ಪರೀಕ್ಷೆ ಇರಲಿ, ಟೆನ್ಷನ್ ಬೇಡ

Share Buttonಜಾಲತಾಣದಲ್ಲಿ ಕಾಣಿಸಿದ ಯಾವುದೋ ಒಂದು ಪೋಸ್ಟ್ ನಲ್ಲಿ ಪೋಷಕರೊಬ್ಬರು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಗುವಿಗೆ, ಐ.ಐ.ಟಿ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಯಾವಾಗಿನಿಂದ ತರಬೇತಿ ಕೊಡಿಸಿದರೆ ಸೂಕ್ತ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಬ್ಬರು “ಅಯ್ಯೊ, ಈಗಾಗಲೇ ಬಹಳಷ್ಟು ತಡವಾಗಿದೆ……ನಿಮ್ಮ ಮಗು ತನ್ನ ತಾಯಿಯ ಗರ್ಭದಲ್ಲಿರುವಾಗ ಟ್ಯೂಷನ್ ತೆಗೆದುಕೊಳ್ಳಬೇಕಾಗಿತ್ತು..” ಎಂದು ವ್ಯಂಗ್ಯವಾಗಿಯೇ ಉತ್ತರಿಸಿದ್ದರು. ಪ್ರತಿಕ್ರಿಯೆಯಲ್ಲಿದ್ದ ವಿಡಂಬನೆಯು ಮೊನಚಾಗಿಯೇ ಇದ್ದರೂ, ಅದಲ್ಲಿರುವ ಕಾಳಜಿಯನ್ನು ಗುರುತಿಸಬಹುದು. ಇನ್ನೂ ಪ್ರಾಥಮಿಕ ಶಾಲೆಯಲ್ಲಿರುವ ಮಗು. ಆಡುತ್ತಾ, ಕುಣಿಯುತ್ತಾ, ಆ ತರಗತಿಯ ಪಾಠ ಮಾತ್ರ ಓದಿ ಬೆಳೆಯುವ ವಯಸ್ಸು. ಈ ವಯಸ್ಸಿನಲ್ಲಿಯೇ ಪೋಷಕರು ತಮ್ಮ ಆಸೆ,ಆಕಾಂಕ್ಷೆ ಹಾಗೂ ನಿರ್ಧಾರಗಳನ್ನು ಮಗುವಿನ ಮೇಲೆ ಹೇರಿ ಅದರ ಬಾಲ್ಯವನ್ನು ಕಿತ್ತುಕೊಳ್ಳುವುದು ಸರ್ವಥಾ ಸರಿಯಲ್ಲ.

ಕೆಲವು ವರ್ಷಗಳ ಹಿಂದೆ, ನಮ್ಮ ಮಗ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದ . ಅವನಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳಲ್ಲೂ ನಾನು ಎಂದಿನಂತೆ ಮುಂಜಾನೆ ವಾಯುವಿಹಾರದಲ್ಲಿದ್ದೆ. ಪರಿಚಿತ ಮಹಿಳೆಯೊಬ್ಬರು ನನ್ನೊಡನೆ ‘ನಿಮ್ಮ ಮಗನಿಗೆ ಪಿ.ಯು.ಸಿ ಎಕ್ಸಾಂ ನಡೀತಿದೆ ಅಲ್ವಾ…ಮತ್ತೆ ನೀವಿಲ್ಲಿ ಆರಾಮವಾಗಿ ವಾಕ್ ಮಾಡ್ತಿದ್ದೀರಾ….’ ಎಂದು ಆಶ್ಚರ್ಯದಿಂದಲೇ ಕೇಳಿದರು.

ಮಗನಿಗೆ ಪರೀಕ್ಷೆ ಇದ್ದರೆ ಅಮ್ಮ ವಾಕಿಂಗ್ ಮಾಡಬಾರದೆ ಎಂದುಕೊಳ್ಳುತ್ತಾ “ ತೀರಾ ಚಿಕ್ಕ ತರಗತಿಗಳಲ್ಲಿ ಹೊರತು ಪಡಿಸಿದರೆ, ಅವನ ಪಾಠಗಳ ಬಗ್ಗೆ ನಾನು ಗಮನ ಹರಿಸಲಿಲ್ಲ……ನಾವು ಓದಿದ ಪಠ್ಯಕ್ಕೂ ಈಗಿನ ಸಿಲಬಸ್ ಗೂ ಬಹಳ ವ್ಯತ್ಯಾಸವೂ ಇದೆ…ಅವನ ಪಾಡಿಗೆ ಓದ್ಕೋತಾನೆ….ಅವನಾಗಿ ಏನಾದರೂ ಕೇಳಿದರೆ ಸಹಾಯ ಮಾಡುತ್ತೇನೆ ಅಷ್ಟೆ’ ಎಂದೆ. ಆಕೆ ನನ್ನನ್ನು ಮಹಾ ಬೇಜವಾಬ್ದಾರಿಯ ಅಮ್ಮ ಎಂಬಂತೆ ದಿಟ್ಟಿಸಿ ನೋಡಿದರು.

‘ಫಿಸಿಕ್ಸ್ ತುಂಬಾ ಈಸಿ ಇತ್ತು……ಮಾಥ್ಸ್ ಸಿಕ್ಕಾಬಟ್ಟೆ ಕಷ್ಟ ಇತ್ತು…..ಸಿಲಬಸ್ ನಲ್ಲಿ ಇಲ್ಲದ ಪ್ರಶ್ನೆ ಬಂದಿತ್ತು….”
“ಥರ್ಡ್ ಚಾಪ್ಟರ್ ನಿಂದ ಒಂದು ಪ್ರಶ್ನೆನೂ ಬಂದಿಲ್ಲ…. ಲಾಸ್ಟ್ ಟೆನ್ ಫಿಫ್ಟೀನ್ ಯೀರ್ಸ್ ನ ಪೇಪರ್ಸ್ ವರ್ಕ್ ಔಟ್ ಮಾಡ್ಸಿ ಪ್ರಿಪೇರ್ ಆಗಿದ್ರೂ ಕಷ್ಟ ಆಯ್ತು ಅಂತ ಬೇಜಾರಾಯ್ತು…..ಅದೇ ಬೇಜಾರಲ್ಲಿ ಮುಂದಿನ ಪೇಪರ್ಸ್ ಚೆನ್ನಾಗಿ ಮಾಡಿಲ್ಲ … “
“ ಎರಡು ಸಲ ರಿವಿಶನ್ ಆಯ್ತಾ….ಆ ಚಾಪ್ಟರ್ ಇಂಪಾರ್ಟೆಂಟ್ ಅಂದಿದ್ದಕ್ಕೆ ಚೆನ್ನಾಗಿ ಪ್ರಿಪೇರ್ ಆಗಿದ್ವಿ………”
” ಎಕ್ಸಾಂ ಟೈಮ್ ಅಲ್ವಾ….ಮನೆಲಿ ಕೇಬಲ್ ಟಿವಿ ಇಲ್ಲ…..” ಹೀಗೆ ಇಬ್ಬರು ಮಾತೆಯರ ನಡುವೆ ಮಾತು ಸಾಗುತ್ತಾ ಇತ್ತು.

ತಮ್ಮ ಮಕ್ಕಳ ಪರೀಕ್ಷೆಯ ಸಮಯದಲ್ಲಿ ವಿಪರೀತ ಕಾಳಜಿ ವಹಿಸಿ, ತಾವೂ ಚಿಂತೆ ಮಾಡುತ್ತಿದ್ದ ಅವರನ್ನು ನೋಡಿದಾಗ ಇವು ಯಾವುದನ್ನೂ ಮಾಡದ, ಮಗನ ಪರೀಕ್ಷಾ ಸಮಯದಲ್ಲೂ ಮನೆಯ ಒಳಗೂ, ಹೊರಗೂ ಎಂದಿನ ದಿನಚರಿಯನ್ನೇ ಪಾಲಿಸುತ್ತಿದ್ದ, ಮನೆ-ಆಫೀಸು ಎಂದು ನನ್ನದೇ ಕೆಲಸಗಳ ಒತ್ತಡದಲ್ಲಿ ಮುಳುಗುತಿದ್ದ ನನಗೆ ಆ ಕ್ಷಣಕ್ಕೆ ಅಪರಾಧಿ ಭಾವ ಮೂಡಿದ್ದು ಸುಳ್ಳಲ್ಲ.

ನಮ್ಮ ಮಗನಿಗೆ ಬೇಕಾದ ಶಾಲಾ ಪರಿಕರಗಳನ್ನು ಒದಗಿಸುವುದು, ಶಾಲೆಗೆ ಹೋಗಲು ವಾಹನದ ವ್ಯವಸ್ಥೆ, ಆಗೊಮ್ಮೆ-ಈಗೊಮ್ಮೆ ಅಭ್ಯಾಸದ ಬಗ್ಗೆ ವಿಚಾರಿಸುವುದು, ಸೂಚನೆ ಬಂದಾಗ ಶಿಕ್ಷಕ-ಪೋಷಕರ ಸಭೆಗೆ ಹಾಜರಾಗುವುದು….ಇಷ್ಟೇ ನಾವು ಅವನ ವಿದ್ಯಾಭ್ಯಾಸದ ಬಗ್ಗೆ ಗಮನಿಸುತ್ತಿದ್ದೆವು. ಶೈಕ್ಷಣಿಕ ಪ್ರಗತಿ ಅಥವಾ ಇನ್ನಿತರ ವಿಚಾರಗಳಿಗಾಗಿ ಎಂದೂ ಶಾಲೆಯಿಂದ ದೂರು ಬಂದಿದ್ದಿಲ್ಲ. ತನ್ನ ಕ್ಲಾಸಿನಲ್ಲಿ ಎಂದೂ ಪ್ರಥಮ ಸ್ಥಾನ ಗಳಿಸಿದವನಲ್ಲ ಹಾಗೆಂದು ಯಾವಾಗಲೂ ಡಿಸ್ಟಿಂಕ್ಷನ್ ನಲ್ಲಿರುತ್ತಿದ್ದ. ಆಟೋಟ ಸ್ಪರ್ಧೆಗಳಲ್ಲಿ , ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದ, ಹಾಗೆಂದು ಪದಕಗಳನ್ನು ಬಾಚಿಕೊಂಡವನಲ್ಲ. ನಾವು ‘ಎವರೇಜ್ ‘ ಬುದ್ಧಿಮತ್ತೆಯ ಪೋಷಕರಾದುದರಿಂದ ಆತನಿಂದ ‘ಎಕ್ಸಲೆಂಟ್’ ಅನ್ನು ನಿರೀಕ್ಷಿಸಬಾರದು, ಅದೃಷ್ಟವಿದ್ದಂತಾಗಲಿ ಎಂಬ ನಿಲುವಿನಲ್ಲಿದ್ದೆವು. ಒಟ್ಟಿನಲ್ಲಿ ಮನೆಯಲ್ಲಿ ಯಾರಿಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಒತ್ತಡವಿರಲಿಲ್ಲ.

ಅದೇ ಭಾವದಿಂದ ಮಗನ ಬಳಿ ‘ನಿನ್ನ ಮಾಥ್ಸ್ ಪೇಪರ್ ಬಹಳ ಟಫ್ ಇತ್ತಂತೆ ಹೌದೆ?…15 ವರ್ಷಗಳ ಪ್ರಶ್ನೆಪತ್ರಿಕೆಯನ್ನು ಅಭ್ಯಾಸ ಮಾಡಿದವರಿಗೂ ಕಷ್ಟವಾಗಿತ್ತಂತೆ… ‘ ಎಂದೆ. ‘ಕಳೆದ 15 ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಅಭ್ಯಾಸ ಮಾಡುವ ಅಗತ್ಯವೇನಿತ್ತು? ಈ ಅವಧಿಯಲ್ಲಿ ಸಿಲಬಸ್ ಬದಲಾಗಿದೆ….ನನಗೆ ಎಕ್ಸಾಂ ಸುಮಾರಾಗಿತ್ತು ‘ ಅಂತ ಮಗ ಶಾಂತವಾಗಿ ಉತ್ತರಿಸಿದಾಗ, ನೆಮ್ಮದಿಯೆನಿಸಿತು.

ಮುಂದೆ ಫಲಿತಾಂಶ ಬಂದಾಗ ನಮ್ಮ ಮಗನಿಗೆ ತಕ್ಕ ಮಟ್ಟಿಗೆ ಉತ್ತಮ ಅಂಕಗಳು ಲಭಿಸಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಲು ಮೆರಿಟ್ ಸೀಟು ಸಿಕ್ಕಿತ್ತು. ನಾಲ್ಕು ವರ್ಷಗಳ ನಂತರ ಸ್ನಾತಕೋತ್ತರ ಪದವಿಯ ಇನ್ನೊಂದು ಘಟ್ಟ. ಇಲ್ಲಿಯೂ ಯಾವುದೇ ದೈನಂದಿನ ಚಟುವಟಿಕೆಗಳಿಗೆ ಭಂಗವಿಲ್ಲದೆ, ಮನರಂಜನೆ-ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ, ವಿಶೇಷ ಟ್ಯೂಷನ್ ತರಗತಿಗೆ ಸೇರದೆ, ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಬರೆದು, ಯಾವುದೇ ಮೀಸಲಾತಿ ಸೌಲಭ್ಯವಿಲ್ಲದೆ, ಐ.ಐ.ಟಿ ವಿದ್ಯಾಸಂಸ್ಥೆಯಲ್ಲಿ ಸೀಟು ದೊರಕಿಸಿಕೊಂಡ. ಇನ್ನೊಂದು ಗಮನಾರ್ಹ ವಿಷಯವೇನೆಂದರೆ, ನಮ್ಮ ಮಗನಿಗಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ ಹಾಗೂ ಖಂಡಿತಾ ಐ.ಐ.ಟಿಯಲ್ಲಿ ಸೀಟು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ಅದೇಕೋ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿರಲಿಲ್ಲ. ಈಗ ಅದೇ ಪರಿಚಿತರು ‘ ನಿಮ್ಮ ಹುಡುಗ ಆಟ ಆಡ್ಕೊಂಡೇ ಎಷ್ಟು ಚೆನ್ನಾಗಿ ಓದ್ತಾನೆ….ಕೂಲ್ ಆಗಿರ್ತಾನೆ..ನೀವೂ ಅಷ್ಟೆ ಏನೂ ಟೆನ್ಶನ್ ತಗೊಳ್ಳಲ್ಲ..ಒಳ್ಳೇದಾಯ್ತು ‘ ಎಂದಾಗ ನನ್ನನ್ನು ಕಾಡುತ್ತಿದ್ದ ಅಪರಾಧಿ ಭಾವವು ಸಂಪೂರ್ಣವಾಗಿ ತಿಳಿಯಾಯಿತು.

ಇತ್ತೀಚೆಗೆ ಮಗನ ಬಳಿ ‘ನನ್ನ ಕೆಲಸದ ಒತ್ತಡದಲ್ಲಿ ನಿನ್ನ ದೈನಂದಿನ ವಿದ್ಯಾಭ್ಯಾಸವನ್ನು ನಾನು ಸರಿಯಾಗಿ ಗಮನಿಸಲೇ ಇಲ್ಲ, ಅದರಿಂದ ಅನಾನುಕೂಲವಾಗಿತ್ತೇ’ ಎಂದಾಗ, ಪಕಪಕನೇ ನಕ್ಕ ಮಗರಾಯ. ‘ಅಮ್ಮ , ನೀವು ನನ್ನ ಪುಸ್ತಕಗಳನ್ನು ದಿನಾ ನೋಡದಿದ್ದುದೇ ಭಾರೀ ಒಳ್ಳೆದಾಯಿತು…ನನ್ನ ಕೆಲವು ಪ್ರೆಂಡ್ಸ್ ಗಳ ಪೇರೆಂಟ್ಸ್ ಪ್ರತಿದಿನ ಮಕ್ಕಳ ಬುಕ್ಸ್ ನೋಡಿ, ಕಮೆಂಟ್ಸ್ ಮಾಡುವುದು, ಮಿಸ್ ಬಳಿ ಬಂದು ಕೇಳುವುದು, ಬಯ್ಯುವುದು, ಅದನ್ನು ತಪ್ಪಿಸಲು ಮಕ್ಕಳು ಪುಸ್ತಕಗಳನ್ನು ಬೇಕೆಂದೇ ಶಾಲೆಯಲ್ಲಿ ಬಿಟ್ಟು ಬರುವುದು, ಕಡಿಮೆ ಮಾರ್ಕ್ಸ್ ಬಂದರೆ ಸುಳ್ಳು ಹೇಳುವುದು…. ..ಅಯ್ಯೋ ಪಾಪ ಅವರ ಪಾಡು ಅನಿಸುತ್ತೆ’ ಅಂದ.

ಪೋಷಕರು ತಮ್ಮ ಮಕ್ಕಳ ಅಭ್ಯಾಸದ ಪ್ರಗತಿಯನ್ನು ಗಮನಿಸುತ್ತಿರಬೇಕು, ಆದರೆ ತಾವೇ ಪರೀಕ್ಷಾರ್ಥಿಗಳಾಗಬಾರದು. ಪ್ರತಿ ಮಗುವಿಗೂ ತನ್ನ ಆಸಕ್ತಿಯ ವಿಷಯ ಹಾಗೂ ಕಲಿಕೆಯ ಸಾಮರ್ಥ್ಯದ ಮಿತಿ ಇರುತ್ತದೆ. ಪೋಷಕರು ಮಕ್ಕಳಿಗೆ ಪಠ್ಯ ವಿಷಯದ ಗ್ರಹಿಕೆ ಮತ್ತು ಮನನ ಮಾಡಿಕೊಳ್ಳಲು ಪೂರಕವಾದ ವಾತಾವಾರಣವನ್ನು ಕಲ್ಪಿಸಿಕೊಟ್ಟರೆ ಸಾಕು, ಪ್ರತಿ ಅಧ್ಯಾಯವನ್ನು ತಾವೇ ಓದಿ, ಚರ್ಚಿಸಿ, ತಮ್ಮದೇ ಶೈಲಿಯಲ್ಲಿ ಅರ್ಥೈಸಿ ಮಕ್ಕಳ ಮೇಲೆ ಒತ್ತಡ ಹೇರಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ.

ಇನ್ನು ಕೆಲವೇ ದಿನಗಳಲ್ಲಿ ಮಾರ್ಚ್ ತಿಂಗಳು ಬರಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ-ಫಲಿತಾಂಶಗಳ ಕಾಲ ಸನ್ನಿಹಿತವಾಗಿದೆ. ವಿದ್ಯಾರ್ಥಿಗಳೆಲ್ಲರೂ ಚೆನ್ನಾಗಿ ಓದಿ,ಯಶಸ್ಸು ನಿಮ್ಮದಾಗಲಿ . ಅಕಸ್ಮಾತ್ ಅಂಕಗಳಿಕೆ ಕಡಿಮೆ ಇದ್ದರೆ ಅತಿಯಾಗಿ ಕೊರಗಿ ಮರುಗುವ ಅಗತ್ಯವಿಲ್ಲ. ಮರಳಿ ಯತ್ನವ ಮಾಡಿ, ಅಥವಾ ಅಧ್ಯಯನದ ವಿಷಯವನ್ನು ಬದಲಿಸಿಕೊಳ್ಳಿ . ವಿದ್ಯಾಭ್ಯಾಸದ ನಂತರದ ಉದ್ಯೋಗ ಪರ್ವದಲ್ಲಿ ಅಂಕಕ್ಕಿಂತ ಕೌಶಲ, ಸಾಮಾನ್ಯ ಜ್ಞಾನ ಹಾಗೂ ಸಂವಹನ ಸಾಮರ್ಥ್ಯಗಳಿಗೆ ಹೆಚ್ಚು ಮನ್ನಣೆ ಇರುತ್ತದೆ. ಹಾಗಾಗಿ, ಅಂಕಗಳಿಕೆಯೊಂದೇ ಜೀವನದ ಪರಮ ಗುರಿಯಲ್ಲ, ಅಷ್ಟಕ್ಕೂ ಎಲ್ಲಾ ಮಕ್ಕಳೂ ಅಂಕಗಳಿಕೆಯನ್ನು ಮಾತ್ರ ತಮ್ಮ ಗುರಿಯಾಗಿಸಿಕೊಂಡಿದ್ದರೆ ಇಂದು ಪ್ರಪಂಚದ ವಿಭಿನ್ನ ಕ್ಷೇತ್ರಗಳಲ್ಲಿ ಅಸಾಮಾನ್ಯ ಕೊಡುಗೆಗಳನ್ನಿತ್ತ ಬಹಳಷ್ಟು ವಿಜ್ಞಾನಿಗಳು, ಕವಿಪುಂಗವರು, ರಾಜಕೀಯ ನಾಯಕರು, ಸಾಹಿತಿಗಳು, ಶಿಲ್ಪಿಗಳು, ಕ್ರಿಕೆಟ್ ಪಟುಗಳು, ಸಿನೆಮಾ ತಾರೆಯರು ಮುಂತಾದವರು ಇರುತ್ತಿರಲಿಲ್ಲ !

ಅತಿಯಾದ ಕಾಳಜಿಯಿಂದ ಮಕ್ಕಳ ಮೇಲೆ ಹೇರುವ ಒತ್ತಡವು ಅವರಿಗೆ ಪೂರಕವಾಗುವ ಬದಲು ಮಾರಕವಾಗುವ ಸಾಧ್ಯತೆ ಇದೆ, ಅಂಕಗಳಿಕೆಯಲ್ಲಿ ವಿದ್ಯಾರ್ಥಿಗಳ ಶ್ರಮದ ಜೊತೆಗೆ, ಸ್ಮರಣಶಕ್ತಿ, ವಂಶವಾಹಿಗಳು, ಆರೋಗ್ಯ, ಉತ್ತಮ ಶಾಲಾ ಪರಿಸರ, ಮನೆಯಲ್ಲಿ ಪೂರಕ ವಾತಾವರಣ ಇತ್ಯಾದಿ ಕಾರಣ ಎಂಬುದನ್ನು ಪೋಷಕರೂ ಮನಗಾಣಬೇಕು.

– ಹೇಮಮಾಲಾ.ಬಿ

15 Responses

 1. Sowjanya Kadappu says:

  ಪಾಠವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅಂಕಗಳು ಕಡಿಮೆ ಬಂದೀತೆಂದು, ಮಕ್ಕಳನ್ನು ಪುಸ್ತಕದ ಹುಳಗಳಾಗಿಸುವ ಪೋಷಕರಿಗೆ ಉತ್ತಮ ಸಂದೇಶ ನೀಡುವಂತಿದೆ. ಉತ್ತಮ ಲೇಖನ

 2. Lakshmi V says:

  ಸಕಾಲಿಕ ಬರಹ,ಚೆನ್ನಾಗಿದೆ

 3. sylvie says:

  Thank you so much for the post.Really thank you! Keep writing.

 4. Vasundhara k m says:

  ಈ ಬರಹವನ್ನು ಎಲ್ಲಾ ಪೋಷಕರೂ ಓದಿದರೆ ಒಳ್ಳೆಯದು. ನಿಮ್ಮಂತಹ ಧೋರಣೆಯುಳ್ಳ ಪೋಷಕರ ಮಕ್ಕಳು ಆರಾಮಾಗಿರುತ್ತಾರೆ…

 5. ಆಶಾ ನೂಜಿ says:

  ಈಗ ಹಾಗೆ ಪರೀಕ್ಷೆ ಪೋಷಕರೀಗಾ ಅಂತ ಅನಿಸುತ್ತೆ …ಮಕ್ಕಳಿಂದ ಹೆಚ್ಚು ಪೋಷಕರಿಗೆ ಟೆನ್ಶನ್…..ಚಂದದ ಬರಹ

 6. Padma Anand says:

  ಅಗತ್ಯಕ್ಕಿಂತ ಅತೀ ಹೆಚ್ಚು ತಲೆ ಕೆಡಿಸಿಕೊಳ್ಳುವ ಮಾತಾಪಿತೃಗಳಿಗೆ ಉತ್ತಮ ಕಿವಿಮಾತುಗಳನ್ನು ಹೇಳುವ, ಪರೀಕ್ಷಾ ಸಮಯದ ಸಂದರ್ಭೋಜಿತ ಲೇಖನಕ್ಕಾಗಿ ಅಭಿನಂದನೆಗಳು.

 7. ಉತ್ತಮ ಸಂದೇಶವನ್ನು ಹೊತ್ತು ತಂದ ಸಕಾಲೀಕ ಬರಹ…ಧನ್ಯವಾದಗಳು ಗೆಳತಿ ಹೇಮಾ

 8. ಇಂದಿನ ಕಾಲದ ಪೋಷಕರಿಗೆ ಉತ್ತಮ ಸಂದೇಶ

 9. ನಯನ ಬಜಕೂಡ್ಲು says:

  ಸೊಗಸಾದ ಲೇಖನ. ಮಕ್ಕಳು, ಶಾಲೆ, ವಿದ್ಯಭ್ಯಾಸದ ವಿಚಾರದಲ್ಲಿ ಇವತ್ತಿಗೂ ಪರಿಸ್ಥಿತಿ ಚೂರು ಬದಲಾಗದೆ ಹಾಗೆಯೇ ಮುಂದುವರಿದಿದೆ. ಇಂದಿಗೂ ಪುಟ್ಟ ಮಕ್ಕಳಿಂದ ಹಿಡಿದು ಕಾಲೇಜ್ ಗೆ ಹೋಗೋ ಯುವಕರ ವರೆಗೂ ಬೆಟ್ಟದಷ್ಟು ನಿರೀಕ್ಷೆಗಳೇ.

 10. ಶಂಕರಿ ಶರ್ಮ says:

  ಮಕ್ಕಳ ವಿದ್ಯಾಭ್ಯಾಸದ ಹಾಗೆಯೇ…ಪರೀಕ್ಷೆಯ ಒತ್ತಡಗಳಿಂದ ದೂರವಾಗಿರಲು ಪೋಷಕರಿಗೆ ಉತ್ತಮ ಸಲಹೆ ..ಸೊಗಸಾದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: