ಮುಂದೇನು??

Share Button

ಕಳೆದ ತಿಂಗಳು ನೆಂಟರೊಬ್ಬರ ಮನೆಯ ಪೂಜೆಯೊಂದಕ್ಕೆ ಹೋಗಿದ್ದೆ. ಬಹಳಷ್ಟು ದಿನಗಳ ನಂತರ ಭೇಟಿಯಾಗುತ್ತಿದ್ದುದರಿಂದ ಓಡೋಡಿ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ರೇಖಾತ್ತೆಯ ಆಗಮನವಾಯಿತು. ತಾವು ತಡವಾಗಿ ಬಂದುದರ ಕಾರಣವನ್ನು ಎಲ್ಲರಿಗೂ ವಿವರಿಸುತ್ತಾ ಬರುತ್ತಿದ್ದ ಆಕೆಯ ಕಣ್ಣಿಗೆ ದೂರದಲ್ಲಿ ಕುಂತಿದ್ದ ಹುಡುಗನೊಬ್ಬ ಬಿದ್ದು ಬಿಟ್ಟನು. “ಏನೋ ಹರಿ, ಹತ್ತು ಮುಗಿಯಿತಲ್ಲಾ. ಮುಂದೇನು?? ” ಎಂದು ಗಟ್ಟಿಯಾಗಿ ಕೂಗಿಬಿಟ್ಟರು ರೇಖಾತ್ತೆ. ಅದನ್ನು ಕೇಳುತ್ತಲೇ ಹರಿಯ ಮುಖದ ಭಾವಗಳು ಬದಲಾಗತೊಡಗಿದವು. ಮತ್ತದೇ ಪ್ರಶ್ನೆಯೇ ಎಂಬ ನೀರಸ ಭಾವವು ಅವನ ಕಣ್ಣುಗಳಲ್ಲಿ ಎದ್ದು ಕಾಣತೊಡಗಿತು. “ಪಿ.ಯು.ಸಿ ಗೆ ಮಂಗಳೂರಿಗೆ ಹೋಗೋಣ ಅಂತ ಪ್ಲಾನ್” ಎಂದು ಒಲ್ಲದ ಮನಸ್ಸಿನಿಂದ ಉತ್ತರಿಸಿದನು ಆತ.

“ಮುಂದೇನು?” ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಲವಾರು ಬಾರಿ ಎದುರಿಸಿರುತ್ತೇವೆ. “ಆರಾಮ? ಕಾಫಿ- ತಿಂಡಿ ಆಯಿತೇ?” ಎಂಬ ಪ್ರಶ್ನೆಗಳೆಷ್ಟು ಸಹಜವೋ ಅಷ್ಟೇ ಸಹಜವಾಗಿರುವ ಇನ್ನೊಂದು ಪ್ರಶ್ನೆಯೇ “ಮುಂದೇನು?”. ಹತ್ತನೇ ತರಗತಿಯನ್ನು ದಾಟುತ್ತಲೇ “ಮುಂದೇನು? ಸಯೀನ್ಸೋ ? ಕೋಮರ್ಸ?” ಎಂದು ಶುರುವಾಗಿ ಬಿಡುತ್ತದೆ.  ಮತ್ತೆರಡು ವರುಷಗಳಲ್ಲಿ ಮತ್ತದೇ ಪ್ರಶ್ನೆಯು “ಮುಂದೇನು? ಎಂಜಿನಿಯರಿಂಗೋ? ಮೆಡಿಕಲೋ?” ಎಂದು ಬದಲಾಗುತ್ತದೆ. ಓದಿ ಮುಗಿಸುತ್ತಲೇ “ಮುಂದೇನು? ಕೆಲಸ ಸಿಕ್ತಾ?” ಎಂದಾಗುತ್ತದೆ. ಅಲ್ಲಿಗೇ ಮುಗಿಯಲ್ಲ ಈ ಪ್ರಶ್ನೆಗಳ ಆಯುಸ್ಸು. ಮದುವೆ, ಮನೆ, ಮಕ್ಕಳು, ಮುಂದೆ ಅವರ ವಿದ್ಯಾಭ್ಯಾಸ ಹೀಗೆ ಮುಂದುವರಿಯುತ್ತಾ ಇರುತ್ತದೆ “ಮುಂದಿನ” ಪ್ರಶ್ನೆಗಳು.

“ಮುಂದೇನು” ಎಂಬ ಪ್ರಶ್ನೆಯು ಬರೀ ಅತ್ತೆ,ಮಾವ, ಚಿಕ್ಕಪ್ಪ, ದೊಡ್ಡಪ್ಪಂದಿರಿಗೆ ಅಷ್ಟೇ ಸೀಮಿತವೇನಲ್ಲ. ಎದುರಿನ ಮನೆಯ ಆಂಟಿ, ಪಕ್ಕದ ಮನೆಯ ಅಂಕಲ್, ದಿನಸಿ ಅಂಗಡಿಯ ಸೋಮಣ್ಣ, ವಾಕಿಂಗ್ ಬರುವ ತಾತ ಯಾರು ಬೇಕಾದರೂ ಕೇಳಬಹುದು. ನಿಮ್ಮ ಉತ್ತರವು ಅವರಿಗೆ ಸರಿ ಎನಿಸದಿದ್ದಲ್ಲಿ ಮತ್ತೊಂದಷ್ಟು ಉಪದೇಶಗಳೂ ಹಿಂಬಾಲಿಸುತ್ತವೆ. ಉಪದೇಶಗಳು ದೊರೆತರೆ  ಮತ್ತೊಂದಷ್ಟು ದಿನಗಳಲ್ಲಿ “ಏನು ಮಾಡಿದೆ?” ಎಂಬ ಪ್ರಶ್ನೆಯು ಖಚಿತ. ಉಪದೇಶದ ಪಾಲನೆಯಾಗಿದೆಯೋ ಎಂಬ ತನಿಖೆ ಅದಾಗಿರುತ್ತದೆ.

ಆಪ್ತರಿಂದ ಬರುವ ಈ ಪ್ರಶ್ನೆಗಳು ಅದೆಷ್ಟೇ ಸಹಜವಾಗಿದ್ದರೂ, ಸದುದ್ದೇಶದಿಂದ ಕೂಡಿದ್ದರೂ ಕೆಲವೊಮ್ಮೆ ಹತಾಶೆಯನ್ನುಂಟು ಮಾಡುತ್ತದೆ. ನನ್ನ ಮದುವೆಯ ಸಂದರ್ಭ. ಸಂತಸದಿಂದ ಓಡಾಡುತ್ತಿದ್ದ ನನ್ನ ತಂಗಿಯನ್ನು ನಿಲ್ಲಿಸಿ “ಮುಂದೇನು? ನಿನ್ನದೂ ಮಾಡಿಬಿಡೋಣ” ಎನ್ನ ತೊಡಗಿದ್ದರು ಹಲವರು. “ಮುಂದೆ ಓದಬೇಕು” ಎಂದು ಎಲ್ಲರಿಗೂ ಉತ್ತರಿಸುತ್ತಾ ಸುಸ್ತಾಗಿ ಬಿಟ್ಟಿದ್ದಳು ತಂಗಿ. ಇಷ್ಟೇ ಏಕೆ, ಕಳೆದವಾರ ಗೆಳತಿಯೊಬ್ಬಳನ್ನು ಭೇಟಿಯಾಗಿದ್ದೆ. “ಊರಿಗೆ ಯಾವಾಗ ಹೋಗಿದ್ದೆ?” ಎಂಬ ನನ್ನ ಪ್ರಶ್ನೆಗೆ “ನಾ ಇನ್ನು ಆ ಕಡೆಗೆ ಹೋಗೋದೇ ಇಲ್ಲ. ವಿಶೇಷ ಇದ್ಯಾ? ಮಕ್ಕಳು ಯಾವಾಗ? ಎಂಬ ಪ್ರಶ್ನೆಗೆ ಉತ್ತರಿಸಿ ಸಾಕಾಗಿ ಹೋಗಿದೆ” ಎಂದು ಬಿಟ್ಟಳು ಆಕೆ.  ಮೊನ್ನೆ-ಮೊನ್ನೆಯಷ್ಟೇ ಓದಿ ಮುಗಿಸಿದ್ದ ಯುವಕನೊಬ್ಬನು ಅದ್ಯಾರೋ ಕೇಳಿದ ಪ್ರಶ್ನೆಗೆ ಪೂರ್ತಿಯಾಗಿ ಉರಿದು ಕೊಂಡಿದ್ದ. “ಮುಂದೇನು? ಕೆಲಸಕ್ಕೆ ಸೇರಿಕೊಳುತ್ತಿಯೋ? ಅಥವಾ ಅಪ್ಪನ ದುಡ್ಡಿದೆ ಎಂದು ಸುಮ್ಮನಾಗುತ್ತಿಯೋ?” ಎಂಬುವುದಾಗಿತ್ತು ಆ ಪ್ರಶ್ನೆ.

“ಮುಂದೇನು?” ಎಂದು ಕೇಳಿದಷ್ಟಕ್ಕೇ ಅದನ್ನು ಕೆಟ್ಟದಾಗಿ ನೋಡಬೇಕೆಂದಿಲ್ಲ. ಬಹುತೇಕರು ಅದನ್ನು ನಿಜವಾದ ಕಾಳಜಿಯಿಂದಲೇ ಕೇಳುತ್ತಾರೆ. ಸದುದ್ದೇಶಗಳಿಂದಲೇ ತಮ್ಮ ಅರಿವು, ನಿಲುವಿಗೆ ಅನುಸಾರವಾಗಿ ಸಲುಹೆಗಳನ್ನೂ ನೀಡುತ್ತಾರೆ. ಒಂದಷ್ಟು ಜನ ತಮ್ಮ ಕುತೂಹಲವನ್ನು ನೀಗಿಸುವುದಕ್ಕಾಗಿ ಈ ಪ್ರಶ್ನೆಗೆ ಮೊರೆ ಹೋದರೆ, ಮತ್ತೊಂದಷ್ಟು ಜನ ಅದೇ ಪ್ರಶ್ನೆಯನ್ನು ತಮ್ಮ ಹಾಗು ತಮ್ಮ ಆಪ್ತರೊಂದಿಗೆ ಹೋಲಿಸಿಕೊಳ್ಳುವುದಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಹಿರಿತನವನ್ನು ಕೊಚ್ಚಿ ಕೊಂಡರೆ, ಇನ್ನು ಕೆಲವರು ತಮಗೆ ಆಗಿರುವ ತೊಂದರೆಗಳನ್ನು ತೋಡಿಕೊಳ್ಳುತ್ತಾರೆ. ಮತ್ತೊಂದಷ್ಟು ಜನಕ್ಕೆ ಇದು ಬರೀ ಸಂಭಾಷಣೆಯನ್ನು ಶುರು ಹಚ್ಚಿಕೊಳ್ಳಲಿರುವ ವಿಷಯವಷ್ಟೆ. ಒಟ್ಟಿನಲ್ಲಿ ಈ ಪ್ರಶ್ನೆಯನ್ನು ಕೇಳದವರೂ, ಎದುರಿಸದವರೂ ವಿರಳ ಎನ್ನಬಹುದು.

ಭವಿಷ್ಯದ ಕುರಿತಿರುವ ಈ ಪ್ರಶ್ನೆಗಳಿಗೆ ನಮಲ್ಲಿ ಒಂದೊಳ್ಳೆ ಉತ್ತರವು ತಯಾರಿದ್ದಲ್ಲಿ, ನಾವು ಈ ಪ್ರಶ್ನೆಗಳಿಗಾಗಿ ಕಾಯುತ್ತಿರುತ್ತೇವೆ. ಅದಲ್ಲದಿದ್ದಲ್ಲಿ, ಈ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುತ್ತೇವೆ. ಇಂತಹ ಪ್ರಶ್ನೆಗಳಿಂದ ನಾವು ಕಿರಿಕಿರಿ ಅನುಭವಿಸಿದ್ದರೂ, ಮತ್ತದೇ ಪ್ರಶ್ನೆಯನ್ನು ಗೋಚರವಿಲ್ಲದೆ ಇನ್ನೊಬ್ಬರ ಮುಂದಿರಿಸಿ ಬಿಡುತ್ತೇವೆ. ಭವಿಷ್ಯದ ಬಗೆಗಿನ ಈ ಖಾಸಗಿ ಪ್ರಶ್ನೆಗಳು ನಾವು ತೋರಿಸುವ ಅಕ್ಕರೆಯೊ? ಅಥವಾ ಅವರ ವಯ್ಯಕ್ತಿಕ ಬದುಕಿಗೆ ನಮ್ಮ ಮೂಗು ತೂರಿಸುವಿಕೆಯೋ? ಎರಡು ಪಕ್ಷದಿಂದ ತರ್ಕಿಸಬಹುದು. ಅದೇನೇ ಆದರೂ, ಕೇಳುಗನಿಗೆ ಇರಿಸುಮುರುಸು ಉಂಟು ಮಾಡುವುದಾದರೆ ಮತ್ತೆ ಮುಂದೆ ಕೆಣಕದಿರುವುದು ಉತ್ತಮ.

-ಪಲ್ಲವಿ ಭಟ್, ಬೆಂಗಳೂರು

5 Responses

  1. Arunambika Bhat says:

    ಉತ್ತಮ ಸಕಾಲಿಕ

  2. Doddabasappa P says:

    ಬರಹ ಚೆನ್ನಾಗಿದೆ .

  3. Venkatesh Rasthepalya says:

    ಮುಂದೇನು? ಅರ್ಥಗರ್ಭಿತವಾದ ಬರಹ. ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: