ಎಷ್ಟೊಂದು ಚಂದ ಬಾಲ್ಯ
ಎಷ್ಟೊಂದು ಚಂದ ಬಾಲ್ಯ
ಮರೆಯಲು ಅದು ಅಸಾಧ್ಯ
ಓಣಿಯ ಮಕ್ಕಳೆಲ್ಲರೂ ಸೇರಿ
ಆಡುತ್ತಿದ್ದ ಗೋಲಿ ಲಗೋರಿ
ಕೋಲಾಟ ಕಾಲ್ಚೆಂಡು ಸಾಧ್ಯವೇ
ಮರೆಯಲು ಚಿನ್ನಿ ದಾಂಡು //ಎಷ್ಟೊಂದು//
ಮಳೆ ಬೀಳುವ ಕ್ಷಣದಲಿ ನೆನೆದು
ಕಾಗದ ದೋಣಿಯ ತೇಲಿ ಬಿಟ್ಟು
ಮೈಕೈಯೆಲ್ಲ ಕೆಸರಾಗಲು
ಅಮ್ಮನ ಏಟಿಗೆ ಅಳಲು //ಎಷ್ಟೊಂದು //
ಮರ ಮರದಲಿ ಇಳಿಬಿದ್ದು
ಮರಕೋತಿಯ ಆ ಸದ್ದು
ಹುಣಸೆ ಕುಟ್ಟುಂಡಿ ಕುಟ್ಟಿ
ಬಾಯ್ಚಪ್ಪರಿಸಿದ ಸವಿಯದು //ಎಷ್ಟೊಂದು//
ಊರಿನ ಪಕ್ಕದ ತೋಟಕೆ ನುಗ್ಗಿ
ಕದ್ದು ತಿಂದ ಹಣ್ಣಿನ ರುಚಿಯು
ಎಳೆ ರಾಗಿಯ ಬೆಳಸೆಯ ಗುದ್ದಿ
ತಿಂದು ಸಂಭ್ರಮಿಸಿದ ಖುಷಿಯು //ಎಷ್ಟೊಂದು//
ಈಜಲು ಬಾರದೆ ನೀರಿಗೆ ಬಿದ್ದು
ಗೆಳೆಯರೆಲ್ಲ ದಂಡೆಗೆ ತಂದು
ಹೋದ ಜೀವವ ಮತ್ತೆ ತಂದ
ಮುಗ್ಧತೆಯ ಆ ಸದ್ಬುದ್ದಿ ಸಮಯ //ಎಷ್ಟೊಂದು//
ನೆನೆದರೂ ಈಗಲೂ ಮಗುವಾಗುವೆ
ಆ ತುಂತಾಟಗಳ ನೆನೆಯುವೆ
ಕಳೆದ ಬಾಲ್ಯವೇ ಬಲು ಮಧುರ
ಅದು ನೀಡಿದ ನೆನಪೇ ಅಮರ
-ಅಮುಭಾವಜೀವಿ
ಈಗಿನ ಕಾಲದಲ್ಲಿ ಬಾಲ್ಯದ ತುಂಟಾಟಗಳನ್ನು ಅನುಭವಿಸಲು ಯಾರಿಗೂ ಸಮಯವಿಲ್ಲ; ನಾವು ಈ ಗೆ ಕಾಲದಲ್ಲಿ ಬಾಲ್ಯವನ್ನು ಹೇಗೆ ಕಳೆಯುತಿದ್ದೆವೆಂದು ಹೇಳಿದರೆ ಈಗಿನ ಮಕ್ಕಳಿಗೆ ಆಸೆಯಾಗುತ್ತದೆ
ನಿಮ್ಮ ಕವನದ ಮೂಲಕ ನಮ್ಮ 70 ವರ್ಷದ ಹಿಂದಿನ ಬಾಲ್ಯದಾಟಗಳ ಸವಿನೆನಪುಗಳನ್ನು ಮಾಡಿಕೊಟ್ಟಿರಿ. ಸುಂದರ ಪದ್ಯ. ಕಾವ್ಯಕೃಷಿ ಮುಂದುವರಿಸಿ.