ಹೆಮ್ಮರಗಾಲದ ವೇಣುಗೋಪಾಲ ಮಂದಿರ

Share Button

ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ  ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ  ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ ಚಕ್ರ ಮುರಿದು ಬೀಳುವುದೆಂದೂ, ಆ ಸ್ಥಳದಲ್ಲಿ  ಅಗೆಸಿದರೆ ವೇಣುಗೋಪಾಲಸ್ವಾಮಿಯ ವಿಗ್ರಹ ಲಭಿಸುವುದೆಂದೂ, ಅದನ್ನು ಒಯ್ದು ಕೌಂಡಿನ್ಯ ಋಷಿಗಳಿಂದ  ಸ್ಥಾಪಿಸಿ ಪೂಜಿಸೆಂದೂ ಅನುಗ್ರಹವಾಯಿತಂತೆ.

ಕನಸಿನಂತೆಯೇ ಘಟನೆಗಳು ನಡೆದು, ಈಗಿನ ಹೆಮ್ಮರಗಾಲದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯ ರೂಪುಗೊಂಡಿತು. ಕಾಲಾನಂತರದಲ್ಲಿ ಹೊಯ್ಸಳರ ಪಾಳೆಯಗಾರರ ಆಳ್ವಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು. ಈಗಿನ  ದೇವಸ್ಥಾನವನ್ನು 13  ನೆಯ ಶತಮಾನದಲ್ಲಿ ಕಟ್ಟಲಾಯಿತು.

 

ಗರ್ಭಗುಡಿಯಲ್ಲಿರುವ ಕೊಳಲನ್ನೂದುವ ವೇಣುಗೋಪಾಲನ ವಿಗ್ರಹವು ತುಂಬಾ ಸುಂದರವಾಗಿದೆ. ಈ ದೇವರ ಕುರಿತು ಹಬ್ಬಿರುವ ದಂತಕತೆ ಇನ್ನೂ ಸೊಗಸಾಗಿದೆ. ಬಾಲಗೋಪಾಲನಾಗಿ ಕಂಗೊಳಿಸುವ ವೇಣುಗೋಪಾಲನಿಗೆ ಸಂತಾನಗೋಪಾಲ ಎಂಬ ಹೆಸರೂ ಇದೆ.  ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತಾರೆಂಬ ನಂಬಿಕೆ. ಅದಕ್ಕೆ ಸಾಕ್ಷಿಯಾಗಿ ದೇವರಿಗೆ ಅರ್ಪಿಸಿದ ಪುಟ್ಟ ಬೆಳ್ಳಿಯ ತೊಟ್ಟಿಲುಗಳು ಅಲ್ಲಿ ತೂಗಾಡುತ್ತಿದ್ದುವು.

ಇದಲ್ಲದೆ ಈ ಸ್ವಾಮಿಗೆ ‘ಹುಚ್ಚು ಗೋಪಾಲ’ ಎಂಬ ಹೆಸರೂ ಇದೆ! ಇನ್ನೊಂದು ಕಥೆಯ ಪ್ರಕಾರ ಅಲ್ಲಿ ಆಳಿದ ಚೋಳ ರಾಜನೊಬ್ಬನಿಗೆ 12  ಜನ ಹೆಣ್ಣು ಮಕ್ಕಳಿದ್ದರಂತೆ. ಪುತ್ರ್ರಾಕಾಂಕ್ಷಿಯಾಗಿ  ವೇಣುಗೋಪಾಲನನ್ನು  ಭಕ್ತಿಯಿಂದ ಪೂಜಿಸಿದರೂ ಆತನ 13ನೆಯ ಮಗು ಹೆಣ್ಣಾಗಿ ಹುಟ್ಟಿತಂತೆ. ನಿರಾಶೆಯಿಂದ ರಾಜ-ರಾಣಿ ಇಬ್ಬರೂ ದೇವಾಲಯದಲ್ಲಿಯೇ  ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ, ಕೊನೆಯ ಬಾರಿಗೆ ನವಜಾತ ಶಿಶುವನ್ನು ನೋಡಿ ಸಾಯೋಣ ಎಂದು ಮಗುವನ್ನು ನೋಡಿದಾಗ ಅದು ಗಂಡು ಮಗುವಾಗಿತ್ತಂತೆ. ಭಕ್ತಿ-ಆಶ್ಚರ್ಯ- ಸಂತೋಷಾತಿರೇಕದಿಂದ ಆತ ದೇವರನ್ನು ‘ಹುಚ್ಚು ಗೋಪಾಲ’ನೆಂದು ಕರೆದು ಪೂಜಿಸಿದಂತೆ. ಹೀಗೆ ಬಹು ನಾಮಾಂಕಿತ ಈ ಗೋಪಾಲ.

ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ ಕೌಂಡಿನ್ಯ ಮಹರ್ಷಿಯ  ದಂಡ   . ನಂಬಿಕೆಯ ಪ್ರಕಾರ,  ಇಲ್ಲಿ ವಾಸವಾಗಿದ್ದ ಕೌಂಡಿನ್ಯ ಋಷಿಯು ಸದ್ಗತಿ ಹೊಂದುವ ಸಮಯದಲ್ಲಿ ತನ್ನ ತಪಶ್ಶಕ್ತಿಯನ್ನು  ದಂಡಕ್ಕೆ ವರ್ಗಾಯಿಸಿ, ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸಿದರಂತೆ. ಹಾಗಾಗಿ ಈ ದೇವಸ್ಥಾನದಲ್ಲಿ ದಂಡ ದರ್ಶನಂ ಪಾಪ ನಾಶನಂ, ದಂಡ ಸ್ಪರ್ಶನಂ ಪುಣ್ಯ ವರ್ಧನಂ. ಹೂವಿನಿಂದ ಅಲಂಕೃತವಾದ ದಂಡವನ್ನು ಹಿಡಿದ ಅರ್ಚಕರು ಹಿಡಿದಿರುತಾರೆ. ಸಾಲಾಗಿ ಬರುವ ಭಕ್ತರು ಶಿರವೊಡ್ಡಿ ದಂಡವನ್ನು ಮೆತ್ತಗೆ ಸ್ಪರ್ಶಿಸುತ್ತಾರೆ.

ಶನಿವಾರ ಹಾಗೂ ಭಾನುವಾರ  ಮಾತ್ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ‘ದಂಡ ಸ್ಪರ್ಶನ’ ಮಾಡಲು ಅವಕಾಶವಿರುತ್ತದೆ. ಉಳಿದ ದಿನಗಳಲ್ಲಿ ಈ ಕಾರ್ಯಕ್ರಮವಿರುವುದಿಲ್ಲ.

ಹೆಮ್ಮರಗಾಲಕ್ಕೆ ಹೋಗುವ ದಾರಿ :

ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ   ಹೊರಟು ‘ಬದನವಾಳು’ ಎಂಬಲ್ಲಿ ಇಳಿಯಬೇಕು. ಅಲ್ಲಿಂದ ಹೆಮ್ಮರಗಾಲಕ್ಕೆ  ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಆದರೆ ದೇವಸ್ಥಾನದ ವರೆಗೆ ಹೋಗಬಹುದು. ಹಳ್ಳಿ ಮಾರ್ಗದಲ್ಲಿ ಸುಮಾರು 5  ಕಿ.ಮೀ ಪ್ರಯಾಣಿಸಬೇಕು.

 

– ಹೇಮಮಾಲಾ.ಬಿ
(12/07/2018ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

1 Response

  1. VENKATESH RASTHEPALYA says:

    ಸ್ಥಳ ಪುರಾಣವನ್ನು ಹೊಂದಿರುವ, ಬೇಡಿ ಬಂದ ಭಕ್ತರಿಗೆ ವರ ನೀಡುವ ಹೆಮ್ಮರಗಾಲದ ಸಂತಾನ ವೇಣು ಗೋಪಾಲ ಸ್ವಾಮಿಯ ಚರೀತ್ರೆ ತಿಳಿದು ಸಂತೋಷವಾಯಿತು. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: