ಮರಳಿ ಬಾ ಮಾರ್ಜಾಲವೇ..
ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು ಹೈನುಗಾರಿಕೆಗಾಗಿ ಜಾನುವಾರುಗಳನ್ನೂ, ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ, ಪಾರಿವಾಳ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವ ಪದ್ಧತಿಯನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಬಳಗಕ್ಕೆ ಬೆಕ್ಕು ಯಾವ ಕಾಲದಲ್ಲೆ ಸೇರ್ಪಡೆಯಾಯಿತೋ ತಿಳಿಯದು. ಶ್ರೀ ಪುರಂದರ ದಾಸರು ರಚಿಸಿದ ‘‘ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ‘ ಕೀರ್ತನೆಯಲ್ಲಿ ‘ಅಡಿಗೆಮನೆಯಲ್ಲಿ ಗಡಬಡ’ ಬರುವುದು ಗಡಿಗೆ ಒಡೆದು ಹಾಲು-ಮೊಸರು ಕುಡಿಯುವ ಮಾರ್ಜಾಲದ ಪ್ರಸ್ತಾಪವಿದೆ. ಮನುಷ್ಯ ಮತ್ತು ಬೆಕ್ಕಿನ ನಡುವಿನ ಪ್ರೀತಿ ಎಷ್ಟೆಂದರೆ ‘ಮಾರ್ಜಾಲ ಕಾಟವನ್ನು ತಡೆಯಲಾರೆ ‘ ಎನ್ನುತ್ತಲೇ “ ಮೀಸಲಾಕಿದ ಹಾಲು ಪುರಂದರವಿಠಲಗೆ ಸೇರಿತು ಮಾಲು “ ಎಂಬ ಪೂಜ್ಯತೆಯನ್ನೂ ಕಲ್ಪಿಸಿದ್ದಾರೆ.
16 ನೇ ಶತಮಾನದಲ್ಲಿ ವಿಜಯನಗರದ ಅರಸರ ಆಸ್ಥಾನದಲ್ಲಿದ್ದ ವಿಕಟಕವಿ ತೆನಾಲಿ ರಾಮನು ‘ಬೆಕ್ಕು ಸಾಕಿದ ಕಥೆ’ ಬಹಳ ಪ್ರಸಿದ್ಧ. ಬೆಕ್ಕಿಗೆ ಹಾಲೆಂದರೆ ಪಂಚಪ್ರಾಣ. ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ’ ಎಂಬ ಗಾದೆ ಮಾತೂ ಚಾಲ್ತಿಯಲ್ಲಿದೆ. ಕಪಟತನದ ವ್ಯವಹಾರಗಳಿಗೆ ‘ಮಾರ್ಜಾಲ ನ್ಯಾಯ’ ಎಂಬ ವ್ಯಂಗ್ಯೋಕ್ತಿಯೂ ಇದೆ. ಬೆಕ್ಕು ಸಾಕುವವರು ಸಾಮಾನ್ಯವಾಗಿ ಸರಪಣಿಯಲ್ಲಿ ಕಟ್ಟಿ ಹಾಕುವುದಿಲ್ಲ. ತನಗೆ ದಕ್ಕಿದ ಸಂಪೂರ್ಣ ಸ್ವಾತಂತ್ರ್ಯವನ್ನು ಉಪಯೋಗಿಸಿ ಮುಕ್ತವಾಗಿ ಸುತ್ತಾಡುತ್ತಾ, ಅಕ್ಕ ಪಕ್ಕದ ಮನೆಗಳಿಗೂ ಭೇಟಿ ಕೊಡುತ್ತಾ, ಕೆಲವೊಮ್ಮೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಡುತ್ತದೆ.
ಕೆಲವು ವರ್ಷಗಳಿಂದ ಪ್ರತಿದಿನ ಬೆಳಗ್ಗೆ ನಮ್ಮ ಮನೆಗೆ ಎಲ್ಲಿಂದಲೋ ಒಂದು ಬೆಕ್ಕು ಬರುತ್ತದೆ. ಮುಂಜಾನೆ ಹಾಲು ಹಾಕಿಸಿಕೊಂಡು ತಪ್ಪಲೆ ಒಳಗಿಡುವ ಮೊದಲೇ ಮ್ಯಾಂ ಮ್ಯಾಂ ಅನ್ನುತ್ತಿರುತ್ತದೆ. ‘ಬೆಳಗ್ಗೆ ಬೆಕ್ಕಿನ ದರ್ಶನ ಅಶುಭ’ ಎಂಬ ನಂಬಿಕೆ ಇದ್ದರೂ, ಅದರ ಮೇಲೆ ಅಪರಿಮಿತ ಪ್ರೀತಿಯುಳ್ಳ ನಮ್ಮ ಮಗರಾಯನಿಗೆ ಬೆಕ್ಕಿನ ದರ್ಶನದಿಂದಲೇ ಶುಭೋದಯವಾಗುತ್ತಿತ್ತು . ‘ಮ್ಯಾಂ ಮ್ಯಾಂ’ ಸುಪ್ರಭಾತ ಕೇಳಿದೊಡನೆ ಥಟ್ಟನೇ ಎದ್ದು ಬೆಕ್ಕನ್ನು ಸ್ವಾಗತಿಸುತ್ತಿದ್ದ. ದಿನಾಲೂ ‘ಬೆಕ್ಕಿಗೆ ಹಾಲು ಹಾಕಿಯಾಯಿತಾ?‘ ಎಂದು ವಿಚಾರಿಸಿ . ‘ಆಗಿದೆ’ ಎಂದರೂ ಇನ್ನೊಮ್ಮೆ ಬೆಕ್ಕಿಗೆಂದೇ ಹೊರಗಡೆ ಇರಿಸಲಾದ ತಟ್ಟೆಗೆ ಹಾಲು ಸುರಿದು, ಚಕ್ಕುಲಿ ತಿನ್ನಿಸಿ. ಕಾಲೇಜಿಗೆ ಹೋಗುವ ಮುನ್ನ ಇನ್ನೊಮ್ಮೆ ಬೆಕ್ಕನ್ನು ಮಾತನಾಡಿಸಿ ಹೊರಟರೆ ಮಾತ್ರ ಅವನಿಗೆ ಸಮಾಧಾನ. ಇನ್ನೂ ಸ್ವಲ್ಪ ಸಮಯದ ನಂತರ ಅಪ್ಪನ ಸರದಿ. ಹೀಗೆ ಅಪ್ಪ-ಮಗನ ಸತ್ಕಾರ ಪಡೆಯುವ ಬೆಕ್ಕು, ಪುಷ್ಕಳವಾಗಿ ಹೊಟ್ಟೆ ತುಂಬಿಸಿಕೊಂಡು ಆರಾಮವಾಗಿ ಸ್ಕೂಟರ್ ಮೇಲೆಯೋ ಗೇಟ್ ನ ಬಳಿಯೋ ನಿದ್ರಿಸಿ, ಆಮೇಲೆ ಎಲ್ಲೋ ಹೋಗಿ ಮರುದಿನ ಬೆಳಗ್ಗೆ ಬರುತ್ತದೆ.
ಒಂದು ದಿನ ರಾತ್ರಿ ಮನೆಯ ಸ್ಟೋರ್ ರೂಮ್ ಕಡೆಯಲ್ಲಿ ಡಭ್ಭಿಗಳನ್ನು ತಡಬಡಾಯಿಸಿದ ಸದ್ದು ಕೇಳಿಸಿತು. ಪ್ರಾಣಿಯೊಂದು ಅತ್ತಿತ್ತ ಓಡಾಡಿದಂತಾಯಿತು. ಇಲಿ ಇರಬಹುದು ಅನಿಸಿತು. ಎದ್ದು ದೀಪದ ಸ್ವಿಚ್ ಹಾಕಿ ನೋಡಿದಾಗ ದೊಡ್ಡದಾದ ಹೆಗ್ಗಣವೊಂದು ಅತ್ತಿಂದಿತ್ತ ಓಡಾಡುತಿತ್ತು. ಇದು ಹೇಗೆ ಒಳಗೆ ಬಂತು… ಬೆಳಗಾದ ಮೇಲೂ ಅದು ಅಲ್ಲಿಯೇ ಇದ್ದರೆ, ಹೇಗಾದರೂ ಮಾಡಿ ‘ಹೆಗ್ಗಣ ಸಂಹಾರ’ ಮಾಡೋಣ ಎಂದು ಮಾತನಾಡಿಕೊಳ್ಳುತ್ತಾ, ಸ್ಟೋರ್ ರೂಮ್ ನ ಚಿಲಕ ಹಾಕಿದೆವು.
ಬೆಳಗ್ಗೆ ಸ್ಟೋರ್ ರೂಂ ನಲ್ಲಿ ಹೆಗ್ಗಣ ಇನ್ನೂ ಇರುವುದಕ್ಕೆ ಪುರಾವೆಯಾಗಿ ಓಡಾಡುವ ಸದ್ದು ಕೇಳುತ್ತಿತ್ತು. ಇದನ್ನು ಕೊಂದು ನಾವ್ಯಾಕೆ ಪಾಪ ಕಟ್ಟಿಕೊಳ್ಳಬೇಕು..ಹಾಗೆಂದು ಸುಮ್ಮನೆ ಬಿಟ್ಟರೆ ಅದು ಇಲ್ಲಿಯೇ ಬಿಡಾರ ಹೂಡಿದರೆ ಏನು ಮಾಡಲಿ ಎಂದು ಚಿಂತನ-ಮಂಥನ ಮಾಡುತ್ತಿರುವಾಗ ನಮ್ಮ ಮನೆಗೆ ದಿನಾ ಬರುವ ಬೆಕ್ಕಿನ ನೆನಪಾಯಿತು..
“ನಾವು ಹೆಗ್ಗಣವನ್ನು ಕೊಂದರೆ ಮನಸ್ಸಿಗೆ ಹಿಂಸೆ, ಆದರೆ ಬೆಕ್ಕು ಹಿಡಿದರೆ ತಪ್ಪೇನು ? ಅದರ ನೈಸರ್ಗಿಕ ಆಹಾರ ತಾನೇ…ಹೇಗೂ ಬೆಕ್ಕು ಬೆಳಗ್ಗೆ ಬರುತ್ತದೆ. ಅದನ್ನು ತಂದು ಸ್ಟೋರ್ ರೂಂ ನಲ್ಲಿ ಬಿಟ್ಟರಾಯಿತು.. ಹೆಗ್ಗಣವನ್ನು ಬೆಕ್ಕು ನೋಡಿಕೊಳ್ಳಲಿ ” ಎಂಬ ಪುಕ್ಕಟೆ ಸಲಹೆ ಕೊಟ್ಟೆ.ನನ್ನ ಸಲಹೆಯ ಮೇರೆಗೆ ನಮ್ಮ ಮನೆಯಯರು ಬೆಕ್ಕನ್ನು ಹಿಡಿದು ತಂದು ಸ್ಟೋರ್ ರೂಂ ನ ಬಾಗಿಲನ್ನು ಸ್ವಲ್ಪವೇ ಸರಿಸಿದರು. ಅಲ್ಲಿದ್ದ ಹೆಗ್ಗಣ ‘ಶ್ರ್..ಶ್ರ್..’ ಅಂದಿತು. ನಮ್ಮ ಬೆಕ್ಕು ಕೂಡ ಗುರಾಯಿಸಿತು, ಯಾಕೋ ಬೆಕ್ಕು ಸ್ವಲ್ಪ ಹೆದರುತ್ತಿದೆ ಅನಿಸಿತು. ಅದನ್ನು ಒಳಗಡೆ ಬಿಟ್ಟು, ಸ್ಟೋರ್ ರೂಮ್ ನ ಬಾಗಿಲು ಹಾಕಿದೆವು. ಒಳಗಡೆಯಿಂದ ಬೆಕ್ಕು-ಹೆಗ್ಗಣಗಳ ಜಗಳದ ಸದ್ದು ಕೇಳಿಸಿತು. ಸ್ವಲ್ಪ ಸಮಯದ ನಂತರ ನಿಶ್ಶಬ್ದ. ಅನುಮಾನವೇ ಇಲ್ಲ, ನಮ್ಮ ಬೆಕ್ಕು, ವೀರಾವೇಶದಿಂದ ಹೋರಾಡಿ ಹೆಗ್ಗಣವನ್ನು ಕೊಂದಿರಬೇಕು ಅನ್ನುತ್ತಾ, ಹೆಮ್ಮೆಯಿಂದ ಬಾಗಿಲು ತೆಗೆದೆವು.
ಇದಕ್ಕೇ ಕಾಯುತ್ತಿದ್ದಂತೆ, ಒಂದು ಪ್ರಾಣಿ ಸರಕ್ಕನೆ ನುಸುಳಿ ಪ್ರಾಣಭಯದಿಂದ ನಾಗಾಲೋಟದಲ್ಲಿ ಓಡಿತು. “ಹೋ ಹೆಗ್ಗಣ ತಪ್ಪಿಸಿಕೊಂಡಿತು, ಆದರೂ ಪರವಾಗಿಲ್ಲ, ನಮ್ಮ ಬೆಕ್ಕು ಸಾಕಷ್ಟು ಫೈಟ್ ಕೊಟ್ಟಿದೆ “ ಅಂತ ಸಮಾಧಾನಪಟ್ಟೆವು. ಬಾಗಿಲನ್ನು ಸಂಪೂರ್ಣವಾಗಿ ತೆಗೆದಾಗ ಏನಾಶ್ಚರ್ಯ! ಹೆಗ್ಗಣ ಮುದುಡಿ ಕುಳಿತಿತ್ತು! ಹಾಗಾದರೆ ಹೆದರಿ ಓಡಿ ಹೋದದ್ದು ಬೆಕ್ಕು ಎಂದು ಖಾತ್ರಿಯಾಯಿತು!! ಕೊನೆಗೆ ಆ ಹೆಗ್ಗಣವನ್ನು ಹೇಗೋ ಒಂದು ರಟ್ಟಿನ ಬಾಕ್ಸ್ ಸೇರುವಂತೆ ಮಾಡಿ ಹೊರಸಾಗಿಸಿದೆವು.
ಇದು ನನಗೆ ಹಾಸ್ಯದ ವಿಷಯವಾಯಿತು. ಮಗನ ಬಳಿ “ ನಿನ್ನ ಅಚ್ಛುಮೆಚ್ಚಿನ ಬೆಕ್ಕು ಬೆಚ್ಚಿ ಓಡಿ ಹೋಗಿದೆ. ಇದು ಬೆಕ್ಕಿಗೆ ಪ್ರಾಣಸಂಕಟ…ಹೆಗ್ಗಣಕ್ಕೆ ಆಟದ ಕೇಸ್. ಅತಿಯಾಗಿ ಹಾಲು, ಚಕ್ಕುಲಿ ಹಾಕಿ ಆರೈಕೆ ಮಾಡಿ ಬೆಕ್ಕಿಗೆ ತನ್ನ ಸಹಜ ಆಹಾರ ಮತ್ತು ಬೇಟೆ ಆಡುವುದು ಮರೆತೇ ಹೋಗಿದೆ ” ಎಂದೆ. ಆದರೆ ಇಂಜಿನಿಯರ್ ಮಗನು ” ಕೆಲವರು ಎವರೆಸ್ಟ್ ಹತ್ತಿದ್ದಾರೆ…ನಿಮ್ಮ ಕೈಲಾಗುತ್ತ? ಅವರವರ ತಾಕತ್ತು, ಅವರವರ ಇಷ್ಟ…..ನಮ್ಮ ಬೆಕ್ಕು ಬಹಳ ಸಾಧು…..ಅದನ್ನು ಮೆಚ್ಚಬೇಕು “ ಎಂದು ಬೆಕ್ಕಿನ ಪರವಾಗಿ ವಕಾಲತ್ತು ಆರಂಭಿಸಿದ. ”ಅನ್ಯಾಯವಾಗಿ ಬೆಕ್ಕಿನ ಮೇಲೆ ಈ ರೀತಿ ಪ್ರಯೋಗ ಮಾಡಿ, ನಾಳೆಯಿಂದ ಬೆಕ್ಕು ಬಾರದಿದ್ದರೆ ನೀವೇ ಕಾರಣ ” ಎಂದು ಧಮಕಿಯನ್ನೂ ಹಾಕಿದ.
ಉತ್ತಮ ಸಲಹೆ ಕೊಟ್ಟೆ ಎಂದು ಬೀಗುತ್ತಿದ್ದ ನನ್ನಹೆಮ್ಮೆಗೆ ಕವಡೆ ಕಾಸಿನ ಬೆಲೆ ಇಲ್ಲದಾಯಿತು. ಮರುದಿನದಿಂದ ಬೆಕ್ಕು ತನ್ನ ಎಂದಿನ ದಿನಚರಿಯನ್ನು ಶಿಸ್ತಿನಿಂದ ಪಾಲಿಸಿದೆ…. ಹಾಗಾಗಿ ನನ್ನ ಮೇಲಿನ ಆರೋಪ ವಜಾ ಆಗಿದೆ!
ಹೀಗಿರುವಾಗ, ನಾಲ್ಕು ತಿಂಗಳ ಹಿಂದೆ , ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ನಮ್ಮ ಮಗನು ಉತ್ತರಭಾರತದ ಕಾಲೇಜೊಂದಕ್ಕೆ ಪ್ರವೇಶ ಪಡೆದು ಅಲ್ಲಿಗೆ ಹೋಗಿ ಸೇರಿಯಾಯಿತು, ಇದು ಅವನ ಅಚ್ಚುಮೆಚ್ಚಿನ ಬೆಕ್ಕಿಗೆ ಅರ್ಥವಾಗದ ವಿಚಾರ. ಮಗ ಹಾಸ್ಟೆಲ್ ಗೆ ಸೇರಿದ ಆರಂಭದ ನಾಲ್ಕೈದು ದಿನಗಳಲ್ಲಿ, ಬೆಳಗ್ಗೆ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ತೀರಾ ಅವಸರದ ಕೆಲಸವಿರುವವರಂತೆ ಅವನ ಕೋಣೆಗೆ ಹೋಗಿ, ಗೊಂದಲದಿಂದ ‘ಮ್ಯಾಂ..ಮ್ಯಾಂ’ ಅನ್ನುತ್ತಾ ಅತ್ತಿತ್ತ ಬಹಳಷ್ಟು ಹುಡುಕಾಡಿ, ಕೊನೆಗೆ ನಿರ್ವಾಹವಿಲ್ಲದೆ ಒಂದೆಡೆ ಕೂತು ‘ಎಲ್ಲಿದ್ದಾನೆ ನನ್ನೊಡೆಯ’ ಎಂಬಂತೆ ನಮ್ಮನ್ನು ಪ್ರಶ್ನಾರ್ಥಕವಾಗಿ ದೈನ್ಯತೆಯಿಂದ ನೋಡುತ್ತಿತ್ತು. ಈಗ ಅದಕ್ಕೆ ವಿಷಯ ಅರ್ಥವಾದಂತಿದೆ. ಆದರೂ ದಿನಕ್ಕೊಮ್ಮೆ ಅವನ ಕೋಣೆಗೆ ಭೇಟಿ ಕೊಟ್ಟು ನಮ್ಮ ಮಗನನ್ನು ಹುಡುಕುತ್ತದೆ. ಬೆಕ್ಕಿಗೆ ತನ್ನನ್ನು ಸಾಕುವವರ ಮೇಲೆ ಅಭಿಮಾನವಿರುವುದಿಲ್ಲ ಎಂಬ ನಂಬಿಕೆಯೇ ಪ್ರಚಲಿತ. ಆದರೆ ಮಾರ್ಜಾಲಕ್ಕೂ ಸ್ವಾಮಿನಿಷ್ಠೆಯಿದೆ ಎಂದು ನಮಗೆ ಅನುಭವವಾಯಿತು.
ದೂರದ ರೂರ್ಕಿಯಲ್ಲಿರುವ ಮಗನು ಆಗಾಗ ತನ್ನ ಬೆಕ್ಕಿನ ಬಗ್ಗೆ ವಿಚಾರಿಸುವುದು, ನಾವು ಅದರ ಪೋಟೋ ತೆಗೆದು ಅವನಿಗೆ ವಾಟ್ಸಾಪ್ ನಲ್ಲಿ ಕಳುಹಿಸುವುದು ನಡೆಯುತ್ತಲೇ ಇತ್ತು. ಇಂತಿಪ್ಪ ಬೆಕ್ಕು ಕಳೆದ ಒಂದು ವಾರದಿಂದ ನಾಪತ್ತೆಯಾಗಿದೆ. ಮನೆಯಲ್ಲಿ ತನ್ನ ಒಡೆಯನಿಲ್ಲ ಎಂದು ಬೇಸರಿಸಿ ಎಲ್ಲಿಗಾದಾರೂ ಹೋಗಿದೆಯೇ, ಬೀದಿನಾಯಿಗಳ ಆಕ್ರಮಣಕ್ಕೆ ತುತ್ತಾಗಿದೆಯೇ ತಿಳಿಯುತ್ತಿಲ್ಲ. ಹಾಗಾಗಿ, ‘ಮರಳಿ ಬಾ ಮಾರ್ಜಾಲವೇ’ ಎಂದು ನಿವೇದಿಸಿಕೊಳ್ಳುತ್ತಿದ್ದೇನೆ! ‘
-ಹೇಮಮಾಲಾ.ಬಿ
ಪಾಪದ ಬೆಕ್ಕು! ಮತ್ತೇನಾಯಿತು? ಮನೆಗೆ ಬಂತೇ?
ಇಲ್ಲ… ಬಹುಶ: ಸತ್ತು ಹೋಗಿರಬೇಕು…ಬೆಕ್ಕುಗಳ ಆಯುಸ್ಸು ಕಡಿಮೆ.
ಓ… ಛೇ!