ಲಿಯೊನಾರ್ಡೋ ಡ ವಿನ್ಚಿ – ನಿಗೂಢ ಮುಗುಳ್ನಗೆಯ ಚಿತ್ರದ ಹಿಂದೆ

Share Button

ಲಿಯೊನಾರ್ಡೋ ಡ ವಿನ್ಚಿ

 

ಒಂದು ವೇಳೆ ಲಿಯೊನಾರ್ಡೋ ಡ ವಿನ್ಚಿಯವರು ತಮ್ಮ ‘ಮೊನಾಲಿಸ’ ಕಲಾಕೃತಿಯ ಕೆಳಗೆ ಕ್ಯಾನ್ವಾಸ್ ನಲ್ಲಿ, ಈ ಮಹಿಳೆ ತನ್ನ ಪ್ರಿಯಕರನಿಂದ ಏನನ್ನೋ ಮುಚ್ಚಿಡಲು ಮುಗುಳ್ನಗುತ್ತಿದ್ದಾಳೆಎಂದು ಬರೆದಿದ್ದರೆ, ಪ್ರಾಯಶಃ ಈ ನಿಗೂಢ ನಗೆಯ ಕುರಿತು ನೋಡುಗನ ಕಲ್ಪನೆಗಳು ಒಂದು ಕಡೆಯಲ್ಲಿ ಬಂಧಿತವಾಗುತ್ತಿತ್ತು. ಇದು ಒಬ್ಬ ವಿಮರ್ಶಕನ ಅನಿಸಿಕೆ ಮಾತ್ರ. ಆದರೆ, ಹಾಗಾಗಲಿಲ್ಲ. ಜಗತ್ತಿನ ಅತ್ಯಂತ ಚರ್ಚಿತ ತೈಲವರ್ಣ ಕಲಾಕೃತಿಯೆಂದರೆ ಡ ವಿನ್ಚಿಯ ಕುಂಚದಿಂದ ಬಂದ ಈ ಮಹಾನ್ ಚಿತ್ರ. ಲಿಯೊನಾರ್ಡೋ ಡ ವಿನ್ಚಿಯವರನ್ನು ಒಬ್ಬ ಕಲಾಕಾರರೆಂದು ಎಲ್ಲರೂ ಬಲ್ಲರು. ಆದರೆ ಇದು ಈ ಮಹಾನ್ ವ್ಯಕ್ತಿಯ ಸಾಧನೆಗಳ ಒಂದು ತುಣುಕು ಮಾತ್ರ. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಿಂದ ಅವರ ಕೈಯಾಡಿಸಿದ ಕ್ಷೇತ್ರಗಳನ್ನು ವಿವರಿಸಿದರೆ, ತೀರಾ ಸಪ್ಪಗೆ ಆಗುತ್ತದೆ. ಡ ವಿನ್ಚಿ ಒಬ್ಬ ಸಂಶೋಧಕ, ಒಬ್ಬ ಸಿವಿಲ್ ಇಂಜಿನಿಯರ್, ಒಬ್ಬ ಮಿಲಿಟರಿ ಇಂಜಿನಿಯರ್, ಒಬ್ಬ ಖಗೋಳಶಾಸ್ತ್ರಜ್ಞ, ಒಬ್ಬ ಅನೋಟೊಮಿಸ್ಟ್, ಒಬ್ಬ ಭೂವಿಜ್ಞಾನಿ ಅಲ್ಲದೇ ಒಬ್ಬ ವೈಮಾನಿಕ ಪ್ರವರ್ತಕ. ಈ ಉಪಾದಿಗಳೆಲ್ಲಾ ಒಬ್ಬರಲ್ಲೇ ಮಿಳಿತವಾಗಿದೆ.

ಲಿಯೊನಾರ್ಡೋ ಇಟಲಿಯ ವಿನ್ಚಿ ಎನ್ನುವ ಹಳ್ಳಿಯಲ್ಲಿ 1452 ರಲ್ಲಿ ಜನಿಸಿದರು. ಅವರ ತಂದೆಯವರು ಗ್ರಾಮದ ಅಧಿಕಾರಿ. ಶಾಲೆಗೆ ಹೋಗುತ್ತಿರುವಾಗಲೇ ಈ ಬಾಲಕ ಅತಿ ಕಷ್ಟದ ಗಣಿತಗಳನ್ನು ಸಲೀಸಾಗಿ ಬಿಡಿಸುತ್ತಿದ್ದರು. ಚಿಕ್ಕ ಪ್ರಾಯದಲ್ಲೇ ಗ್ರೀಕ್ ಸಾಹಿತ್ಯ, ತತ್ವ ಶಾಸ್ತ್ರ, ಗಣಿತ ಮತ್ತು ಶರೀರ ರಚನೆಗಳಲ್ಲಿ ಪರಿಣತಿ ಹೊಂದಿದ್ದ. ಲಿಯೊನಾರ್ಡೋ ಯುವಕನಾಗಿದ್ದಾಗ, ಇಟಲಿಯ ರಾಜ್ಯಗಳು ತಮ್ಮ ತಮ್ಮ ಅಧಿಪತ್ಯಕ್ಕಾಗಿ ನಿರಂತರ ಯುದ್ಧ ಕೃತ್ಯಗಳಲ್ಲಿ ತೊಡಗಿದ್ದರು. ಇಟಲಿಯ ಮಿಲನ್ ಪಟ್ಟಣದ ಡ್ಯೂಕ್, ಲಿಯೊನಾರ್ಡೋ ಅವರ ಕೌಶಲ್ಯಗಳನ್ನು ಗುರುತಿಸಿ ಕೆಲವು ಯೋಜನೆಗಳ ಜವಾಬ್ದಾರಿಯನ್ನು ಕೊಟ್ಟಿದ್ದರು. ಆ ಸಮಯದಲ್ಲೇ    ಡ ವಿನ್ಚಿ ಮಿಲಿಟರಿ ಉಪಕರಣಗಳನ್ನು, ಅವುಗಳ ವಿನ್ಯಾಸವನ್ನೂ ಮಾಡಿ ವಿವರಗಳನ್ನೆಲ್ಲಾ ತಮ್ಮ ಹಸ್ತಪ್ರತಿಯ ಪುಸ್ತಕದಲ್ಲಿ ಬರೆದಿಟ್ಟಿದ್ದರು. ಅಲ್ಲಿಯೇ ಇರುವುದು, ಡ ವಿನ್ಚಿ ಚೋದ್ಯ! ತಾನು ಕಂಡುಕೊಂಡ ಅಥವಾ ವಿನ್ಯಾಸ ಮಾಡಿದ ರಚನೆಗಳನ್ನವರು ರಹಸ್ಯವಾದ ಸಂಕೇತ ಭಾಷೆಗಳಲ್ಲಿ (Code words), ಇನ್ನು ಕೆಲವನ್ನು ಕನ್ನಡಿ ಪ್ರತಿಬಿಂಬ (Mirror image writings) ರೂಪಗಳಲ್ಲಿ ದಾಖಲಿಸಿಕೊಂಡಿದ್ದರು. ಇಲ್ಲವಾದರೆ, “ಮಾನವನ ಪೈಶಾಚಿಕ ಗುಣಗಳು ಇವನ್ನೆಲ್ಲಾ ದುರುಪಯೋಗ ಮಾಡುವ ಸಾಧ್ಯತೆಗಳಿವೆ” ಎನ್ನುವುದು ಅವರ ಅಂಬೋಣ. ಲಾಸ್ಟ್ ಸಪ್ಪರ್ ಎನ್ನುವ ಅವರ  ಕಲಾಕೃತಿ ಇದೇ ಸಮಯದಲ್ಲಿ ನಿರ್ಮಾಣವಾಗಿದ್ದು, ಅದನ್ನವರು ಡ್ಯೂಕ್ ಅವರಿಗೆ ಸಮರ್ಪಿಸಿದ್ದರು. ಮೊನಾಲಿಸ ಚಿತ್ರವನ್ನು ಲಿಯೊನಾರ್ಡೋ ತನ್ನ ಐವತ್ತರ ಹರೆಯದಲ್ಲಿ ಬಿಡಿಸಲು ಪ್ರಾರಂಭಿಸಿದರು. ಚಿತ್ರವನ್ನು ವಿನ್ಚಿ 1503 – 06 ರಲ್ಲಿ ರಚಿಸಿದ್ದಾರೆ. ಆದರೆ ಪೂರ್ತಿಗೊಳಿಸಿದುದು 1517 ರಲ್ಲಿ ಅನ್ನುವ ಮಾಹಿತಿ ಇದೆ. ಚಿತ್ರದ ಹಿಂದೆ ರೋಚಕ ಕತೆಗಳೂ ಇವೆ. ಚಿತ್ರದ ಕಳವಿಗೆ ನಡೆದ ಪ್ರಯತ್ನ ಇತಿಹಾಸ ಸೇರಿದೆ. ಇಂದಿಗೂ ಪ್ಯಾರಿಸಿನ ಲೌವ್ರೆ ಸಂಗ್ರಹಾಲಯದಲ್ಲಿ ಚಿತ್ರ ಕಂಗೊಳಿಸುತ್ತಾ ಇದೆ.

                                           ಚಿತ್ರ: ಲಿಯೊನಾರ್ಡೋ ವಿನ್ಚಿಯವರ ಮೊನಾಲಿಸ

ಯುವಕನಾಗಿದ್ದಾಗ ಲಿಯೊನಾರ್ಡೋ, ಹಕ್ಕಿಗಳು ಹೇಗೆ ಹಾರುತ್ತವೆ ಎಂಬುದನ್ನು ಗಂಟೆಗಳ ಹೊತ್ತು ತದೇಕಚಿತ್ತದಿಂದ ನೋಡುತ್ತಿದ್ದರು. ಅನಂತರ ಏನನ್ನೋ ಸಂಕೆತಭಾಷೆಗಳಲ್ಲಿ ಬರೆಯುತ್ತಿದ್ದರು. ಆಗ ಅವರು ಬರೆದ ಚಿತ್ರಗಳಲ್ಲಿ, ಈಗಿನ ವಿಮಾನದ ರೆಕ್ಕೆಗಳ ಹೋಲಿಕೆಯ ಆಕೃತಿಗಳಿದ್ದುವು. ಲಿಯೊನಾರ್ಡೋರನ್ನು ಜನ ‘ಹುಚ್ಚ’ ಅನ್ನುತ್ತಿದ್ದರು. ಮಾನವನೆಲ್ಲಾದರು ಹಕ್ಕಿಯಂತೆ ಹಾರಲುಂಟೆ? ಬೋರ್ಜಿಯಾದಲ್ಲಿ ಇದ್ದಾಗ ಲಿಯೊನಾರ್ಡೋ, ಟಸ್ಕೆನಿ ಮತ್ತು ಯಂಬ್ರಿಯಾ ಪ್ರಾಂತ್ಯದ ಭೂ ನಕಾಶೆಗಳನ್ನು ಈಗಿನ ಉಪಗ್ರಹದಿಂದ ತೆಗೆದ ಚಿತ್ರಗಳಂತೆ ನಿಖರ ಮತ್ತು ಅಚ್ಚುಗಟ್ಟಾಗಿ ರಚಿಸಿದ್ದರು. ಅವರ ವೈಜ್ಞಾನಿಕ ಕಲ್ಪನೆ ಮತ್ತು ಸಂಶೋಧನೆಗಳು ಅದ್ಭುತವಾಗಿದ್ದವು. ಅವರ ಕಾಲಕ್ಕಿಂತ ಅವರ ಕಲ್ಪನೆಗಳು ಶತಮಾನಗಳಷ್ಟು ಮುಂದಿದ್ದವು – ಇವು ಮಿಲಿಟರಿ ಉಪಕರಣಗಳು, ಮಷಿನ್ ಗಳು, ಜಲಾಂತರ್ಗಾಮಿ ನೌಕೆ ಯಾ ಶರೀರ ರಚನೆಯ ವಿನ್ಯಾಸಗಳಿರಬಹುದು. ಲಿಯೊನಾರ್ಡೋರ ಮುಖ್ಯ ಸಮಸ್ಯೆಯೆಂದರೆ, ಅವರು ತಮ್ಮ ಯೋಜನೆಗಳನ್ನು ಕ್ಲಪ್ತ ಸಮಯಕ್ಕೆ ಪೂರೈಸುವುದರ ಮೊದಲೇ ಇನ್ನೊಂದು ಕಾರ್ಯತತ್ಪರರಾಗಿ ಎರಡನ್ನೂ ಪೂರ್ಣಗೊಳಿಸುತ್ತಿರಲಿಲ್ಲ. ಅವರಿಗೆಂದೂ ಸಮಯಾವಕಾಶವೇ ಇರುತ್ತಿರಲಿಲ್ಲ!

ಆಧುನಿಕ ವೈಜ್ಞಾನಿಕ ಉಪಕರಣಗಳ ಕಲ್ಪನೆಯೇ ಇರದಿದ್ದ 15ನೇ ಶತಮಾನದಲ್ಲಿ  ಲಿಯೊನಾರ್ಡೋರ ಚಟುವಟಿಕೆಗಳು ಅಚ್ಚರಿ ಹುಟ್ಟಿಸುತ್ತಿದ್ದವು. ಗಾಳಿಯ ವೇಗವನ್ನು ಅಳೆಯುವ ಒಂದು ‘ವಾಯು ವೇಗಮಾಪಕ’ (anemometer) ವನ್ನು ಅವರು ತಯಾರಿಸಿದ್ದರು. ಗಂಟೆ ಮತ್ತು ನಿಮಿಷಗಳ ಸೂಚಕವಾದ ‘ಲಿಯೊನಾರ್ಡೋ ಗಡಿಯಾರ’ ವನ್ನು ನಿಮಿಸಿದ್ದರು. ಈಗಿನ ವಾಹನಗಳಲ್ಲಿರುವಂತಹ ‘ದೂರಮಾಪಕ’ (odometer) ವನ್ನು, ಆ ಕಾಲದಲ್ಲಿ ಚಕ್ರ ಮತ್ತು ಗೇರ್ ನಂತಹ ಸಲಕರಣೆಗೆ ಲಗತ್ತಿಸಿ, ದಾರಿಯ ದೂರವನ್ನು ನಿಖರವಾಗಿ ಕಂಡುಹಿಡಿದಿದ್ದರು. ಕಾಲಿನಿಂದ ತುಳಿದು ಪೆಡಲ್ ಮಾದರಿಯ ಪಿಸ್ಟನ್ ಗಳಿರುವ ನೀರೆತ್ತುವ ಪಂಪ್ ಗಳನ್ನು ನದಿಗಳಿಗೆ ಮತ್ತು ಕೆರೆಗಳಿಗೆ ಅಳವಡಿಸಿ ಕೃಷಿಯಲ್ಲಿ ತೊಡಗಿಸಿದ್ದರು. ಅವರು ಬರೆದಿಟ್ಟ ಮತ್ತು  ರಚಿಸಿದ ಸಸ್ಯಗಳ ಮತ್ತು ಬೇರುಗಳ ಚಿತ್ರಗಳು ಈಗಿನ ಯಾವುದೇ ಸಸ್ಯಶಾಸ್ತ್ರಜ್ಞನ ಜ್ಞಾನಕ್ಕಿಂತ ಕಡಿಮೆ ಅನಿಸುವುದಿಲ್ಲ. ಇಷ್ಟೆಲ್ಲಾ ಅಲ್ಲದೇ, ಮಾನವನ ಶರೀರ ರಚನೆಯ ಚಿತ್ರಗಳನ್ನು ಲಿಯೊನಾರ್ಡೋ ಸ್ಪುಟಮಾಡಿದ ವಿವರಗಳು ‘ಗ್ರೇಯವರ ಅನಾಟಮಿ’ ಪುಸ್ತಕವನ್ನು ನೆನಪಿಗೆ ತಂದರೆ ಅಚ್ಚರಿಯೇನಲ್ಲ.

ಡ ವಿನ್ಚಿಯವರ ವೈಜ್ಞಾನಿಕ ನಕಾಶೆಗಳು ಹಲವಾರು ‘ವರ್ಕಿಂಗ್ ಮೋಡೆಲ್’ ಗಳಾಗಿ ಪರಿವರ್ತಿತವಾಗಿವೆ. ಸಂಶೋಧನೆ ಎಂಬುದು ಒಂದು ಮಹಾನ್ ಕಲೆ. ಲಿಯೊನಾರ್ಡೋ ಡ ವಿನ್ಚಿಯವರ ಒಟ್ಟು ಸಾಧನೆಗಳನ್ನು ಗಮನಿಸಿದರೆ, ವ್ಯಕ್ತಿ ತನ್ನ ಪೂರ್ತಿ ಯೋಚನಾ ಸಾಮರ್ಥ್ಯವನ್ನು ಸಾಕಾರಗೊಳಿಸಿದರೆ ಇಡೀ ಮಾನವಕುಲಕ್ಕೇ ವರವಾಗ ಬಲ್ಲ ಎಂಬುದನ್ನು ತೋರಿಸಲರ್ಹ ಸವ್ಯಸಾಚಿ. ಈಗ ಇನ್ನೊಮ್ಮೆ ಚಿತ್ರವನ್ನು ನೋಡಿ, ಇಲ್ಲವೇ ನೆನಪಿಸಿ. ‘ಮೊನಾಲಿಸಾ’ ನಗುತ್ತಿದ್ದಾಳಲ್ಲವೇ ?

“Renaissance Humanist” ಎನ್ನುವ ಪದದ ಕನ್ನಡ ರೂಪ ಲೇಖಕನ ಪದಬಳಕೆಯಲ್ಲಿ “ಪುನರುತ್ಥಾನದ ಮಾನವ”ಎಂದು ಅಚ್ಚುಕಟ್ಟಾಗಿ ಒಗ್ಗಿಕೊಳ್ಳದಿದ್ದರೂ, ಲಿಯೋನಾರ್ಡೋ ಡ ವಿನ್ಚಿ ಯವರ ವ್ಯಕ್ತಿತ್ವಕ್ಕೆ ಒಗ್ಗಿಕೊಳ್ಳುತ್ತದೆ. ಚರಿತ್ರೆಯಲ್ಲಿ ಅವರನ್ನು ಹಾಗೆಯೇ ಒಪ್ಪಿಕೊಂಡಿದ್ದಾರೆ. ಗ್ರೀಕ್ ಮತ್ತು ರೋಮಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ, ಇಟೆಲಿಯವರಾದ ವಿನ್ಚಿ 13,500 ಪುಟಗಳಲ್ಲಿ ಬರಹ ಮತ್ತು ಚಿತ್ರಗಳ ಮೂಲಕ ತಾನು ಕಂಡಂತಹ ಮತ್ತು ತನಗೆ ಅನಿಸಿದ ಸಾಧ್ಯತೆಗಳ ವಿವರಗಳನ್ನು ರೂಪಿಸುತ್ತಾ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡವರು. ವಿಜ್ಞಾನ ಮತ್ತು ಕಲೆಯಲ್ಲಿ ಯಾವುದೇ ಧ್ರುವೀಕರಣವಿಲ್ಲದೇ, ಎರಡನ್ನೂ ಮೇಳೈಸಿ ವಿನ್ಚಿಯವರ ಕೃತಿಗಳು ಒಂದು ಅದ್ಭುತ ರೂಪದಲ್ಲಿ ಹೊರಹೊಮ್ಮುತ್ತದೆ. ಕೃತಿಗಳಲ್ಲಿ ಲಿಯೋನಾರ್ಡೋ ವಿನ್ಚಿಯ ಕಾಲದ ಜನರಿಗೆ ಕಲ್ಪನಾತೀತವಾಗಿದ್ದ ತಂತ್ರಜ್ಞಾನದ ಸಾಧ್ಯತೆಗಳು ನಿರ್ಧಿಷ್ಟ ರೂಪದಲ್ಲಿ ಸಾಕಾರಗೊಳ್ಳುತ್ತದೆ.

“ದ ಡಾ ವಿನ್ಚಿ ಕೋಡ್” ಎನ್ನುವ ಹೆಸರಿನ ಡಾನ್ ಬ್ರೌನ್ ವಿರಚಿತ ಕಾದಂಬರಿ (2003) ಮತ್ತು ಅದೇ ಹೆಸರಿನ, ಅದೇ ಕತೆಯಾಧಾರಿತ ಟಾಮ್ ಹೊಂಕ್ಸ್ ನಟಿಸಿದ ಚಲನಚಿತ್ರ (2006) ಅದ್ಭುತ ಯಶಸ್ಸು ಸಾಧಿಸಿದೆ. ವಿನ್ಚಿಯವರ ಕಲಾಕೃತಿ “ದಿ ಲಾಸ್ಟ್ ಸಪ್ಪರ್” ನ ಉಲ್ಲೇಖ ಎರಡರಲ್ಲೂ ಬರುತ್ತದೆ. ಈ ವರ್ಣಚಿತ್ರದ ಹಿಂದೆ ಕೆಲವು “ಕೋಡ್”ಗಳ (ಸಂಕೇತ) ಬಳಕೆ ಆಗಿವೆ ಎನ್ನುವುದು ಸ್ವಲ್ಪ ವಿವಾದಕ್ಕೂ ಕಾರಣವಾಗಿತ್ತು. ಅದೇನಿದ್ದರೂ, ವಿನ್ಚಿಯವರಂತೂ ತನ್ನ ಹೆಚ್ಚಿನ ಬರಹಗಳಲ್ಲಿ “ಕೋಡ್”ಗಳನ್ನು ಧಾರಾಳವಾಗಿ ಬಳಸುತ್ತಿದ್ದುದು ನಿಜ!

 

-ಡಾ. ಬಡೆಕ್ಕಿಲ ಶ್ರೀಧರ ಭಟ್, ಪುತ್ತೂರು.

2 Responses

  1. Shruthi Sharma says:

    ಅದ್ಭುತವಾದ ವಿಚಾರಗಳನ್ನು ಬರೆಯುತ್ತಿದ್ದೀರಿ. ಸೊಗಸಾದ ನಿರೂಪಣೆ. ಧನ್ಯವಾದಗಳು 🙂

  2. ಡಾ. ಬಡೆಕ್ಕಿಲ ಶ್ರೀಧರ ಭಟ್. says:

    ಓದಿ ಮೆಚ್ಚಿಗೆ ವ್ಯಕ್ತಪಡಿಸಿದವರೆಲ್ಲರಿಗೂ, ಶ್ರುತಿಯೂ ಸೇರಿದಂತೆ, ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: