ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 5

Share Button

ಕಟ್ರಾ ರೈಲ್ವೇ ಸ್ಟೇಷನ್ – ಯಾತ್ರಾರ್ಥಿಗಳ ನೋಂದಣಿ

ಅಂತೂ ಬರೋಬರಿ ಏಳು ಗಂಟೆ ತಡವಾಗಿ. ಮಧ್ಯಾಹ್ನ 1230 ಗಂಟೆಗೆ ಕಟ್ರಾ ತಲಪಿತು. ಬೆಟ್ಟಗುಡ್ಡಗಳ ನಡುವೆ ಇರುವ ಕಟ್ರಾ ರೈಲ್ವೇಸ್ಟೇಷನ್ ಬಹಳ ವಿಶಾಲವಾಗಿದ್ದು ಆಧುನಿಕ ಸವಲತ್ತುಗಳನ್ನು ಹೊಂದಿದೆ. ಪ್ಲಾಟ್ ಫಾರ್ಮ್ ನಲ್ಲಿ, ವಿಶ್ರಾಂತಿ ಕೋಣೆಗಳಲ್ಲಿ ಜನ ಅಲ್ಲಲ್ಲಿ ತೂಕಡಿಸುತ್ತಲೋ ನಿದ್ರಿಸುತ್ತಲೋ ಇದ್ದರು. ಹೆಚ್ಚಿನವರ ಬಳಿ ಲಾಠಿಯಂತಹ ಮರದ  ಕೋಲು ಇದ್ದುದು ನೋಡಿ ಅಚ್ಚರಿಯಾಯಿತು. ವೈಷ್ಣೋದೇವಿ  ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ಹತ್ತುವವರು, ನಡೆಯಲು ಆಧಾರಕ್ಕೆಂದು ಬಳಸಿದ   ಕೋಲನ್ನು ತಮ್ಮೊಡನೆ ಒಯ್ಯುವುದು ಇಲ್ಲಿ ಸಾಮಾನ್ಯ ದೃಶ್ಯ.

ವೈಷ್ನೋದೇವಿ ಮಂದಿರಕ್ಕೆ ಪ್ರವೇಶಿಸಲು  ನೋಂದಣಿ  ಕಡ್ಡಾಯ. ಅದಕ್ಕಾಗಿ ಕಟ್ರಾ  ರೈಲ್ವೇ ಸ್ಟೇಷನ್ ನಲ್ಲಿಯೇ  ಹೆಸರು ನೋಂದಾಯಿಸಿ ‘ಪರ್ಚಿ’ ಪಡೆದುಕೊಳ್ಳಬಹುದು.   ಬೆಟ್ಟದ ತಪ್ಪಲಿನಲ್ಲಿಯೂ, ಮೆಟ್ಟಿಲು ಹತ್ತುವ ಮುನ್ನ ಸಂಬಂಧಿತ ಕಚೇರಿಯಿಂದ  ಪದೆದುಕೊಳ್ಳಬಹುದು. ನಾವೆಲ್ಲರೂ,  ಲಗೇಜುಗಳನ್ನು ಒಂದೆಡೆ ಪೇರಿಸಿ ,  ರೈಲ್ವೇ ಸ್ಟೇಷನ್ ನಲ್ಲಿ ಇದ್ದ  ಕೌಂಟರ್ ನ ಎದುರು ಸರದಿ ಸಾಲಿನಲ್ಲಿ ನಿಂತೆವು.   ಕೌಂಟರ್ ನಲ್ಲಿ ನಮ್ಮ ಹೆಸರು  ಮತ್ತು ಊರನ್ನು ಹೇಳಿದಾಗ ‘ಪರ್ಚಿ’ಯನ್ನು ಕೊಟ್ಟರು.

ಅಲ್ಲಿಂದ ಹೊರಬಂದೊಡನೆ ಪಕ್ಕದಲ್ಲಿಯೇ ಹಸಿರು ಬೆಟ್ಟದ ಮಧ್ಯೆ ಜಿಗ್-ಜ್ಯಾಗ್  ಪಾದಚಾರಿ ಮಾರ್ಗವುಳ್ಳ ವೈಷ್ಣೋದೇವಿ ಬೆಟ್ಟವು ಸೊಗಸಾಗಿ ಕಾಣಿಸಿತು.


ಕಟ್ರಾ ರೈಲ್ವೇ  ಸ್ಟೇಷನ್ ನಿಂದ ಅನತಿ ದೂರದ್ದಲ್ಲಿ , ನಮಗಾಗಿ ಕಾಯ್ದಿರಿಸಿದ್ದ  ಹೋಟೆಲ್ ಗೆ ರಿಕ್ಷಾದಲ್ಲಿ   ಬಂದು, ಲಗೇಜನ್ನಿಳಿಸಿ, ಸ್ನಾನ, ಊಟ ಪೂರೈಸಿದೆವು.  ಮಾರ್ತೇಶ್ ಪ್ರಭು  ಅವರು ತಂಡನ್ನುದ್ದೇಶಿಸಿ   “ಇನ್ನು ಯಾರನ್ನೂ ಕಾಯುವ ಅಗತ್ಯವಿಲ್ಲ, ನಿಮ್ಮ  ಅನುಕೂಲತೆಗೆ ತಕ್ಕಂತೆ ನಡೆದೋ, ಕುದುರೆಯ ಮೇಲೋ ಬೆಟ್ಟಕ್ಕೆ  ಹೋಗಿ ದೇವಿಯ ದರ್ಶನ ಮಾಡಿ ಹೋಟೆಲ್ ಗೆ ಬನ್ನಿ.  ಮುಖ್ಯದ್ವಾರದಿಂದ 12 ಕಿ.ಮೀ ನಡೆಯಬೇಕಾಗುತ್ತದೆ. ನಿಧಾನವಾಗಿ ನಡೆದರೆ  ಬೆಟ್ಟ ಹತ್ತಲು 3 ರಿಂದ 4 ಗಂಟೆ ಬೇಕು. ಅಲ್ಲಿಯ  ಕೌಂಟರ್ ನಲ್ಲಿ ‘ಪರ್ಚಿ’ಯನ್ನು ತೋರಿಸಬೇಕು. ಅತಿ ಕಡಿಮೆ ವಸ್ತುಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ. ಬ್ಯಾಗ್ ಮತ್ತು ಚಪ್ಪಲಿಯನ್ನು  ದೇವಸ್ಥಾನದ ಹೊರಗಡೆ ಇರುವ  ಕ್ಲೋಕ್ ರೂಮ್ ನಲ್ಲಿ ಕೊಟ್ಟು ಟೋಕನ್ ಪಡೆಯಿರಿ.   ದರ್ಶನ ಆಗಿ ಹಿಂತಿರುಗುವಾಗ ನಿಮ್ಮ  ಬ್ಯಾಗ್ ಅನ್ನು ವಾಪಾಸು ಪಡೆದುಕೊಳ್ಳಿ. ನಿಮಗೆ ಆಸಕ್ತಿ ಇದ್ದರೆ, ಇನ್ನೂ ಸ್ವಲ್ಪ ನಡೆದು ಬೆಟ್ಟದಲ್ಲಿರುವ ಭೈರವನ ಗುಡಿ , ಅರ್ಧಕುವರಿ, ಚರಣಪಾದುಕಾ ಮುಂತಾದ ಮಂದಿರಗಳಿಗೂ ಭೇಟಿ ಕೊಡಬಹುದು,   ಪಾದಚಾರಿ ಮಾರ್ಗವು ೨೪ ಗಂಟೆಯೂ ತೆರೆದಿರುತ್ತದೆ. ಕಳ್ಳ-ಕಾಕರ ಭಯವಿಲ್ಲದ ಸುರಕ್ಷಿತ ಜಾಗವಿದು. ರಾತ್ರಿ ಬರಲು ಭಯವೇನಿಲ್ಲ. ಮುಖ್ಯ ದ್ವಾರದಿಂದ ಹೋಟೆಲ್ ಗೆ ನಡೆದೇ ಬರಬಹುದು, ಅಥವಾ ರಿಕ್ಷಾ/ಕಾರು ಬಾಡಿಗೆಗೆ ಹಿಡಿದು ಬನ್ನಿ. ಹೆಲಿಕಾಪ್ಟರ್ ನಲ್ಲಿ  ಟಿಕೆಟ್ ಬುಕ್ ಮಾಡಿದವರಿಗೆ ಇನ್ನು ಅವಕಾಶ ಸಿಗುವುದು ಅನುಮಾನ. ಬೇಕಿದ್ದರೆ  ನಿಮ್ಮ ಅದೃಷ್ಟ ಪರೀಕ್ಷ್ಸಿಸಿ ನೋಡಿ.” ಎಂದು ನಿರ್ದೇಶನ ಹಾಗೂ ಸಲಹೆ ಕೊಟ್ಟರು.

ತಂಡದ  ಹಲವಾರು ಮಂದಿ ಕಾಲ್ನಡಿಗೆಯಲ್ಲಿ  ಮಂದಿರದ ಕಡೆಗೆ ಹೊರಟರು.  ಬೆಟ್ಟದ ಪಾದದಲ್ಲಿರುವ ‘ಬಾಣಗಂಗಾ’  ಎಂಬಲ್ಲಿಂದ ಕಾಲುದಾರಿ ಆರಂಭವಾಗುತ್ತದೆ. ಇಲ್ಲಿ ಕುದುರೆಗಳೂ ಲಭ್ಯವಿರುತ್ತವೆ.

ಹೆಲಿಕಾಪ್ಟರ್ ತಂಗುದಾಣವು ಅಲ್ಲಿಂದ 2 ಕಿ.ಮೀ ದೂರದಲ್ಲಿದೆ.   ಮುಂಗಡ ಟಿಕೆಟ್ ನ ನಿಯಮಗಳ ಪ್ರಕಾರ ನಾವು   11  ಗಂಟೆಗೆ ಅಲ್ಲಿರಬೇಕಿತ್ತು. ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಪುನ; ಅವಕಾಶವಿಲ್ಲ. ಕೊಟ್ಟ ಹಣವೂ ಸಿಗಲಾರದು ಶರತ್ತುಗಳಿದ್ದುವು.  ತಡವಾದ ರೈಲಿನಿಂದಾಗಿ ನಮ್ಮ ಹೆಲಿಕಾಪ್ಟರಿನಲ್ಲಿ ಹೋಗುವ ಅವಕಾಶ ತಪ್ಪಿ ಹೋಯಿತು. ಏನೇ ಆದರೂ, ಒಂದು ಬಾರಿ ಪ್ರಯತ್ನಿಸೋಣ ಎಂದು ನಾವು ಸುಮಾರು 15  ಮಂದಿ ಹೆಲಿಕಾಪ್ಟರ್ ನ ಕೌಂಟರ್ ನಲ್ಲಿ  ನಾವು ದೂರದ ಬೆಂಗಳೂರಿನಿಂದ ಬಂದೆವೆಂದೂ, ರೈಲು 7 ಗಂಟೆಗಳ ಕಾಲ ತಡವಾದುದರಿಂದ  ತೊಂದರೆಯಾಯಿತೆಂದೂ  ಭಿನ್ನವಿಸಿಕೊಂಡೆವು.  ‘ಈಗಾಗಲೇ, ಈ ದಿನದ ಕೊನೆಯ ಟ್ರಿಪ್ ನ  ವರೆಗೂ ಟಿಕೆಟ್ ಗಳನ್ನು  ಇತರರು ಕಾದಿರಿಸಿದ್ದಾರೆ, ಅವರಲ್ಲಿ ಯಾರಾದಾರೂ ಬಂದಿಲ್ಲವಾದರೆ, ಕೆಲವರಿಗೆ ಅವಕಾಶ ಕೊಡಬಹುದು’ ಎಂದರು. ಎರಡು ತಿಂಗಳ ಹಿಂದೆಯೇ, ರೈಲಿನ ಸಮಯದ ನಂತರ  ಸಾಕಷ್ಟು ಸಮಯಾವಾಕಾಶ  ಇರಿಸಿಕೊಂಡೇ ಮುಂಗಡ ಟಿಕೆಟ್ ಕಾದಿರಿಸಿದರೂ ನಮಗೆ ನಿರಾಶೆಯ ವಾತಾವರಣ.

ನಡುನಡುವೆ ತಂಡದ ಕೆಲವರ ಹೆಸರು ಕರೆದು ಅವರನ್ನು ಹೆಲಿಪ್ಯಾಡ್ ಗೆ ಕಳುಹಿಸುತ್ತಿದ್ದರು.  ಇನ್ನು ಕೊನೆಯ ಟ್ರಿಪ್ 0530  ಗೆ ಎಂದಾಗ ನಮಗೆ ನಿಜಕ್ಕೂ ತಳಮಳವಾಯಿತು. ಯಾಕೆಂದರೆ ಆಗ ಅಲ್ಲಿ  ಇದ್ದ ನಮ್ಮ ತಂಡದವರು  ರಮೇಶ್, ಪ್ರಸನ್ನ, ಗಣೇಶ್ ಮತ್ತು ನಾನು ಮಾತ್ರ. ಪುನ:  ಕೌಂಟರ್ ನಲ್ಲಿ ವಿಚಾರಿಸಿದಾಗ ನಮ್ಮಲ್ಲಿ ಇಬ್ಬರಿಗೆ ಅವಕಾಶ ಕೊಡುವುದಾಗಿ ತಿಳಿಸಿದರು.

ನಾನು  ಸೆಪ್ಟೆಂಬರ್ 2016  ರಲ್ಲಿ ಕೇದಾರನಾಥಕ್ಕೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದೆ. ಗಣೇಶ್ ಪ್ರಥಮ ಬಾರಿ ಬಂದುದರಿಂದ ನಡೆದೇ ಹೋಗುವೆನೆಂಬ ಎಂಬ ಉತ್ಸಾಹದಲ್ಲಿದ್ದರು. ರಮೇಶ್, ಪ್ರಸನ್ನ  ಅವರು ಈಗಾಗಲೇ ನಾಲ್ಕು ಬಾರಿ ನಡೆದುಕೊಂಡು/ಕುದುರೆಯ ಮೂಲಕ ವೈಷ್ಣೋದೇವಿಯ ದರ್ಶನ ಮಾಡಿದ್ದರು. ಹಾಗಾಗಿ, ನಾವು ಅವರಿಗೆ  ‘ ಹೆಲಿಕಾಪ್ಟರ್ ನಲ್ಲಿ ಹೋಗಿ’ ಅಂದೆವು.  ಕೂಡಲೇ ರಮೇಶ್ ಅವರು ‘ ನಾವಿಬ್ಬರು ನಡೆದೋ, ಕುದುರೆಯ ಮೇಲೆಯೋ ಬರುತ್ತೇವೆ, ನೀವಿಬ್ಬರು ಮಹಿಳೆಯರು ಹೊರಡಿ, ನಮಗಾಗಿ ಕಾಯುವುದು ಬೇಡ,  ದರ್ಶನ ಆಗಿ ನಿಮ್ಮ ಪಾಡಿಗೆ ಹೋಟೆಲ್ ಗೆ ವಾಪಸ್ಸಾಗಿ’ ಅಂದು  ನಡೆಯುವ ಕಾಲುದಾರಿಯತ್ತ ಹೊರಟರು.

ಹೀಗೆ, ಎರಡು ತಿಂಗಳ ಹಿಂದೆಯೇ ಟಿಕೆಟ್ ಕಾದಿರಿಸಿದರೂ ನಮ್ಮ ಗಂಡಂದಿರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಅನುಭವ ಸಿಗಲಿಲ್ಲ ಎಂದು ನಾವಿಬ್ಬರೂ ವ್ಯಥೆಪಟ್ಟೆವು. ದೇವಿ ತನ್ನೆಡೆಗೆ  ಯಾವಾಗ ಬರಹೇಳುವುದರ ಜೊತೆಗೆ, ಹೇಗೆ ಬರಬೇಕೆಂದು ಕೂಡಾ ನಿರ್ದೇಶಿಸುತ್ತಿರಬಹುದು ಅಂದುಕೊಂಡೆವು. ಇದರಿಂದ ಕಲಿತ ಪಾಠವೇನೆಂದರೆ, ವೈಷ್ಣೋದೇವಿಗೆ  ಹೆಲಿಕಾಪ್ಟರ್ ನಲ್ಲಿ ಹೋಗುವ ಉದ್ದೇಶ ಇರುವವರು, ಹಿಂದಿನ ದಿನವೇ ‘ಕಟ್ರಾ’ ತಲಪುವುದು ಶ್ರೇಯಸ್ಕರ.

ಅಲ್ಲಿನ ಸಿಬ್ಬಂದಿಯವರು ನಮ್ಮ ತೂಕವನ್ನು ಬರೆದುಕೊಂಡು, ಹೆಲಿಪ್ಯಾಡ್ ಗೆ  ಕಳುಹಿಸಿದರು.  ತಾವು ತಿಳಿಸಿದ ಅನುಕ್ರಮವಾಗಿ ನಿಂತುಕೊಳ್ಳಲು ಆದೇಶಿಸಿದರು. ನಮ್ಮ ಬ್ಯಾಗ್ ಗಳನ್ನು ಮತ್ತು ಮೊಬೈಲ್, ಕ್ಯಾಮೆರಾಗಳನ್ನು ಪ್ರತ್ಯೇಕವಾಗಿ  ಇಟ್ಟುಕೊಂಡರು.  ಹೆಲಿಕಾಪ್ಟರ್ ಹತ್ತಿ ಕುಳಿತ ಮೇಲೆ  ಐದೇ ನಿಮಿಷದ ಹಾರಾಟ. ಕೆಳಗಡೆ ಕಾಣುವ ಹಸಿರು ಬೆಟ್ಟ, ಬೆಳ್ಳಿಯ ಬಣ್ಣದ  ಕಾಲುದಾರಿಯ ಹಾಸು, ಕಣಿವೆ-ಪ್ರಪಾತಗಳು ಇವನ್ನೆಲ್ಲಾ ಗಮನಿಸುವಷ್ಟರಲ್ಲಿ  ಬೆಟ್ಟದ ಮೇಲಿನ   ‘ಸಂಜಿ ಚಾಟ್’  ಹೆಲಿಪ್ಯಾಡ್ ಬಂದೇ ಬಿಟ್ಟಿತು.

….ಮುಂದುವರಿಯುವುದು..

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 4  :  http://surahonne.com/?p=18653

– ಹೇಮಮಾಲಾ.ಬಿ, ಮೈಸೂರು

2 Responses

  1. ಅಬ್ಬ! ಅಂತೂ ಆಕಾಶಯಾನದ ಅವಕಾಶ ಆಯಿತಲ್ಲ ಕೆಲವರಿಗಾದರೂ!
    ವೈಷ್ಣೋದೇವಿ ಯಾತ್ರಿಕರಿಗೆ ಅತ್ಯಗತ್ಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.

    • Hema says:

      ಪ್ರವಾಸ ಕಥನದ ಎಲ್ಲಾ ಭಾಗಗಳನ್ನೂ ಓದಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: