ಬದಲಾಗದ ಬದಲಾವಣೆ
ನಾವೆಲ್ಲರೂ ಸಮಾಜದಲ್ಲಿ ಬದುಕುತ್ತಿದ್ದೇವೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುವುದು ಸಹಜ. ವ್ಯಕ್ತಿ ತಾನು ವಾಸಿಸುವ ಸಮಾಜ ಹೀಗೆಯೇ ಇರಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ನಮ್ಮ ಸುತ್ತಲೂ ಒಳ್ಳೆಯ ಆಶಾದಾಯಕ ಸುಧಾರಣೆ ಆಗಬೇಕೆಂದು ಒಬ್ಬ ಚಿಂತಕ ಸದಾ ಚಿಂತಿಸುತ್ತಾನೆ. ಆ ಪ್ರಗತಿಪರ ಬದಲಾವಣೆಗಾಗಿ ತನ್ನನ್ನು ತಾನು ಕಾರ್ಯೊನ್ಮುಕಾಗಿಸಿಕೊಳ್ಳುತ್ತಾನೆ. ಸಮಾಜದ ಸುಧಾರಣೆಗಾಗಿ ಅಥವಾ ತಾನು ಇರುವ ವಾತಾವರಣದ ಪ್ರಗತಿಗಾಗಿ ಸಹಕರಿಸುವ ಎಲ್ಲರೊಂದಿಗೂ ಬೆರೆಯುತ್ತಾನೆ. ಒಂದು ವ್ಯವಸ್ಥೆಯ ಸಯಧಾರಣೆಗಾಗಿ ಹಲವು ಕನಸನ್ನು ಇಟ್ಟುಕೊಂಡಿರುತ್ತಾನೆ.
ಭೂತದಲ್ಲಿ ತಾನು ಕಂಡ ಕನಸನ್ನು ನಿಜವನ್ನಾಗಿಸುವ ವ್ಯಕ್ತಿ ಒಂದು ಉನ್ನತ ಸ್ಥಾನವನ್ನು ಅಲಂಕರಿಸಿರುವುದನ್ನು ಕಂಡಾಗ ಸಂತಸ ಪಡುತ್ತಾನೆ. ಈಗಲಾದರೂ ಬದಲಾವಣೆ ಪ್ರಗತಿ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡು ಉತ್ಸಾಹಿಯಾಗಿರುತ್ತಾನೆ. ಆದರೆ ದುರದೃಷ್ಟವಶಾತ್ ಉನ್ನತ ಸ್ಥಾನವನ್ನು ಅಲಂಕರಿಸಿದ ಪುಣ್ನಾತ್ಮಃ ಬದಲಾವಣೆ ತರುವ ಭರವಸೆ ನೀಡಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ದಿಕ್ಕಿನಲ್ಲಿ ನಿರತಾಗುತ್ತಾನೆ. ಆದರೆ ಆ ಸಾಮಾನ್ಯ ವ್ಯಕ್ತಿ ಮಾತ್ರ ಮುಂದೆ ಬದಲಾವಣೆ ಆಗಬಹುದು, ತರಬಹುದು ಎಂದು ಕಾಯುತ್ತಿರುತ್ತಾನೆ. ದಿನಗಳು ತಿಂಗಳಾಗಿ, ತಿಂಗಳು ವರ್ಷಗಳಾಗಿ, ವರ್ಷಗಳು ದಶಕಗಳಾಗಿ ಕಾಲ ಬದಲಾದರೂ ಸಹ ಆ ಅಧಿಕಾರಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಬಿಡುತ್ತಾನೆ.
ಯಾರಿಗಾಗಿ ಕಾನೂನು, ನೀತಿ-ನಿಯಮ, ಚೌಕಟ್ಟನ್ನು ನಿರ್ಮಿಸಲಾಗಿತ್ತೋ ಅವರನ್ನು ಹೊರತುಪಡಿಸಿ ಉಳಿದವರೆಲ್ಲಾ ತಾನು ನಿರ್ಮಿಸಿದ ವ್ಯವಸ್ಥೆಗೆ ಬಲಿಯಾಗುತ್ತಾರೆ ವಿನಃ, ಅಪರಾಧಿ ಮಾತ್ರ ಹಾಯಾಗಿರುತ್ತಾನೆ. ಅಧಿಕಾರ ಇದ್ದರೂ, ಬದಲಾವಣೆಗಳನ್ನು ತರುವಷ್ಟು ಅವಕಾಶಗಳು ಇದ್ದರೂ ಸಹ ವ್ಯವಸ್ಥೆಯ ಸುಧಾರಣೆಗೆ ಸರಿಯಾದ ದೃಢವಾದ ನಿರ್ಧಾರವನ್ನು ಕೈಗೊಳ್ಳದೇ ಸನ್ನಿವೇಶದ ಕೈಗೊಂಬೆಯಾಗಿ ತನ್ನ ಸ್ಥಾನದ ಭದ್ರತೆ ಅಷ್ಟೇ ನೋಡಿಕೊಳ್ಳುತ್ತಾನೆ.
ಒಬ್ಬ ಶಿಕ್ಷಿತ ಸಾಗರದಷ್ಟು ಅಪಾರಾದ ಜ್ಞಾನವನ್ನು , ಅಧಿಕಾರ-ಸ್ಥಾನವನ್ನು ಹೊಂದಿಯು ಕೂಡ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆಯುತ್ತಿರಯವ ಅನ್ಯಾಯದ ಪರಿಚಯವಿದ್ದು ಸಹ, ಒಂದು ಚಿಕ್ಕ ವ್ಯವಸ್ಥೆಯನ್ನು, ನಿಯಮವನ್ನು ಯಾರಿಗಾಗಿ ಮಾಡಲಾಗಿತ್ತೋ ಅವರಿಗೆ ತಪ್ಪಿನ ಅರಿವಾಗುವಂತೆ ಮಾಡಿ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗದೇ ಹೋದ ಮೇಲೆ, ಸಾಮಾನ್ಯ ವ್ಯಕ್ತಿ ತಾನು ಬದಲಾವಣೆ ಬಗ್ಗೆ ಇಟ್ಟುಕೊಂಡ ಕನಸಿಗೆ ಏನು ಅರ್ಥ?
ಒಂದು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ, ಕ್ಷುಲ್ಲಕ ಕಾರಣ ಒಡ್ಡಿ ಸೂತ್ರದ ಗೊಂಬೆಯಾಗಿ ಕುಣಿಯುತ್ತಾ, ತನ್ನ ಸ್ಥಾನ ಭದ್ರವಾಗಿದೆ ಇಷ್ಟು ಸಾಕು ಎಂದು ಬದಲಾವಣೆ ಬಗ್ಗೆ ಚಿಂತಿಸದೇ ಹೋದರೆ ಜನರೇ ಒಂದು ದಿನ ಅಧಿಕಾರಿಯನ್ನು ಆ ಸ್ಥಾನದಿಂದ ಬದಲಾಯಿಸುತ್ತಾರೆ, ಅಂತಹ ಕಾಲ ಇನ್ನೂ ಹೆಚ್ಚು ದಿನವಿಲ್ಲ… ಬದಲಾವಣೆಗಾಗಿ ವ್ಯಕ್ತಿ ತನ್ನ ತನವನ್ನು, ಸ್ಥಾನವನ್ನು ಲೆಕ್ಕಿಸದೇ ಪ್ರಗತಿಯ ಬದಲಾವಣೆಗಾಗಿ ಮುಂದಾದರೆ ಎಲ್ಲವೂ ದೊರೆಯುತ್ತದೆ, ಇಲ್ಲದಿದ್ದರೆ ಎಲ್ಲವೂ ನೋಡ ನೋಡುತ್ತಿದ್ದಂತೆ ಮಾಯವಾಗುತ್ತದೆ.. ಆ ನಂತರ ತಿರುಕನ ಕನಸೇ ಗತಿ..
ಬದಲಾವಣೆ ಆಗದಿದ್ದರೆ ಬದಲಾಯಿಸುತ್ತಾರೆ ಎಚ್ಚರ!!!!
– ಸುರೇಂದ್ರ ಪೈ , ಭಟ್ಕಳ