ಆಲ್ಬರ್ಟ್ ಐನ್ ಸ್ಟೈನ್ : ‘ದೇವರು ಪಗಡೆ ಆಡುವುದಿಲ್ಲ!’

Share Button

ತನ್ನ ಮರಣಕ್ಕೆ ಒಂದು ವರ್ಷ ಮೊದಲೇ, 1954 ರಲ್ಲಿ, ಐನ್ ಸ್ಟೈನ್ ತನ್ನ ನಿಡುಗಾಲದ ಗೆಳೆಯ ಲೀನಸ್ ಪೌಲಿಂಗ್ (ರಸಾಯನಶಾಸ್ತ್ರಜ್ಞ ಮತ್ತು ಎರಡುಬಾರಿ ನೋಬೆಲ್ ವಿಜೇತ) ಜೊತೆ ಒಂದು ಆತ್ಮೀಯ ಸಂಭಾಷಣೆಯಲ್ಲಿ ನಿರತರಾಗಿದ್ದರು. ಐನ್ ಸ್ಟೈನ್ ಅನ್ನುತ್ತಾರೆ, “ನನ್ನ ಜೀವನದಲ್ಲಿ ನಾನು ಮಾಡಿದ ಒಂದು ತಪ್ಪು ಏನೆಂದರೆ, ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಬರೆದ ಒಂದು ಪತ್ರ. ಆ ಪತ್ರದಲ್ಲಿ ಅಣುಬಾಂಬ್ ತಯಾರು ಮಾಡಬಹುದೆಂದು ನನ್ನ ಅಭಿಪ್ರಾಯವನ್ನು ತಿಳಿಸಿದ್ದೆ. ಆದರೂ ಒಂದು ಸಣ್ಣ ಸಮಾಧಾನವೇನೆಂದರೆ, ಈ ಕೆಲಸವನ್ನು ಅಮೇರಿಕವಲ್ಲದಿದ್ದರೆ, ಜರ್ಮನಿಯು ಮೊದಲು (ಬಾಂಬನ್ನು) ಮಾಡುತ್ತಿತ್ತು.” ಐನ್ ಸ್ಟೈನ್ ಬರೆದ ಪತ್ರದ ಸಾರಾಂಶ ಹೀಗಿತ್ತು : “ಯುರೇನಿಯಂನ್ನು ಒಂದು ಹೊಸ, ಅದ್ಭುತ ಶಕ್ತಿಯ ಮೂಲವನ್ನಾಗಿ ಬಳಸಬಹುದು. ಇಂತಹ ಒಂದು ಶಕ್ತಿಯ ಮೂಲವನ್ನು ಸ್ಪೋಟಿಸಿ, ಒಂದು ಜಾಗ ಮತ್ತು ಅದರ ಸುತ್ತಲಿನ ಯಾವೊತ್ತೂ ಪ್ರದೇಶಗಳನ್ನು ಸಂಪೂರ್ಣವಾಗಿ ಬಸ್ಮಗೊಳಿಸಿ, ನಾಶಮಾಡಬಹುದು.” 1939 ರಲ್ಲಿ  ಐನ್ ಸ್ಟೈನ್ ಬರೆದ ಈ ಪತ್ರದ ಆರು ವರ್ಷಗಳ ನಂತರ, ಅಂದರೆ ಆಗಸ್ಟ್ 6, 1945 ರಂದು ಇಂತಹ ಒಂದು ‘ಶಕ್ತಿಯ ಮೂಲ’ವನ್ನು ಅಮೇರಿಕಾ ಜಪಾನಿನ ಹಿರೋಷಿಮಾದ ಮೇಲೆ ಹಾಕಿತು. ಇನ್ನೊಂದನ್ನು ಕೆಲವೇ ದಿನಗಳಲ್ಲಿ ನಾಗಸಾಕಿಯ ಮೇಲೆ ಬೀಳಿಸಿತು. ಮಿಲಿಯಗಟ್ಟಲೆ ಜನ ಅಸುನೀಗಿದರು, ಅದಕ್ಕಿಂತ ಹೆಚ್ಚು ಜನ ನರಳಿದರು, ಅನಾಥರಾದರು. ಜಪಾನ್ ಶರಣಾಯಿತು. ಎರಡನೇ ಜಾಗತಿಕ ಯುದ್ಧ ಕೊನೆಗೊಂಡಿತು!

‘ದೇವರು ಈ ವಿಶ್ವದಲ್ಲಿ ಪಗಡೆ ಆಡುವುದಿಲ್ಲ’ ಎನ್ನುವ ಆಲ್ಬರ್ಟ್ ಐನ್ ಸ್ಟೈನ್ ಅವರ ಸಾಂದರ್ಭಿಕ ಮಾತುಗಳು ಅವೆಷ್ಟೋ ಬಾರಿ ಚರ್ಚೆಗೆ ಒಳಪಟ್ಟು ಹೋಗಿವೆ. ಎಷ್ಟು ಜನ ಈ ಮಾತನ್ನು ಅರ್ಥ ಮಾಡಿರುವರೋ, ಅಷ್ಟೇ ಮಂದಿ ಅದರ ಅಪಾರ್ಥವನ್ನೂ ಮಾಡಿರುತ್ತಾರೆ. ‘ಐನ್ ಸ್ಟೈನ್ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಭೌತಶಾಸ್ತ್ರದ ಒಳ ಮರ್ಮಗಳನ್ನೇ ಮರೆತು ಬಿಟ್ಟರೋ’ ಎನ್ನುವ ಆಪಾದನೆಗೆ ವಿಜ್ಞಾನಿಗಳಿಂದಲೂ ಒಳಗಾಗದರು. ಇತ್ತೀಚಿನ ವರ್ಷಗಳಲ್ಲಿ ಇನ್ನೊಬ್ಬ ಮಹಾನ್ ಸೈದ್ಧಾಂತಿಕ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಕೂಡಾ ಐನ್ ಸ್ಟೈನ್ ಮಾತುಗಳನ್ನು ಉಲ್ಲೇಖಿಸಿ ‘ದೇವರು ಮತ್ತು ಪಗಡೆ ಆಟ’ದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. “ದೇವರು ಪಗಡೆ ಆಡುವುದು ಮಾತ್ರವಲ್ಲ, ದಾಳಗಳನ್ನು ಯಾರಿಗೂ ಕಾಣದಲ್ಲಿಯೂ ಎಸೆಯುತ್ತಾರೆ”.   (‘Not only does God play dice, but…he sometimes throws them where they cannot be seen’) ಎನ್ನುವುದು ಹಾಕಿನ್ಸ್ ಪ್ರತಿಕ್ರಿಯೆ. ನಿಜವೇನೆಂದರೆ, ಐನ್ ಸ್ಟೈನ್ ಹೇಳಿದ ಮಾತುಗಳು ಪರಮಾಣು ವಿಜ್ಞಾನಿ ಹೈಸನ್ ಬರ್ಗ್ ಅವರ “ಅನಿಶ್ಚತತಾ ತತ್ವ” (Uncertainty Principle) ಮತ್ತು “ಶಕಲಬಲ ವಿಜ್ಞಾನದ ಸಂಭಾವ್ಯತಾ ಸಿದ್ಧಾಂತ”  (Theory of Probability in Quantum Mechanics) ಇವುಗಳ ಪರಿಕಲ್ಪನೆಗೆ  ತಮ್ಮ ಒಪ್ಪಿಗೆ ಇಲ್ಲ ಎನ್ನುವುದರ ಮೇಲೆ ಮಾತ್ರ ಅವರು ತೋರಿಸಿದ ಪ್ರತಿಕ್ರಿಯೆ. ಹೈಸನ್ ಬರ್ಗ್ ಸಿದ್ಧಾಂತದ ಪ್ರಕಾರ, ಒಂದು ಎಲೆಕ್ಟ್ರಾನ್ ನಂತಹ ಸೂಕ್ಷ್ಮ ಕಣ ಚಲಿಸುತ್ತಿರಬೇಕಾದರೆ (ಏಕಕಾಲದಲ್ಲಿ) ಅದರ ಚಲನೆಯ ವೇಗ ಮತ್ತು ದ್ರವ್ಯರಾಶಿಯಲ್ಲಿ ಅನಿಶ್ಚತೆ (Uncertainity) ಇರುತ್ತದೆ. ಕ್ವಾಂಟಮ್ ಮೆಖಾನಿಕ್ಸ್ ಪರಿಕಲ್ಪನೆಯಲ್ಲಿ ‘ಸಂಭಾವ್ಯತಾ ಸಿದ್ಧಾಂತ’ದ (Theory of Probability) ಅಡಿಪಾಯದಲ್ಲಿ ಸಮೀಕರಣಗಳನ್ನು ಬರೆಯಲಾಗಿದೆ. ಐನ್ ಸ್ಟೈನ್ ‘ದೇವರು’ ಎನ್ನುವ ಪದವನ್ನು ಒಂದು ಮೆಟಾಫರ್ ಆಗಿ ಉಪಯೋಗಿಸಿಕೊಂಡು,  ಈ ಜಗತ್ತಿನಲ್ಲಿ ಯಾವುದೂ ಸುಮ್ಮನೆ ‘ಸಂಭಾವ್ಯತ’ವೂ ಆಗಿಲ್ಲ ಮತ್ತು ಇಲ್ಲಿ ಯಾವ ‘ಅನಿಶ್ಚತೆ’ಯೂ ಇಲ್ಲ ಎಂದು ಹೇಳಲಿಚ್ಚಿಸಿದರು. ದೇವರು ಹಾಗೆ ಮಾಡಲೊಲ್ಲ, ಹಾಗಾಗಿ ‘ದೇವರು ಪಗಡೆ ಆಡುವುದಿಲ್ಲ!’.  ಐನ್ ಸ್ಟೈನ್ ತಮ್ಮ ಜೀವಿತವಿಡೀ ನಿಖರತೆಯ ಬಗ್ಗೆಯೇ ಮಾತನಾಡಿದವರು. ಅನಿಶ್ಚತೆಯ ಬಗ್ಗೆ ಅಲ್ಲ.

ಐನ್ ಸ್ಟೈನ್

ಐನ್ ಸ್ಟೈನ್ ಜನನ ಮಾರ್ಚ್ 14, 1879 ರಲ್ಲಿ ಜರ್ಮನಿಯ ಉಲ್ಮ್ ಎಂಬಲ್ಲಿ ಆಯಿತು. ತಂದೆ ಹರ್ಮನ್ ಗೆ ಅಂಗಡಿಯೊಂದರಲ್ಲಿ ಕೆಲಸ ಮತ್ತು ತಾಯಿ ಪೌಲೀನ್ ಸಂಗೀತಾಸಕ್ತರು. ತಾಯಿಯೊಡನೆ ಪಿಯಾನೋ ನುಡಿಸುವುದನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿದ ಮಗ ಐನ್ ಸ್ಟೈನ್ ಜೀವಮಾನವಿಡೀ ಇದನ್ನು ನೆಚ್ಚಿಕೊಂಡಿದ್ದರು. ಕಷ್ಟದ ದಿನಗಳಲ್ಲಿ ಸಂಗೀತವೇ ಅವರ ಸಂಗಾತಿ. ಶಾಲೆಯಲ್ಲಿ ಅವರು ಗಣಿತ ಮತ್ತು ವಿಜ್ಞಾನ, ಎರಡರಲ್ಲೂ ತೀವ್ರ ಆಸಕ್ತಿ ಹೊಂದಿದ್ದರು. ಉಳಿದೆಲ್ಲ ವಿಷಯಗಳಲ್ಲಿ ಅನಾಸಕ್ತಿ. ಬಡತನದಲ್ಲೇ ವಿದ್ಯಾಭ್ಯಾಸ ಮಾಡಿದ ಐನ್ ಸ್ಟೈನ್, ಮುಂದೆ ಜರ್ಮನಿಯಿಂದ ಹೊರಬಂದು ಸ್ವಿಜರ್ ಲ್ಯಾಂಡ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ, ಪ್ರತಿಷ್ಠಿತ ಜೂರಿಚ್ ವಿಶ್ವವಿದ್ಯಾಲಯದಲ್ಲಿ ಪ್ರವೇಶಗಿಟ್ಟಿಸಿ, ತನ್ನ 21 ರ ಹರೆಯದಲ್ಲಿ ಪದವೀಧರರಾದರು. ತಾನು ಬಯಸಿದ ಅಧ್ಯಾಪಕ ಹುದ್ದೆ ಸಿಗದೆ, ಒಂದು ಗುಮಾಸ್ತನಾಗಿ ಪೇಟೆಂಟ್ ಕಚೇರಿಯಲ್ಲಿ ಕೆಲಸಮಾಡಿಕೊಂಡು, ಸಮಯ ಸಿಕ್ಕಾಗಲೆಲ್ಲಾ ವಿಜ್ಞಾನದ ಬರಹಗಳನ್ನು ಸ್ವತಂತ್ರವಾಗಿ ತಯಾರು ಮಾಡುತ್ತಿದ್ದರು.

ಆ ಸಮಯದಲ್ಲಿ, ವಿಜ್ಞಾನದಲ್ಲಿ ತುಂಬಾ ಆಸಕ್ತಿಯಿದ್ದ ವಿದ್ಯಾರ್ಥಿನಿ ಮಿಲಿವಾ ಮಾರೆಕ್ ಎಂಬವರ ಪರಿಚಯವಾಗಿ, ಸ್ನೇಹ ಬೆಳೆದು, ಐನ್ ಸ್ಟೈನ್ ಮಿಲಿವಾರನ್ನು 1903 ರಲ್ಲಿ ಮದುವೆ ಆದರು. ಮುಂದೆ ಎರಡು ಮಕ್ಕಳಾದವು. ಆದರೇನು? ತಮ್ಮ ಸಮಾನ ಆಸಕ್ತಿಗಳು ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಪ್ರಯೋಗಾಲಯ ಮತ್ತು ಗ್ರಂಥಾಲಯಕ್ಕೆ ಮಾತ್ರ ಎನ್ನುವುದು ಇಬ್ಬರಿಗೂ ತಿಳಿದು ವಿಚ್ಛೇದನವೂ ಆಯಿತು ಎನ್ನುವುದು, ಇಬ್ಬರೂ ಒಪ್ಪಿದ ವಿಚಾರ.

1905 ರಲ್ಲಿ ಐನ್ ಸ್ಟೈನ್ ರ ವೈಜ್ಞಾನಿಕ ಬರವಣಿಗೆಗಳಿಗೆ ಜೂರಿಚ್ ವಿಶ್ವವಿದ್ಯಾಲಯ Ph.D. ಪದವಿಯನ್ನು ನೀಡಿತು. ಅದೇ ವರ್ಷ ಅವರು ಪ್ರಕಟಿಸಿದ ಐದು ಸಂಶೋಧನಾತ್ಮಕ ಪ್ರಬಂಧಗಳು ವಿಜ್ಞಾನದಲ್ಲಿ ಹೊಸ ಸಂಚಲನ ಮೂಡಿಸಿದವು. ಈ ಅತ್ಯಮೂಲ್ಯ ಲೇಖನಗಳಿಂದ  ಐನ್ ಸ್ಟೈನ್ ಜಗತ್ಪ್ರಸಿದ್ಧರಾದರು. ಇದರಲ್ಲಿ ಮೂರು ವೈಜ್ಞಾನಿಕ ಲೇಖನಗಳನ್ನು ಪರಿಗಣಿಸಿ, 2005 ನೇ ಇಸವಿಯಲ್ಲಿ ಈ ಲೇಖನಗಳ “ಶತಮಾನೋತ್ಸವ” ಆಚರಿಸಲಾಯಿತು. ಅಲ್ಲದೇ ಅದೇ ವರ್ಷವನ್ನು(2005) “ವಿಶ್ವ ಅಂತರಾಷ್ಟ್ರೀಯ ಭೌತಶಾಸ್ತ್ರದ ವರುಷ” ಎಂದು ವಿಶ್ವ ಸಂಸ್ಥೆ ಘೋಷಿಸಿತು. ಆ ವರ್ಷ ಭಾರತದ ಶಾಲಾಕಾಲೇಜುಗಳಲ್ಲೂ ಐನ್ ಸ್ಟೈನ್ ಗೌರವಾರ್ಥ ವಿಶೇಷ ಸೆಮಿನಾರ್ ಗಳು, ವಿಚಾರ ಮತ್ತು ಅಧ್ಯಯನ ಗೋಷ್ಠಿಗಳು, ಕಮ್ಮಟಗಳು, ವಿಜ್ಞಾನ ಚರ್ಚಾ ಕೂಟಗಳು ಅಲ್ಲದೇ ವಿಶೇಷ ಉಪನ್ಯಾಸಗಳು ನಡೆದವು.

ಐನ್ ಸ್ಟೈನ್ ಪ್ರಕಟಿಸಿದ ಐದು ವೈಜ್ಞಾನಿಕ ಪ್ರಭಂದಗಳನ್ನು ಈ ಲೇಖನದ ಮಿತಿಯೊಳಗೆ ಬರೆದು ಮುಗಿಸುವುದು ಕಷ್ಟ. ನಿಜವೇನೆಂದರೆ, ಐನ್ ಸ್ಟೈನ್ ಅವರಂತಹ ವಿಜ್ಞಾನಿಯ ಬಗ್ಗೆ, ಅವರ ಜೀವನ ಶೈಲಿಯ ಬಗ್ಗೆ, ಅವರ ವಿಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಲೇಖನದಲ್ಲಿ ಬರೆದು ಪ್ರಸ್ತುತ ಪಡಿಸುವುದು ಸುಲಭದ ಮಾತೇನಲ್ಲ. ಈ ಲೇಖನ ಅಪೂರ್ಣವಾಗಬಾರದು ಮತ್ತು ಐನ್ ಸ್ಟೈನ್ ರ ಈ ಐದು ಸಂಶೋಧನಾ ಪ್ರಬಂಧಗಳು ಯಾವ ವಿಚಾರದಲ್ಲಿವೆ ಎಂದು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ.

ಮೊದಲ ಲೇಖನದಲ್ಲಿ ‘ಬ್ರೌನಿಯನ್ ಚಲನೆಗಳ’ ಬಗ್ಗೆ ವಿವರಣೆಗಳನ್ನು ಕೊಡಲಾಗಿದೆ. ದ್ರವರೂಪದ ಕೊಲೋಇಡಲ್ (ಕಲಿಲಗಳು) ಸ್ಥಿತಿಯಲ್ಲಿರುವ ಪದಾರ್ಥಗಳಲ್ಲಿ ಕಲಿಲದ ಕಣಗಳು (Colloidal particles) ನಿರಂತರ ಚಲನೆಯಲ್ಲಿರುತ್ತವೆ. ಇದನ್ನು ಬ್ರೌನಿಯನ್ ಚಲನೆ ಎಂದು ಕರೆಯುತ್ತಾರೆ. ನಿರಂತರ ಚಲನೆಗೆ ಕಾರಣ ಆ ಕಣಗಳು ದ್ರವದ ಅಣುಗಳೊಡನೆ ನಡೆಸುವ ಹೊಡೆತ(Collision)ಗಳಿಂದ ಎನ್ನುವ ವಿದ್ಯಮಾನ.

ಎರಡನೇ ಪ್ರಭಂದದಲ್ಲಿ ಬೆಳಕಿನ ‘ಫೋಟೋ ಇಲೆಕ್ಟ್ರಿಕ್ ಪರಿಣಾಮ’ದ ಅವಲೋಕನವಿದೆ. ಟಂಗ್ ಸ್ಟನ್ ನಂತಹ ಒಂದು ಲೋಹದ ಮೇಲೆ ಬೆಳಕು ಬಿದ್ದರೆ, ಲೋಹದಿಂದ ಇಲೆಕ್ಟ್ರೋನ್ ಗಳು ಚಿಮ್ಮಿ ಹೊರಬರುತ್ತವೆ. ಇಲ್ಲಿ ಬೆಳಕೇ ಒಂದು ಕಣದಂತೆ ವರ್ತಿಸುವ ಶಕ್ತಿಯೆಂದು ಪ್ರತಿಪಾದಿಸಲಾಗಿದೆ. ಎರಡು ಕಣಗಳು ಒಂದಕ್ಕೊಂದು ಗುದ್ದಿದರೆ, ಅವುಗಳಲ್ಲಿ ಸ್ಥಾನಪಲ್ಲಟ ಆಗಬೇಕು. ಅಂತೆಯೇ ಲೋಹದ ಇಲೆಕ್ಟ್ರೋನ್ ಗಳನ್ನು ಬೆಳಕಿನ ಕಣಗಳಾದ ಫೋಟಾನ್ ಗಳು ದೂಡಿ ಹೊರಕಳುಹಿಸುತ್ತವೆ.

ಮೂರನೆಯ ಪ್ರಭಂದ ಐನ್ ಸ್ಟೈನ್ ರಿಗೆ ದೊಡ್ಡ ಹೆಸರು ಮತ್ತು ಕೀರ್ತಿಯನ್ನು ತಂದುಕೊಟ್ಟಂತಹ ಒಂದು ಕ್ರಾಂತಿಕಾರಿ ಸಂಶೋಧನೆಯ ಕುರಿತಾಗಿದೆ. ಲೇಖನದಲ್ಲಿ ಅವರು ‘ವಿಶೇಷ ಸಾಪೇಕ್ಷತಾ ಸಿದ್ಧಾಂತ’ ಬಗ್ಗೆ ವಿವರಿಸಿರುತ್ತಾರೆ.

ಶಕ್ತಿ ಮತ್ತು ದ್ರವ್ಯರಾಶಿಯ ಸಮಾನತೆಯ ಬಗ್ಗೆ ಒಂದು ಸೂತ್ರವನ್ನು ಬರೆದಿರುವುದು, ಅವರ ಇನ್ನೊಂದು ಲೇಖನದಲ್ಲಿ. ಈ ಸೂತ್ರವೇ,  E = mC2 ,  E ಅಂದರೆ ಶಕ್ತಿ, m ಅಂದರೆ ದ್ರವ್ಯರಾಶಿ ಮತ್ತು C ಅಂದರೆ ಬೆಳಕಿನ ವೇಗ ( 3.0 x 108 ಮೀಟರ್/ಸೆಕುಂಡು).  ಒಂದು ಅಣುಬಾಂಬಿನ ಒಳಗಿರುವ ಶಕ್ತಿಯ ಮಾಪನ ಈ ಸಮೀಕರಣದಿಂದ ಸಾಧ್ಯ.

1915 ರಲ್ಲಿ ಐನ್ ಸ್ಟೈನ್ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ’ ವನ್ನು ಪ್ರತಿಪಾದಿಸಿದರು. 1921 ರಲ್ಲಿ ಅವರಿಗೆ ಭೌತಶಾಸ್ತ್ರದಲ್ಲಿ, ಮುಖ್ಯವಾಗಿ ‘ಫೋಟೋ ಇಲೆಕ್ಟ್ರಿಕ್ ಪರಿಣಾಮ’ದ ಆವಿಷ್ಕಾರಕ್ಕೆ ನೋಬೆಲ್ ಪಾರಿತೋಷಕವನ್ನು ನೀಡಿ ಸನ್ಮಾನಿಸಲಾಯಿತು.

1905 ರ ಸಂಶೋಧನಾತ್ಮಕ ಲೇಖನಗಳ ನಂತರ, ಐನ್ ಸ್ಟೈನ್ ಜೂರಿಚ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರು. 1911 ರಲ್ಲಿ ಪ್ರಾಗಿಯಲ್ಲಿ ಪ್ರಾಧ್ಯಾಪಕರಾದರು. ಅವರ ಸಂಬಂಧಿಕಳಾದ ಎಲ್ಸಾಳನ್ನು ಮದುವೆಯಾದರು. ಅನಂತರ ಬರ್ಲಿನಿಗೆ ಬಂದು 20 ವರ್ಷಗಳ ಕಾಲ ಸಂಶೋಧನೆಗಳಲ್ಲಿ ತೊಡಗಿದರು. 1933 ರಲ್ಲಿ ಜರ್ಮನಿ ಹಿಟ್ಲರಿನ ಸರ್ವಾಧಿಕಾರಕ್ಕೆ ಒಳಪಟ್ಟು, ನಾಜಿ-ಜರ್ಮನಿ ಎಂದೇ ಕರೆಯಲ್ಪಟ್ಟಿತು. ಯಹೂದಿಗರ ಸ್ಥಿತಿ ಶೋಚನೀಯವಾಯಿತು. ಯಹೂದಿ ವಿಜ್ಞಾನಿಯಾಗಿದ್ದ ಐನ್ ಸ್ಟೈನ್ ಮೇಲೆ ಹಿಟ್ಲರ್ ಕಣ್ಣಿಟ್ಟಿದ್ದರು. ಇದೇ ಕಾಲಕ್ಕೆ ಅಮೇರಿಕಾ ದೇಶಕ್ಕೆ ಉಪನ್ಯಾಸಕ್ಕೆಂದು ಹೊರಟ ಐನ್ ಸ್ಟೈನ್, ಅಪಾಯದ ಮುನ್ಸೂಚನೆ ದೊರಕಿ ಪುನಃ ಜರ್ಮನಿಗೆ ಬರಲೇ ಇಲ್ಲ. ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಅವರಿಗೆ ಉನ್ನತ ಹುದ್ದೆಯೂ ದೊರಕಿತು. ಮುಂದೆ ಎರಡನೇ ಜಾಗತಿಕ ಯುದ್ಧ, ಅಣುಬಾಂಬ್, ಜರ್ಮನಿಯ ಸೋಲು, ಇಸ್ರೇಲಿನ ಉದಯ(1948), ಐನ್ ಸ್ಟೈನ್ ಗೆ ಇಸ್ರೇಲಿನ ಅಧ್ಯಕ್ಷರಾಗಲು ಆಹ್ವಾನ, ಅವರ ನಯವಾದ ನಿರಾಕರಣೆ, ಇವೆಲ್ಲಾ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿವೆ.

ಸೈದ್ಧಾಂತಿಕ ವಿಚಾರಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಉಳಿದ ವಿಜ್ಞಾನಿಗಳಿಗಿಂತ  ಐನ್ ಸ್ಟೈನ್ ವಿಭಿನ್ನರಾಗಿದ್ದರು. ಅವರು ಒಬ್ಬಂಟಿಗ, ಒಂದು ತೀರದಲ್ಲಿ. ಆ ಕಾಲದ ಮಹಾನ್ ವಿಜ್ಞಾನಿಗಳಾದ ನೀಲ್ ಬೋರ್, ವರ್ನೆರ್ ಹೈಸನ್ ಬರ್ಗ್ ಅಲ್ಲದೇ ಐನ್ ಸ್ಟೈನ್ ಮಿತ್ರನೇ ಆಗಿದ್ದ ಮಾಕ್ಸ್ ಬಾರ್ನ್ ಇನ್ನೊಂದು ತೀರ. ಇದೊಂದು ಅದ್ಭುತ ‘ಬೌದ್ಧಿಕ ಕೂಟ’. ಬೋರ್ ಮತ್ತು ಐನ್ ಸ್ಟೈನ್ ಒಂದೆಡೆ ಸೇರಿದರೆ, ಭೌತಶಾಸ್ತ್ರದ ಇಬ್ಬರು ದಿಗ್ಗಜರು ‘ಅಖಾಡಕ್ಕೆ’ ಇಳಿದಂತೆ ಭಾಸವಾಗುತ್ತಿತ್ತು. ಪಗಡೆ ಆಟ ಆಡುವ ಮತ್ತು ಆಡದ ದೇವರ ಮೇಲೆ ನಡೆಯುವ ‘ದೈವೀ’ ಚರ್ಚೆಯನ್ನು ಉಳಿದವರು ಸ್ತಂಭೀಭೂತರಾಗಿ ವೀಕ್ಷಿಸುತ್ತಿದ್ದರು. ಬೋರ್ ಅವರದು ಎಷ್ಟು ರೋಷಾವೇಶವೋ, ಅಷ್ಟೇ ಸೌಮ್ಯ ಮತ್ತು ಸಂಯಮ ಐನ್ ಸ್ಟೈನ್ ರದ್ದು. ಇಬ್ಬರೂ ಅವರವರ ಸಿದ್ಧಾಂತಗಳನ್ನು ಒಂದಿನಿತೂ ಬಿಡುತ್ತಿರಲಿಲ್ಲ.

ಭಾರತದ ಇಬ್ಬರು ಮಹಾನ್ ಚೇತನಗಳೊಡನೆ ಐನ್ ಸ್ಟೈನ್ ರ ಸಂಪರ್ಕ ಉಲ್ಲೇಖನೀಯ. ಒಬ್ಬರು ಕವಿ ರವೀಂದ್ರನಾಥ್ ಟಾಗೋರ್, ಇನ್ನೊಬ್ಬರು ಮಹಾತ್ಮಾ ಗಾಂಧಿ. ಜುಲಾಯಿ 14, 1930 ರಲ್ಲಿ ರವೀಂದ್ರನಾಥ್ ಟಾಗೋರರು, ಐನ್ ಸ್ಟೈನ್ ರನ್ನು ಅವರ ಬರ್ಲಿನ್ ಮನೆಯಲ್ಲಿ ಭೇಟಿಯಾದರು. ಇದನ್ನು ವಿಜ್ಞಾನ ಮತ್ತು ಭಾರತದ ಸಂಸ್ಕೃತಿಯ ಭೇಟಿ ಎಂದು ಬಣ್ಣಿಸಲಾಗಿದೆ. ಅವರಿಬ್ಬರ ಸಂಭಾಷಣೆಯ ವಿವರಗಳನ್ನು ಓದಿದರೆ ಒಂದು ಆಧ್ಯಾತ್ಮಿಕ ಕಾವ್ಯದಂತೆ ಭಾಸವಾಗುತ್ತದೆ. ವಿಜ್ಞಾನ, ಸೌಂದರ್ಯ, ಸತ್ಯ, ಪ್ರಕೃತಿ, ಚೇತನ ಇವೆಲ್ಲದರ ಬಗ್ಗೆ ಸುದೀರ್ಘ ವಿಮರ್ಶೆ ಮುಂದುವರಿಯುತ್ತದೆ. “ಧರ್ಮವಿಲ್ಲದ ವಿಜ್ಞಾನ ಕುಂಟು, ವಿಜ್ಞಾನವಿಲ್ಲದ ಧರ್ಮ ಕುರುಡು” ಎನ್ನುವುದು ಐನ್ ಸ್ಟೈನ್ ರ ಅಂಬೋಣ.

ಕವಿ ಟಾಗೋರ್ ಅವರೊಂದಿಗೆ ಐನ್ ಸ್ಟೈನ್, ಬರ್ಲಿನಿನಲ್ಲಿ (1930)

1931 ರಲ್ಲಿ ಐನ್ ಸ್ಟೈನ್ ಗಾಂಧೀಜಿಯವರಿಗೆ ಒಂದು ಪತ್ರ ಬರೆದಿದ್ದರು. ಗಾಂಧೀಜಿ ಮೇಲೆ ತನಗಿದ್ದ ಗೌರವ ಮತ್ತು ನಿಷ್ಠೆಯನ್ನು ವ್ಯಕ್ತಪಡಿಸುತ್ತಾ, “ನಿಮ್ಮನ್ನು ಮುಖತಃ ಭೇಟಿಯಾಗಲು ಆಶಿಸುತ್ತೇನೆ” ಎಂದು ನಿವೇದಿಸಿಕೊಂಡಿದ್ದರು. ಆದರೆ ಈ ಮೇರು ಪುರುಷರಿಬ್ಬರು ಎಂದೂ ಭೇಟಿಯಾಗಲು ಸಾಧ್ಯವಾಗಿಲ್ಲ. ಗಾಂಧೀಜಿಯವರ ಚಿಂತನೆ, ಅಹಿಂಸಾ ಮಾರ್ಗ, ಸತ್ಯದ ಮೇಲಿನ ಅಚಲ ವಿಶ್ವಾಸಗಳನ್ನು ನೋಡಿ, ಐನ್ ಸ್ಟೈನ್ ಅನ್ನುತ್ತಿದ್ದರು, “ಇಂತಹನೊಬ್ಬ ನಿಜವಾಗಿಯೂ ರಕ್ತ ಮಾಂಸ ಭರಿತನಾಗಿ ಈ ಭೂಮಿಯಲ್ಲಿ ನಡೆದಾಡುತ್ತಿದ್ದನೇ ಎಂದು ಮುಂದಿನ ಜನಾಂಗ ಸಂದೇಹ ಪಟ್ಟರೆ ಆಶ್ಚರ್ಯವಿಲ್ಲ”

ಏಪ್ರಿಲ್ 18, 1955 ರಂದು ಐನ್ ಸ್ಟೈನ್ ರು ಕೊನೆಯುಸಿರೆಳೆದರು. ವಿಜ್ಞಾನದ ಬೆಳಕೊಂದು ಅವರ ಸಿದ್ಧಾಂತಗಳ ಮೂಲಕ ಇನ್ನೂ ಇಲ್ಲಿಯೇ ಇದೆ.

 – ಡಾ.ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.

2 Responses

  1. Hema says:

    ‘ದೇವರು ಪಗಡೆ ಆಡುವುದಿಲ್ಲ’ … ಮಾಹಿತಿಪೂರ್ಣ ಬರಹಕ್ಕೆ ಬಹಳ ಸೊಗಸಾದ ಶೀರ್ಷಿಕೆ! ಕವಿ ಟಾಗೋರ್ ಮತ್ತು ಐನ್ ಸ್ಟೈನ್ ಚಿತ್ರವನ್ನು ಕಲ್ಕತ್ತಾದಲ್ಲಿರುವ ಟಾಗೋರ್ ಮ್ಯೂಸಿಯಂನಲ್ಲಿ ನೋಡಿದ ನೆನೆಪಿದೆ.

  2. Jessy Pudumana says:

    I like it. A valuable information..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: