಿಸುವ ಬರಹಗಳು ಅವರಿಂದ ರಚನೆಗೊಂಡಿವೆ.

ಬೆಣಕಲ್ ಅನೇಕ ಪುರಸ್ಕಾರಗಳಿಗೆ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.  ಅವರ ’ಅನ್ನ ಜೇನು’ ಕೃತಿಗೆ ರಾಷ್ಟ್ರಕವಿ ಕುವೆಂಪು ಪುರಸ್ಕಾರ, ಹುಬ್ಬಳ್ಳಿ ಮೂರುಸಾವಿರ ಮಠ ಗ್ರಂಥ ಪುರಸ್ಕಾರ  ಇತ್ಯಾದಿ.  ಇವರ ಅನೇಕ ಕತೆ, ಕವನಗಳು ಕರ್ನಾಟಕದ ಪ್ರಸಿದ್ಧ ಪತ್ರಿಕೆಗಳಲ್ಲಿ 1970ರಿಂದಲೇ ಪ್ರಕಟವಾಗಿವೆ. ಇವರ ಕವನಗಳು ಮಹಾರಾಷ್ಟ್ರ ರಾಜ್ಯ ಕನ್ನಡ ಪ್ರಾಥಮಿಕ ಪುಸ್ತಕಗಳಲ್ಲಿ ಮತ್ತು ಕರ್ನಾಟಕದ ಸರ್ವಶಿಕ್ಷಣ ಅಭಿಯಾನದ ಪ್ರಾಥಮಿಕ ಕಲಿಕೆಯ ಪುಸ್ತಕಗಳಲ್ಲಿ ಪಠ್ಯಗಳಾಗಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಇವರ ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದೆ.

ಚೆನ್ನವೀರ ಕಣವಿ, ಎನ್ಕೆ, ಸಿದ್ಧಯ್ಯಪುರಾಣಿಕ, ಜಂಬಣ್ಣ ಅಮರಚಿಂತ ಮುಂತಾದ ಅನೇಕ ಸಾಹಿತಿಗಳು ಬೆಣಕಲ್ಲರ ಶಿಶುಸಾಹಿತ್ಯವನ್ನು ಪ್ರಶಂಸಿಸಿದ್ದಾರೆ. ಚೆನ್ನಣ್ಣ ವಾಲೀಕಾರರು ಶಿಶು ಸಾಹಿತ್ಯದ ಬಗೆಗೆ ತನಗೆ ಉತ್ಸಾಹ ತುಂಬಿದ್ದನ್ನು ಬೆಣಕಲ್ ನೆನೆಯುತ್ತಾರೆ.  ಯಾವಾಗಲೂ ಚಟುವಟಿಕೆಯಿಂದಿರುವ, ಸಂಚಾರವನ್ನು ಇಷ್ಟಪಡುವ ಮತ್ತು ಎಡೆಬಿಡದೆ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವರ ಜೀವನ ಶೈಲಿ ಅನುಕರಣೀಯ.

ಮಕ್ಕಳ ದಿನಾಚರಣೆಯ ಸಂದರ್ಭಕ್ಕೆಂದೇ ಅವರು ಅನೇಕ ಕವನ ಮತ್ತು ಕತೆಗಳ ಪುಸ್ತಕಗಳನ್ನು ಓದಲು  ಕೊಟ್ಟರು.  ನನ್ನ ಗಮನ ಸೆಳೆದ ಕೆಲವು ಕವನದ ಸಾಲುಗಳನ್ನು ಇಲ್ಲಿ ಮತ್ತೆ ಓದೋಣ.

ನಮ್ಮ ಬುದ್ಧಿ ನಮ್ಮ ಕೈಯಲ್ಲಿರಬೇಕು ಅನ್ನುವುದನ್ನು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ:

ನರಿಯೊಂದು  ಮಾಡ ಬಂದರೆ ಉಪದೇಶ
ಮನೆಯ ಕೋಳಿಯೆಡೆ ಗಮನವಿಡು ವಿಶೇಷ !

ನಮ್ಮ ಅಭಿರುಚಿ ಹೇಗಿರಬೇಕು?

ಸಾಹಿತ್ಯ ಸಂಗೀತ ಕಲೆ ಅರಿಯದವನು
ಕೋಡು ಬಾಲ ಇರದ ಪಶುವಂತೆ ಅವನು

ಮಕ್ಕಳು ಮನೆಯಲ್ಲಿ ನಲಿದರೆ:

ಮಗುವಿನ ನಗೆ ಇರಲು ಮನೆಯಲ್ಲಿ
ಬೇರೆ ದೀಪವು ಬೇಕು ಎನಿಸದು ಅಲ್ಲಿ

ಮಾಡಿದ ತಪ್ಪುಗಳ ಬಗೆಗೆ ನಾವು ಹೇಗಿರಬೇಕು ಅನ್ನುವುದರ ಬಗೆಗೆ:

ತಪ್ಪುಗಳ ಒಪ್ಪುತಲಿ ತಿದ್ದಿಕೊಳ್ಳುವವನು
ಬದುಕಿನಲಿ ಯಶವನ್ನು ನಿಜದಿ ಕಾಂಬುವನು

ಸರಳ ಮತ್ತು ಕುತೂಹಲ ಮೂಡಿಸುವ ಬರವಣಿಗೆ ನೀತಿ ಪೂರ್ವಕವಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ, ತ್ಯಾಗ, ದೇಶಭಕ್ತಿ, ಹಿರಿಯರಲ್ಲಿ ಗೌರವ, ಶ್ರದ್ಧೆಗಳನ್ನು ಮೂಡಿಸಬೇಕು.. ಇದು ಮಕ್ಕಳ ಸಾಹಿತ್ಯ ಧರ್ಮ ಅನ್ನುತ್ತಾರೆ ಬೆಣಕಲ್. ಇಂದಿನ ಮಕ್ಕಳಿಗೆ ಕನ್ನಡ ಪುಸ್ತಕಗಳ ಅಭಿರುಚಿ ಮತ್ತು ಅಂಥಹ ವಾತಾವರಣ ಸೃಷ್ಟಿಮಾಡಿಕೊಡುವ ಜವಾಬ್ದಾರಿ ಮನೆಯ ಹಿರಿಯರಲ್ಲಿ ಬರಬೇಕೆನ್ನುವುದು ಅವರ ಕಳಕಳಿ.

ಈಗಿನ ಮಕ್ಕಳ ಕುತೂಹಲದ ಪರಿಧಿ ಬಹಳ ದೊಡ್ಡದಿದೆ.  ಅವರ ಜಿಜ್ಞಾಸೆಗಳಿಗೆ  ಮತ್ತು ಪರಿಷ್ಕೃತ ಅಭಿರುಚಿಗಳಿಗೆ ಸಮಾಧಾನ ಕೊಡುವ ಸಾಹಿತ್ಯ ಸೃಷ್ಟಿಮಾಡುವ ಗುರುತರ ಜವಾಬ್ದಾರಿ ಮಕ್ಕಳ ಸಾಹಿತಿಗಳಿಗಿದೆ ಎಂದು ಅವರ ಅಭಿಪ್ರಾಯ.

ಇತ್ತೀಚೆಗೆ ‘ಭಕ್ತಿ-ಸರಸ’ ಅನ್ನುವ ಅಧ್ಯಾತ್ಮ ಚಿಂತನದ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದು, ಸಾಹಿತ್ಯ ಪ್ರಪಂಚದ ನಿರಂತರ ಪಯಣಿಗರಾಗಿದ್ದಾರೆ.  ಮಕ್ಕಳಿಗೆ ಮತ್ತಷ್ಟು ಕೃತಿಗಳು ಅವರಿಂದ ರಚನೆಯಾಗಲಿ ಅನ್ನುವ ಆಸೆ.  ಕನ್ನಡ ಓದುವ ಮಕ್ಕಳು ನಮ್ಮ ಸಂಸ್ಕೃತಿಯನ್ನರಿವ ಪ್ರತಿಭಾಶಾಲಿಗಳಾಗುತ್ತಾರೆ ಎಂದು ಬೆಣಕಲ್ ನಂಬುತ್ತಾರೆ.

ಅವರ ಕವಿತೆಯೊಂದರ ಸಾಲುಗಳಿಂದಲೇ ಅಭಿವಾದನ ಮಾಡೋಣ.

ಏನಾದರೂ ನೀ ಆಗುವದಿದ್ದರೆ
ಬೆಳಗುವ ಜ್ಯೋತಿಯು ಆಗು
ಸುತ್ತಲು ಹರಡಿಹ ಕತ್ತಲೆಯನ್ನು
ಬೆಳಕಿನ ರೂಪದಿ ನೀಗು

ಬೆಳಗಿ ಬೆಳಗುತ ಆ ರವಿಯಂತೆ
ಸೇವೆಯ ಕಾರ್ಯದಿ ಮಾಗು
ಜಗದಲಿ ಹರಡಿಹ ಹಿರಿತಮವನ್ನು
ರವಿಯ ಬೆಳಕಿನೊಲು ನೀಗು

 

 

– ಅನಂತ ರಮೇಶ್ 

3 Responses

  1. Hema says:

    ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಶ್ರೀ ಗುರುರಾಜ ಬೆಣಕಲ್ ಅವರಿಗೆ ಗೌರವಪೂರ್ವಕವಾದ ನಮನಗಳು. ಲೇಖಕರು ಅವರನ್ನು ಪರಿಚಯಿಸಿದ ಪರಿ ಆತ್ಮೀಯವಾಗಿದೆ.

  2. ಧನ್ಯವಾದಗಳು.

  3. ಉದಯಕುಮಾರ ಹಬ್ಬು says:

    ಗುರುರಾಜ ಬೆಣಕಲ್ ಎಂಬ ಖ್ಯಾತ ಮಕ್ಕಳ ಕವಿತೆ ಯನ್ನು ಬರೆಯುವ ಸವ್ಯಸಾಚಿಯನ್ನು ಅಚ್ಚುಕಟ್ಟಾಗಿ ಪರಿಚಯಿಸಿದ್ದೀರಿ. ಅವರ ಕವಿತೆಗಳನ್ನು ಓದಲು ನಿಮ್ಮ ಈ ಲೇಖನ ಪೂರಕ. ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: