ಸ್ವಾತಂತ್ರ್ಯಹೋರಾಟಗಾರರ ಕನಸು ನನಸಾಗಿದೆಯೇ?

Share Button

 

ದೇಶದ 72ನೇ ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ,ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸು ಸ್ವಾತಂತ್ರ್ಯ ಭಾರತದಲ್ಲಿ ನನಸಾಗಿದೆಯೇ”, ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲವೇ ಇಲ್ಲ ಎಂದೇ ಹೇಳಬೇಕಾಗುತ್ತದೆ.  ಏಕೆಂದರೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ-ಬಲಿದಾನಗಳಿಂದ ದೊರಕಿಸಿಕೊಟ್ಟ ಸ್ವಾತಂತ್ರ್ಯ ಇಂದು ನಮಗೆ ಸ್ವೇಚ್ಛಾಚಾರವಾಗಿ ಅದರ ಮಹತ್ವವನ್ನು ಕಳೆದುಕೊಂಡು ಏನೂ ಇಲ್ಲದಂತಾಗಿದೆ.  ಸ್ವಾತಂತ್ರ್ಯವನ್ನು ತರಲು ಅದೆಷ್ಟೋ ಜನ ತಮ್ಮ ರಕ್ತವನ್ನು ಹರಿಸಿದ್ದಾರೆ.  ಸೈಮನ್ ಕಮಿಷನ್ ವಿರುದ್ದ ಹೋರಾಟ, ಜಲಿಯನ್ ವಾಲಾಭಾಗ್ ದುರಂತ, ಹಲಗಲಿ ಬೇಡರ ದಂಗೆ, ಗೌರಿಬಿದನೂರಿನ ವಿದುರಾಶ್ವಥ ದುರಂತ, ಅಂಕೋಲಾ ಸತ್ಯಾಗ್ರಹ, ಶಿವಪುರ ಧ್ವಜ ಸತ್ಯಾಗ್ರಹ. ಕಾನೂನುಭಂಗ ಚಳುವಳಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ, ಚಲೇಜಾವ್ ಚಳುವಳಿ, ಹೀಗೆ ಲೆಕ್ಕವಿಲ್ಲದಷ್ಟು ಹೋರಾಟಗಳ ಫಲವಾಗಿ ಸಾವಿರಾರು ಧೀರ ಹೋರಾಟಗಾರರ ರಕ್ತದ ಹರಿವಿನಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ.  ಆದರೆ ಇಂದು ಇದನೆಲ್ಲಾ ನಾವುಗಳು ನೆನೆಯದೇ ಇರುವುದು ಒಂದು ದೊಡ್ಡ ದುರಂತವೇ ಸರಿ.  ಹಲಗಲಿ ಬೇಡರ ದಂಗೆಯಲ್ಲಿ 14 ವರ್ಷದ ಬಾಲಕ ಸಾವಿನ ಅಂಚಿನಲ್ಲಿದ್ದಾಗ ಪೋಲೀಸರು ನಿನ್ನ ಕೊನೆಯ ಆಸೆ ಏನು ಎಂದು ಕೇಳಿದಾಗ   ಆ ವೀರ ಬಾಲಕ ನನಗೆ ಸ್ವಾತಂತ್ರ್ಯ ಬೇಕು ಎಂದನಂತೆ.  ಪುಟ್ಟ ಪುಟ್ಟ ಮಕ್ಕಳಲ್ಲೂ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದು ಅಂದಿನ ಕಾಲದ ಸ್ವಾತಂತ್ರ್ಯ ಹೋರಾಟದ  ತೀವ್ರತೆಯನ್ನು ತಿಳಿಸುತ್ತದೆ.

ಸರಕಾರದ ಸಿಬ್ಬಂದಿಗಳಲ್ಲಿ ಮನೆಮಾಡಿರುವ ಲಂಚಗುಳಿತನ, ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ, ಆರಕ್ಷಕರು ರಾಕ್ಷಸರಾಗುತ್ತಿರುವಾಗ, ಐಎಎಸ್, ಐಪಿಎಸ್ ಅಧಿಕಾರಿಗಳು ಭೂರಿಬೋಜನ ಪ್ರಿಯರಾಗಿ ಸರಕಾರದ ಸಂಪತ್ತನು ಲೂಟಿ ಮಾಡುತ್ತಿರುವಾಗ, ಪುಢಾರಿಗಳು ಮತ್ಸದಿಗಳಿರುವಾಗ, ಸಮಾಜದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರಗಳು ಹಾಸುಹೊಕ್ಕಗಿರುವಾಗ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ನನಸಾಗುವ ಮಾತು ದೂರವೇ ಉಳಿಯಿತು ಎಂದರೆ ತಪ್ಪಾಗಲಾರದು.

ಸ್ವಾತಂತ್ರ್ಯ ಭಾರತದಲ್ಲಿ ಇಂದು ತನ್ನ ಕಬಂಧ ಬಾಹುಗಳಿಂದ ಹೆಮ್ಮರವಾಗಿ ಹಬ್ಬಿರುವ ಭ್ರಷ್ಟಾಚಾರ ವನ್ನು ನೋಡಿದರೆ ಇಂತಹ ಸ್ವಾತಂತ್ರ್ಯಕ್ಕೆ ನಾವು ಅಂದು ಅಷ್ಟೊಂದು ಹೋರಾಟ ಮಾಡಬೇಕಾದ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಎನಿಸುತ್ತದೆ. ಇದಕ್ಕಿಂತ ಬ್ರಿಟಿಷರ ಆಡಳಿತವೇ ಉತ್ತಮವಾಗಿತ್ತೇನೋ ಎಂದು ಒಮ್ಮೊಮ್ಮೆ ಅನಿಸುತ್ತದೆ.  “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಭಾರತವನ್ನು ಕೊಡುತ್ತೇನೆ” ಎಂದು ನೇತಾಜಿ ಸುಭಾಷಚಂದ್ರ ಬೋಸ್ ಅಂದು ಹೇಳಿದರೆ, ಇಂದು “ನನಗೆ ನಿಮ್ಮ ಅಮೂಲ್ಯವಾದ ಮತ ಕೊಡಿ ಸಾಕು, ನಾನು ನಿಮಗೆ ಸೀರೆ-ಪಂಚೆ, ಹೆಂಡ ಸಾರಾಯಿ, ವಾಚು-ಉಂಗುರ, ಟಿ.ವಿ.ಗಳನ್ನು ಕೊಡುತ್ತೇನೆ” ಎಂದು ಹೇಳುವ ಇಂದಿನ ನಮ್ಮ ಜನ ಪ್ರತಿನಿಧಿಗಳು, ದುಂಡು ಮೇಜಿನ ಪರಿಷತ್ತಿನ ಬದಲು ಗುಂಡು ಮೋಜಿನ ಪರಿಷತ್ತು ನಡೆಸಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ.

ದೇಶದ ಇಂದಿನ ಗತಿಯನ್ನು ನೋಡಿದರೆ ನಮಗೆಲ್ಲಾ ಭಯ ಉಂಟಾಗುತ್ತದೆ. ದೇಶದ ಸಾಲ ಇಂದು ಒಂದೂವರೆ ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ.  ಇದಕ್ಕಿಂತಲೂ ಹೆಚ್ಚಿನ ಕಪ್ಪು ಹಣ ವಿದೇಶಗಳಲ್ಲಿ ಕೊಳೆಯುತ್ತಿದೆ.  ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಗಿ, ನಿರುದ್ಯೋಗ ಸಮಸ್ಯೆ, ಜಾಗತಿಕ ಭಯೋತ್ಪಾದನೆ, ಉಗ್ರವಾದಿ ಚಟುವಟಿಕೆಗಳು ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿವೆ.

ಕೇವಲ ದೇಶದ ಉದ್ಧಾರವೇ, ದೇಶದ ಪ್ರಗತಿಯೇ ನಮ್ಮ ಗುರಿ ಎಂದು ಹೇಳಿದ ಅಂದಿನ ಧೀಮಂತನಾಯಕರ ನುಡಿಮಾತುಗಳನ್ನು ನಾವಾಗಲೇ ಮರೆತು ಹೋಗಿದ್ದೇವೆ. ಕೇವಲ ದೇಹದ ಉದ್ಧಾರಕ್ಕಾಗಿ  ದೇಶದ ಉದಾತ್ತ ಸಂಸ್ಕೃತಿಯನ್ನು ಬಲಿಕೊಟ್ಟು, ದೇಶದ ಸಂಪನ್ಮೂಲಗಳನ್ನು ಲೂಟಿಮಾಡಿ ತಮ್ಮ ಸಿರಿ ಸಂಪತ್ತನ್ನು ಹೆಚ್ಚಿಸಿಕೊಂಡಿರುವ ಅನೇಕ ಉದಾಹರಣೆಗಳನ್ನು ನಾವಿಂದು ನೋಡಬಹುದಾಗಿದೆ.

ಪ್ರಥಮ ಚುನಾಯಿತ ಸರಕಾರದಲ್ಲೇ ಶುರುವಾದ ಹಗರಣಗಳ ಸರಮಾಲೆ ಇಂದಿಗೂ ನಿಂತಿಲ್ಲ.  ಸೇನೆಗಾಗಿ ಜೀಪು ಖರೀದಿ ಹಗರಣ, ಬೋಪರ್ಸ್ ಹಗರಣ, ಷೇರು ಹಗರಣ, ಹವಾಲ ಹಗರಣ, ಜಾನುವಾರು ಮೇವು ಹಗರಣ, ಟೆಲಿಕಾಂ ಹಗರಣ, ಕಾಮನ್ ವೆಲ್ತ್ ಕ್ರೀಡಾ ಹಗರಣ, ತೀರಾ ಇತ್ತೀಚಿನ 2ಜಿ ಹಗರಣ, ಗಣಿ ಸಂಪತ್ತು ಲೂಟಿಯಂತಹ ಹಲವಾರು ಹಗರಣಗಳು ನಮ್ಮ ಇಂದಿನ ನಾಯಕರ ಚರೀತ್ರೆಯನ್ನು ಸಾರಿ ಸಾರಿ ಹೇಳುತ್ತವೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ಕನಸಾಗಿಯೇ ಉಳಿದಿದೆಯೇ ಹೊರತು ನನಸಾಗಿಲ್ಲ ಎಂದು ಹೇಳಬಹುದು.

ಮಹಾ ಮಹಿಮರ ತ್ಯಾಗ– ಬಲಿದಾನಗಳಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವಿಂದು ಸದುಪಯೋಗ ಪಡಿಸಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನಗಳಿಗೆ ನಾವೆಲ್ಲರೂ ಚಿರಋಣಿಗಳಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.  ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡಯ್ದು ಅಭಿವೃದ್ಧಿಯ ಪಥದತ್ತ ಸಾಗಿಸುವ ಜವಬ್ದಾರಿ ಪ್ರತಿಯೊಬ್ಬ ಬಾರತೀಯನ ಕರ್ತವ್ಯವಾಗಿದೆ.  ಈ ದಿಶೆಯಲ್ಲಿ ಇಂದು ನಾವೆಲ್ಲರೂ ಯೋಚಿಸಿ ಕಾರ್ಯಪವೃತ್ತರಾಗಬೇಕಿದೆ.

ಅಂದಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಒಂದು ನಿದರ್ಶನವನ್ನು ತಮ್ಮ ಮುಂದೆ ತರುತ್ತೇನೆ.  ಲಾಲ್ ಬಹದ್ದೂರ್ ಶಾಸ್ತ್ರಿಯವರು ನೆಹರೂ ಸಂಪುಟದಲ್ಲಿ ಗೃಹ ಸಚಿವರಾಗಿದ್ದಾಗ ವಿಶ್ವದ ಎಲ್ಲ ಗೃಹ ಸಚಿವರ ಸಮ್ಮೇಳವನ್ನು ಕರೆಯಲಾಗಿತ್ತು. ಅದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೂ ಆಹ್ವಾನ ಬಂದಿತ್ತು. ಶಾಸ್ತ್ರಿಯವರ ಕೋಟು ಸ್ವಲ್ಪ ಹರಿದಿತ್ತು.  ಇದನ್ನು ನೋಡಿದ ನೆಹರೂ ರವರು ತನ್ನ ಕೋಟನ್ನು ಹಾಕಿಕೊಂಡು ಹೋಗಿ ಎಂದು ಹೇಳಿದರು.  ಅದಕ್ಕೆ ಶಾಸ್ತ್ರಿಯವರು ಕೋಟು ಹರಿದಿದ್ದರೂ ಪರವಾಗಿಲ, ಭಾರತ ಬಡದೇಶ, ಅದರ ನಾಯಕನೂ ಬಡವನೆಂದೂ ಹೇಳಿಕೊಳ್ಳುತ್ತಾರೆ.  ಆದರೆ ನಾನು ಉದ್ದವಾಗಿರುವ ನಿಮ್ಮ ಕೋಟನ್ನು ಹಾಕಿಕೊಂಡು ಹೋದರೆ ಭಾರತದ ಜನರು ಭಿಕ್ಷುಕರು ಎಂದು ತಿಳಿದುಕೊಳ್ಳುತ್ತಾರೆ ಎಂದು ಹೇಳಿ ನನ್ನ ದೇಶದ ಜನ ಬಡವರಾದರೂ ಪರವಾಗಿಲ್ಲ ಆದರೆ ಭಿಕ್ಷುಕರಾಗಿರಬಾರದು ಎಂದು ಹೇಳುತ್ತಾರೆ.

ಇಂದಿನ ಜನನಾಯಕರಲ್ಲಿ ಇಂತಹ ಪ್ರಾಮಾಣಿಕತೆ, ಪಾರದರ್ಶಕತೆಗಳು ಮರೀಚಿಕೆಯಾಗಿ ಉಳಿದಿವೆ.

 

-ವೆಂಕಟೇಶ್ , ಕಾರವಾರ 

1 Response

  1. Shamala Ganesh says:

    Katu sathya. Thubaa besarawaaguttade. Indiana namma sthitigaagi alabeko nagabeko gottilla.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: