1, 2, 3, 4…….ಈಗ 5ಜಿ

Share Button

 

5 ಜಿ ತಂತ್ರಜ್ಞಾನ ಭಾರತಕ್ಕೆ ಬೇಕೆ? ಎನ್ನುವ ವಿಷಯದ ಪರ-ವಿರೋಧದ ಚರ್ಚೆಗಳು ಮಾಧ್ಯಮಗಳಲ್ಲಿ ನೆಡೆಯುತ್ತಿವೆ. ಬರಲಿರುವುದು 5ಜಿ ಆದರೆ, 4ಜಿ, 3ಜಿ, 2ಜಿ ಮತ್ತು 1ಜಿ ಅಂದರೇನು? ಎನ್ನುವ ಪ್ರಶ್ನೆ ಸಹಜ. ಅಂದ ಹಾಗೆ ಜಿ ಅಂದರೆ ಮೊಬೈಲ್‍ ವೈರ್‍ಲೆಸ್‍ ಜನರೇಷನ್‍ ( ಪೀಳಿಗೆ) ಎಂದು ಅರ್ಥವಿದೆ.

1982ರಲ್ಲಿ ಮೊಬೈಲ್ ಫೋನ್‍ಗಳಲ್ಲಿ 1ಜಿ ತಂತ್ರಜ್ಞಾನದ ಬಳಕೆ ಪ್ರಾರಂಭವಾಯಿತು. ಕೇವಲ ದೂರವಾಣಿ ಕರೆಗಳನ್ನು ಮಾಡಲು ಸೀಮಿತವಾಗಿದ್ದ ಈ ಮೊಬೈಲ್‍ ಫೋನ್‍ಗಳು ತುಂಬಾ ದುಬಾರಿಯಾಗಿದ್ದ ಕಾರಣ ಶ್ರೀಮಂತರು ಮಾತ್ರ ಬಳಸಲು ಪ್ರಾರಂಭಿಸಿದರು. ಈಗ ಬಳಕೆಯಲ್ಲಿರುವ ಡಿಜಿಟಲ್‍ ತಂತ್ರಜ್ಞಾನದ ಬದಲಾಗಿ AMPS ( advanced mobile phone system) ತಂತ್ರಜ್ಞಾನವನ್ನು 1 ಜಿಯಲ್ಲಿ ಬಳಸಲಾಗುತ್ತಿತ್ತು.

ಈಗ ಲಭ್ಯವಿರುವ ಚಿಕ್ಕದಾದ ಮತ್ತು ಹಗುರವಾದ ಸ್ಮಾರ್ಟ ಫೋನುಗಳಿಗೆ ಹೋಲಿಸಿದರೆ 1ಜಿ ಮೊಬೈಲ್‍ ಫೋನ್‍ಗಳು ಇಟ್ಟಿಗೆ ಗಾತ್ರ ಮತ್ತು ತೂಕದ ಫೋನುಗಳಾಗಿದ್ದವು ಎಂದರೆ ಅತಿಶಯೋಕ್ತಿಯಲ್ಲ. ಈ ಫೋನುಗಳಿಂದ ಮಾಡಿದ ದೂರವಾಣಿ ಕರೆಗಳ ಗುಣಮಟ್ಟ ಉತ್ತಮವಾಗಿರಲಿಲ್ಲ. ಈ ದೂರವಾಣಿ ಕರೆಗಳ ಕದ್ದಾಲಿಕೆ ಮಾಡುವುದು ಸಾಧ್ಯವಿತ್ತು.

1980ರ ದಶಕದ ಕೊನೆಯಲ್ಲಿ 2ಜಿ ತಂತ್ರಜ್ಞಾನದ ಬಳಕೆ ಮೊಬೈಲ್‍ ಫೋನ್‍ಗಳಲ್ಲಿ ಪ್ರಾರಂಭವಾಯಿತು. ಡಿಜಿಟಲ್‍ ತಂತ್ರಜ್ಞಾನವನ್ನು ಬಳಸಲು ಪ್ರಾರಂಭಿಸಿದ ಕಾರಣ, 2ಜಿ ಮೊಬೈಲ್‍ ಪೋನ್‍ಗಳಿಂದ ದೂರವಾಣಿ ಕರೆಗಳನ್ನು ಮಾಡುವುದು ಮಾತ್ರವಲ್ಲ, ಎಸ್‍ಎಂಎಸ್‍, ಎಂಎಂಎಸ್‍ ಮತ್ತು ಚಿತ್ರಗಳನ್ನು ಕಳುಹಿಸುವುದು ಸಾಧ್ಯವಾಯಿತು. ಆದರೆ 2ಜಿ ಫೋನ್‍ಗಳ ಡೇಟಾ ವಿನಿಮಯ ವೇಗ ಗರಿಷ್ಠ 64kbps ಮಾತ್ರವಾಗಿತ್ತು.

1ಜಿ ಫೋನ್‍ಗಳಿಗಿಂತ ಉತ್ತಮ ದೂರವಾಣಿ ಸೇವೆ ನೀಡಲು 2ಜಿ ಫೋನ್‍ಗಳಿಗೆ ಸಾಧ್ಯವಾದರೂ, ನೆಟ್‍ವರ್ಕ ಸಂಪರ್ಕ ಉತ್ತಮವಿಲ್ಲದ ಕಡೆ, ಈ ಫೋನ್‍ಗಳು ಕೆಲಸ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.

ತದನಂತರದ ದಿನಗಳಲ್ಲಿ 2.5 ಜಿ ತಂತ್ರಜ್ಞಾನದ ಬಳಕೆ ಮೊಬೈಲ್‍ ಫೋನ್‍ಗಳಲ್ಲಿ ಪ್ರಾರಂಭವಾಯಿತು. ಇವುಗಳಲ್ಲಿ 64 ರಿಂದ 144 kbps ಡೇಟಾ ವಿನಿಮಯ ವೇಗ ಸಾಧ್ಯವಾಯಿತು. 2.5ಜಿ ಮೊಬೈಲ್‍ ಫೋನ್‍ಗಳಲ್ಲಿ ಕ್ಯಾಮರಾ ಸೌಲಭ್ಯ ದೊರೆಯಲು ಪ್ರಾರಂಭವಾಯಿತು. ಇ-ಮೇಲ್‍ ಮತ್ತು ಅಂರ್ತಜಾಲವನ್ನು ಬಳಸಲು ಈ ಮೊಬೈಲ್‍ ಫೋನ್‍ಗಳಲ್ಲಿ ಸಾಧ್ಯವಾಯಿತು.

2000ರಲ್ಲಿ 3ಜಿ ತಂತ್ರಜ್ಞಾನದ ಬಳಕೆ ಮೊಬೈಲ್‍ ಫೋನ್‍ಗಳಲ್ಲಿ ಪ್ರಾರಂಭವಾಯಿತು. 2.5ಜಿ ಮೊಬೈಲ್‍ ಫೋನ್‍ಗಳಲ್ಲಿ ದೊರೆಯುವ ಸೇವೆಗಳ ಜೊತೆಯಲ್ಲಿ ಬ್ರಾಡ್‍ಬ್ಯಾಂಡ್‍ ಅಂರ್ತಜಾಲ ಸೌಲಭ್ಯಗಳು, ವೀಡಿಯೋ, ಮೊಬೈಲ್‍ ಟಿವಿ, ವೀಡಿಯೋ ಕಾನ್ಫರೆನ್ಸ್, ಗೇಮಿಂಗ್‍ ಮೊದಲಾದ ಸೌಲಭ್ಯಗಳನ್ನು 3ಜಿ ಮೊಬೈಲ್‍ ಫೋನ್‍ಗಳಲ್ಲಿ ನೀಡಲು ಸಾಧ್ಯವಾಯಿತು.

2008ರಲ್ಲಿ 4ಜಿ ತಂತ್ರಜ್ಞಾನದ ಬಳಕೆ ಮೊಬೈಲ್‍ ಪೋನ್‍ಗಳಲ್ಲಿ ಪ್ರಾರಂಭವಾಯಿತು. 10 Mbps-1 Gbps ಡೇಟಾ ವಿನಿಮಯ ವೇಗ ಈ ಮೊಬೈಲ್‍ ಫೋನ್‍ಗಳಲ್ಲಿ ಸಾಧ್ಯವಾಯಿತು. ವೈರ್‍ಲೆಸ್‍ ಬ್ರಾಡ್‍ಬ್ಯಾಂಡ್‍ ಸೌಲಭ್ಯಗಳು, ಉತ್ತಮ ಗುಣಮಟ್ಟದ ಸುರಕ್ಷತೆ, ಉತ್ತಮ ಗುಣಮಟ್ಟದ ವೀಡಿಯೋ, ಹೆಚ್‍ಡಿ ಟಿವಿ, ಮೊದಲಾದ ಮೌಲ್ಯಾಧಾರಿತ ಸೇವೆಗಳು 4ಜಿ ಮೊಬೈಲ್‍ ಫೋನ್‍ಗಳಲ್ಲಿ ಸಾಧ್ಯವಾಯಿತು.

2010ರ ಅಂತ್ಯ ಭಾಗದಿಂದ 5ಜಿ ತಂತ್ರಜ್ಞಾನವನ್ನು ಮೊಬೈಲ್‍ ಫೋನ್‍ಗಳಲ್ಲಿ ನೀಡಲು ಕೆಲಸ ಪ್ರಾರಂಭವಾಗಿದೆ. ವೈರ್‍ಲೆಸ್‍ ವರ್ಡ ವೈಡ್‍ ವೆಬ್ (WWWW) ಕೇಂದ್ರಿಕೃತವಾದ 5ಜಿ ಮೊಬೈಲ್‍ ಫೋನ್‍ಗಳಲ್ಲಿ ಗರಿಷ್ಠ 20 Gbps ಡೇಟಾ ವಿನಿಮಯ ವೇಗ ಸಾಧ್ಯವಿದೆ. ಕೃಷಿ, ಬ್ಯಾಂಕು, ವಾಣಿಜ್ಯ, ಉದ್ಯಮ, ಸಂವಹನ, ರಕ್ಷಣೆ, ಸರ್ಕಾರದ ಸೇವೆಗಳು, ಆರೋಗ್ಯ, ಹೀಗೆ ವಿವಿಧ ಕ್ಷೇತ್ರಗಳಲ್ಲಿ 5ಜಿ ತಂತ್ರಜ್ಞಾನ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿರೀಕ್ಷೆ ಇದೆ. ಮೊಬೈಲ್‍ ಫೋನ್‍ಗಳಲ್ಲದೆ, IOT, ಸ್ಮಾರ್ಟ ಮನೆ, ಸ್ಮಾರ್ಟ ಉಪಕರಣಗಳು, ಹೀಗೆ ವಿವಿಧ ಕ್ಷೇತ್ರಗಳಲ್ಲಿ 5ಜಿ ಬಳಕೆಯಾಗಲಿದೆ. ಇದರಿಂದಾಗಿ ಹಲವು ಲಕ್ಷ ಸಂಖ್ಯೆಯಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.

ಭಾರತದಲ್ಲಿ 5ಜಿ ಸೌಲಭ್ಯ ನೀಡಲು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು 5 ಲಕ್ಷ ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. 5 ಜಿ ತಂತ್ರಜ್ಞಾನ ಕುರಿತು ಇರುವ ಹಲವು ಸವಾಲುಗಳನ್ನು ಪರಿಹರಿಸಿಕೊಂಡು ಭಾರತ ಕೂಡಾ ಅಮೇರಿಕಾ, ಜಪಾನ್‍, ಚೀನಾ ಮೊದಲಾದ ದೇಶಗಳಂತೆ 5ಜಿ ತಂತ್ರಜ್ಞಾನ ಬಳಸಲು ಮುಂದಾಗುವುದು ಇಂದಿನ ಡಿಜಿಟಲ್‍ ಯುಗದಲ್ಲಿ ಅಗತ್ಯವಾಗಿದೆ.

-ಉದಯ ಶಂಕರ ಪುರಾಣಿಕ

1 Response

  1. Y C Kamala says:

    Very good article on introduction to G’s for common man.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: