‘ಕರಿ’ಘಟ್ಟವನ್ನು ಹಸಿರುಬೆಟ್ಟವನ್ನಾಗಿಸೋಣ

Share Button

 

ಭಾನುವಾರ (19/11/2017), ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಇಂಡಿಯಾದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕರಿಘಟ್ಟ ಬೆಟ್ಟಕ್ಕೆ ಪುಟ್ಟ ಚಾರಣ ಹಾಗೂ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯರಾದ ಶ್ರೀ ರಮೇಶ್ ಅವರು ಕರಿಘಟ್ಟದಲ್ಲಿ  ಸ್ವಯಂಪ್ರೇರಿತರಾಗಿ  ಸಸಿಗಳನ್ನು ನೆಟ್ಟು, ನೀರೆರೆದು ಪೋಷಿಸಿದ್ದಾರೆ. ಇತ್ತೀಚೆಗೆ ಅವರ ಸಾರ್ಥಕ ಶ್ರಮದ  ಬಗ್ಗೆ ಕೆಲವು ಮಾಧ್ಯಮಗಳಲ್ಲಿ ತಿಳಿದ ಹಿನ್ನೆಲೆಯಲ್ಲಿ, ಅವರನ್ನು ಸಂಪರ್ಕಿಸಿದ್ದೆವು.

ರಮೇಶ್ ಅವರು ನಿಸ್ವಾರ್ಥವಾಗಿ,  ವರುಷಕ್ಕೆ ಇನ್ನೂರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ಇದುವರೆಗೆ ಸುಮಾರು ಆರುನೂರಕ್ಕೂ ಹೆಚ್ಚು ಗಿಡಗಳು ಬೆಳೆದಿವೆ, ಬೆಳೆಯುತ್ತಾ ಇವೆ. ಎಲ್ಲಾ ಗಿಡಗಳಿಗೂ ಖಾಲಿ ಬಾಟಲ್ ಗಳನ್ನು ಕಟ್ಟಿ ಹನಿ ನೀರಾವರಿ ಅಳವಡಿಸಿ ಕಾವೇರಿ ನದಿಯಿಂದ ನೀರನ್ನು ಹೊತ್ತು ತಂದು ಬಾಟಲ್ ಗಳಿಗೆ ತುಂಬಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಹೆಚ್ಚಿನ ಗಿಡಗಳ ಬುಡದಲ್ಲಿ ಔಷಧೀಯ ಗುಣಗಳುಳ್ಳ ಮೂಲಿಕಾಸಸ್ಯಗಳನ್ನೂ ನೆಟ್ಟಿದ್ದಾರೆ. ಕೆಲವು ಗಿಡಗಳ ರೆಂಬೆಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ಅವುಗಳಲ್ಲಿ ಸಿರಿಧಾನ್ಯಗಳನ್ನಿಟ್ಟು ಪಕ್ಷಿಗಳಿಗೂ ಆಹಾರ ಒದಗಿಸುವ ವ್ಯವಸ್ಥೆ ಹಾಗೂ ಇನ್ನು ಕೆಲವು ಗಿಡಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಬರಹಗಳುಳ್ಳ ಫಲಕಗಳನ್ನೂ ಜೋಡಿಸಿರುವುದು ಕಂಡುಬಂತು. ಇವೆಲ್ಲದರ ಜೊತೆಗೆ, ಆಕ್ಕಪಕ್ಕದ ಗ್ರಾಮಗಳಲ್ಲಿ, ಬೆಟ್ಟಕ್ಕೆ ಬೆಂಕಿ ಹಚ್ಚುವುದರಿಂದ ಆಗುವ ಪರಿಸರ ಹಾನಿಯ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚುವ ಕೆಲಸವನ್ನೂ ಮಾಡಿ ಸ್ಥಳೀಯರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.

