ಮೈಕಲ್ ಫೇರಡೆ – ಪ್ರಶಸ್ತಿಗಳನ್ನೊಲ್ಲದ ಮಹಾನ್ ವಿಜ್ಞಾನಿ.

Share Button

ಮೈಕಲ್ ಫೇರಡೆ

 

1829 ನೇ ಇಸವಿ. ಜಗತ್ತಿನ ಒಬ್ಬ ಶ್ರೇಷ್ಠ ರಸಾಯನ ಶಾಸ್ತ್ರಜ್ಞರಾದ ಸರ್ ಹಂಫ್ರಿ ಡೇವಿಯವರು ಮರಣಶಯ್ಯೆಯಲ್ಲಿದ್ದರು. ಸುತ್ತಲೂ ಜನ ಸೇರಿದ್ದರು. ಅವರಲ್ಲೊಬ್ಬರು ಕೇಳಿದರು, “ಮಿ. ಡೇವಿಯವರೇ, ತಮಗನಿಸುವಂತೆ ನಿಮ್ಮ ಅತ್ಯಂತ ದೊಡ್ಡ ಆವಿಷ್ಕಾರ ಯಾವುದು?”. ಡೇವಿ ಒಂದು ಕ್ಷಣದ ಮೌನಮುರಿದು, ಮೆಲ್ಲಗೆ ಆದರೆ ಸ್ಪಷ್ಟವಾಗಿ ಉತ್ತರಿಸಿದರು: “ನನ್ನ ಎಲ್ಲಾ ಆವಿಷ್ಕಾರಗಳಿಂದ ಮಿಗಿಲಾದುದು, ಮೈಕಲ್ ಫೇರಡೆ!”.

ಡೈನಮೋದ ಜನಕ

ವಿದ್ಯುತ್ ಶಕ್ತಿಯು ನಮ್ಮ ಸ್ಪರ್ಶಕ್ಕೆ ಸಿಗುವುದಿಲ್ಲ ಮತ್ತು ಕಣ್ಣಿಗೆ ಕಾಣುವುದಿಲ್ಲ. ಆದರೆ, ಉಪಯೋಗಿಸ ಹೊರಟರೆ ಪೂರ್ಣ ಅನುಭವಕ್ಕೆ ಬರುತ್ತದೆ. ಬೆಂಜಮಿನ್ ಫ್ರಾಂಕ್ಲಿನ್ ವಿದ್ಯುತ್ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದರೂ, ಪ್ರೇರಿತ ವಿದ್ಯುತ್ ಶಕ್ತಿಯ ಉಪಯೋಗ ಸಾಧ್ಯತೆಗಳ ಬಗ್ಗೆ ಅರಿವು ನೀಡಿದವರು ಮೈಕಲ್ ಫೇರಡೆ. ಆಧುನಿಕ ಜಗತ್ತಿನ ಸಹಸ್ರಾರು ಉಪಕರಣಗಳಲ್ಲಿ ವಿದ್ಯುತ್ ಬಳಕೆ ಫೇರಡೆಯವರ ಸಂಶೋಧನೆಗಳ ಅನಂತರವೇ ಸಾಧ್ಯವಾಯಿತು. ಭೌತ ಮತ್ತು ರಸಾಯನಶಾಸ್ತ್ರಗಳಲ್ಲಿ ಆವಿಷ್ಕಾರಗಳನ್ನು ಮಾಡಿದ ಫೇರಡೆ ಡೈನಮೋದ ಜನಕ. ವಿದ್ಯುದ್ವಿಭಜನೆ ಮತ್ತು ವಿದ್ಯುತ್ ಮೋಟರುಗಳ ಕಲ್ಪನೆಯನ್ನು ಸಾಕಾರಗೊಳಿಸಿದ ಪ್ರತಿಭಾವಂತರು. ವಿದ್ಯುತ್ ಇಲ್ಲದ ಜಗತ್ತನ್ನು ಒಂದು ಕ್ಷಣ ಯೋಚಿಸಿ. ಅಂದರೆ, ಸಾಮಾನ್ಯ ಎರಡೂವರೆ ಶತಮಾನಗಳಷ್ಟು ಹಿಂದಿನ ಜೀವನ ಶೈಲಿಯಲ್ಲಿ ನಮ್ಮಿಂದ ಬದುಕಲು ಸಾಧ್ಯವೇ? ‘ವಿದ್ಯುತ್ಕಾಂತೀಯ-ಪ್ರೇರಣೆ’ ತತ್ವವನ್ನು ಬಳಸಿ ಜನರೇಟರುಗಳು ವಿದ್ಯುತ್ ಉತ್ಪಾದನೆ ಮಾಡುತ್ತವೆ. ಈ ತತ್ವದ ಸಂಶೋಧಕನೇ ಮೈಕಲ್ ಫೇರಡೆ.

ಕಮ್ಮಾರನ ಮಗ

ಫೇರಡೆಯವರ ಜನುಮ ಸೆಪ್ಟೆಂಬರ್ 22, 1791 ರಂದು ಲಂಡನಿನ ದಕ್ಷಿಣ ಪ್ರಾಂತ್ಯದಲ್ಲಿ ಆಯಿತು. ತಂದೆ ಜೇಮ್ಸ್ ಒಬ್ಬ ಬಡ ಕಮ್ಮಾರ. ಲಂಡನಿನ ಈ ಹಳ್ಳಿ ಭಾಗದಲ್ಲಿ ಮೈಕಲ್ ಸರಿಯಾದ ಶಾಲೆಗೂ ಹೋಗಿರಲಿಲ್ಲ, ಓದು-ಬರಹ-ಗಣಿತ ಕಲಿಯಲಿಲ್ಲ. ಕೃಶಕಾಯದ ಹುಡುಗ ಗಲ್ಲಿಗಳಲ್ಲಿ ಆಡುತ್ತಿದ್ದ. ಮುಂದೆ ಮೈಕಲ್ ಖ್ಯಾತನಾದ ಮೇಲೆ ಇದೇ ಗಲ್ಲಿಗಳಿಗೆ ಬಂದು ತನ್ನ ಸಹೋದರಿಯೊಂದಿಗೆ ಆಡುತಿದ್ದ ಜಾಗಗಳನ್ನು, ಏರುತ್ತಿದ್ದ ಮರಗಳನ್ನು ನೋಡಿ ನೆನಪಿಸಿಕೊಳ್ಳುತ್ತಿದ್ದನೆಂದು ಅವರ ದಿನಚರಿಗಳು ಹೇಳುತ್ತವೆ. ತನ್ನ ಹದಿಮೂರರ ಪ್ರಾಯದಲ್ಲಿ ಮೈಕಲ್ ಪುಸ್ತಕ ವ್ಯಾಪಾರಿಯ ಅಂಗಡಿಯೊಂದರಲ್ಲಿ ದಿನ ಪತ್ರಿಕೆ ಹಂಚುವ ಕಾಯಕವನ್ನು ಜೀವನೋಪಾಯಕ್ಕಾಗಿ ಪ್ರಾರಂಭಿಸಿದರು. ಅಂಗಡಿ ಮಾಲಕ ತೃಪ್ತಿಗೊಂಡು ಹುಡುಗನಿಗೆ ಪುಸ್ತಕ ಬೈಂಡ್ ಮಾಡುವ ಕೆಲಸವನ್ನು ಕೊಟ್ಟರು. ಈಗ ಸಮಯ ಸಿಕ್ಕಾಗ ಮತ್ತು ತಡರಾತ್ರಿಯವರೆಗೂ ಮಬ್ಬು ಬೆಳಕಲ್ಲಿ ಬೈಂಡ್ ಮಾಡಲು ಬಂದ ಪುಸ್ತಕಗಳನ್ನು ಮೈಕಲ್ ಓದಲು ತೊಡಗಿದರು. ಮುಂದಕ್ಕೆ ಅವರು ಬರೆಯುತ್ತಾರೆ, “ನನ್ನ ಜೀವನದಲ್ಲಿ ಬೈಂಡ್ ಮಾಡಲು ಸಿಕ್ಕ ಎರಡು ಪುಸ್ತಕಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. Encyclopedia Britannica ನನಗೆ ವಿದ್ಯುತ್ ಶಕ್ತಿಯ ಕಲ್ಪನೆಯನ್ನು ನೀಡಿದರೆ, Conversations on Chemistry ವಿಜ್ಞಾನದ ತಳಹದಿಯನ್ನು ತೋರಿಸಿತು”. ಇವೇ ಕೆಲಸಗಳನ್ನು ಮಾಡುತ್ತಾ ಮೈಕಲಿಗೆ ಪ್ರಾಯ 20 ಹಿಡಿಯಿತು.

ಜೀವನೋಪಾಯದಲ್ಲೇ ವಿದ್ಯಾಭ್ಯಾಸ

ಮುಂದೆ ನಡೆದ ಘಟನೆ ಅವರ ಜೀವನದಲ್ಲಿ ತಿರುವನ್ನು ತೋರಿತು. ಫೇರಡೆ ಸ್ವಲ್ಪ ನಾಟಕೀಯವಾಗಿ ಅವರದೇ ಪದಗಳಲ್ಲಿ ಬರೆದಂತೆ ಕಾಣುತ್ತದೆ: “ಸರ್ ಹಂಫ್ರಿ ಡೇವಿಯವರ ನಾಲ್ಕು ಉಪನ್ಯಾಸಗಳು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. 1812 ರ ಫೆಬ್ರವರಿ 29, ಮಾರ್ಚ್ 14, ಏಪ್ರಿಲ್ 8 ಮತ್ತು 10 ರಂದು ಡೇವಿಯರು ನೀಡಿದ ಉಪನ್ಯಾಸಗಳ ಎಲ್ಲಾ ವಿವರಗಳನ್ನು ಗುರುತಿಸಿಕೊಂಡೆ. ಅನಂತರ ಸೂಕ್ತ ಚಿತ್ರಗಳೊಂದಿಗೆ ಪೂರ್ಣಪ್ರಮಾಣದಲ್ಲಿ ಅವರ ಉಪನ್ಯಾಸಗಳನ್ನು ಬರೆದು, ಅಂದವಾಗಿ ಬೈಂಡ್ ಮಾಡಿ (ಬೈಂಡ್ ಮಾಡುವುದೇ ಅವರ ಆಗಿನ ಉದ್ಯೋಗವಾಗಿತ್ತಷ್ಟೇ), ಅವರ ಭೇಟಿಗೆ ಅವಕಾಶಕೋರಿ, ಅವರ ಮುಂದೆ ಈ ಬರಹಗಳನ್ನು ಹಾಜರುಪಡಿಸಿದೆ”. ಫೇರಡೆಯವರು ಇದರೊಂದಿಗೆ ಲಂಡನ್ ರೋಯಲ್ ಸಂಸ್ಥೆಯಲ್ಲಿ ಕೆಲಸಕ್ಕೂ ಒಂದು ಅರ್ಜಿಯನ್ನು ಸೇರಿಸಿದ್ದರು. ಮುಂದಿನ ಎರಡು ದಿನಗಳಲ್ಲಿ ಫೇರಡೆಯವರಿಗೆ ರೋಯಲ್ ಸಂಸ್ಥೆಯಲ್ಲಿ ಪ್ರಯೋಗಶಾಲೆಯ ಸಹಾಯಕರ ಹುದ್ದೆಗೆ ಸೇರಲು ಪತ್ರ ಬಂತು. ಮರುದಿನವೇ ಡೇವಿಯವರ ಸಹಾಯಕನಾಗಿ ಕೆಲಸಕ್ಕೆ ಸೇರಿದರು. ಮುಂದಿನ ಎರಡು ವರ್ಷಗಳ ಕಾಲ ತನ್ನ ಗುರು ಡೇವಿಯವರೊಂದಿಗೆ ‘ಸಹಾಯಕ’ನಾಗಿ ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ ದೇಶಗಳಿಗೆ ವಿಜ್ಞಾನ-ಶೈಕ್ಷಣಿಕ ಪ್ರವಾಸ ಮಾಡಿದರು. ಹಿರಿಯ ವಿಜ್ಞಾನಿ ವೋಲ್ಟಾ ಅವರ ಭೇಟಿಯನ್ನು ಫೇರಡೆ ಅತ್ಯಂತ ಗೌರವ ಭಾವದಿಂದ ನೆನಪಿಸುಕೊಳ್ಳುತ್ತಾರೆ. ಈ ಸಮಯದಲ್ಲಿ ಫೇರಡೆಯವರು ತನ್ನ ಅಮ್ಮನಿಗೆ ಕಳುಹಿಸುತ್ತಿದ್ದ ಪತ್ರಗಳು ಅಪ್ಯಾಯಮಾನವಾಗಿ, ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೇ ಸರಿ.

ಮೈಕಲ್ ಫೇರಡೆ, ಸಾರಾ ಬರ್ನಾಡ್

1821 ರಲ್ಲಿ ಸಾರಾ ಬರ್ನಾಡ್ ಜೊತೆ  ಫೇರಡೆ ಮದುವೆಯಾದರು. ತನ್ನ ಬಾಳ್ವೆಯ ಉಚ್ಛ್ರಾಯ ಸಮಯದಲ್ಲಿದ್ದ ಅವರು ನಿರಂತರ ಸಂಶೋಧನೆಗಳಲ್ಲಿ ತೊಡಗಿ, ಹಲವಾರು ಆವಿಷ್ಕಾರಗಳನ್ನು ಮಾಡಿದರು. ಅನಿಲಗಳ ದ್ರವೀಕರಣ, ಕ್ಲೋರಿನ್ ಮತ್ತು ಅದರ ಸಂಯುಕ್ತಗಳ ತಯಾರಿ(ಆಗ ಪ್ರಯೋಗದಲ್ಲಿ ಆದ ಸಣ್ಣ ಸ್ಪೋಟ), ಬೆನ್ಜೀನ್ ತಯಾರಿ, ಎಲೆಕ್ಟ್ರೋಲಿಸಿಸ್ ತತ್ವಗಳು, ಹೊಸ ಆಪ್ಟಿಕಲ್ ಗಾಜುಗಳು, ಬೆಳಕಿನ ಮೇಲೆ ಕಾಂತೀಯ ಪರಿಣಾಮ…ಇವೆಲ್ಲಾ ಅವರ ಪ್ರಯೋಗದ ಫಲಗಳು.

ಹೆಂಡತಿಗೆ ಉಡುಗೊರೆ

ರೋಚಕ ಘಟನೆಯೊಂದನ್ನು ಫೇರಡೆ ತನ್ನ ದಿನಚರಿಯಲ್ಲಿ ಬರೆಯುತ್ತಾರೆ. 1821 ರ ಕ್ರಿಸ್ಮಸ್ ಹಬ್ಬದ ಮುಂಜಾನೆ ಚುಮುಚುಮು ಚಳಿಯಲ್ಲಿ ಹೊಸದಾಗಿ ಮದುವೆಯಾದ ತನ್ನ ಪತ್ನಿಯನ್ನು ಪ್ರಯೋಗಾಲಯಕ್ಕೆ ಫೇರಡೆ ಕರಕೊಂಡು ಹೋದರು. ಏನೋ ಹೊಸದೊಂದು ‘ಉಡುಗೊರೆ’ ತನಗಿರಬೇಕೆಂದು ಪತ್ನಿ ಸಂಭ್ರಮದಿಂದ ಹೊರಟರು. ಕ್ರಿಸ್ಮಸಿನ ಗಿಫ್ಟ್ ಪತ್ನಿಗೆ ಮಾತ್ರವಲ್ಲ, ಇಡೀ ಜಗತ್ತಿಗೇ ಒದಗಿ ಬಂತು. ಜಗತ್ತಿನ ಮೊತ್ತಮೊದಲ ವಿದ್ಯುತ್ ಚಾಲಿತ ಆಟಿಕೆಯೊಂದನ್ನು ಫೇರಡೆ ತಯಾರಿಸಿದ್ದರು. ವಿದ್ಯುತ್ ಪ್ರವಾಹದ ಮೂಲಕ ಯಾಂತ್ರಿಕ ಚಲನೆಯನ್ನು ಕಾಂತೀಯ ತತ್ವದಲ್ಲಿ ನಡೆಸಿರುವ ಸಣ್ಣ ಮೋಟರನ್ನು ಆಟಿಕೆಯಲ್ಲಿ ಅಳವಡಿಸಲಾಗಿತ್ತು! ಸ್ವಯಂಚಾಲಿತ ಆಟಿಕೆ ಪತ್ನಿಗೆ ತುಂಬಾ ಇಷ್ಟವಾಯಿತು. ಈ ಉಡುಗೊರೆಯನ್ನು ಅವರು ಜೀವನ ಪರ್ಯಂತ ಜೋಪಾನವಾಗಿರಿಸಿಕೊಂಡಿದ್ದರು. ಮತ್ತೆ ಪ್ರಾರಂಭವಾಯಿತು, ಫೇರಡೆಯವರ ಯೋಚನಾ ಸಾಮರ್ಥ್ಯ. ತಂತಿಯ ಮೂಲಕ ವಿದ್ಯುತ್ತನ್ನು ಹಾಯಿಸಿದರೆ ತಂತಿ ಅಯಸ್ಕಾಂತದಂತೆ ವರ್ತಿಸುವುದು. ಹಾಗಿದ್ದಲ್ಲಿ, ಅಯಸ್ಕಾಂತದ ನಿರಂತರ ಚಲನೆಯಿಂದ  ವಿದ್ಯುತ್ತನ್ನು ತಯಾರಿಸಬಹುದಲ್ಲವೇ? Convert Magnetism into Electricity!” . ಈ ಮಾತನ್ನು ಫೇರಡೆ ಒಂದು ‘ಡಿಕ್ಟಂ’ ನಂತೆ ವಹಿಸಿಕೊಂಡು, 1831 ರಲ್ಲಿ ಒಂದು ಸರಳ ಪ್ರಯೋಗದ ಮೂಲಕ ಸಾಧಿಸಿಯೇ ತೋರಿಸಿದರು. ವಿದ್ಯುತ್ ಮೋಟಾರಿನ ಸರಿಯಾದ ವಿಲೋಮ ಪ್ರಯೋಗವನ್ನೇ ‘ಡೈನಮೋ’ ಎಂದು ಕರೆಯಲಾಯಿತು. ಶತಮಾನಗಳ ನಂತರ ಇಂದಿಗೂ ಇದರ ಉಪಯೋಗ ದಿನನಿತ್ಯದ ಬಳಕೆಯಲ್ಲಿ ಕಾಣಬಹುದು. ಇಂತಹ ವಿಜ್ಞಾನಿಗಳ ಜಾಯಮಾನವೇ ಹಾಗೆ, ತಾವು ಕಂಡುಹುಡುಕಿದ ವಿದ್ಯಮಾನಗಳು ಮಾನವಕುಲಕ್ಕೆ ಉಪಯೋಗವಾದರೆ, ಅವರು ಕೃತಾರ್ಥರಾಗುತ್ತಾರೆ.

ಛಲವಾದಿ ವಿಜ್ಞಾನಿ

1841 ರಲ್ಲಿ ಯಾವುದೊ ಒಂದು ನಿಗೂಢ ಕಾಯಿಲೆಯಿಂದ ಮೂರು ವರ್ಷಗಳ ಕಾಲ ಫೇರಡೆ ಏನನ್ನೂ ಮಾಡುತ್ತಿರಲಿಲ್ಲ. ಸುಮ್ಮನೆ ತನ್ನ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದರಷ್ಟೇ. ಅವರ ವ್ಯಕ್ತಿತ್ವವೇ ತುಂಬಾ ಸೌಮ್ಯ. ಚಿಕ್ಕ ದೇಹ, ಆಕರ್ಷಕ ಮುಖ, ಉತ್ಸಾಹೀ ಸ್ವಭಾವ, ನಿಷ್ಕಲ್ಮಶ ನಗು. ಆದರೆ ಖಂಡಿತವಾಗಿಯೂ ಛಲವಾದಿ ವಿಜ್ಞಾನಿ! ಮೂರು ವರ್ಷಗಳ ನರ ಸಂಬಂಧಿ ಅಸೌಖ್ಯದಿಂದ ಚೇತರಿಸಿ, ಮತ್ತೆ ತಮ್ಮ ಪ್ರಯೋಗಾಲಯಕ್ಕೆ ಮೊದಲಿನ ಉತ್ಸಾಹದಿಂದ ಹಿಂದಿರುಗಿದರು. ಇನ್ನೂ ಹಲವಾರು ಆವಿಷ್ಕಾರಗಳು ಸಂಶೋಧನೆಗಳಲ್ಲಿ ಹೊರಹೊಮ್ಮಿತು. ಫೇರಡೆಯವರು ತಮ್ಮ ಸಂಶೋಧನೆ ಮತ್ತು ತತ್ವ ವಿಚಾರಗಳನ್ನು ಹಲವಾರು ಪುಸ್ತಕಗಳಲ್ಲಿ ಬರೆದು ದಾಖಲಿಸಿದ್ದಾರೆ. ಅವರ ಬರಹಗಳಾದ, ‘Correspondences of Michael Faraday’, ‘The Philosophers Tree’, ‘Letters by Faraday’, ‘ಫೇರಡೆ ದಿನಚರಿಗಳು’ ಎಂಬ ಸುಮಾರು 30 ಕ್ಕೂ ಹೆಚ್ಚು ಗ್ರಂಥಗಳಲ್ಲಿ ಮೂಡಿ ಬಂದಿವೆ.

ಯಾವುದೇ ಪುರಸ್ಕಾರ, ಬಿರುದು ಮತ್ತು ಸನ್ಮಾನಗಳನ್ನು ಫೇರಡೆ ಸ್ವೀಕರಿಸುತ್ತಿರಲಿಲ್ಲ. ಅಷ್ಟೇಕೆ, ಆ ಕಾಲದಲ್ಲಿಯ ಇಂಗ್ಲೆಂಡಿನ ಪ್ರತಿಷ್ಟಿತ ‘ಸರ್’ ಎನ್ನುವ ಉಪಾದಿಯ ‘Knighthood’ ಪ್ರಶಸ್ತಿಯನ್ನೂ ಅವರು ಒಪ್ಪಿಕೊಳ್ಳಲಿಲ್ಲ. ನಾಲ್ಕು ದಶಕಗಳಿಗೂ ಮಿಗಿಲಾಗಿ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ ಮೈಕಲ್ ಫೇರಡೆ ತಮ್ಮ ಕೊನೆಯ ವರ್ಷಗಳಲ್ಲಿ ಮರೆವಿನ ಕಾಯಿಲೆಗೆ ತುತ್ತಾದರು. ಆಗಸ್ಟ್ 25, 1867 ರಂದು ಈ ಬೆಳಕು ಆರಿದರೂ, ಅವರು ಆವಿಷ್ಕರಿಸಿದ ಡೈನಮೊದಲ್ಲಿ ವಿದ್ಯುತ್ ಇನ್ನೂ ಹರಿಯುತ್ತಿದೆ!
,
-ಡಾ. ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: