ಶಾರ್ಜಾದಲ್ಲಿ ಕನ್ನಡ ಕಲರವ..
ನವೆಂಬರ್ ತಿಂಗಳು ಬಂತೆಂದರೆ, ತಿಂಗಳಿಡೀ ಯು.ಏ.ಈ ಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದ ಹಬ್ಬ. ತಾಯಿ ಭುವನೇಶ್ವರಿಯನ್ನು ನೆನೆಯುವ ಹಬ್ಬ.ಕನ್ನಡ ಕಲರವದ ಝೇಂಕಾರ. ಹೌದು ಇದಕ್ಕೆ ಸಾಕ್ಷಿಯಾದದ್ದು ಶುಕ್ರವಾರ 17 ನವಂಬರ್ 2017 ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ 62 ನೆಯ ರಾಜ್ಯೋತ್ಸವ ಕಾರ್ಯಕ್ರಮ ಹಾಗು 15ನೆಯ ವಾರ್ಷಿಕೋತ್ಸವ ಸಮಾರಂಭ.
ಶುಕ್ರವಾರ ಸಂಜೆ 4:00 ರಿಂದ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಭವ್ಯ ಸಭಾಂಗಣದಲ್ಲಿ ಕನ್ನಡಿಗರ ಚಿಲಿಪಿಲಿಯೊಂದಿಗೆ ಕರ್ನಾಟಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗು ಸದಸ್ಯರೊಂದಿಗೆ ಮಹಾ ಪೋಷಕರಾದ ಮಾರ್ಕ್ ಡೆನಿಸ್ ಡಿಸೋಜಾ ಇವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. ಎಂ .ಈ.ಮೂಳೂರು ಇವರು ಶುಭಾಶಯಗಳನ್ನು ಕೋರಿದರು.
ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ಊರಿನಿಂದ ಬಂದ ಗಾಯಕಿಯರು ಅನಿವಾಸಿ ಕನ್ನಡಿಗ ಗಾಯಕ ಗಾಯಕಿಯರು ತಮ್ಮ ಸುಶ್ರಾವ್ಯ ಕಂಠದಿಂದ ಅಧ್ಭುತವಾಗಿ ಹಾಡಿ ಸಭಿಕರನ್ನು ರಂಜಿಸಿದರು.ನಂತರ ನಡೆದ ನೃತ್ಯ ಸ್ಪರ್ಧೆಯು ‘ಕನ್ನಡಿಗರಿಂದ ಕನ್ನಡಿಗರಿಗಾಗಿ ‘ ಎಂಬ ಧ್ಯೇಯ ವಾಕ್ಯಕ್ಕೆ ಸ್ಪೂರ್ತಿಯಾಗಿತ್ತು. ಅತ್ಯುತ್ತಮ ಸ್ಪರ್ಧೆ ನೀಡಿದ್ದ ಎಲ್ಲ ತಂಡಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದು ಮಾತ್ರವಲ್ಲ ನಿರ್ಣಾಯಕರನ್ನು ಪೇಚಿಗೆ ಸಿಲುಕಿಸಿದ್ದರು.
ಇದೇ ಹೊತ್ತಿನಲ್ಲಿ ಈ ಕಾರ್ಯಕ್ರಮಕ್ಕೆ ನಿಂತ ಮಹಾಪೋಷಕರನ್ನು, ಪ್ರಾಯೋಜಕರನ್ನು, ಬೆಂಬಲವಾಗಿ ನಿಂತ ಮಹನೀಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ದುಬೈಯಲ್ಲಿ ನೆಲೆಸಿರುವ ಕವಿ ಇರ್ಷಾದ್ ಮೂಡಬಿದಿರೆ ಇವರ ಚುಟುಕುಗಳನ್ನು ವಾಚಿಸಿ ಗಣೇಶ್ ರೈ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ತದನಂತರ ಬಹುನಿರೀಕ್ಷೆಯ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಇವರ ನಿರ್ದೇಶನದಲ್ಲಿ ಯಕ್ಷಮಿತ್ರರು ದುಬಾಯಿ ಇದರ ಬಾಲಕಲಾವಿದರು ನಡೆಸಿಕೊಟ್ಟ “ದಾಶರಥಿ ದರ್ಶನ” ಯಕ್ಷಗಾನ ಅತ್ಯದ್ಭುತವಾಗಿ ಪ್ರದರ್ಶಿಸಲ್ಪಟ್ಟಿತು.ಊರಿನಿಂದ ಏಳು ಕಡಲಾಚೆ ಇದ್ದರೂ ನಾವು ಸಹ ಯಕ್ಷಗಾನದಲ್ಲಿ ಕಡಿಮೆ ಏನಲ್ಲ ಎಂದು ಈ ಬಾಲಕಲಾವಿದರು ರಂಗದಲ್ಲಿ ತೋರಿಸಿಕೊಟ್ಟರು.
.
ಒಂದು ಅತ್ಯುತ್ತಮ ಸರಳ ಸುಂದರ ವಿಜೃಂಭಣೆಯ ಅಧ್ಧೂರಿ ಅಮೋಘ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಇನ್ನು ಒಂದು ವರುಷ ಕಾಯಬೇಬೇಕಿದೆ ಎನ್ನುತ್ತಾ ಪ್ರೇಕ್ಷಕರು ತಡರಾತ್ರೆವರೆಗೂ ನಡೆದ ಕಾರ್ಯಕ್ರಮದ ಝಲಕ್ ನ್ನು ಮನಸ್ಸಿನಲ್ಲೇ ಮೆಲ್ಲುತ್ತಾ ತಮ್ಮತಮ್ಮ ಮನೆಗೆ ನಡೆದರು.
ಭಾಷೆಯೊಂದಕ್ಕೆ ಆಡುಗರೇ ಬೇರುಗಳು. ಅನಿವಾಸಿ ಕನ್ನಡಿಗರ ಕನ್ನಡಪ್ರೀತಿ ಕನ್ನಡಮರದ ಬೇರುಗಳಿಗೆ ಹೊಸಚೇತನ ಕೊಟ್ಟಂತೆ. ಹೀಗೆಯೇ ಇನ್ನಷ್ಟು ಕನ್ನಡಕಾರ್ಯಕ್ರಮಗಳು ವಿಶ್ವದಾದ್ಯಂತ ನಡೆಯುತ್ತಿರಲಿ, ಕನ್ನಡ ಬೆಳೆಯುತ್ತಿರಲಿ.