ಸ್ನಾತಕೋತ್ತರ ಪದವೀಧರರಾಗಿರುವ ಇವರ ವೃತ್ತಿ ,  ಕುಡಿಯುವ ನೀರಿನ ಬಾಟಲಿಗಳನ್ನು  ಸರಬರಾಜು  ಮಾಡುವುದು.  ಕನ್ನಡ ಸಾಹಿತ್ಯ ಹಾಗೂ ಹಾಡುಗಾರಿಕೆಯಲ್ಲಿಯೂ ಬಹಳ ಆಸಕ್ತಿಯುಳ್ಳವರು.  ಅವರು ನಿರುಪಯುಕ್ತವಾದ ಖಾಲಿ ಬಾಟಲಿಗಳಿಗೆ ಪುಟ್ಟ ಪೈಪ್ ಗಳನ್ನು ಅಳವಡಿಸಿ ಗಿಡಗಳಿಗೆ  ಹನಿ ನೀರಾವರಿ ಮಾಡುತ್ತಿರುವ ವಿಶಿಷ್ಟ ಶೈಲಿ ಅನುಕರಣೀಯ. ನೀರಿನ ಮಿತವ್ಯಯದ ಜೊತೆಗೆ ಅತ್ಯುತ್ತಮವಾಗಿ ಪ್ಲಾಸ್ಟಿಕ್ ಕಸದ ಮರು ಉಪಯೋಗವೂ ಆಗುತ್ತದೆ. ಪ್ರತಿ ದಿನ ಕನಿಷ್ಟ ಮೂರು ಗಂಟೆಗಳ ಕಾಲ  ಸಸಿಗಳ  ಪೋಷಣೆಯಲ್ಲಿ  ಕಳೆಯುವ ಇವರನ್ನು  ಮಾತನಾಡಿಸಿದಾಗ  ಹಲವಾರು ಔಷಧೀಯ ಗುಣಗಳುಳ್ಳ ಮೂಲಿಕಾಸಸ್ಯಗಳನ್ನು ಪರಿಚಯಿಸಿದರು.

ಹತ್ತು ಜನರಿದ್ದ ನಮ್ಮ ತಂಡವು ರಮೇಶ್ ಅವರ  ನೇತೃತ್ವದಲ್ಲಿ, ಅವರು ಅಲ್ಲಿಗೆ ತರಿಸಿಟ್ಟಿದ್ದ ಕೊಟ್ಟಿಗೆ ಗೊಬ್ಬರವನ್ನು ಬಾಂಡಲಿಗಳಲ್ಲಿ ಎತ್ತಿ ನೂರೈವತ್ತೂ ಹೆಚ್ಚು  ಗಿಡಗಳಿಗೆ ಹಾಕಿದೆವು. ಬೆಳಗ್ಗೆ ಸುಮಾರು ಮೂರುಗಂಟೆಗಳ ಕಾಲ, ನಾವು ಇದುವರೆಗೆ ಮಾಡಿರದ  ಈ ರೀತಿಯ ಶ್ರಮದಾನದಿಂದಾಗಿ ದಿಂದ ಶರೀರಕ್ಕೆ ಸ್ವಲ್ಪ ಸುಸ್ತಾಗಿದ್ದರೂ ಮನಸ್ಸಿಗೆ ಬಹಳ ಮುದವಾಗಿತ್ತು.


ಅಲ್ಲಿಯೇ ಊಟ-ತಿಂಡಿಯನ್ನು ಪೂರೈಸಿ , ಕರಿಘಟ್ಟದಲ್ಲಿರುವ ಶ್ರೀನಿವಾಸ-ಪದ್ಮಾವತಿ ದೇವಾಲಯಕ್ಕೂ ಭೇಟಿ ಕೊಟ್ಟೆವು.  ಇಲ್ಲಿನ ಶ್ರೀನಿವಾಸ ಮೂರ್ತಿಯನ್ನು  ಭೃಗು ಮಹರ್ಷಿಯು ಸ್ಥಾಪಿಸಿದರೆಂಬ ನಂಬಿಕೆಯಿದೆ. ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುತ್ತಿರುವಾಗ ಬೆಟ್ಟದ ಭಾಗವೊಂದು ಇಲ್ಲಿ ಬಿದ್ದ ಕಾರಣ ಇಲ್ಲಿ ಬಹಳಷ್ಟು ಔಷಧೀಯ ಸಸ್ಯಗಳಿವೆ ಎಂಬ ಪ್ರತೀತಿಯೂ ಇದೆ. ಅನತಿ ದೂರದಲ್ಲಿ ಚಾರಣಾಸಕ್ತರಿಗಾಗಿ ಪುಟ್ಟ ಬೆಟ್ಟವೊಂದಿದೆ.  ಅದನ್ನೇರಿದಾಗ ಕಾಣಸಿಗುವ ಸುತ್ತುಮುತ್ತಲಿನ ದೃಶ್ಯಗಳು ಬಲು ಸೊಗಸು. ದೂರದಲ್ಲಿ ಕಾಣಿಸುವ ಕಾವೇರಿ ನದಿಯ ತಟದಿಂದ ಬೀಸಿ ಬರುವ ತಂಗಾಳಿ ಬೆಟ್ಟಹತ್ತಿ ಬಂದ ಆಯಾಸವನ್ನು ಪರಿಹರಿಸುತ್ತದೆ. ಪ್ರಕೃತಿಯ ಶುದ್ಧ ಪರಿಸರದಲ್ಲಿ  ಆಗಾಗ ಸ್ವಲ್ಪ ಕಾಲ ಕಳೆದರೆ ಆರೋಗ್ಯವೃದ್ಧಿಯಾಗುವುದಂತೂ ಖಚಿತ.

ಮರಗಿಡಗಳು ನಮಗೆ ಯಾಕೆ ಬೇಕು? ಫಲವಸ್ತುಗಳನ್ನು ತಿನ್ನಲು, ಮಣ್ಣಿನ ಕೊರೆತವನ್ನು ತಡೆಯುವುದು, ಮನೆಕಟ್ಟಲು ಬೇಕಾದ ಮರಮಟ್ಟುಗಳನ್ನು ಪಡೆಯುವುದು….ಇತ್ಯಾದಿ ಕಣ್ಣಿಗೆ ಕಾಣುವ ನೂರಾರು ಕಾರಣಗಳನ್ನು ಕೊಡಬಹುದು. ಆದರೆ ಕಣ್ಣಿಗೆ ಕಾಣದ,  ಉಸಿರಾಡಲು ಅವಶ್ಯವಾದ ಶುದ್ಧ ಆಮ್ಲಜನಕವನ್ನು ಪಡೆಯಲು ಎಂಬುದು ಅತಿಮುಖ್ಯವೆನಿಸುತ್ತದೆ. ಇತ್ತೀಚೆಗೆ ಚೀನಾ ದೇಶದಲ್ಲಿ ಅತಿಯಾದ ವಾಯುಮಾಲಿನ್ಯದಿಂದಾಗಿ ಶುದ್ಧ ಆಮ್ಲಜನಕವನ್ನು ಕೂಡಾ ಮಾರಾಟ ಮಾಡುವ ಸಂದರ್ಭ ಸೃಷ್ಟಿಯಾಗಿತ್ತೆಂದು   ಓದಿದ್ದೇವೆ. ಭಾರತದಲ್ಲಿ ಈ ಪರಿಸ್ಥಿತಿ ಬಾರದಂತೆ ತಡೆಯಲು ಅತಿ ಸುಲಭದ ಉಪಾಯವೆಂದರೆ ಕಾಡನ್ನು ಬೆಳೆಸುವುದು. ಈ ನಿಟ್ಟಿನಲ್ಲಿ  ರಮೇಶ್ ಅವರ ನೈಜ ಕಾಳಜಿ ಮತ್ತು ಶ್ರದ್ಧೆಗೆ ಪ್ರಣಾಮಗಳು.

ನಮ್ಮ  ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವಾಕಾಂಕ್ಷೆಯ, ದೂರದರ್ಶಿತ್ವವುಳ್ಳ ಘನಯೋಜನೆಗಳಿಗೇನೂ  ಬರವಿಲ್ಲ. ಆದರೆ ಅವುಗಳನ್ನು ಜಾರಿಗೆ ತರುವಲ್ಲಿ ಇರುವ ವಿವಿಧ ಆಯಾಮಗಳ ಕಾರ್ಯವೈಫಲ್ಯಗಳು “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?” ಎಂಬಷ್ಟೇ ನಿಚ್ಚಳ.  ಸ್ವಯಂಪ್ರೇರಣೆಯಿಂದ ಏನಾದರೂ ಉತ್ತಮ ಸಾಮಾಜಿಕ ಕೆಲಸ ಮಾಡಲು ಹೊರಟವರನ್ನು ಅನುಮಾನದಿಂದಲೇ ನೋಡುವ ಮನಸ್ಸುಗಳೂ ಸಾಕಷ್ಟಿವೆ. ಹೀಗಿದ್ದರೂ, ಛಲ ಬಿಡದೆ, ಪ್ರಕೃತಿಯನ್ನು ಉಳಿಸಬೇಕೆಂಬ ಏಕೈಕ ಉದ್ದೇಶದಿಂದ ನಿಸ್ವಾರ್ಥವಾಗಿ ತಾನೇ ಕೈಯಾರೆ ಗಿಡ ನೆಟ್ಟು, ಪೋಷಿಸಿ ‘ಕರಿ’ಘಟ್ಟವನ್ನು ‘ಹಸಿರು’ಘಟ್ಟ ಮಾಡಬೇಕೆಂದು ಹಂಬಲಿಸುವ ರಮೇಶ ಅವರ ಪ್ರಯತ್ನಕ್ಕೆ ಸಾರ್ವಜನಿಕರು ಮತ್ತು ಕಾರ್ಪರೇಟ್ ಸಂಸ್ಥೆಗಳು  ಕೈಜೋಡಿಸಿದರೆ ಆವರ ಕನಸು ಶೀಘ್ರವೇ ನನಸಾಗುವುದರಲ್ಲಿ ಸಂಶಯವಿಲ್ಲ.

ವಿಶ್ವ ಪರಿಸರ ದಿನವೆಂದು ಆಚರಿಸಲಾಗುವ ಜೂನ್ 5 ರಂದು  ಶಾಲಾಕಾಲೇಜುಗಳು, ಸಂಘಸಂಸ್ಥೆಗಳು ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಇದು ಉತ್ತಮ ಪ್ರಯತ್ನವಾದರೂ, ಜನವಸತಿ ಇರುವ ಸ್ಥಳಗಳಲ್ಲಿ ನೆಡಲಾದ ಗಿಡಗಳಿಗೆ ಪ್ರಚಾರ ಹೆಚ್ಚು, ಆಯುಸ್ಸು ಕಡಿಮೆ ಎಂಬುದು ಕಟುವಾಸ್ತವ! ಪ್ರತಿ ಊರಿನಲ್ಲಿಯೂ ಗುಡ್ಡ ಬೆಟ್ಟಗಳಿರುತ್ತದೆ. ಆಧುನಿಕ ಜೀವನಶೈಲಿಯ ಅನಿವಾರ್ಯತೆಗಳಿಗಾಗಿ ಹಲವಾರು ಮರಗಳನ್ನು ಕಡಿಯಲಾಗಿರುತ್ತದೆ.  ಸ್ಥಳೀಯ ಸಹೃದಯರು ಬಿಡುವು ಮಾಡಿಕೊಂಡು, ಜನದಟ್ಟಣೆಯಿಂದ ದೂರವಿರುವ ಸ್ಥಳಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ಬೆಳೆಸಿದರೆ  ವರ್ಷವಿಡೀ ವನಮಹೋತ್ಸವವಾಗಬಲ್ಲುದು.
.

ಹೇಮಮಾಲಾ.ಬಿ, ಮೈಸೂರು

6 Responses

  1. Shruthi Sharma says:

    ರಮೇಶ್ ಅವರ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿ ಮಾದರಿಯಾದ ನಿಮಗೆಲ್ಲ ಅಭಿನಂದನೆಗಳು. ಚೆಂದದ ಬರಹ.

  2. V R Sharma says:

    ಒಳ್ಳೆಯ ಕೆಲಸ ಪ್ರಕೃತಿ mathu ಪಕ್ಷಿ ಸಂಕುಲ ಸಂರಕ್ಷಣೆ ದೇವರು ಮೆಚ್ಚುವ ಕೆಲಸ

  3. ಪ್ರಕೃತಿಗೆ ನಾವು ಬೇಡ. ಆದರೆ ಪ್ರಕೃತಿ ನಮಗೆ ಬೇಕು. ಇದನ್ನು ಅರಿತು ಕಾಡುಕಟ್ಟುತ್ತಿರುವ ರಮೇಶ್ ಅವರ ಸಾಧನೆ ಶ್ಲಾಘನೀಯ. ಅವರನ್ನು ಹುರಿದುಂಬಿಸಿ ಕೈಜೋಡಿಸುವ ನಿಮ್ಮ ಪ್ರಯತ್ನ ಹಲವರಿಗೆ ಸ್ಫೂರ್ತಿಯಾಗಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: