ಬೆಂಗಳೂರಿನ ಕರೆ ಆಲಿಸಿ…

Share Button

ಹಲೋ ತಮ್ಮಾ, ನಾನಪ್ಪಾ ಬೆಂಗಳೂರು ಮಾತಾಡ್ತಿರೋದು, ಅದೇ ಕರ್ನಾಟಕದ ರಾಜಧಾನಿ, ಗೊತ್ತಾಯ್ತಾ?…ಹಾಂ…ಹಾಂ…ನಾನು ಚೆನ್ನಾಗಿದ್ದೇನೆ, ನೀವೆಲ್ಲಾ ಜಿಲ್ಲೆಗಳೂ, ತಾಲ್ಲೂಕುಗಳೂ, ಗ್ರಾಮಗಳೂ, ಹೋಬಳಿಗಳೂ ಹೇಗಿದ್ದೀರೀ? ಮಳೆ, ಬೆಳೆ ಹೇಗಿದೆ? ಜನ ಏನಂತಾರೆ? ನಿಮ್ಮನ್ನೆಲ್ಲಾ ಮಾತನಾಡಿಸಿ ಬಹಳ ದಿನವಾಯಿತು ನೋಡು. ಅದಕ್ಕೇ ಈಗ ನೆನಪಾಗಿ ಕರೆ ಮಾಡುತ್ತಿದ್ದೇನೆ.

ಈ ಎರಡು ವರ್ಷಗಳಿಂದ ಮಳೆಗೆ ನಾನು ತತ್ತರಿಸಿ ಹೋಗಿದ್ದೇನೆ. ಶತಮಾನಗಳ ದಾಖಲೆ ಮುರಿವಂತೆ ಬಿದ್ದಿರುವ ಮಳೆಗೆ ನಾನಂತೂ ದಂಗುಬಡಿದಿದ್ದೇನೆ. ಮೊದಲೇ ಚರಂಡಿ ವ್ಯವಸ್ಥೆ ಸರಿ ಇಲ್ಲ, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನೀರು ಹರಿಯುವ ದಾರಿಯನ್ನು ಮುಚ್ಚಿಬಿಟ್ಟಿದ್ದಾರೆ. ಹಾಗಾಗಿ ತಗ್ಗು ಪ್ರದೇಶಗಳಿಗೆಲ್ಲಾ ನೀರು ನುಗ್ಗಿ, ರಸ್ತೆಗಳೆಲ್ಲಾ ಗುಂಡಿಗಳಾಗಿ, ಮೋರಿಗಳು ಕಾಣದಂತಾಗಿ ಅದೆಷ್ಟು ಜನ, ಜಾನುವಾರು, ಆಸ್ತಿ-ಪಾಸ್ತಿಗಳನ್ನು ಬಲಿಪಡೆಯಿತೋ ಗೊತ್ತಿಲ್ಲ. ವರುಣ ಮರಣಮೃದಂಗವನ್ನೇ ಬಾರಿಸಿಬಿಟ್ಟ. ಇನ್ನು ಕೆರೆಗಳ ಸ್ಥಿತಿಯಂತೂ ಭೀಕರವಾಗಿದೆ. ಕೈಗಾರಿಕೆಗಳು ಹೊರಹಾಕುವ ತ್ಯಾಜ್ಯ ಸೀದಾ ಕೆರೆಗೆ ಸೇರಿ, ಕೆರೆಯ ಮೇಲೆ ನೊರೆಯ ಧಾರೆಯೇ ಸೃಷ್ಟಿಯಾಗಿ ಬೆಳ್ಳಂದೂರು ಕೆರೆ ಕಲುಷಿತಗೊಂಡು, ಬೆಳ್ಳನೆಯ ನೊರೆಯನ್ನು ಸೂಸುತ್ತ ಜನರಿಗೊಂದು ದೊಡ್ಡ ಹೊರೆಯಾಗಿದೆ. ಎಷ್ಟೋ ಕೆರೆಗಳು ಒತ್ತುವರಿಯಾಗಿ ನಿವೇಶನಗಳಾಗಿ ಬದಲಾಗುತ್ತಿವೆ.

ಇನ್ನು ಕಸದ ಸಂಕಟ ಏನು ಕೇಳ್ತೀಯ ಬಿಡು. ಎಲ್ಲಿ ನೋಡಿದರೂ ರಾಶಿ ರಾಶಿ ಕಸದ ಗುಡ್ಡೆ ಗಬ್ಬೆದ್ದು ನಾರುತ್ತಿದೆ. ಶಬ್ದ ಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯ ಎಲ್ಲ ತರಹದ ಮಾಲಿನ್ಯಕ್ಕೂ ತುತ್ತಾಗಿ, ಸುಸ್ತಾಗಿ ಏದುಸಿರು ಬಿಡುತ್ತಿದ್ದೇನೆ. ಮೊನ್ನೆ ಅದೇ ನಮ್ಮ ದೊಡ್ಡಣ್ಣ ಇದ್ದಾನಲ್ಲಾ? ಅದೇ, ದೆಹಲೀನೋ ಮಾರಾಯಾ, ಪಾಪ ಅವನಿಗೆ ಹೊಂಜು ಹೆಚ್ಚಾಗಿ ಸ್ವಲ್ಪ ದಿನ ಮನುಜರೆಲ್ಲ ಆರೋಗ್ಯ ಕಾಪಾಡಿಕೊಳ್ಳಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೋ ಪರಿಸ್ಥಿತಿ ಬಂದಿತ್ತು ನೋಡು. ಇನ್ನೂ ಸ್ವಲ್ಪ ವರ್ಷಗಳ ನಂತರ ನನ್ನ ಕಥೆಯೂ ಹಾಗೆಯೇ ಏನೋ ಅಂತಾ ಭಯವಾಗುತ್ತಿದೆ. ಮನುಷ್ಯ ತನ್ನ ಮಕ್ಕಳಿಗೋಸ್ಕರ ಪ್ರಕೃತಿಯನ್ನೇ ಬರಿದು ಮಾಡಿ ಬರೀ ಮನೆ, ಸೈಟು, ಬಂಗಾರ ಅಂತಾ ಕ್ಷಣಿಕ ಆಸ್ತಿ ಮಾಡುವುದರಲ್ಲಿಯೇ ಮುಳುಗಿಹೋಗಿದ್ದಾನೆ. ಮಕ್ಕಳು ಅನುಭವಿಸಬೇಕಾದ ನಿಜವಾದ ಆಸ್ತಿ ಎಂದರೆ ಶುದ್ಧ ಗಾಳಿ, ನೀರು, ಪ್ರಕೃತಿ, ನೈಸರ್ಗಿಕ ಸಂಪನ್ಮೂಲಗಳು ಎಂಬುದು ಅವನ ಮನಸ್ಸಿಗೆ ಬರುವುದು ಎಂದೋ ಕಾಣೆ? ಭೋಗಿಸಲು ಬೇಕಾದ ಆರೋಗ್ಯ, ಆಯುಷ್ಯ ದೊರಕುವುದು ಪ್ರಕೃತಿಯ ಸಮತೋಲನದಿಂದ ಎಂಬುದನ್ನು ಅರಿತಿದ್ದರೂ ಮರೆತಂತೆ ನಟಿಸುತ್ತಿರುವ ಮನುಷ್ಯನ ಮೂರ್ಖತನಕ್ಕೆ ಏನು ಹೇಳಬೇಕೋ ನಾಕಾಣೆ!

ಇನ್ನು ಟ್ರಾಫಿಕ್ ಬಗ್ಗೆ ಅಂತೂ ಹೇಳೋದೇ ಬೇಡ ಬಿಡು ಮಾರಾಯಾ! ಊರಿಂದ ಊರಿಗೆ ಗಂಟೆಗಟ್ಟಲೆ ಬೇಕಾದರೂ ಆರಾಮವಾಗಿ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದು, ಆದರೆ ಬೆಂಗಳೂರಿನಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ ಪ್ರಯಾಣ ಮಾಡುವ ಹೊತ್ತಿಗೆ ಸಾಕಾಗಿ ಹೋಗುತ್ತದೆ. ಸಿಟಿ ಬಸ್ಸಿಗೆ ಕಾಯಲಾಗದೆ ಆಟೋ ಅಥವಾ ಕ್ಯಾಬ್ ಹತ್ತಿಬಿಟ್ಟರಂತೂ ಮುಗಿಯಿತು, ಅದರ ಮೀಟರ್ ಸುಮ್ಮನೆ ಕ್ವಾರ್ಟರ್ ಹಾಕಿದೋರಿಗೆ ನಶೆ ಏರಿದ ಹಾಗೆ ಏರುತ್ತಲೇ ಹೋಗುತ್ತದೆ. ಇನ್ನು ಟ್ರಾಫಿಕ್ ಜ್ಯಾಮಿನಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟರೆ ವಾಹನಗಳಲ್ಲಿ ಆಮೆಯ ಹಾಗೆ ತೆವಳಿಕೊಂಡು, ಹಾರ್ನ್‌ಗಳ ಸದ್ದಿಗೆ ಕಿವಿಗೆ ತೂತಾಗಿ, ಮನುಷ್ಯನ ತಾಳ್ಮೆ ಕಿತ್ತುಹೋಗಿ, ಮನೆ ಅಥವಾ ಆಫೀಸು ಸೇರುವಷ್ಟರಲ್ಲಿ ನಿಟ್ಟುಸಿರು ಬಿಡುವಂತಾಗುತ್ತದೆ. ಮುಂಜಾನೆ ಹಾಗೂ ಸಂಜೆ ಶಾಲಾ ಮಕ್ಕಳ ವಾಹನಗಳು, ಟೆಕ್ಕಿಗಳನ್ನು ಕೆಲಸಕ್ಕೆ ಕರೆದೊಯ್ಯುವ ಕ್ಯಾಬ್‌ಗಳ ಸಂತತಿಯೇ ಹೆಚ್ಚಿರುತ್ತದೆ.

ಸಿಲಿಕಾನ್ ಸಿಟಿ, ಉದ್ಯಾನಗಳ ನಗರಿ ಅಂತಾ ನನಗೆ ಬಿರುದು ಬಾವಲಿ ಸಿಕ್ಕಿರುವುದು ಸಂತೋಷವೇ. ದೊಡ್ಡ ದೊಡ್ಡ ಆಸ್ಪತ್ರೆಗಳೆಲ್ಲಾ ಇಲ್ಲೇ ಇರುವುದರಿಂದ ಕರ್ನಾಟಕದ ಮೂಲೆ ಮೂಲೆಗಳಿಂದ, ಅಷ್ಟೇ ಏಕೆ ದೇಶದ ಕೆಲ ಭಾಗಗಳಿಂದಲೂ ಚಿಕಿತ್ಸೆಗಾಗಿ ಜನ ಇಲ್ಲೇ ಬರುತ್ತಾರೆ. ಸಾಕಷ್ಟು ದೈತ್ಯ ಐಟಿ ಕಂಪನಿಗಳ ನೆಲೆವೀಡಾದ್ದರಿಂದ ಜನರಿಗೆ ಉದ್ಯೋವಕಾಶ ಹೆಚ್ಚಿ ಈಗ ಹೊರರಾಜ್ಯಗಳ ಜನರೂ ಹೆಚ್ಚಾಗಿದ್ದಾರೆ. ಹಾಗಾಗಿ ಬೆಂಗಳೂರು ಎಂದರೆ ಒಂದು ಪುಟ್ಟ ಭಾರತವಾಗಿದೆ. ಕೆಟ್ಟು ಪಟ್ಟಣ ಸೇರು ಎನ್ನುವಂತೆ ಸಾಕಷ್ಟು ಜನ ದುಡಿಮೆಗಾಗಿ ನನ್ನನ್ನು ಆಶ್ರಯಿಸಿದ್ದಾರೆ. ಹಾಗೆ ಬಂದವರಿಗೆ ನಾನು ನಿರಾಸೆಯಂತೂ ಮಾಡುವುದಿಲ್ಲ. ಛಲ ಇರುವವರು ಹ್ಯಾಗೋ ಬದುಕು ಕಟ್ಟಿಕೊಂಡು ದೊಡ್ಡ ದೊಡ್ಡ ಮನುಷ್ಯರಾದವರೂ ಇದ್ದಾರೆ, ಕೈಸುಟ್ಟುಕೊಂಡು ತಪ್ಪು ದಾರಿ ಹುಡುಕಿಕೊಂಡು ಬಾಳುವವರೂ ಇದ್ದಾರೆ. ಕಳ್ಳತನ, ಕೊಲೆ, ಸುಲಿಗೆ, ದೊಂಬಿ, ಮುಷ್ಕರಗಳಂತೂ ನನಗೆ ಮಾಮೂಲಿ ಬಿಡು. ಹಾಗೆಯೇ ದೊಡ್ಡ ದೊಡ್ಡ ಮನುಷ್ಯರು ನನ್ನಲ್ಲಿಗೆ ಭೇಟಿ ನೀಡಿದಾಗ ನನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ.

ಊರಿಗೊಂದು ಮಾರಿಗುಡಿ ಇರುವ ಹಾಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಬಹುತೇಕ ಜನರಿಗೆ ಬೆಂಗಳೂರಿನಲ್ಲೊಂದು ನೆಂಟರ ಮನೆ ಇದ್ದೇ ಇರುತ್ತದೆ ಬಿಡು. ಬೆಂಗಳೂರಿನಲ್ಲೊಂದು ಸ್ವಂತ ಮನೆ ಇರಬೇಕೆಂಬುದು ಬಹುಜನರ ಬಯಕೆ. ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇರುವವರಿಗೊಂದು ದೊಡ್ಡ ಧನ್ಯವಾದ ಹೇಳಲೇಬೇಕು ನೋಡು. ಆಸ್ಪತ್ರೆಗೆ, ಕೆಲಸ ಹುಡುಕಿಕೊಂಡು, ಇಂಟರ್‌ವ್ಯೂಗಳಿಗೆ ಅಟೆಂಡ್ ಆಗಲು, ಮದುವೆ ಜವಳಿ, ಬಂಗಾರ ಖರೀದಿಸಲು, ಕಾಲೇಜುಗಳಿಗೆ, ಕರಿಯರ್ ಅಕಾಡಮಿಗಳಿಗೆ, ಕಂಪ್ಯೂಟರ್ ಕೋರ್ಸ್ ಮಾಡಲು, ಉನ್ನತ ಶಿಕ್ಷಣ ಪಡೆಯಲು ಬರುವವರಿಗೆ ನೆಂಟರ ಅಥವಾ ಸ್ನೇಹಿತರ ಮನೆಗಳಿದ್ದರೆ ದೊಡ್ಡ ಆಸರೆ ಇದ್ದಂತೆ. ಇನ್ನು ಗಲ್ಲಿ ಗಲ್ಲಿಗಳಿಗೆ ಕಾಣಸಿಗುವ ಪಿಜಿಗಳು ಎಷ್ಟೋ ಜನರಿಗೆ ಆಶ್ರಯ ಒದಗಿಸಿವೆ. ದುಡ್ಡಿರುವವರಿಗೇನು ಬಿಡು ದೊಡ್ಡ ದೊಡ್ಡ ಹೋಟೆಲ್ ಲಾಡ್ಜ್‌ಗಳು ಇದ್ದೇ ಇವೆ.

ಊಟಕ್ಕಂತೂ ಜನರಿಗೆ ತೊಂದರೆಯೇ ಇಲ್ಲ ನೋಡು. ಬೀದಿ ಬದಿಯಲ್ಲಿ ತಳ್ಳುಗಾಡಿಯಲ್ಲಿ ತಯಾರಾಗುವ ಆಹಾರದಿಂದ ಹಿಡಿದು, ಚಾಟ್ಸ್ ಸೆಂಟರುಗಳು, ಕೆಫೆಟೇರಿಯಾಗಳು, ದೊಡ್ಡ ದೊಡ್ಡ ಸ್ಟಾರು ಹೋಟೆಲ್ಲುಗಳು ಹೊಟ್ಟೆಯನ್ನು ತಣಿಸಲು ಕಾಯುತ್ತಿರುತ್ತವೆ. ಹತ್ತು ರೂಪಾಯಿಗೂ ಹೊಟ್ಟೆ ತುಂಬಿಸಿಕೊಳ್ಳಬಹುದು, ಸಾವಿರಕ್ಕೂ ಊಟ ಮಾಡಬಹುದು. ಇಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ಇಲ್ಲಿಯ ಜನ ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತ ಹೊರಗೆ ತಿನ್ನುವುದೇ ಹೆಚ್ಚು. ಅಡುಗೆ ಮಾಡಿಕೊಳ್ಳಲಾರದ ಸೋಮಾರಿಗಳು ಅಂತಾ ಹೇಳ್ತಾ ಇಲ್ಲ, ಪಾಪ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿರುವುದು ಹೆಚ್ಚಾಗಿರುವುದರಿಂದ, ಸಂಜೆ ಸುಸ್ತಾಗಿ ಬಂದು ಮತ್ತೆಲ್ಲಿ ಅಡುಗೆ ಮನೆಯಲ್ಲಿ ಗುದ್ದಾಡುವುದು ಎಂದು ಸುಮ್ಮನೆ ಹೊರಗೆ ತಿಂದು ಬಂದು ತಣ್ಣಗೆ ಮಲಗುತ್ತಾರೆ. ಇಲ್ಲವಾದರೆ ಆನ್‌ಲೈನಿನಲ್ಲಿ ಹೋಮ್ ಡೆಲಿವರಿ ಬುಕ್ ಮಾಡಿ ಊಟ ತರಿಸಿಕೊಳ್ಳುತ್ತಾರೆ. ಹೊರಗಿನ ಊಟ ತಿಂದೂ ತಿಂದೂ ಬೊಜ್ಜು ಹೆಚ್ಚಾಗಿ ಅದನ್ನು ಕರಗಿಸಿಕೊಳ್ಳಲು ಜಿಮ್ಮು, ಯೋಗ ಸೆಂಟರಿನ ಮೊರೆ ಹೋಗುವುದು ಹೆಚ್ಚು. ವೀಕೆಂಡ್ ಬಂತೂ ಅಂದರೆ ಮನೆಯಲ್ಲಿ ಯಾರೂ ಇರುವುದಿಲ್ಲ ನೋಡು. ಪ್ರವಾಸಕ್ಕಾದರೂ ಹೊರಡುತ್ತಾರೆ, ಇಲ್ಲವಾದರೆ ಸಣ್ಣ ಸಣ್ಣ ಪಿಕ್‌ನಿಕ್‌ಗಳಿಗೋ, ಉದ್ಯಾನಗಳಿಗೋ, ಸಿನೆಮಾಗಳಿಗೋ, ಮಾಲ್‌ಗಳಿಗೋ ತೆರಳಿ ಬೇಸರ ಕಳೆದುಕೊಳ್ಳುತ್ತಾರೆ.

ಸಿನೆಮಾ ಅಂದರೆ ನಮ್ಮ ಜನಕ್ಕೆ ಅದೇನು ಹುಚ್ಚು ಅಂತೀಯ ಬಿಡು. ಅದರಲ್ಲೂ ಕನ್ನಡ ಸಿನೆಮಾಗಳೆಂದರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು. ಬೇರೆ ಭಾಷೆಯ ಸಿನೆಮಾಗಳನ್ನೂ ನೋಡುತ್ತಾರಾದರೂ ಕನ್ನಡಕ್ಕೇ ತಮ್ಮ ಮೊದಲ ಆದ್ಯತೆ ನೀಡುವುದನ್ನು ನೋಡಿದರೆ ಹೆಮ್ಮೆಯಾಗುತ್ತದೆ. ತಮ್ಮ ಮೆಚ್ಚಿನ ನಾಯಕ ಅಥವಾ ನಾಯಕಿಯ ಸಿನೆಮಾ ಇನ್ನು ರಿಲೀಜ್ ಆದ ದಿವೇ ಫಸ್ಟ್ ಡೇ, ಫಸ್ಟ್ ಶೋಗೆ ಟಿಕೆಟ್ ಬುಕ್ ಮಾಡಿಬಿಡುತ್ತಾರೆ. ಈಗೆಲ್ಲಾ ಮಲ್ಟಿಫ್ಲೆಕ್ಸ್‌ನಲ್ಲಿ ಸಿನೆಮಾ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ಸರಿಯೇ, ಆದರೆ ನಮ್ಮ ಬೆಂಗಳೂರಿಗರು ಕನ್ನಡವನ್ನೇನೋ ಪ್ರೀತಿಯಿಂದ ಮಾತನಾಡುತ್ತಾರೆ, ಆದರೆ ಬೇರೆ ಭಾಷೆಯ ಜನರ ಜೊತೆಗೆ ಅವರ ಭಾಷೆಯನ್ನು ಇವರೇ ಕಲಿತು ಮಾತನಾಡುತ್ತಾರೆಯೇ ಹೊರತು ಕನ್ನಡವನ್ನು ಅವರಿಗೆ ಕಲಿಯುವಂತೆ ಪ್ರೇರೇಪಿಸುವುದಿಲ್ಲ, ಅದಕ್ಕೆ ಸ್ವಲ್ಪ ಬೇಜಾರಾಗುತ್ತದೆ ನೋಡು.

ಅಬ್ಬಬ್ಬಾ! ನನ್ನನ್ನು ಕಟ್ಟಿದ ಕೆಂಪೇಗೌಡರೇನಾದರೂ ಬಂದು ಈಗ ನೋಡಿದರೆ ಗಾಬರಿ ಬೀಳುತ್ತಾರೆ ಬಿಡು. ಅವರು ಹಾಕಿದ ಗೆರೆ ದಾಟಿ ನಾಲ್ಕೂ ದಿಕ್ಕಿಗೆ ನನ್ನನ್ನು ಮಿತಿಮೀರಿ ಬೆಳೆಸಿಬಿಟ್ಟಿದ್ದಾರೆ. ಅದೆಷ್ಟು ದೊಡ್ಡ ದೊಡ್ಡ ಗಂಗನಚುಂಬಿ ಅಪಾರ್ಟಮೆಂಟುಗಳು ತಲೆ ಎತ್ತಿವೆ ಎಂದರೆ ತಲೆ ಎತ್ತಿ ನೋಡಿದರೆ ತಲೆತಿರುಗಿ ಬೀಳುವ ಹಾಗಾಗುತ್ತದೆ. ನನಗೆ ಒಮ್ಮೊಮ್ಮೆ ಅನುಮಾನ ಬರುತ್ತದೆ, ಇದರಲ್ಲಿ ವಾಸಿಸುವ ಜನರಿಗೆ ಆಕಾಶ, ಮೋಡ, ನಕ್ಷತ್ರ, ಸೂರ್ಯ, ಚಂದ್ರ ಕಾಣಿಸುತ್ತಾರಾ ಅಂತಾ? ಮೊನ್ನೆ ಯಾರೋ ಹೇಳುತ್ತಿದ್ದರು ಅಪಾರ್ಟಮೆಂಟಿನಲ್ಲಿ ನೈಸರ್ಗಿಕ ಗಾಳಿ, ಬೆಳಕು ಬೇಕೆಂದರೆ ಫ್ಲೋರಿನ ಎತ್ತರ ಏರಿದಂತೆಲ್ಲಾ ಫ್ಲಾಟುಗಳಿಗೆ ಬೇಡಿಕೆ ಜಾಸ್ತಿ ಅಂತಾ. ಇತ್ತ ಭೂಮಿಯೂ ಅಲ್ಲ, ಅತ್ತ ಆಕಾಶವೂ ಅಲ್ಲ, ಒಟ್ಟಿನಲ್ಲಿ ತ್ರಿಶಂಕು ಮನೆವಾಸ ಎನಬಹುದೇನೋ ನೋಡು. ಸಧ್ಯಕ್ಕೆ  ನೀವಂತೂ ನನ್ನಷ್ಟು ದಾಳಿಗೊಳಗಾಗಿಲ್ಲ, ನನ್ನಷ್ಟು ಕಲುಷಿತವೂ ಆಗಿಲ್ಲ. ಅದೇ ಸಂತೋಷ ನೋಡು. ಹೂಂ…ಮತ್ತೇನಪ್ಪಾ, ನಿಮ್ಮಗಳ ಕ್ಷೇಮ ಕುಶಲದ ಬಗ್ಗೆ ಆಗಾಗ್ಗೆ ಕರೆ ಮಾಡ್ತಾ ಇರಿ, ಎಲ್ಲರನ್ನೂ ಕೇಳಿದೆ ಅಂತಾ ಹೇಳಿಬಿಡು ಆಯ್ತಾ? ಸರಿ…ಸರಿ…ತುಂಬಾ ಹೊತ್ತಾಯಿತು ಫೋನು ಇಡ್ತೇನೆ, ಮತ್ತೆ ಕರೆ ಮಾಡುತ್ತೇನೆ…ಶುಭದಿನ.

-ನಳಿನಿ. ಟಿ. ಭೀಮಪ್ಪ , ಧಾರವಾಡ.

8 Responses

 1. Sumanachinmaya says:

  ಸ್ವಗತ ಚೆನ್ನಾಗಿದೆ,

 2. Pallavi Bhat says:

  ಉತ್ತಮ ನಿರೂಪಣೆ.

 3. ನಳಿನಿ ಭೀಮಪ್ಪ says:

  Thank you madam

 4. Shankari Sharma says:

  ಬೆಂಗಳೂರಿನ ಫೋನ್ ಕರೆ ಚೆನ್ನಾಗಿ ಕೇಳಿಸಿತು , ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: