ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 6

Share Button

ವೈಷ್ಣೋದೇವಿ- ಸಂಜೆ ನಡೆಯುವ ವಿಶೇಷ ಪೂಜೆ

‘ಸಂಜಿ ಚಾಟ್’  ಹೆಲಿಪ್ಯಾಡ್ ನಿಂದ ಮಾತಾಮಂದಿರಕ್ಕೆ  2.5  ಕಿ.ಮೀ ನಡಿಗೆ. ಶೌಚಾಲಯ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆಗಳುಳ್ಳ  ಅಚ್ಚುಕಟ್ಟಾದ ಕಾಲುದಾರಿಯಿದೆ. ಈ ದಾರಿಯಲ್ಲಿಯೂ ಬೇಕಿದ್ದವರಿಗೆ  ಕುದುರೆಗಳೂ ಲಭ್ಯವಿವೆ. ಸುತ್ತಲಿನ ಪ್ರಕೃತಿ, ಪ್ರಪಾತಗಳನ್ನು ವೀಕ್ಷಿಸುತ್ತಾ ನಡೆಯುವಾಗ, ಈ ದುರ್ಗಮ ಬೆಟ್ಟದಲ್ಲಿ ಇಷ್ಟು  ವ್ಯವಸ್ಥೆ ಕಲ್ಪಿಸಲು ಅದೆಷ್ಟು ಜನ ಕಷ್ಟ ಪಟ್ಟಿದ್ದಾರೋ ಅನಿಸುತ್ತದೆ.

ಸುಮಾರು 30  ನಿಮಿಷ ನಡೆದು ಮಾತಾ ವೈಷ್ಣೋದೇವಿಯ ಮಂದಿರದ ಬಳಿ ತಲಪಿದೆವು. ದೇವಾಲಯ ಹತ್ತಿರವಾಗುತ್ತಿದ್ದಂತೆ ವಿವಿಧ ಪೂಜಾ ವಸ್ತುಗಳನ್ನು ಮಾರುವ ಅಂಗಡಿಗಳು, ವಿಶಾಲವಾದ ಭೋಜನ ಮಂದಿರಗಳು, ಉಚಿತ ವಿಶ್ರಾಂತಿ ಗೃಹಗಳು ಎದುರಾದುವು. ಸ್ಥಳದಲ್ಲಿ ಅಚ್ಚುಕಟ್ಟು ಮತ್ತು ಶಿಸ್ತು ಎದ್ದು ಕಾಣುತ್ತಿತ್ತು.  ಅಲ್ಲಿದ್ದ ಕೌಂಟರ್ ಗಳಲ್ಲಿ ನಮ್ಮ  ಚಪ್ಪಲಿ, ಬ್ಯಾಗ್ ಇತ್ಯಾದಿಗಳನ್ನು  ಇರಿಸಿ ಮಾತಾ ದರ್ಶನದ ಸರದಿ ಸಾಲಿನಲ್ಲಿ ನಿಂತಾಗ ಸಂಜೆ 06.30   ಗಂಟೆ ಆಗಿತ್ತು. ಆ ಸಮಯದಲ್ಲಿ ಅಲ್ಲಿ ನಡೆಯುವ ವಿಶೇಷ ಪೂಜೆಯಿಂದಾಗಿ ಜನರನ್ನು ಒಳಗೆ ಬಿಡುತ್ತಿರಲಿಲ್ಲ. ದೇವಾಲಯದ ಒಳಗಡೆ ನಡೆಯುತ್ತಿದ್ದ ವಿಶೇಷ ಪೂಜೆ, ಭಜನೆ ಇತ್ಯಾದಿಗಳನ್ನು  ಟಿ.ವಿ ಪರದಯೆಲ್ಲಿ ನೋಡುತ್ತಾ ಕುಳಿತೆವು.   ಈ ವಿಶೇಷ ಪೂಜೆಯಲ್ಲಿ ಬಹುಶ: 200 ಮಂದಿಗೆ ಅವಕಾಶ ಸಿಗುತ್ತಿರಬೇಕು. ಅವರೆಲ್ಲರೂ  ಕೆಂಪು ಬಣ್ಣದ ಕರವಸ್ತ್ರವನ್ನು ಪೇಟದಂತೆ ತಲೆಗೆ ಸುತ್ತಿಕೊಂಡಿರುವುದು ಕಾಣಿಸಿತು. ಭಜನೆ  ಮತ್ತು  ವಿವಿಧ ಆರತಿಗಳು   ಸಾಂಗವಾಗಿ ನೆರವೇರುತಿದ್ದುವು.  ಸಂಜೆ ನಡೆಯುವ ವಿಶೇಷ ಪೂಜೆಯ ಸಮಯದಲ್ಲಿ ದೇವಾಲಯದ ಒಳಗಡೆ ಇರುವಂತಹ  ಅವಕಾಶ ಸಿಕ್ಕಿದರೆ ತಮ್ಮ ಅದೃಷ್ಟ ಎಂದು ಭಕ್ತರು ಸಂತಸ ಪಡುತ್ತಾರೆ.

ಹೆಲಿಕಾಪ್ಟರ್ ನಲ್ಲಿ ಬಂದವರಿಗಾಗಿ ಇನ್ನೊಂದು ಸರದಿ ಸಾಲು ಇತ್ತು. ಆದರೆ ಅಲ್ಲೂ  ವಿಶೇಷ ಪೂಜೆಯ ಅವಧಿ ಮುಗಿದ ನಂತರವೇ, 0745 ಗಂಟೆಗೆ ಮಂದಿರದ ಒಳಗೆ ಹೋಗಲು ಅನುಮತಿ ದೊರೆಯಿತು.  ಸಾಲಿನಲ್ಲಿ ಮುಂದುವರಿಯುತ್ತಾ, ಸುರಕ್ಷ್ಟತಾ ತಪಾಸಣೆಗಳನ್ನು ಎದುರಿಸುತ್ತಾ ಮುಂದುವರಿದಾಗ, ಬಹಳ ಸುಂದರವಾದ, ಆ   ವೈಷ್ಣೋದೇವಿಯ  ಅಲಂಕೃತ ಮೂರ್ತಿ ಕಾಣಿಸಿತು. ಪಕ್ಕದಲ್ಲಿಯೇ ಗುಹೆಯಿತ್ತು.  ಆ ಗುಹೆಯಲ್ಲಿ  ಮೂರು  ಪಿಂಡಿಗಳ ಆಕಾರದಲ್ಲಿರುವ ದೇವಿಯ ದರ್ಶನವಾಗಿ, ನಮ್ಮ ಶ್ರಮ ಸಾರ್ಥಕವೆನಿಸಿತು.ಗುಹಾಮಾರ್ಗವನ್ನು ಈಗ ಟೈಲ್ಸ್ ಹಾಕಿ ನವೀಕರಿಸಿದ್ದಾರೆ. ಆದರೂ ಸಹಜವಾಗಿ ಹರಿಯುವ ತಂಪಾದ ಒರತೆ ನೀರು  ಕಾಲಿಗೆ ಕಚಗುಳಿಯುಡುತಿತ್ತು.   ದೇವಿಯ ದರ್ಶನವಾಗಿ,  ಹೊರಗಡೆ ಬರುವಾಗ ಪ್ರತಿಯೊಬ್ಬರಿಗೂ ಪ್ರಸಾದ ಮತ್ತು ಬಿಳಿ ಬಣ್ಣದ ಲೋಹದ  ನಾಣ್ಯವನ್ನು ಪ್ರಸಾದವಾಗಿ ಕೊಡುತ್ತಾರೆ.

ಲಭ್ಯವಿರುವ ಭೌಗೋಳಿಕ ಮಾಹಿತಿಯ ಪ್ರಕಾರ,  ವೈಷ್ಣೋದೇವಿ ದೇವಸ್ಥಾನದ ಗುಹೆಗಳು ಒ೦ದು ಮಿಲಿಯನ್ ವರ್ಷಕ್ಕೂ ಹಳೆಯದಾಗಿವೆ. ಪುರಾಣಗಳಲ್ಲಿಯೂ ತ್ರಿಕೂಟ ಪರ್ವತದ ಬಗ್ಗೆ ಉಲ್ಲೇಖವಿದೆ. ಮಹಾಭಾರತದ ಕಾಲದಲ್ಲಿ, ಕುರುಕ್ಷೇತ್ರ ಯುದ್ಧದ ಮೊದಲು, ದೇವಿಯ ಅನುಗ್ರಹ ಪಡೆಯಲೆಂದು, ಶ್ರೀ ಕೃಷ್ಣನ ಸಲಹೆಯ ಪ್ರಕಾರ, ಅರ್ಜುನನು ಇಲ್ಲಿ ತಪಸ್ಸು ಮಾಡಿದ್ದನಂತೆ.  ವೈಷ್ಣೋದೇವಿಯ ಮೂಲ  ಗುಡಿಯನ್ನು ಪಾಂಡವರು ಸ್ಥಾಪಿಸಿದರೆಂಬ ನಂಬಿಕೆಯೂ ಇದೆ.
(ಚಿತ್ರಕೃಪೆ: ಅಂತರ್ಜಾಲ)

….ಮುಂದುವರಿಯುವುದು..

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 5  :   http://surahonne.com/?p=18764

– ಹೇಮಮಾಲಾ.ಬಿ, ಮೈಸೂರು 

3 Responses

  1. ನಿಮ್ಮ ಅನುಭವ ಓದುತ್ತಾ ವಿಶಿಷ್ಟ ಅನುಭೂತಿ ಓದುಗರಿಗೂ. ವಿಶೇಷ ಪೂಜೆಗೆ ಶುಲ್ಕವಿರಬಹುದೇನೋ.

    • Hema says:

      ಧನ್ಯವಾದಗಳು. ವಿಶೇಷ ಪೂಜೆಗೆ ಶುಲ್ಕವಿಲ್ಲ . ಸಂಜೆ ಆರು ಗಂಟೆಯ ಸಮಯದಲ್ಲಿ, ಅಲ್ಲಿಯ ಹಾಲ್ ನಲ್ಲಿ ಕೂರಲು ಸಾಧ್ಯವಿರುವಷ್ಟು ( ಸುಮಾರು 300 ) ಜನರಿಗೆ, ಮೊದಲು ಬಂದವರಿಗೆ ಅವಕಾಶ ಸಿಗುತ್ತದೆ. ಈ ಬಗ್ಗೆ ಗೊತ್ತಿದ್ದವರು, ಸರದಿ ಸಾಲಿನಲ್ಲಿ ಕಾದು ಕುಳಿತಿರುತ್ತಾರೆ. ಒಮ್ಮೆ ಆ ಭಜನೆ ಹಾಲ್ ಗೆ ಸೇರಿದರೆ, ಪೂಜೆ ಮುಗಿಯುವ ವರೆಗೂ (ಒಂದು ಗಂಟೆ) ಹೊರಗೆ ಬರುವಂತಿಲ್ಲ.

      • ಓಹ್! ಅಚ್ಚರಿಯ ವಿಷಯ! ಕಂಡಲ್ಲೆಲ್ಲಾ ಶುಲ್ಕ ಸಂಗ್ರಹಿಸುವ ಎಷ್ಟು ಕ್ಷೇತ್ರಗಳಿಲ್ಲ! ಮಾದರಿ ಎನಿಸಿತು. ಧನ್ಯವಾದಗಳು 🙂

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: