ಪ್ಲಾಸ್ಟಿಕ್ ಮಾಲಿನ್ಯ ತಡೆ – ವಿಶ್ವ ಪರಿಸರ ದಿನ
ಮತ್ತೆ ಜೂನ್ ಬಂದಿದೆ. ಸುರಿಯುವ ಮಳೆಗೆ ತೊಯ್ದ ಇಳೆ ಹಸಿರುಡುಗೆಯುಟ್ಟು ಕಂಗೊಳಿಸುವ ಸಮಯ ಸನ್ನಿಹಿತವಾಗಿದೆ. ಬೇಸಗೆ ರಜೆಯನ್ನು ಕಳೆದ ಶಾಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಭಾರದ ಪುಸ್ತಕಗಳ ಬ್ಯಾಗ್ ಗಳನ್ನು ಬೆನ್ನಿಗೇರಿಸಿ ಶಾಲೆಯತ್ತ ಮುಖ ಮಾಡಿದ್ದಾರೆ. ಹಾಗೆಯೇ ಜೂನ್ 5 ರಂದು ‘ವಿಶ್ವ ಪರಿಸರ ದಿನದ’ ಆಚರಣೆಯೂ ಬರುತಿದೆ.
ಜನಸಂಖ್ಯಾ ಹೆಚ್ಚಳ, ಮಿತಿಮೀರಿದ ನಿಸರ್ಗದತ್ತ ಸಂಪನ್ಮೂಲಗಳ ಬಳಕೆ, ಕೈಗಾರಿಕೀಕರಣ, ಅಧುನಿಕ ಸವಲತ್ತುಗಳು ಮತ್ತು ಕೃಷಿಗಾಗಿ ಅತಿಯಾದ ರಾಸಾಯನಿಕ ವಸ್ತುಗಳ ಬಳಕೆ ಹಾಗೂ ಪರಿಸರ ಮಾಲಿನ್ಯದಿಂದ ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯಗಳುಂಟಾಗುತ್ತಿವೆ. ವಾತಾವರಣದಲ್ಲಿರುವ ಓಜೋನ್ ವಲಯದಲ್ಲಿ ಮೂಡಿರುವ ರಂಧ್ರ, ವಿಶ್ವದ ತಾಪಮಾನ ಏರಿಕೆ, ಗ್ರೀನ್ ಹೌಸ್ ಇಫೆಕ್ಟ್ ಇತ್ಯಾದಿಗಳಿಗೆ ಮಾನವನು ತನ್ನ ಅಗತ್ಯಗಳಿಗಾಗಿ ಪರಿಸರದ ಸಮತೋಲನವನ್ನು ಹಾಳುಗೆಡಹುತ್ತಿರುವುದೇ ಕಾರಣ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದು, ಮಾನವನ ದುರಾಸೆಗೆ ಪರಿಸರವು ಬಲಿಯಾದರೆ, ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಮನಗಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 5, 1972ರಂದು ಮೊತ್ತಮೊದಲ ಮಾನವ ಪರಿಸರ ಸಮ್ಮೇಳನವನ್ನು ‘ಸ್ಟಾಕ್ ಹೋಂ’ ನಗರದಲ್ಲಿ ಅಯೋಜಿಸಿತು. ಜಾಗತಿಕ ಮಟ್ಟದಲ್ಲಿ ಪರಿಸರವನ್ನು ಸಂರಕ್ಷಿಸುವುದರ ಜೊತೆಗೆ, ನಮ್ಮ ಮುಂದಿನ ಪೀಳಿಗೆಗೆ ವಾಸಿಸಲು ಸೂಕ್ತವಾದ ಭೂಮಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂಬ ಜಾಗೃತಿಯನ್ನು ಮೂಡಿಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು. ಅಂದಿನಿಂದ ಇಂದಿನ ವರೆಗೂ ಜೂನ್ 5 ಅನ್ನು ‘ವಿಶ್ವ ಪರಿಸರ ದಿನ’ ಎಂದು ಗುರುತಿಸಲಾಗುತ್ತಿದೆ.
ಹೀಗೆ ಆರಂಭಗೊಂಡ ವಿಶ್ವ ಪರಿಸರ ದಿನವನ್ನು ಇಂದು ಹೆಚ್ಚಿನ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಪರಿಸರಕ್ಕೆ ಸಂಬಂಧಿಸಿದ ವಿಶಿಷ್ಟ ವಿಚಾರವನ್ನು ಆಧರಿಸಿದ ಘೋಷಣೆಯು ವಿಶ್ವ ಪರಿಸರ ದಿನಾಚರಣೆಗೆ ಮೌಲಿಕ ಚೌಕಟ್ಟನ್ನು ಒದಗಿಸುತ್ತದೆ. ಈ ವರ್ಷದ ಘೋಷವಾಕ್ಯವು ‘Beat Plastic Pollution’ ಅಥವಾ ‘ಪ್ಲಾಸ್ಟಿಕ್ ಮಾಲಿನ್ಯ ತಡೆ‘. ಹಾಗೆಯೇ, ಪ್ರತಿ ವರ್ಷವೂ ಜಾಗತಿಕ ವಿಶ್ವ ಪರಿಸರ ದಿನದ ಕಾರ್ಯಕ್ರಮಗಳ ಆತಿಥ್ಯವನ್ನು ವಹಿಸುವ ಹೊಣೆಗಾರಿಕೆಯನ್ನು ವಿಶ್ವಸಂಸ್ಥೆಯ ಯಾವುದಾದರೂ ಒಂದು ಸದಸ್ಯ ರಾಷ್ಟ್ರವು ನಿರ್ವಹಿಸುವ ರೂಢಿ. ಜೂನ್ 05, 2018ರ ವಿಶ್ವ ಪರಿಸರ ದಿನದ ಜಾಗತಿಕ ಆತಿಥ್ಯವನ್ನು ಭಾರತವು ನಿರ್ವಹಿಸಲಿದೆ.
ನನ್ನ ಅನುಭವದಲ್ಲಿ, ಕೈಗಾರಿಕಾ ಸಂಸ್ಠೆಗಳಲ್ಲಿ ವಿಶ್ವ ಪರಿಸರ ದಿನದಂದು ಸದರಿ ಘೋಷವಾಕ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪರಿಸರವನ್ನು ಸಂರಕ್ಷಿಸುವ ಕಾಳಜಿ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮರುಬಳಕೆ, ಪ್ಲಾಸ್ಟಿಕ್ ನ ಉಪಯೋಗವನ್ನು ಕಡಿಮೆಗೊಳಿಸುವುದು, ವಾಹನಗಳ ಉಪಯೋಗವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆಗೊಳಿಸುವುದು, ಕಸ ವಿಂಗಡಣೆ ಹಾಗೂ ತ್ಯಾಜ್ಯವಸ್ತುಗಳ ಸಮರ್ಪಕ ನಿರ್ವಹಣೆ. ..ಹೀಗೆ ಹಲವಾರು ವಿಷಯಗಳ ಬಗ್ಗೆ ಕ್ವಿಜ್, ಕಿರುನಾಟಕಗಳು, ಪ್ರಬಂಧ ರಚನೆ ಇತ್ಯಾದಿಗಳ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಪ್ರೋತ್ಸಾಹಿಸುವ ಪ್ರಯತ್ನ ನಡೆಯುತ್ತದೆ.
ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿವುದು ಎಂದಿಗೂ ಅಪೇಕ್ಷಣೀಯ. ತೀರಾ ತೆಳುವಾದ ಪ್ಲಾಸ್ಟಿಕ್ ಚೀಲಗಳನ್ನುಎಗ್ಗಿಲ್ಲದೆ ಅತಿಯಾಗಿ ಬಳಕೆ ಮಾಡಿದ ಪರಿಣಾಮವಾಗಿ ಈಗ ಅವುಗಳು ಎಲ್ಲೆಂದರಲ್ಲಿ ಕಸವಾಗಿ ಬಿದ್ದಿರುವುದನ್ನು ಕಾಣುತ್ತಿದ್ದೇವೆ. ಜಾನುವಾರುಗಳು ಅರಿವಿಲ್ಲದೇ ನುಂಗಿದ ಪ್ಲಾಸ್ಟಿಕ್ ಅವುಗಳ ಜೀವಕ್ಕೆ ಎರವಾದುದೂ ಇದೆ. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಕಸವು ನದಿ , ಸಾಗರಗಳನ್ನು ಸೇರಿ ಅಗಾಧ ಪ್ರಮಾಣದಲ್ಲಿ ಮಾಲಿನ್ಯವನ್ನುಂಟುಮಾಡಿದೆ. ಕುಡಿಯುವ ನೀರಿನ ಖಾಲಿ ಬಾಟಲಿಗಳು ಅಪಾರ ಪ್ರಮಾಣದಲ್ಲಿ ಕಸವಾಗುತ್ತಿವೆ. ಇತ್ತೀಚೆಗೆ ಸಮಾರಂಭಗಳಲ್ಲಿ ಅನುಕೂಲತೆ ಹಾಗೂ ಆಡಂಬರದ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಪ್ಲಾಸ್ಟಿಕ್ ಲೋಟ, ಚಮಚ ಹಾಗೂ ನೀರಿನ ಬಾಟಲಿಗಳನ್ನು ಒದಗಿಸುವ ಪದ್ಧತಿ ಹೆಚ್ಚುತ್ತಿದೆ. ಈ ರೀತಿಯ ಪ್ಲಾಸ್ಟಿಕ್ ಸೊಬಗಿನ ಆಡಂಬರಕ್ಕೆ ಕಡಿವಾಣ ಹಾಕುವುದು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲುದು.
ಮಾಲ್ ಸಂಸ್ಕೃತಿ ಬಂದ ಮೇಲೆ, ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಆದರೆ ಇತ್ತೀಚಿಗೆ ಮಾಲ್ ನಲ್ಲಿ ತರಕಾರಿಯಂತಹ ಬಿಡಿ ವಸ್ತುಗಳನ್ನು ಕೊಳ್ಳುವಾಗ ಅವುಗಳನ್ನು ಹಾಕಲು ಪ್ಲಾಸ್ಟಿಕ್ ರೋಲ್ ಬದಲು ಪೇಪರ್ ಕವರ್ ಗಳನ್ನು ಕೊಡುತ್ತಿರುವುದು ಉತ್ತಮ ಬೆಳವಣಿಗೆ. ಇತ್ತೀಚೆಗೆ, ಅಂಗಡಿ ಮುಂಗಟ್ಟುಗಳಲ್ಲಿ ಮಾಲೀಕರು ” ಪ್ಲಾಸ್ಟಿಕ್ ಕವರ್ ಕೊಡುವುದಿಲ್ಲ .. ಕವರ್ ಬೇಕಿದ್ದರೆ 5 ರೂ ಕೊಡಬೇಕು ‘ ಅಂತ ಸ್ವಲ್ಪ ಮಟ್ಟಿಗೆ ಒತ್ತಡ ಹೇರುತ್ತಿರುವುದರಿಂದ ಕೆಲವರು ಸ್ವಯಂಪ್ರೇರಿತರಾಗಿ ಇನ್ನು ಕೆಲವರು ಗೊಣಗುತ್ತಾ ತಮ್ಮದೇ ಕೈಚೀಲಗಳನ್ನು ಹಿಡಿದುಕೊಂಡು ಅಂಗಡಿಗಳಿಗೆ ಹೊರಡುತ್ತಾರೆ. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ನಾನ್ ವೋವನ್ ಹತ್ತಿಯಿಂದ ಹಾಗೂ ಸೆಣಬಿನಿಂದ ಂತಹ ತಯಾರಿಸಿದ ಕೈಚೀಲಗಳು ನೋಡಲೂ ಆಕರ್ಷಕವಾಗಿವೆ ಮರುಬಳಕೆಗೆ ಯೋಗ್ಯವಾಗಿರುತ್ತವೆ.
ಮಹಿಳೆಯರು ಅಡುಗೆಮನೆಯಲ್ಲಿ ದಿನಸಿವಸ್ತುಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗುವಂತೆ ಪಾರದರ್ಶಕ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದು ಸರ್ವೇಸಾಮಾಸ್ಯವಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ, ಕನಿಷ್ಟ ತೀಕ್ಷ್ಣ ಅಮ್ಲೀಯ ಅಥವಾ ಕ್ಷಾರೀಯ ರುಚಿಯುಳ್ಳ ಉಪ್ಪು, ಉಪ್ಪಿನಕಾಯಿ, ಹುಣಸೇಹಣ್ಣು ಇತ್ಯಾದಿಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಾಟಲಿಗಳ ಬದಲು ಪಿಂಗಾಣಿ ಅಥವಾ ಗಾಜಿನ ಜಾಡಿಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ದಿನಸಿ ಪದಾರ್ಧಗಳನ್ನು ತುಂಬಿಸಿಡಲು ಸ್ಟೀಲ್ ಡಬ್ಬಿಗಳು ಅಪಾರದರ್ಶಕವಾಗಿದ್ದರೂ ಉತ್ತಮ ಹಾಗೂ ಹೆಚ್ಚಿನ ದಿನ ಬಾಳಿಕೆ ಬರುತ್ತವೆ. ಒಟ್ಟಿನಲ್ಲಿ, ನಾವು ಬಳಸುವ ಪ್ರತಿ ಪ್ಲಾಸ್ಟಿಕ್ ವಸ್ತುವಿನ ಅಗತ್ಯವನ್ನು ಪುನ: ಪರಿಶೀಲಿಸಿ, ಸಾಧ್ಯವಿರುವ ಕಡೆ ಪರಿಸರ ಸ್ನೇಹಿ ಪರ್ಯಾಯ ವಸ್ತುವಿಗೆ ಬದಲಾಯಿಸಿದರೆ, ಪರಿಸರವನ್ನು ಸಂರಕ್ಷಿಸಲು ನಾವೂ ಕೈಜೋಡಿಸಿದಂತಾಗುತ್ತದೆ.
ಪರಿಸರದ ನಿರ್ವಹಣೆ ಮನೆಯಿಂದಲೇ ಆರಂಭವಾಗಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಅನಗತ್ಯವಾಗಿ ನೀರು ಪೋಲು ಮಾಡುವುದು, ವಿದ್ಯುತ್ ಉಪಕರಣಗಳನ್ನು ಯಾರೂ ಉಪಯೋಗಿಸದೆ ಇರುವ ಸಂದರ್ಭದಲ್ಲಿ ಸ್ವಿಚ್ ಆಫ್ ಮಾಡುವುದು ಮೊದಲಾದ ವಿಚಾರಗಳನ್ನು ತಿಳಿಯಪಡಿಸುವುದು ನಮ್ಮ ಕರ್ತವ್ಯ.ಮನೆಯಲ್ಲಿ ಮಳೆ ನೀರಿನ ಸಂಗ್ರಹದ ವ್ಯವಸ್ಥೆ ಮಾಡುವುದು, ಸಾಧ್ಯವಿದ್ದಷ್ಟು ಸೋಲಾರ್ ಉಪಕರಣಗಳನ್ನು ಬಳಸುವುದು, ಮನೆಮಂದಿ, ಸ್ನೇಹಿತರು ಒಟ್ಟಾಗಿ ಹೋಗಲು ಸಾಧ್ಯವಿರುವಲ್ಲಿ ಕನಿಷ್ಟ ವಾಹನಗಳಲ್ಲಿ ಗರಿಷ್ಠ ಮಂದಿ ಪ್ರಯಾಣಿಸಿ, ಇಂಧನವನ್ನು ಉಳಿಸುವುದು ಮೊದಲಾದ ದೈನಂದಿನ ಕೆಲಸಗಳೂ ಪರಿಸರದ ಸಂರಕ್ಷಣೆಗೆ ಪೂರಕವಾಗುತ್ತವೆ.
– ಹೇಮಮಾಲಾ.ಬಿ, ಮೈಸೂರು
ಮಾಹಿತಿಯುಕ್ತ ಲೇಖನ, ಮುಂದಿನ ಪೀಳಿಗೆಗಳಿಗೆ ಇದರ ಬಗ್ಗೆ ಆಗಾಗ ಶಾಲೆಗಳಲ್ಲಿ ಸೆಮಿನಾರಗಳಾಗಬೇಕು. ಅದಕ್ಕೂ ಹೆಚ್ಚು ಮನೆಯಲ್ಲಿ ನೀರಿನ ಮಿತಬಳಕೆ, ಪ್ಲಾಸ್ಟಿಕ ಬಳಕೆಯ ಕಡಿವಾಣ, ಕೈಚೀಲದ ಬಳಕೆ ನಾವೇ ಪ್ರಾರಂಭಿಸಿದರೆ ಮಕ್ಕಳು ನಮ್ಮನ್ನೆ ಅನುಸರಿಸುತ್ತಾರೆ. ಮೊದಲು ನಾವುಗಳಾಗೋಣ.