ಅಂತರಂಗದ ಗೆಳತಿ
ಅಪ್ಪ,ಅಮ್ಮಂದಿರ ದಿನಗಳಲ್ಲಿ ಆಚರಿಸುವ ಈ ದಿನಗಳಲ್ಲಿ ಮಕ್ಕಳು ಮಾತ್ರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸರ್ವೆ ಸಾಮಾನ್ಯ. ಆದರೆ ಈ ದಿನಗಳಲ್ಲಿ ಅಮ್ಮ ಅಪ್ಪ ಕೂಡ ತಮ್ಮ ಅಂತರಂಗದ ಗುಪ್ತಗಾಮಿನಿಯನ್ನು, ತಮ್ಮ ಸುಪ್ತ ಭಾವನೆಗಳನ್ನು ಹರಿಬಿಡಲು ಬಯಸುತ್ತಾರೆ. ನಾನೂ ಕೂಡ ಅದಕ್ಕೆ ಹೊರತಾಗಿಲ್ಲ. ಅದೇ ಭಾವದಲ್ಲಿ,ಅದೇ ತವಕದಲ್ಲಿ ನನ್ನ ಭಾವಗಳನ್ನು ಹರಿಬಿಡುತ್ತಿದ್ದೆನೆ ಮಗಳೆ. ನೀನು ನನ್ನ ಅಂತರಂಗದಗೆಳತಿ. ಹೌದು,ನೀನು ನನಗೆ ಕರುಳ ಬಳ್ಳಿ ಮಾತ್ರವಲ್ಲ, ಅಂತರಂಗದ ಗೆಳತಿಯೂ ಹೌದು. ನನ್ನೋಲವ ಮಡಿಲ ಹೂವೇ, ನನ್ನ ಬಾಳಿನ ಅನರ್ಘ್ಯ ರತ್ನ ನೀನು. ಅದೆಷ್ಟು ಜನುಮದ ತಪದ ಫಲವೊ.ಅದಾವ ಪುಣ್ಯದ ಫಲವೊ ಈ ಮಡಿಲು ತುಂಬಿ ಈ ಮನೆಯ ಬೆಳಗಿದೆ. ಕಂದಯ್ಯ ಒಳಹೊರಗೆ ಆಡಿದರೆ ಬೀಸಣೆಕೆ ಯಾತಕೆ ಅನ್ನುವಂತೆ ನೀನಿರುವಾಗ ದೀಪಗಳೇ ಬೇಡಾ. ನೀನೇ ಒಂದು ನಂದಾ ದೀಪ. ನಾನು ನನ್ನ ಮಗಳು ಹೇಗಿರ ಬೇಕು ಅಂತ ಬಯಸಿದ್ದೆನೊ ಅದೇ ರೀತಿ ನೀನು ಇರುವುದು ಸೋಜಿಗವೆನಿಸಿದರೆ,ನಿನ್ನರಿವು ಪದೇ ಪದೇ ಅಪ್ಪನ ನೆನಪ ಹುಟ್ಟಿಸುವುದು ಅದೇಕೊ ಕಾಣೆ. ಅಪ್ಪನ ಹೆಂಗರಳು,ಅಪ್ಪನ ಪ್ರೀತಿ ವಾತ್ಸಲ್ಯ, ಅಪ್ಪನ ಕಾಳಜಿ, ಅಪ್ಪನ ಸ್ನೇಹ ಪರತೆ,ಪರರಿಗೆ ಮರುಗುವ ಅಂತಃಕರಣ,ಅಮ್ಮನ ಶಿಸ್ತು, ವ್ಯವಹಾರ ಸೂಕ್ಮತೆ, ಬೇಕಾದ ಸಮಯದಲ್ಲಿ ಕಠೀಣತೆ, ಅಗತ್ಯ ಬಿದ್ದರೆ ನಿರ್ಧಾಕ್ಷಣ್ಯತೆ ಈ ಎಲ್ಲವನ್ನು ಮೈಗೂಡಿಸಿಕೊಂಡು ಅವರಿಬ್ಬರ ಮರೆಸುವಂತೆ ಮೊಗೆ ಮೊಗೆದು ಸುರಿಯುವ ನಿನ್ನ ಆ ಮಾತೃ ಹೃದಯದ ಸವಿ ಉಣ್ಣುವ ಭಾಗ್ಯ ನನ್ನದು ಮಗಳೇ.
ನನಗೊಂದು ಕನಸಿತ್ತು.ನನಗೊಬ್ಬ ಮಗಳೇ ಬೇಕು. ಆ ಮಗಳನ್ನು ಆತ್ಮಾಭಿಮಾನಿ, ಸ್ವಾಭಿಮಾನಿ, ಸ್ವಾವಲಂಭಿಯನ್ನಾಗಿಸಿ, ಅವಳಿಗೊಂದು ಭವ್ಯ ಭವಿಷ್ಯ ರೂಪಿಸಿ ಅಕ್ಕರೆಯ ಹೆಣ್ಣಾಗಿ ಸಕ್ಕರೆಯ ಸಿಹಿಯಾಗಿ ಹಿರಿಯರ ಕಂಡರೆ ಗೌರವ, ಕಿರಿಯರ ಬಳಿ ವಿಶ್ವಾಸ, ಅಸಹಾಯಕರ ಬಗ್ಗೆ ಅನುಕಂಪದ ಜೊತೆ ಸಹಾಯ ಹಸ್ತ ನೀಡುವ ಮಾನಿನಿಯಾಗಿ ರೂಪಿಸಿ ಈ ಸಮಾಜಕ್ಕೊಂದು ಕೊಡುಗೆಯಾಗಿಸಬೇಕೆಂಬ ಅದಮ್ಯ ಬಯಕೆ ನನ್ನದೆಯಲಿ ಸದಾ ಪುಟಿದೇಳುತ್ತಿತ್ತು. ಅದೇನು ಸೌಭಾಗ್ಯವೊ ನನ್ನೇಲ್ಲ ಆಸೆಯ ಸಾಕಾರವಾಗಿ ನನ್ನ ಕಣ್ಣುಂದೆ ನೋಡು ನೋಡುತ್ತಾ ಬೆಳೆದು ನಿಂತು ಬಿಟ್ಟೆ ಮಗಳೇ.
ಹೆಣ್ಣಾಗಿಯೂ ನನ್ನಮ್ಮ ತಾನು ಬೆಳೆದ ಪರಿಸರದಿಂದಾಗಿ ತನ್ನ ಗಂಡು ಮಕ್ಕಳಿಗೆ ನೀಡುತ್ತಿದ್ದ ವಿಶೇಷ ಮಾನ್ಯತೆಗಳನ್ನು ಕಂಡು ಸಿಡಿದೇಳುತ್ತಿದ್ದ ನನ್ನ ಮನ, ನೋಡುತ್ತಿರು ಅಮ್ಮ, ನಾನು ಹೇಗೆ ನನ್ನ ಮಗಳನ್ನು ಬೆಳೆಸುತ್ತೆನೆ ಎಂದು ಅಮ್ಮನಿಗೆ ಮನಸ್ಸಿನಲ್ಲಿಯೇ ಸವಾಲು ಹಾಕುತ್ತಿದ್ದ ದಿನಗಳಿದ್ದವು. ಅದೇಕೊ ನನ್ನಮ್ಮನನ್ನು ಕಂಡರೆ ಅಸಹನೆ, ಮಾತು ಮಾತಿಗೂ ನೀನು ಹೆಣ್ಣು, ನೀನು ಹಾಗಿರ ಬೇಕು ನೀನು ಹೀಗಿರ ಬೇಕು ಅಂತ ಸದಾ ಕಟ್ಟು ಕಟ್ಟಳೆಗಳನ್ನು ಹೇರುತ್ತಿದ್ದ ನನ್ನಮ್ಮ ನನಗೆ ಯಾವತ್ತೂ ಇಷ್ಟವಾಗುತ್ತಿರಲಿಲ್ಲ. ಗಂಡಸಾಗಿದ್ದರೂ ಮಾತೃ ವಾತ್ಯಲ್ಯದ ಸವಿ ಉಣಿಸುತ್ತಿದ್ದ ನನ್ನಪ್ಪನೇ ನನಗೆ ಅಚ್ಚುಮೆಚ್ಚು.ನನಗಿಂತ ಹೆಚ್ಚು ಸ್ವತಂತ್ರ ಪಡೆದಿದ್ದ ಸಹೋದರರನ್ನು ಕಂಡರೆ ಮುನಿಸು, ನನಗಿಲ್ಲದ ಆ ಸ್ವತಂತ್ರಕ್ಕಾಗಿ ಅಮ್ಮನೊಡನೆ ಕಾದಾಟ, ಒಬ್ಬಳೆ ಮಗಳೆಂದು ಅತಿ ಎನಿಸುವಷ್ಟು ಮುದ್ದು ಮಾಡಿ ಹಾಳುಮಾಡುತ್ತಿದ್ದರೆಂದು ದೂರುವ ಅಮ್ಮನನ್ನು ಒಂದಿಷ್ಟೂ ಕೇರ್ ಮಾಡದ ಅಪ್ಪ,ಪ್ರೀತಿ ವಾತ್ಯಲ್ಯದ ಹೊಳೆಯಲಿ ನನ್ನನ್ನು ಮೀಯಿಸಿ ಬಿಟ್ಟಿದ್ದರು. ಗಂಡು ಮಕ್ಕಳನ್ನು ಅತಿ ಶಿಸ್ತಿನಿಂದ ಬೆಳೆಸುತ್ತಿದ್ದ ಅಪ್ಪ, ಹೆಣ್ಣು ಮಕ್ಕಳು ಹೂವಿನಂತೆ ಸುಖವಾಗಿ ಬೆಳೆಯ ಬೇಕು ಎಂದು ಬಯುಸುತ್ತಿದ್ದರೆ, ನಾನು ನನ್ನ ಕನಸಿನಲ್ಲಿ ನನ್ನ ಮಗಳನ್ನು ಅಪ್ಪನ ಮಡಿಲಿಗೆ ಹಾಕಿ ಆ ಮಮತೆಯಲಿ ಮೀಯುವಂತೆ ಮಾಡುತ್ತೆನೆ ಅಂತ ಅಂದುಕೊಳ್ಳುತ್ತಿದ್ದೆ. ಆ ಅದೃಷ್ಟ ನಿನಗಿಲ್ಲ ಮಗಳೇ. ಅಪ್ಪ ನನ್ನ ಸುಂದರ ಭವಿಷ್ಯ ನೋಡುವ ಮೊದಲೆ ಈ ಲೋಕದಿಂದಲೆ ಕಣ್ಮರೆಯಾದಾಗ ಅದೆಷ್ಟು ದೃತಿ ಗೆಟ್ಟಿದ್ದೆ. ಈ ಬದುಕೇ ಬೇಡವೆನಿಸಿತ್ತು. ಯಾವುದೊ ಕೆಟ್ಟ ನಿರ್ಧಾರಕ್ಕೂ ಸಿದ್ದವಾಗಿ ಬಿಟ್ಟಿತ್ತು ದೌರ್ಬಲ್ಯ ಮನಸ್ಸು, ಹಾಗೊಂದು ವೇಳೆ ನಡೆದು ಬಿಟ್ಟಿದ್ದರೆ ಇದನ್ನು ಬರೆಯಲು ನಾನೇ ಇರುತ್ತಿರಲಿಲ್ಲ. ಮುಂದೊಂದು ದಿನ ನೀನು ಈ ಬಾಳಿನಲ್ಲಿ ಬರುತ್ತಿಯೇನೊ ಎಂದೇ ನನ್ನ ನಿರ್ಧಾರ ಬದಲಿಸಿದೆನೇನೊ.
ಅಪ್ಪನ ಮನದಾಸೆಯಂತೆ ಅವರ ಆಶೀರ್ವಾದದಿಂದ ಹೂವಿನಂತೆ ನೋಡಿ ಕೊಳ್ಳುವ ಸಂಗಾತಿಯೇ ನನ್ನವರಾದರು. ನಿನ್ನಪ್ಪ ನನ್ನಪ್ಪನಂತೆಯೇ ಮೃದು ಹೃದಯಿ,ಮಮತಾಮಯಿ.ನೀ ನಡೆವ ಹಾದಿಯಲ್ಲೆಲ್ಲಾ ಹೂ ಮಳೆಯೇ ಸುರಿಸುವ ಅಮೃತವರ್ಷಿಣಿ. ನೀನೆಂದರೆ ಅತಿ ಪ್ರೀತಿ, ಅವರಮ್ಮನಿಗೂ ನಿನ್ನಕಂಡರೆ ಮುಚ್ಚಟೆ,ನೀನು ನಡೆದರೆ ಸವೆಯುತ್ತೀಯಾ ಎಂದು ಸದಾ ಕಂಕುಳಲ್ಲಿ ಏರಿಸಿಕೊಂಡು ತುತ್ತು ತಿನ್ನಿಸುವ ಮಮತಾಮಯಿ. ಅದರೆ ಆ ಅತಿ ಎನಿಸುವ ಪ್ರೀತಿಯಿಂದಾಗಿ ನೀನೆಲ್ಲಿ ಸರಿಯಾಗಿ ಬೆಳೆಯಲು ಸಾಧ್ಯವಾಗುವುದಿಲ್ಲವೊ ಅನ್ನೊ ಆತಂಕ ನನ್ನಲ್ಲಿ. ಬೆಳೆಯುತ್ತಾ ಬೆಳೆಯುತ್ತಾ ನನ್ನ ಆತಂಕ ನಿಜವಾಗತೊಡಗಿತು. ಕೋಣೆಯಲ್ಲಿಟ್ಟ ಹಣ್ಣು ಕೊಳೆಯಿತು,ಅಜ್ಜಿಯು ಬೆಳೆಸಿದ ಕೂಸು ಸೊರಗಿತು ಅನ್ನುವಂತೆ ಅಪ್ಪ, ಅಜ್ಜಿಯಾ ಮುದ್ದಿನಲಿ ನೀನು ನೀನಾಗದೆ ಮತ್ತೇನೊ ಆಗುತ್ತಿರುವುದು ಭಯ ಹುಟ್ಟಿಸಿತ್ತು. ನಿನ್ನ ನಿರ್ಲಕ್ಷತೆ, ಅಶಿಸ್ತು,ಉಡಾಫೆ, ಸೋಮಾರಿತನ ,ತಾತ್ಸಾರ ಕಂಡು ಕೋಪ ಉಕ್ಕಿ ಬರುತ್ತಿತ್ತು.ನಿನ್ನ ಬದಲಿಸುವ ಸಲುವಾಗಿ ನಿನ್ನ ಬಗ್ಗೆ ಕಟುವಾಗುತ್ತಿದ್ದೆ, ಇತಿಹಾಸ ಮರುಕಳಿಸಿತ್ತು. ನನ್ನಮ್ಮನ ಸ್ಥಾನದಲ್ಲಿ ನಾನು, ನನ್ನಪ್ಪನ ಸ್ಥಾನದಲ್ಲಿ ನಿನ್ನಪ್ಪ. ನಿನಗೆ ಅಪ್ಪನೇ ಎಲ್ಲಾದಕೂ ಬೇಕು. ನಾನೆಂದರೆ ಭಯ, ಅಸಡ್ಡೆ, ಕೋಪ. ಆಗ ನನಗರ್ಥವಾಗಿತ್ತು. ಬರೀ ಅಪ್ಪನ ಮುದ್ದಿನಲಿ ನಾನು ಬೆಳೆದಿದ್ದರೆ ಮೊದ್ದು ಹೆಣ್ಣಾಗಿ ಎಲ್ಲಿಯೂ ಸಲ್ಲದೆ ಇದ್ದು ಬಿಡುತ್ತಿದ್ದೆನೇನೊ, ಅಮ್ಮನ ಶಿಸ್ತು, ಹಟ, ಕೆಚ್ಚು, ಸ್ವಾಭಿಮಾನ, ಸ್ವಾವಲಂಬಿ ಇವೆಲ್ಲ ನನ್ನ ಬದುಕಲಿ ಅಮ್ಮ ಬೆಳೆಸಿದ್ದರಿಂದಲೇ ನನ್ನನ್ನು ಈ ಬದುಕಿನಲ್ಲಿ ಅತ್ಯಂತ ಯಶಸ್ವಿಯನ್ನಾಗಿಸಿದೆ. ಅಮ್ಮ ಕಲಿಸಿದ ಪಾಠವೇ ನನ್ನನ್ನು ಇಂದು ಹೆಂಡತಿ,ಸೊಸೆ, ಮಗಳು, ತಾಯಿ,ಅತ್ತಿಗೆ ನಾದಿನಿ ಹೀಗೆ ವಿಧ ವಿಧ ಪಾತ್ರದಲ್ಲಿ ಯಶಸ್ವಿಯಾಗಲು ಕಾರಣವಾಗಿದೆ. ಜೊತೆಗೆ ಅಮ್ಮನಾಸೆಯಂತೆ ಶಿಕ್ಷಣ ಪಡೆದು ನನ್ನ ಕಾಲ ಮೇಲೆ ನಿಲ್ಲಲು ನನ್ನ ಅಮ್ಮನೇ ಕಾರಣ ಎಂದು ಅರ್ಥವಾಗಿ ನಾನೂ ಕೂಡಾ ನನ್ನ ಆಮ್ಮನಂತೆ ಶಿಸ್ತಿನ ಸಿಪಾಯಿಯಾದೆ. ಆದರೆ ಸುಲಭಕ್ಕೆ ನೀನು ಬಗ್ಗುತ್ತಿರಲಿಲ್ಲ. ಅಜ್ಜಿಯ ಅತಿ ಪ್ರೀತಿ ನಿನ್ನನ್ನು ಹಾಳು ಮಾಡುತ್ತಿತ್ತು. ಶಾಲೆಯೆಂದರೆ ನಿನಗೆ ಅಲರ್ಜಿ.ನನಗೆ ಗೊತ್ತಿಲ್ಲದೆ ಅದೆಷ್ಟೊ ದಿನ ನೀನು ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಯಿಂದ ದೂರುಗಳು,ನಾನೇ ನಿನ್ನ ಶಾಲೆಗೆ ಹೋಗಿ ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಹೇಳಿ ಬರಬೇಕಾಗುತ್ತಿತ್ತು. ಅಪ್ಪನ ನೆರಳಿನಲ್ಲಿ ಅಜ್ಜಿಯ ಮಡಿಲಿನಲ್ಲಿ ನಿನ್ನ ಭವಿಷ್ಯ ಎಲ್ಲಿ ಕರಗಿ ಹೋಗುವುದೊ ಅನ್ನುವ ಚಿಂತೆ ನನ್ನ ಕಾಡಿ ಹಿಂಸಿಸುತ್ತಿತ್ತು.
ಹೇಗೊ ಶಾಲೆಯ ಅಂತಿಮ ವರ್ಷಕ್ಕೆ ಬಂದು ಬಿಟ್ಟೆ. ಎಸ್,ಎಸ್.ಎಲ್,ಸಿಯ ಅಗ್ನಿಪರೀಕ್ಷೆ ,ನಿನಗಲ್ಲ ನನಗೆ. ಇಡೀ ವರ್ಷ ನಿನ್ನನ್ನು ಓದಿಸುವ ಜವಾಬ್ದಾರಿ ನನ್ನದು, ಓದುವ ಶಿಕ್ಷೆ ನಿನ್ನದು. ಪರೀಕ್ಷೆಯೂ ಮುಗಿಯಿತು. ಪಲಿತಾಂಶದ ದಿನ ಕಾದ ಕಾವಲಿಯ ಮೇಲೆ ನಿಂತ ಅನುಭವ.ಮೋಬೈಲ್ ಹಿಡಿದು ಪಲಿತಾಂಶ ನೋಡುವಾಗ ನನಗೇ ಕೇಳುವಷ್ಟು ಎದೆ ಹೊಡೆದುಕೊಳ್ಳುತ್ತಿತ್ತು. ಮೊಬೈಲ್ ಸ್ಕ್ರೀನ್ ಮೇಲೆ ಮೂಡಿದ ಅಕ್ಷರಗಳನ್ನು ನೋಡಿ ನನ್ನ ಕಣ್ಣಿಂದ ನೀರು ದಳದಳನೆ ನೀರು ಇಳಿಯಿತು. ಪಕ್ಕದಲ್ಲಿಯೇ ನಿಂತಿದ್ದ ನಿನ್ನ ಕಣ್ಣಲ್ಲೂ ಎಂದೂ ಕಾಣದ ಆತಂಕದ ಎಳೆ. ನನ್ನ ಕಣ್ಣೀರು ಕಂಡು ನಿನ್ನಲ್ಲಿ ನಿರಾಶ ಭಾವ. ಆ ಕ್ಷಣವೇ ನಿನ್ನ ತಬ್ಬಿ ನನ್ನ ಉಳಿಸಿ ಬಿಟ್ಟೆ ಮಗಳೇ ಎಂದು ಜೋರಾಗಿ ಎತ್ತಿ ತಿರುಗಿಸಿದೆ. ಅಂದು ನೀನು ಕೊಟ್ಟ ಸಂತೋಷ ಅಷ್ಟಿಷ್ಟಲ್ಲ. ಆ ಕ್ಷಣದಲ್ಲಿ ನಿನ್ನಲ್ಲಿ ಆದ ಬದಲಾವಣೆ ನನಗೆ ಗೋಚರಿಸಿತು. ನೀನು ಬದಲಾಗಿದ್ದೆ.ಸಂಪೂರ್ಣವಾಗಿಬದಲಾಗಿದ್ದೆ. ಕ್ರಮೇಣ ನಿನ್ನಲ್ಲಿ ಸಾಧಿಸಲೇ ಬೇಕಾದ ಸ್ಪಷ್ಟ ಗುರಿ ಕಾಣಿಸಿತು, ಆ ಗುರಿ ತಲುಪುವತ್ತ ನಿನ್ನ ಪ್ರಯತ್ನ,ಶ್ರಮ,ನಿನ್ನ ಡೆಡಿಕೇಷನ್ , ನಿನ್ನ ಅರ್ಪಣೆ, ನಿನ್ನ ಛಲ ನಿನ್ನ ಹಟ , ಸೋಲಬಾರದೆಂಬ ನಿನ್ನ ಧೋರಣೆ ಎಲ್ಲವೂ ಇಂದು ನಿನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.ನಿನ್ನ ಬಗ್ಗೆ ನಿನ್ನ ವೃತ್ತಿಯ ಬಗ್ಗೆ ನಿನ್ನ ಪ್ರಾಮಾಣಿಕತೆ ಬಗ್ಗೆ, ನಿನ್ನ ಕಾರ್ಯ ದಕ್ಷತೆಯ ಬಗ್ಗೆ ಮೆಚ್ಚುಗೆಯ ನುಡಿಗಳು ಕೇಳಿ ಬರುತ್ತಿರುವುದನ್ನು ಕಂಡಾಗ ಸಾರ್ಥಕತೆ ಕಾಣುತ್ತೆನೆ.ನೀನು ನಿಭಾಯಿಸುವ ಜವಾಬ್ದಾರಿಗಳು,ನೀನು ತೆಗೆದುಕೊಳ್ಳುವ ನಿರ್ಧಾರಗಳು, ಕೆಲಸದಲ್ಲಿನ ನಿನ್ನ ಸಮರ್ಪಣಾ ಭಾವ, ನಿನ್ನ ದಕ್ಷತೆ, ವ್ಯವಹಾರ ಚಾಣಕ್ಷತೆ, ಮೃದು ನಡವಳಿಕೆ, ತಾಳ್ಮೆ ಇವೆಲ್ಲ ನಿನ್ನ ಧನಾತ್ಮಕ ಅಂಶಗಳಾಗಿ ನೀನು ಬೆಳೆಯುವತ್ತ ಸಹಕಾರಿಯಾಗಿವೆ. ನೀನು ಎತ್ತರೆತ್ತರಕೆ ಏರಬೇಕು.ಈ ಸಮಾಜಕ್ಕೆ ನಿನ್ನದೆ ಆದ ಕೊಡುಗೆ ನೀಡಬೇಕು. ನಿನ್ನೆಲ್ಲ ಕನಸುಗಳು ಸಾಕಾರವಾಗಿ ನಿನ್ನಾಸೆಗಳು ಈಡೇರಿ ನಿನ್ನ ಬದುಕು ಉಜ್ವಲವಾಗಿ ಬೆಳಗಬೇಕು ,ಅದೇ ನನ್ನಾಸೆ ಕೂಡಾ. ಪ್ರೀತಿಯಿಂದ ನಿನ್ನಮ್ಮ.
-ಶೈಲಜಾ, ಹಾಸನ