ಗ್ರಹಣ ಮತ್ತು ನಾನು

Share Button
 

 .

ಖಗೋಳವೆಂಬ ವಿಷಯವೇ ಅಂಥದ್ದು. ಸ್ವಲ್ಪ ಆಸಕ್ತಿ ಬೆಳೆಸಿಕೊಂಡರೆ ಅದು ಮಹಾ ಕುತೂಹಲವಾಗಿ ಬೆಳೆದುಬಿಡುತ್ತದೆ. ನನ್ನ ಬಾಲ್ಯದಲ್ಲಿ ರಾತ್ರಿ ಆಕಾಶ ನೋಡುವುದೆಂದರೆ ನನಗೆ ಬಹಳ ಅಚ್ಚುಮೆಚ್ಚಿನ ವಿಷಯವಾಗಿತ್ತು. ಅನಂತಕೋಟಿ ನಕ್ಷತ್ರಗಳು ಮಿನುಗುವ ಆಕಾಶ, ಬೆಳ್ಳಿ ಬೆಳಕಿನ ಚಂದಿರ ಹೊಳೆವ ಆಕಾಶ ನೋಡಿ ನಾನು ಮಂತ್ರಮುಗ್ಧಳಾಗಿ ನಿಂತುಬಿಡುತ್ತಿದ್ದೆ.‌ ನನ್ನ ವಿವಾಹದ ಬಳಿಕ ನಾನು ಪಟ್ಟಣವಾಸಿಯಾದೆ. ಆಕಾಶದ ಸಖ್ಯದಿಂದ ದೂರವಾದೆ. ಆದರೂ ಖಗೋಳಕ್ಕೆ ಸಂಬಂಧಿಸಿದ ಪುಸ್ತಕವೇನಾದರೂ ಸಿಕ್ಕಿದರೆ ಆಸಕ್ತಿಯಿಂದ ಓದುತ್ತಿದ್ದೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂಸ್ ಮುಂತಾದವರಿಗೆ ನನ್ನ ಮನಸ್ಸಲ್ಲಿರುವ ಸ್ಥಾನ ಬಹಳ ಉನ್ನತ. ನನ್ನ ಮಕ್ಕಳಿಗೂ ಆಕಾಶದ ಮೇಲೆ ವಿಶೇಷ ಪ್ರೀತಿಯಿದೆ. ನನ್ನ ಐದು ವರ್ಷದ ಮಗ ಜನವರಿ ಮೂವತ್ತೊಂದರ ಚಂದ್ರಗ್ರಹಣಕ್ಕಾಗಿ ಕಾದು ಕುಳಿತಿದ್ದ. ಕ್ಯಾಲೆಂಡರ್ ನೋಡಲು ತಿಳಿದಿಲ್ಲದ ಅವನು, ಚಂದಿರನ ಚಿತ್ರ ಕೊಟ್ಟದ್ದನ್ನು ನೋಡಿ, “ಅಮ್ಮಾ, ಇವತ್ತಿನ ಡೇಟ್ ನನಗೆ ಗೊತ್ತು. ಇವತ್ತು ಥರ್ಟಿಫಸ್ಟ್. ರೆಡ್ ಮೂನ್ ಡೇ” ಎಂದಾಗ ನನಗೆ ನಿಜವಾಗಿಯೂ ಖುಷಿಯೆನಿಸಿತು. ಇವನು ಸಣ್ಣ ಮಗುವಿರುವಾಗ ನನ್ನ ತವರು ಮನೆಗೆ ಹೋದಾಗಲೆಲ್ಲ ರಾತ್ರಿ ಹೊರಗಿಳಿದರೆ ಆಕಾಶವನ್ನೇ ದಿಟ್ಟಿಸಿ ನೋಡುತ್ತಿದ್ದ. ಆಕಾಶ ವೀಕ್ಷಣೆಯ ಅವನ ತನ್ಮಯತೆ ಕಂಡಾಗ ನನ್ನ ಚಿಕ್ಕಪ್ಪ ಅವನನ್ನು ಮಾಧವನ್ ನಾಯರ್ (ಇಸ್ರೋದ ಆಗಿನ ಅಧ್ಯಕ್ಷರು) ಎಂದು ಕರೆಯುತ್ತಿದ್ದರು.

ಜನವರಿ ಮೂವತ್ತೊಂದರಂದು ನಮ್ಮ ಮನೆ ಸಮೀಪದ ಕಾಲೇಜು ಮೈದಾನದಲ್ಲಿ ದೂರದರ್ಶಕ ಇಟ್ಟು ಗ್ರಹಣ ವೀಕ್ಷಣೆಯ ಅವಕಾಶ ಕಲ್ಪಿಸಿದ್ದರು. ನಾನು ಅಲ್ಲಿಗೆ ಹೋಗುವ, ಎಂದದ್ದೇ ತಡ ನನ್ನ ಮಗ ಓಡಿ ಹೋಗಿ ತಾನಾಗಿ ಬಟ್ಟೆ ಬದಲಿಸಿ ಓಡಿ ಬಂದ. ನನ್ನಿಬ್ಬರು ಹೆಣ್ಣುಮಕ್ಕಳೂ ತಯಾರಾದರು. ಸಮೀಪದಲ್ಲೇ ಇರುವ ಆ ಸ್ಥಳಕ್ಕೆ ನಡೆದು ಹೋದೆವು. ಅಲ್ಲಿ ಗ್ರಹಣ ವೀಕ್ಷಿಸಲು ಬಂದವರ ಬಹಳ ಉದ್ದನೆಯ ಸಾಲು  ಇತ್ತು. ಮಹಿಳೆಯರಿಗಾಗಿ   ಬೇರೆಯೇ ಸಾಲು ಮಾಡಿದ ಕಾರಣ ನಮ್ಮ ಸರದಿ ಬೇಗನೇ ಬಂತು. ಮೊದಲು ಮಕ್ಕಳಿಗೆ ದೂರದರ್ಶಕದ ಮೂಲಕ ವೀಕ್ಷಿಸಲು ಹೇಳಿದೆ. ನಂತರ ನಾನೂ ನೋಡಿದೆ. ಬಳಿಕ ಅಲ್ಲಿಂದ ಹೊರಟೆವು. ಬಹುಶಃ ನಮಗೆಲ್ಲ ದೂರದರ್ಶಕದ ಮೂಲಕ ನೋಡುವುದಕ್ಕಿಂತ, ನೇರವಾಗಿ ಬರಿಗಣ್ಣಿಂದ ನೋಡುವುದೇ ಖುಷಿಯೆನಿಸಿದ ಕಾರಣ ,ಮನೆಗೆ ಬಂದು ಅಂಗಳದಲ್ಲಿ ನಿಂತು ಗ್ರಹಣದ ವಿವಿಧ ಹಂತಗಳನ್ನು ವೀಕ್ಷಿಸಿದೆವು. ಎಲ್ಲಕ್ಕೂ ಮಿಗಿಲಾಗಿ ನನ್ನ ಮಕ್ಕಳ ಕುತೂಹಲವೇ ನನಗೆ ಖುಷಿಕೊಟ್ಟಿತ್ತು.

 

ನಮ್ಮಲ್ಲಿ ಮೊದಲೇ ಗ್ರಹಣದ ಕುರಿತಾದ ಧಾರ್ಮಿಕ ನಂಬಿಕೆಗಳಿಲ್ಲದ ಕಾರಣ, ಗ್ರಹಣ ಮುಗಿಯುವ ಮೊದಲೇ ಮಕ್ಕಳನ್ನು ಸ್ನಾನ ಮಾಡಿಸಿ ಊಟ ಮಾಡಿಸಿದೆ.

ನನ್ನ ಶಾಲೆಯ ವಿದ್ಯಾರ್ಥಿಗಳಲ್ಲಿ ಗ್ರಹಣದ ಕುರಿತು ವಿಚಾರಿಸಿದಾಗ ಸಮ್ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ಧಾರ್ಮಿಕ ನಂಬಿಕೆಗೆ ಕಟ್ಟುಬಿದ್ದಿದ್ದರೆ ಇನ್ನು ಕೆಲವರು ಗ್ರಹಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವೀಕ್ಷಿಸಿದ್ದರು. ಏನೇ ಆಗಲಿ ಎಷ್ಟೋ ವರ್ಷಗಳಿಗೊಮ್ಮೆ ಸಂಭವಿಸುವ ಈ ಅಪರೂಪದ ವಿದ್ಯಮಾನ ಸಾವಿರಾರು ರಸಿಕರ,ಬುದ್ಧಿಜೀವಿಗಳ, ವಿಜ್ಞಾನಿಗಳ ಕುತೂಹಲ ಕೆರಳಿಸಿದರೆ, ಜ್ಯೋತಿಷ್ಯದಲ್ಲಿ ನಂಬಿಕೆಯಿಟ್ಟವರಲ್ಲಿ ಭಯ ಹುಟ್ಟಿಸಿತ್ತು. ಪ್ರಕೃತಿ ಒದಗಿಸಿದ ಈ ದೃಶ್ಯ ವಿಸ್ಮಯವನ್ನು ಸವಿದವರೇ ಪುಣ್ಯವಂತರು ಎನ್ನವಹುದೇನೋ?


 

 – ಜೆಸ್ಸಿ ಪಿ.ವಿ.ಪುತ್ತೂರು

.

3 Responses

  1. Manjula Chandrashekar says:

    Chennagi bareddiri

  2. Shankara Narayana Bhat says:

    ವಿವರಣೆ ಚೆನ್ನಾಗಿದೆ. ಖಗೋಳ ಶಾಸ್ತ್ರದ ಕಡೆಗೆ ಒಲವು ಹೆಚ್ಚಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: