ಹಿರಿಯ ನಾಗರಿಕರ ಪರಿಧಿಯಲ್ಲಿ..
” ನಮ್ಮತ್ತೆಗೆ ಇತ್ತೀಚೆಗೆ ತೀರಾ ಮರೆವು , ಬಾಗಿಲು ತೆಗೆದು ರಸ್ತೆಗೆ ಹೋಗ್ತಾರೆ, ವಾಪಾಸು ಮನೆಗೆ ಬರಲು ದಾರಿ ಗೊತ್ತಾಗಲ್ಲ, ಶುಗರ್ ಇದ್ದರೂ ಬಾಯಿ ಚಪಲಕ್ಕೇನೂ ಕಮ್ಮಿ ಇಲ್ಲ, ಬೆನ್ನು ನೋವು ಅಂತಾರೆ, ಸದಾ ಅವರ ಹಳೇ ಪ್ರವರ ಕೇಳ್ತಾ ಇರ್ಬೇಕು, ಆಫೀಸಿನಲ್ಲಿ ಕೆಲ್ಸ ಮಾಡಿ ನಂಗೆ ಸಾಕಾಗಿರುತ್ತೆ, ಇನ್ನು ಇವ್ರ ಕಥೆ ಕೇಳೋಕೆ ಟೈಮ್ ಎಲ್ಲಿದೆ….ಎರಡೂ ಜನ ಕೆಲ್ಸ ಮಾಡಿಲ್ಲಾಂದ್ರೆ ಈ ಕಾಲಕ್ಕೆ ಸಾಲುತ್ತಾ….ಇವ್ರನ್ನ ವೃದ್ಧಾಶ್ರಮಕ್ಕೆ ಸೇರ್ಸೋಣ ಅಂದ್ರೆ ಎಲ್ರೂ ನನ್ನ ವಿಲನ್ ತರ ಆಡ್ಕೋತಾರೆ.. ಕೊನೆಗೂ ಹೋಂ ಸರ್ಸ್ ಇಟ್ಕೊಂಡ್ವಿ….ಅವ್ಳು ಪಾಪ ಸೇವೆ ಮಾಡ್ತಾಳಾದರೂ ನಮ್ಮತ್ತೇನೆ ರೇಗ್ತಾರೆ..ಫಾರಿನ್ ನಲ್ಲಿರೋ ವಾರಗಿತ್ತೀರು ಬಚಾವಾದ್ರು ..ನಾನು ಸಿಕ್ಕಹಾಕ್ಕೊಂಡೆ.. ‘ ಇತ್ಯಾದಿ ಒಬ್ಬರು ತನ್ನ ಅಸಹಾಯಕತೆ ಹಾಗೂ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಬ್ಬರು “ ನಮ್ಮನೆ ಕಥೆನೂ ಅದೆ, ಉಷಾರಿಲ್ಲದ ಅತ್ತೆ-ಮಾವನ ನೋಡ್ಕೋಳ್ಳೊ ಜವಾಬ್ದಾರಿ ನಮ್ಗೆ. ನಿಮ್ಗಾದ್ರೂ ಆಫೀಸ್ನಲ್ಲಿ ಸ್ವಲ್ಪ ಬದಲಾವಣೆ ಇರುತ್ತೆ…ಸಂಬಳಾನು ಬರುತ್ತೆ..ನನಗೋ ಸಂಬಳವಿಲ್ಲದ ಕೆಲಸ..ಮನೆಮಂದಿಯೆಲ್ಲ ಜಾಣತನದಿಂದ ಜವಾಬ್ದಾರಿ ಕಳ್ಕೊತ್ತಾರೆ, ನೀನು ಹೇಗೂ ಮನೇಲಿದ್ದೀಯಲ್ಲಾ, ಅಮ್ಮನ ನೋಡ್ಕೋ ಅಂತ. ಇವರೆಲ್ಲ ಆಗಾಗ ಅವರಮ್ಮನ ವಿಚಾರಿಸೋ ನೆಪದಲ್ಲಿ ಬರೋ ಸಡಗರಕ್ಕೆ ನಂಗೆ ಅಡ್ಗೇ ಮಾಡಿ ಹಾಕೋ ಕೆಲ್ಸ, ಬರೋರಾದ್ರೂ ಸುಮ್ಮನೆ ಇರ್ತಾರಾ, ‘ಹಂಗೆ ಮಾಡ್ಬೇಕಿತ್ತು, ಹೀಂಗೆ ಮಾಡ್ಬೇಕಿತ್ತು’ ಅಂತ ಪುಕ್ಕಟೆ ಉಪದೇಶ ಬೇರೆ. ಹಾಗೆಂತ ಅವರೇನೂ ಸೇವೆ ಮಾಡಲ್ಲ. ಮನೇಲಿ ಗಬ್ಬು ವಾಸನೆ ಜೊತೆಗೆ , ಡೆಟ್ಟಾಲ್, ಫಿನಾಯಿಲ್ ವಾಸನೆ ಸೇರಿ ತಲೆಕೆಟ್ಟು ಹೋಗ್ತಾ ಇದೆ ” ಎಂದರು ಇನ್ನೊಬ್ಬರು.
‘ಎಲ್ಲಾ ಮನೇಲೂ ನಮ್ಮಮ್ಮ ಶಾರದೆ, ಅವ್ರಮ್ಮ ನಾರದೆ ಕಣ್ರೀ, ನಮ್ಮ ನಾದಿನಿ ಮನೆಯವರು ಅವ್ರ ಮಾವನ ವೃದ್ಧಾಶ್ರಮದಲ್ಲಿ ಬಿಟ್ಟು ಬಂದಿದ್ದಾರೆ, ಆದ್ರೆ ನಾನು ಅತ್ತೆಗೆ ಸೇವೆ ಮಾಡೋದ್ರಲ್ಲಿ ಕೊಂಕು ಹುಡುಕ್ತಾಳೆ’ ..ಹೀಗೆ ಮಾತು ಮುಂದುವರಿಯುತ್ತದೆ. ‘ತಿಂಗಳಿಗೆ ಹತ್ತುಸಾವಿರಕ್ಕೂ ಹೆಚ್ಚು ನಮ್ಮಾವನ ಔಷಧಿಗೆ ಆಸ್ಪತ್ರೆ ಖರ್ಚಿಗೆ ಅಂತಬೇಕಾಗುತ್ತೆ..ಅವರ ಪೆನ್ಶನ್ ಎಲ್ಲಿಗೆ ಸಾಲುತ್ತೆ…’ ಎನ್ನುತ್ತಾರೆ ಮಗುದೊಬ್ಬರು.
ಇವರೆಲ್ಲರಿಗೂ ಕಾಡುವ ಒಂದೇ ಸಮಸ್ಯೆ ಏನೆಂದರೆ ಮನೆಯಲ್ಲಿ ಅವಲಂಬಿತರಾದ ಹಿರಿಯ ನಾಗರಿಕರಿದ್ದಾರೆ. ಇವರುಗಳು ಹೇಳುತ್ತಿರುವುದೆಲ್ಲವೂ ಅವರ ದೃಷ್ಟಿಕೋನದಿಂದ ಸರಿಯಾಗಿಯೇ ಇದೆ. ಅವರನ್ನು ದೂಷಿಸಲಾಗದು. ಈಗಿನ ಸ್ಪರ್ಧಾತ್ಮಕ ಜೀವನದಲ್ಲಿ ಮನೆವಾರ್ತೆ ನಡೆಸಲು, ಆದಾಯವನ್ನು ಹೆಚ್ಚಿಸಲು ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವ ಸಾಧ್ಯತೆಗಳು ಹೆಚ್ಚು. ಅರ್ಥಿಕ ಅವಶ್ಯಕತೆ ಇಲ್ಲದಿದ್ದರೂ, ಆಧುನಿಕ ವಿದ್ಯಾವಂತ ಗೃಹಿಣಿಯರಿಗೆ ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳಲು, ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಯಾವುದಾದರೂ ಉದ್ಯೋಗ ಅಥವಾ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕೆನಿಸುವುದು ಸಹಜ.
ಜಾಗತಿಕ ಅಧ್ಯಯನಗಳ ಪ್ರಕಾರ ಮನುಷ್ಯರ ಸರಾಸರಿ ಜೀವಿತಾವಧಿಯು ಹೆಚ್ಚುತ್ತಾ ಇದೆ. ಆಧುನಿಕ ವೈದ್ಯಕೀಯ ಸವಲತ್ತುಗಳಿಂದಾಗಿ ಲಭಿಸುವ ವಿವಿಧ ವಾಕ್ಸಿನೇಶನ್ ಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು, ಜನಸಾಮಾನ್ಯರಲ್ಲಿ ಹೆಚ್ಚಿದ ಆದಾಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಹೀಗೆ ಹಲವಾರು ಕಾರಣಗಳಿಂದಾಗಿ ಸರಾಸರಿ ಜೀವಿತಾವಧಿ ಹೆಚ್ಚಾಗಿದೆ. ಬದಲಾದ ಸಾಮಾಜಿಕ ಜೀವನ ಶೈಲಿಯಲ್ಲಿ ಕೂಡುಕುಟುಂಬಗಳು ಬಹಳ ವಿರಳವಾಗಿದೆ. ಜನಸಂಖ್ಯಾ ನಿಯಂತ್ರಣ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳ ಫಲವಾಗಿ ‘ಮಕ್ಕಲಿರಲವ್ವ ಮನೆತುಂಬ’ ವಾಕ್ಯವು ‘ಮನೆಗೊಂದು ಮಗು’ ಘೋಷಣೆಯಾಗಿ ಮಾರ್ಪಟ್ಟಿತು.
ಈ ಎಲ್ಲಾ ಬದಲಾವಣೆಗಳ ಒಟ್ಟಾರೆ ಪರಿಣಾಮವಾಗಿ ಇಂದು ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಹಿರಿಯರ ಬೇಕು-ಬೇಡಗಳನ್ನು ಗಮನಿಸುತ್ತಾ ಗೌರವದಿಂದ ಕಾಣುವುವರೂ ಇದ್ದಾರೆ, ನಿರ್ಲಕ್ಷಿಸುವವರೂ ಇದ್ದಾರೆ. ಹಿರಿಯರ ಸೇವೆ ಮಾಡಬೇಕೆಂಬ ಮನಸ್ಸಿದ್ದರೂ, ಅನಿವಾರ್ಯ ಕಾರಣಗಳಿಂದಾಗಿ ಅಸಾಧ್ಯವಾದಾಗ ಪರ್ಯಾಯ ವ್ಯವಸ್ಥೆಯ ಮೊರೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಹೋಂ ನರ್ಸ್ ಗಳನ್ನು ನೇಮಿಸುವುದು ಹಾಗೂ ವೃದ್ಧಾಶ್ರಮಗಳಿಗೆ ಸೇರಿಸುವುದು ತಕ್ಕ ಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಹೆಚ್ಚುತ್ತಿರುವ ವೃದ್ಧಾಶ್ರಮಗಳು ಖಂಡಿತವಾಗಿಯೂ ಸಂತೋಷ ತರುವ ವಿಚಾರವಲ್ಲ. ಕೂಡುಕುಟುಂಬದ ಸಂಸ್ಕೃತಿಗೆ ಹೆಸರಾದ ಭಾರತಕ್ಕೆ ಸೂಕ್ತವೂ ಅಲ್ಲ. ಆದರೆ ಅನಿವಾರ್ಯವಾದರೆ, ಹಿರಿಯರನ್ನು ಒಬ್ಬಂಟಿಯಾಗಿ ಬಿಡುವ ಬದಲು ವೃದ್ಧಾಶ್ರಮಕ್ಕೆ ಸೇರಿಸಿದರೆ, ಅಲ್ಲಿ ಹಿರಿಯರನ್ನು ಕನಿಷ್ಟ ಗಮನಿಸುವವರು ಇರುತ್ತಾರೆ. ಹಿರಿಯರಿಗೂ ತಮ್ಮದೇ ವಯಸ್ಸಿನವರ ಒಡನಾಟ, ಸಹಕಾರ ಲಭಿಸುತ್ತದೆ.
ವಯಸ್ಸಾಗುತ್ತಿದ್ದಂತೆ ಸ್ವಾಭಾವಿಕವಾಗಿ ಬರುವ ಸುಸ್ತು, ಮೂಳೆಸವೆತ, ನರದೌರ್ಬಲ್ಯ, ಪಂಚೇಂದ್ರಿಯಗಳ ಕಾರ್ಯಕ್ಷಮತೆ ಕಡಿಮೆಯಾಗುವುದು, ಮಧುಮೇಹ, ರಕ್ತದೊತ್ತಡ ಇತ್ಯಾದಿಗಳ ಜೊತೆಗೆ ಕೆಲವರಿಗೆ ಮಾನಸಿಕೆ ತೊಂದರೆಗಳೂ ಬರುತ್ತವೆ. ಸಂಗಾತಿಯನ್ನು ಕಳೆದುಕೊಂಡಿರುವುದು, ಬೆಳೆದ ಮಕ್ಕಳು ದೂರವಿರುವುದು ಅಥವಾ ಮನೆಯಲ್ಲಿದ್ದರೂ ಹೊಸ ತಲೆಮಾರಿನ ಆಚಾರ ವಿಚಾರಗಳಿಗೆ ಭಾವನಾತ್ಮಕ ಹೊಂದಿಕೆಯಾಗದಿರುವುದು ಕೂಡ ಹಿರಿಯ ನಾಗರಿಕರಿಗೆ ಸವಾಲೊಡ್ಡುತ್ತವೆ. ಆರ್ಥಿಕ ಸ್ವಾವಲಂಬನೆ ಇಲ್ಲದಿದ್ದರೆ ಅವರ ಪರಿಸ್ಥಿತಿ ಇನ್ನೂ ಕಠಿಣವಾಗಿರುತ್ತದೆ.
ವೃದ್ಧಾಪ್ಯ ಶಾಪವಲ್ಲ, ಅದು ಪ್ರಕೃತಿನಿಯಮ . ಹಾಗಾದರೆ ವೃದ್ಧಾಪ್ಯವನ್ನು ಸಂತೋಷದಿಂದ ಕಳೆಯಲು ಏನು ಮಾಡಬೇಕು ಎಂಬುದನ್ನು ಮೊದಲಾಗಿಯೇ ಆಲೋಚಿಸಿ, ಅವರವರ ಆಯ್ಕೆಗೆ ತಕ್ಕಂತ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದು ಉತ್ತಮ. ಪ್ರಸ್ತುತ ಉದ್ಯೋಗ ಕ್ಷೇತ್ರಗಳಲ್ಲಿ 60 ವರ್ಷಕ್ಕೆ ನಿವೃತ್ತಿಯಾಗುತ್ತದೆ. ಕೆಲವು ಸಂಸ್ಥೆಗಳು ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸಲು ‘ಗೋಲ್ಡನ್ ಶೇಕ್ ಹ್ಯಾಂಡ್ ‘ ಎಂಬ ಆಕರ್ಷಕ ಪ್ಯಾಕೇಜ್ ನೊಂದಿಗೆ ಸ್ವಯಂನಿವೃತ್ತಿಯ ಯೋಜನೆಯನ್ನು ಪ್ರಸ್ತಾಪಿಸುವುದೂ ಇದೆ. ಸ್ವಯಂ ಆಸಕ್ತಿಯಿಂದ ಅಥವಾ ಅನಿವಾರ್ಯ ಕಾರಣದಿಂದ 50 ರ ಆಸುಪಾಸಿನ ವಯಸ್ಸಿನಲ್ಲಿ ನಿವೃತ್ತರಾಗಿ ತೀರ ವಿಭಿನ್ನವಾಗಿರುವ ಸ್ವಯಂ ಉದ್ಯೋಗ ಮಾಡುವುದು ಅಥವಾ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಇತ್ತೀಚೆಗೆ ಕಾರ್ಪೊರೇಟ್ ವಲಯದಲ್ಲಿ ಕಂಡುಬರುವ ಬೆಳವಣಿಗೆ.
ಕಾರಣಗಳೇನೆ ಇರಲಿ, ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಹೊಂದುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪಿಂಚಣಿ ದೊರೆಯದ ಆದಾಯದ ಮೂಲವನ್ನು ಹೊಂದಿರುವವರು, ಕೃಷಿಕರು, ಸ್ವಯಂ ಉದ್ಯೋಗಿಗಳು ಹೀಗೆ ಪ್ರತಿಯೊಬ್ಬರೂ ಆರ್ಥಿಕ ಸ್ವಾವಲಂಬನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಆಗಾಗ್ಗೆ ಆರೋಗ್ಯ್ರದ ಬಗ್ಗೆ ಗಮನ ಹರಿಸುತ್ತಾ, ಆರೋಗ್ಯ ವಿಮೆಯನ್ನು ಮಾಡಿಸಿಕೊಂಡರೆ, ಅಕಸ್ಮಾತ್ ಅನಾರೋಗ್ಯವಾದರೆ ಇನ್ಶೂರೆನ್ಸ್ ಉಪಯೋಗವಾಗುತ್ತದೆ. ಅಂಚೆ ಇಲಾಖೆ, ಸಾರಿಗೆ ಇಲಾಖೆ ಹಾಗೂ ಬ್ಯಾಂಕ್ ಗಳು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೊಡುವ ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಸಮಯವನ್ನು ಸದುಪಯೋಗಗೊಳಿಸಲು ತೋಟಗಾರಿಕೆ, ಪ್ರವಾಸ, ಓದು, ಸಂಗೀತ, ಸಾಹಿತ್ಯ, ಭಜನೆ ಮೊದಲಾದ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಂದರೆ ಮನಸ್ಸಿಗೆ ಮುದ ಹಾಗೂ ಸಮಾನಾಸಕ್ತರ ಸತ್ಸಂಗ ದೊರೆಯುತ್ತದೆ.
ಸಾಧ್ಯವಾದರೆ ಸಣ್ಣ-ಪುಟ್ಟ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡರೆ ಇನ್ನೂ ಶ್ರೇಷ್ಠ. ಅನುಕೂಲವಿದ್ದರೆ ತನಗೆ ಪರಿಣತಿ ಇರುವ ವಿಷಯದಲ್ಲಿ ಯಾರಿಗಾದರೂ ಪ್ರಯೋಜನವಾಗುವಂತಹ ಕೆಲಸಗಳನ್ನು ಮಾಡುವುದರಿಂದ ಸಂತೋಷವಾಗುವುದರ ಜೊತೆಗೆ ಕಲಿತ ವಿದ್ಯೆಗೂ ಬೆಲೆ ಕೊಟ್ಟಂತಾಗುತ್ತದೆ.ಉದಾಹರಣೆಗೆ ಯೋಗಾಭ್ಯಾಸ ತರಬೇತಿ, ಸಂಸ್ಕೃತ ಸಂಭಾಷಣೆ, ಕೇಕ್ ಬಿಸ್ಕತ್ ತಯಾರಿ, ಗೊಂಬೆ ತಯಾರಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುವುದು, ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು ಪಡೆಯಲು ಸಹಾಯ ಮಾಡುವುದು, ವೃದ್ಧಾಶ್ರಮಗಳಲ್ಲಿ ಇರುವವರೊಂದಿಗೆ ಸ್ವಲ್ಪ ಕಾಲ ಕಳೆದು ಬರುವುದು, ಗ್ರಂಥಾಲಯಕ್ಕೆ ಹೋಗುವುದು, ಸಮಾನಾಸಕ್ತರ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು….ಹೀಗೆ ನೂರಾರು ಕೆಲಸಗಳನ್ನು ಪಟ್ಟಿ ಮಾಡಬಹುದು.
ಇನ್ನು ಮನೆ ಮಂದಿಯೊಂದಿಗೆ ಪ್ರೀತಿ, ಸ್ನೇಹ, ಬಂಧು-ಹಿತೈಷಿಗಳೊಂದಿಗೆ ಹಿತಮಿತವಾದ ಒಡನಾಟದಲ್ಲಿದ್ದರೆ ಉತ್ತಮ. ಮಕ್ಕಳಿಗೆ ಉತ್ತಮ ಸಂಸ್ಕಾರ , ವಿದ್ಯೆ ಕೊಟ್ಟು ಬೆಳೆಸುವುದು ಹೆತ್ತವರ ಕರ್ತವ್ಯ. ಹಾಗೆಂದು ಅವರು ದೂರದ ಊರಿನಲ್ಲಿ ಚೆನ್ನಾಗಿ ಸಂಪಾದಿಸಿ ಅವರ ಆಯ್ಕೆಯಂತೆ ಸಂತೋಷವಾಗಿದ್ದರೆ, ‘ನಾವು ಬಹಳ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದೆವು, ಈಗ ನಮ್ಮನ್ನು ಕಡೆಗಣಿಸುತ್ತಾರೆ’ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ಹಾಗೆಯೇ, ತಮ್ಮಿಂದ ಚಿಕ್ಕವರು ಪಡೆಯುವ ಹೆಚ್ಚು ಸಂಬಳ, ಸೌಲಭ್ಯ ಹಾಗೂ ಸಾಧನೆಗಳಿಗೆ ತನ್ನ ಯೌವನದ ದಿನಗಳ ಆದಾಯ, ಸಾಧನೆಗಳನ್ನು ಹೋಲಿಸಿಕೊಂಡು ಕೀಳರಿಮೆ ಅಥವಾ ಮೇಲರಿಮೆಯಿಂದ ಬಳಲುತ್ತಾ, ಅವರ ಜೊತೆಗೆ ಸ್ಪರ್ಧೆಗೆ ಇಳಿಯುವಂತಹ ಮನೋಭಾವವೂ ಸಲ್ಲದು. ಕಾಲ ಬದಲಾಗಿದೆ. ಅಷ್ಟಕ್ಕೂ ಮಕ್ಕಳು ಚೆನ್ನಾಗಿ ಓದಲಿ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಾವುದಾದರೂ ನಗರದಲ್ಲಿ ಸುಸ್ಥಿರವಾಗಿ ನೆಲೆ ಕಂಡುಕೊಳ್ಳಲಿ ಎಂದು ಹಪಹಪಿಸಿದವರು ಹೆತ್ತವರೇ ತಾನೇ? ಕಾಲಾಯ ತಸ್ಮೈ ನಮ:!
ವೃದ್ಧಾಪ್ಯದ ಸಮಸ್ಯೆ ಈಗ ಜಾಗತಿಕ ಸಮಸ್ಯೆಯಾಗಿದೆ. ಈ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 01 ರಂದು ‘ವಿಶ್ವ ಹಿರಿಯ ನಾಗರಿಕರ ದಿನ’ ಎಂದು ಆಚರಿಸುವ ಪದ್ಧತಿ ಕೆಲವು ದೇಶಗಳಲ್ಲಿ ಆರಂಭವಾಗಿದೆ. ‘ಮಕ್ಕಳಾಟವು ಚೆಂದ, ಮತ್ತೆ ಯೌವನ ಚೆಂದ , ಮುಪ್ಪಿನಲಿ ಚೆಂದ ನರೆಗಡ್ಡ , ಜಗದೊಳಗೆ ಎತ್ತಾ ನೋಡಿದರೂ ನಗು ಚೆಂದ’ ಎಂಬ ಜನಪದರ ಹಾಡಿನಂತೆ, ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸಿದ ಮೇಲೆ, ಸಾಕಷ್ಟು ಪೂರ್ವತಯಾರಿ ಇದ್ದರೆ ವೃದ್ಧಾಪ್ಯದಲ್ಲಿಯೂ ನಗುನಗುತ್ತಾ ಇರಲು ಸಾಧ್ಯ.
– ಹೇಮಮಾಲಾ.ಬಿ , ಮೈಸೂರು
ವೃದ್ಯಾಪ್ಯ ಶಾಪವಲ್ಲ, ಮರಳಿ ಅರಳುವ ಕಾಲ. ಲೇಖನ ತುಂಬಾ ಚೆನ್ನಾಗಿದೆ.
ವೃದ್ದಾಪ್ಯ ಆಯಾ ಕಾಲಕ್ಕೆ ತಕ್ಕ ಹಾಗೆ ಎಲ್ಲರನು ಆವರಿಸುತ್ತದೆ.ನಮಗಾರಿಗು ವಯೊ ಸಹಜ ಕಾಯಿಲೆಗಳು ಬರುವುದೆ ಇಲ್ಲ ಅನ್ನೊ ಹಾಗೆ ನಡೆದುಕೊಳ್ಳುವ ಇ೦ದಿನ ಮ೦ದಿಗೆ ಪ್ರಸ್ತುತ ಓದಲೇಬೇಕಾದ ಬರಹ.ಧನ್ಯವಾದಗಳು ಹೇಮ ಮಾಲ ಮೆಡಮ್
ಅಕ್ಷರಶಃ ಸತ್ಯ. ಪುಕ್ಕಟೆ ಸಲಹೆ ಎಲ್ಲರೂ ಕೊಡುತ್ತಾರೆ. ತಮ್ಮ ಮೈಮೇಲೆ ಜವಾಬ್ದಾರಿ ಬಂದರೆ ನುಣುಚಿಕೊಳ್ಳುತ್ತಾರೆ.ಎಷ್ಟೋ ಸಾರಿ ಮಗಳೇ ತಾಯಿಗೆ ಶತ್ರುವಾಗುತ್ತಾಳೆ.
ಸೊಸೆಯ ಬಗ್ಗೆ ತಾಯಿಯ ತಲೆಯಲ್ಲಿ ಇಲ್ಲ ಸಲ್ಲದು ತಲೆಯಲ್ಲಿ ತುಂಬಿ ಅವರ ಸಂಬಂಧ ಕೆಡಿಸಲು ಕಾರಣೀಭೂತರಾಗುತ್ತಾರೆ.
ಕೊನೆಯಾಗಿ ಹೇಳುವದಾದರೆ ನಮ್ಮ ಸಂಧ್ಯಾಕಾಲದ ಸಿದ್ಧತೆ ನಮ್ಮದೇ ಜವಾಬ್ದಾರಿ.
True n very practical. Nice article Hema. Good one.
ನೈಜ, ಪ್ರಸ್ತುತ ಬರಹ. ಬಹಳ ಉತ್ತಮ ನಿರೂಪಣೆ..
ನೈಜ ನಿರೂಪಣೆ… ಚೆನ್ನಾಗಿದೆ
ಎಲ್ಲವೂಅರಳೆಬಿಚ್ಚಿಟ್ಟಂತೆತೆರೆದಿಟ್ಟಬರಹ.ಚಿನ್ನಾಗಿಮೂಡಿಬಂದಿದೆ.
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