ಶ್ರವಣ… ನಿಮಗೆ ನಮನ

Spread the love
Share Button

ನಮ್ಮ ಪಂಚೇಂದ್ರಿಯಗಳಲ್ಲಿ ಕಿವಿಗೆ ಅತಿ ಹೆಚ್ಚಿನ ಕೆಲಸ ಅಂದರೆ ತಪ್ಪಾಗಲಾರದು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಇಷ್ಟವಿರಲಿ, ಇಲ್ಲದೆ ಹೋಗಲಿ ಕಿವಿ ಸಾವಿರಾರು ಶಬ್ದಗಳನ್ನು ಕೇಳಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಗಮನ ಕೊಟ್ಟರೂ, ಕೊಡದಿದ್ದರೂ, ಬೇಕಾದ, ಬೇಡವಾದ ಇ-ಮೇಲ್‌ಗಳು ನಮ್ಮ ಅಕೌಂಟಿಗೆ ಬಂದು ಬೀಳುವ ಹಾಗೆ ಕಿವಿಗಳ ಮೇಲೂ ಹಲವಾರು ಶಬ್ದಗಳು ಅಪ್ಪಳಿಸುತ್ತಲೇ ಇರುತ್ತವೆ. ಡಿಲೀಟ್ ಮಾಡಲಾರದೆ ಪಾಪ ಎಲ್ಲವನ್ನು ಆಲಿಸಬೇಕಾದ ಕರ್ಮ ಅದರದು.
‘ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಕೆ ಅಂಜಿದೊಡೆಂತಯ್ಯ’ ಎಂದು ನಮ್ಮ ಶರಣೆ ಅಕ್ಕ ಮಹಾದೇವಿ ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಜಗತ್ತಿನಲ್ಲಿ ಗದ್ದಲದ ಸಂತೆಯನ್ನು ನಾವೇ ಸೃಷ್ಟಿಸಿಕೊಂಡು ನಾವೇ ಪರದಾಡುವಂತಾಗಿದೆ. ಹಾಗಾಗಿ ಈ ಕಿವಿಗಳೆಂಬ ಶ್ರವಣೇಂದ್ರಿಯಗಳು ಯಾಕಾದರೂ ದೇವರು ನಮ್ಮನ್ನು ಸೃಷ್ಟಿಸಿದ್ದಾನೋ ಎಂದು ಬಾಯಿ ಬಾಯಿ ಬಡಿದುಕೊಳ್ಳಬೇಕಾಗಿದೆ.

ಈ ಸ್ಮಾರ್ಟಫೋನು ಬಂದ ಮೇಲಂತೂ ಕಿವಿಗೆ ಕೆಲಸದಿಂದ ಬಿಡುಗಡೆಯೇ ಇಲ್ಲದಂತಾಗಿದೆ. ಜೊತೆಗೆ ಪುಗಸೆಟ್ಟೆ ಟಾಕ್ ಟೈಮು, ನೆಟ್ಟು ಸಿಕ್ಕ ಮೇಲೆ ಮಾತನಾಡದಿದ್ದರೆ ಹೇಗೆ ಹೇಳಿ? ಮಲಗಿದ್ದವರನ್ನು, ಫಾರಿನ್ನಿನಲ್ಲಿದ್ದವರನ್ನೂ ಸಹ ಹಗಲೂ ರಾತ್ರಿಯೆನ್ನದೆ ಕಿವಿ ನೋಯುವ ತನಕ ಮಾತಿಗೆಳೆಯುತ್ತೇವೆ. ಹಾಗೆಯೇ ಈ ವಾಟ್ಸಪ್ಪು, ಹೈಕು, ಫೇಸ್‌ಬುಕ್ಕು, ಇನ್ಸ್ಟಾಗ್ರಾಮು ಎಲ್ಲದರಲ್ಲೂ ಅಕೌಂಟು ತೆರೆದುಕೊಂಡು ಅವುಗಳ ನೋಟಿಫಿಕೇಶನ್‌ಗಳ ಶಬಕ್ಕ್ದೆ ಕಿವಿ ಹಾತೊರೆಯುತ್ತಿರುತ್ತದೆ. ಈಗಿನ ಮಕ್ಕಳಿಗೆ ಚಿಕ್ಕ ವಯಸ್ಸಿಗೇ ಕನ್ನಡಕ ಬರುವ ಹಾಗೆ ಮುಂದಿನ ಜನರೇಶನ್ನಿಗೆ ಚಿಕ್ಕ ವಯಸ್ಸಿಗೇ ಶ್ರವಣ ಸಾಧನ ಬರಬಹುದೋ ಏನೋ? ಪ್ರತಿದಿನ ಕಿವಿ ಈಪಾಟಿ ಶಬ್ದಗಳನ್ನು ಆಲಿಸಿದರೆ ಮತ್ತೇನಾಗುತ್ತದೆ? ‘ಕಿವುಡನ ಮಾಡಯ್ಯ ತಂದೆ’ ಎಂದು ದಾಸರು ಅದಕ್ಕೇ ಹಾಡಿರಬೇಕು.

ಯೋಚಿಸಿ ನೋಡಿ! ಬೆಳಬೆಳಿಗ್ಗೆ ಅಲಾರಾಂಗಿಂತ ಹೆಚ್ಚಾಗಿ ಕಿವಿಗೆ ಮೊದಲು ಕೇಳಿಸುವುದು ಹಕ್ಕಿಗಳ ಚಿಲಿಪಿಲಿ ಶಬ್ದ. ಅದರ ಜೊತೆ ನಮ್ಮ ಅಲಾರಾಂ ಶಬ್ದವೂ ಸೇರಿರುತ್ತದೆಯೆನ್ನಿ. ಇನ್ನು ಅಕ್ಕ ಪಕ್ಕದ ಮನೆಗಳಿಂದ ಕೆಮ್ಮುವ, ಕ್ಯಾಕರಿಸುವ, ಫ್ಲಶ್ ಮಾಡುವ, ಮಕ್ಕಳನ್ನು ಎಬ್ಬಿಸಲು ತಂದೆ ತಾಯಿಗಳು ಗಂಟಲು ಹರಿದುಕೊಳ್ಳುತ್ತಿರುವ ಶಬ್ದಗಳೂ ಒಂದರ ಮೇಲೊಂದು ಕಿವಿಯ ಮೇಲೆ ಅಪ್ಪಳಿಸುತ್ತಿರುತ್ತವೆ. ಪೊರಕೆಯಿಂದ ಚರ್ ಚರ್ ಎಂದು ಅಂಗಳ ಕಸ ಗುಡಿಸುವ, ನೀರು ಹಾಕುವ ಶಬ್ದ ಕೇಳುತ್ತಿದ್ದಂತೆ ಅಯ್ಯೋ ಆಗಲೇ ನೆರೆಹೊರೆಯವರು ಬಾಗಿಲಿಗೆ ನೀರು ಹಾಕುತ್ತಿದ್ದಾರೆ, ನಮ್ಮದು ಲೇಟಾಯಿತು ಎಂದು ಗಬಕ್ಕನೆ ಏಳುವಂತೆ ಮಾಡುತ್ತದೆ. ಹಾಲಿನವರು, ಪೇಪರಿನವರು, ಹೂವಿನವರ ಸೈಕಲ್ ಬೆಲ್ ಕೇಳುತ್ತಲೇ ಹೊರಗೆ ಹೋಗುತ್ತೇವೆ. ಇನ್ನು ಅಕ್ಕಪಕ್ಕದ ಮನೆಗಳ ಕುಕ್ಕರುಗಳು, ಮಿಕ್ಸರ್‌ಗಳು ತಾಮುಂದು ನಾಮುಂದು ಎಂದು ಕೂಗುತ್ತಿರುತ್ತವೆ. ಗಡಿಯಾರದ ಟಿಕ್ ಟಿಕ್, ಢಣ್ ಢಣ್ ಶಬ್ದ ಎಲ್ಲರನ್ನು ಅವಸರ ಪಡಿಸುತ್ತದೆ. ಶಾಲೆಗೆ, ಕಾಲೇಜಿಗೆ, ಆಫೀಸಿಗೆ ಹೊರಡುವವರನ್ನು ಅವರವರ ಮನೆಯ ಗೇಟು ಕಿರ್ರೆನ್ನುವ ಶಬ್ದ, ಅವರು ಹೋಗುವ ವಾಹನಗಳ ಶಬ್ದದಿಂದಲೇ ಗುರುತಿಸಬಹುದು.

ನಂತರ ಬರುವ ರದ್ದಿ ಪೇಪರ್‍ನವರು, ಕಾಯಿಪಲ್ಲೆಯವರು, ಗಾದಿ ಹೊಲಿಯುವವರು ವಿಚಿತ್ರವಾಗಿ ಕೂಗುವ ಶಬ್ದ ಮನಯೊಳಗಿರುವ ಜನರು ಹೊರಗೆ ಹಣಕುವಂತೆ ಮಾಡುತ್ತದೆ. ಬಿಸಿಲು ಏರುತ್ತಿದ್ದಂತೆ ನೆರೆ ಹೊರೆಯವರ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುವ ಶಬ್ದ, ಬಟ್ಟೆ ಒಗೆಯುವ ಶಬ್ದದಿಂದಲೇ ಯಾರ ಮನೆಗೆ ಕೆಲಸದವಳ ಆಗಮನ ಆಗಿದೆ ಎಂದು ಹೇಳುತ್ತವೆ. ಗಂಟೆಯ ನಾದ ಪೂಜೆ ಆಗುತ್ತಿರುವುದನ್ನು ಸಾರುತ್ತದೆ. ಸ್ವಲ್ಪ ಹೊತ್ತಿನ ನಂತರ ಟಿವಿಗಳು ಜೋರಾಗಿ ಒದರತೊಡಗಿ ಧಾರಾವಾಹಿಯ ನೆನಪು ಮಾಡಿ ನಮ್ಮ ಮನೆಯ ಟಿವಿ ರಿಮೋಟು ಕೈಗೆ ತೆಗೆದುಕೊಳ್ಳುವಂತೆ ಮಾಡುತ್ತವೆ. ಮಟಮಟ ಮಧ್ಯಾಹ್ನ ಬಂದು ಡೋರ್ ಬೆಲ್ ಒತ್ತಿ ಸೇಲ್ಸ್‌ಮನ್ನು, ಕೊರಿಯರ್‌ನವರು ನಿದ್ದೆ ಕೆಡಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ದಮನಕ್ಕೆ ಸೊಳ್ಳೆ ಬ್ಯಾಟಿನ ಶಬ್ದ ಎಲ್ಲರ ಮನೆಯಲ್ಲಿ ಕೇಳುತ್ತಿರುತ್ತದೆ. ರಾತ್ರಿಯ ನೀರವತೆಯಲ್ಲೂ ಗುಯ್ ಗುಡುವ ಜೀರುಂಡೆಗಳ ಶಬ್ದ, ನಾಯಿ ಊಳಿಡುವ ಶಬ್ದ, ಗೂರ್ಖಾನ ವಿಷಲ್, ಟಕ್ ಟಕ್ ಎನ್ನುವ ಲಾಟಿಯ ಶಬ್ದಗಳು ನಿದ್ದೆ ಬರುವ ತನಕ ಕಿವಿಗೆ ಬೀಳುತ್ತಲೇ ಇರುತ್ತವೆ. ಇನ್ನೇನು ಕಣ್ಣು ಹತ್ತಬೇಕು ಎನ್ನುವಷ್ಟರಲ್ಲಿ ಯಜಮಾನರ ಗೊರಕೆ, ಮಕ್ಕಳು ನಿದ್ದೆಯಲ್ಲಿ ಮಕ್ಕಳ ಹಲ್ಲು ಕಡಿಯುವ ಶಬ್ದ ಕಿವಿ ತಮಟೆಗೆ ರಾಚತೊಡಗುತ್ತದೆ.

ಮನೆಯಲ್ಲಿ ಮಕ್ಕಳ ಇರುವಿಕೆಯನ್ನು ಕಿವಿಗೆ ಬೀಳುವ ಅವರ ಅಳು, ನಗು, ಕೂಗಾಟ, ಕಾದಾಟ, ಗದ್ದಲ, ದೊಡ್ಡವರ ಹತ್ತಿರ ಬೈಸಿಕೊಳ್ಳುವುದರಿಂದಲೇ ತಿಳಿಯುತ್ತಿರುತ್ತದೆ. ಪುಟ್ಟ ಪುಟ್ಟ ಮಕ್ಕಳು ಅಳುವಾಗ ಗಿಲಿಗಿಲಿ ಶಬ್ದ ಕೇಳಿ ಸುಮ್ಮನಾಗುತ್ತವೆ. ಒಮ್ಮೊಮ್ಮೆ ಅಳು ಜೋರಾದರೆ ಮನೆಯಲ್ಲಿರುವ ಲೋಟ, ತಟ್ಟೆಗಳನ್ನೆಲ್ಲಾ ಕುಟ್ಟಿ ಕುಟ್ಟಿ ಶಬ್ದ ಮಾಡಿ ಸುಮ್ಮನಿರಿಸುವ ಪ್ರಯತ್ನ ನಡೆಯುತ್ತದೆ. ಅದ್ಯಾಕೋ ಒಮ್ಮೊಮ್ಮೆ ಲಾಲಿ ಹಾಡಿಗಿಂತ ಇಂತಹ ಶಬ್ದಗಳೇ ಅವುಗಳಿಗೆ ಇಷ್ಟವಾಗುತ್ತವೆ. ಹೆಂಗಳೆಯರ ಗೆಜ್ಜೆ ಹಾಗೂ ಬಳೆಗಳ ಘಲ್ ಘಲ್ ನಾದ ಕಿವಿಗೆ ಬಿದ್ದು ಅವರಿರುವನ್ನು ಸಾರುತ್ತದೆ. ಸಂಗೀತಕ್ಕೂ ಅದೆಂತಹ ಮಾಂತ್ರಿಕ ಶಕ್ತಿ ಇದೆ ಗೊತ್ತೆ? ಕಿವಿಗಳು ಅದನ್ನು ಆಲಿಸುತ್ತಿದ್ದರೆ ಬೇರೊಂದು ಸುಂದರ ಲೋಕಕ್ಕೇ ಕರೆದೊಯ್ಯುತ್ತವೆ. ಈಗಂತೂ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಮೊಬೈಲಿನಲ್ಲಿ ಹಾಡುಗಳನ್ನು ಹಾಕಿಕೊಂಡು, ಕಿವಿಗೆ ಇಯರ್‌ಫೋನು ಚುಚ್ಚಿಕೊಂಡು ಆಲಿಸುವುದನ್ನು ಎಲ್ಲೆಡೆ ಕಾಣಬಹುದು.

ಮನೆಯಲ್ಲಿ ಅತ್ತೆ ಸೊಸೆಯರ ಕಾದಾಟ ಶುರುವಾಯಿತೆಂದರೆ ಅಕ್ಕ ಪಕ್ಕದ ಮನೆಯವರ ಕಿವಿಗಳು ಇವರ ಮನೆಯ ಗೋಡೆಗೇ ಅಂಟಿಕೊಂಡು ಬಿಡುತ್ತವೆ. ಗಂಡನ ಬೈಯ್ಗುಳವನ್ನು ಕೇಳಿಸಿದರೂ ಕೇಳದ ಹಾಗಿರುವ ಜಾಣಕಿವುಡು ಗೃಹಿಣಿಯರು, ಅದೇ ಗಂಡ ಯಾರ ಹತ್ತಿರವಾದರೂ ಮಾತನಾಡುತ್ತಿದ್ದರೆ ಇರುವ ಕೆಲಸವನ್ನೆಲ್ಲಾ ಬಿಟ್ಟು ಮೈಯೆಲ್ಲಾ ಕಿವಿ ಮಾಡಿಕೊಂಡು ಅವರ ಮಾತು ಮುಗಿಯುವವರೆಗೂ ಕೆಲಸವಿರುವವರ ಹಾಗೆ ಗಂಡನ ಸುತ್ತ ಮುತ್ತ ಸುತ್ತುತ್ತಿರುತ್ತಾರೆ. ಅದೇ ತಾವೇನಾದರೂ ತವರು ಮನೆಯ ಕಡೆ ಫೋನು ಮಾಡುತ್ತಿದ್ದರೆ ಅಪ್ಪಿ ತಪ್ಪಿಯೂ ಗಂಡನ ಕಿವಿಗೆ ಬೀಳದ ಜಾಗದಲ್ಲಿ ಹೋಗಿ ಮಾತನಾಡುತ್ತಾರೆ.
ಹಾಗೆಯೇ, ದನಕರುಗಳ ತಪ್ಪಿಸಿಕೊಂಡಾಗ ಸುಲಭವಾಗಿ ಹುಡುಕಲು ಕೊರಳಿಗೆ ಗಂಟೆ ಕಟ್ಟುವುದು ಅದಕ್ಕೇ ಅಲ್ಲವೇ? ಶಾಲೆಯ ಗಂಟೆ, ಫ್ಯಾಕ್ಟರಿ ಸೈರನ್, ರೈಲಿನ ಶಬ್ದ, ವಿಮಾನದ ಶಬ್ದ, ವಾಹನಗಳಿರಬಹುದು ಅದರ ಹಾರ್ನ್ ಇರಬಹುದು, ಪ್ರಾಣಿ, ಪಕ್ಷಿಗಳಿರಬಹುದು, ಮನುಷ್ಯರೇ ಇರಬಹುದು, ಪ್ರತಿಯೊಂದಕ್ಕೂ ಅದರದ್ದೇ ಆದ ಶಬ್ದಗಳ ವಿಶೇಷತೆಯಿಂದಲೇ ಗುರುತಿಸುತ್ತೇವೆ. ಮದುವೆಯಲ್ಲಿ ನುಡಿಸುವ ನಾದಸ್ವರ ಸಂತೋಷವನ್ನು ನೀಡಿದರೆ, ಸೂತಕದ ತಮಟೆ, ಮರಳಿ ಮಣ್ಣಿಗೆ ವಾಹನದ ‘ಓಂ ಬಸವಲಿಂಗಾಯ ನಮಃ’, ಆಂಬುಲೆನ್ಸ್‌ನ ಶಬ್ದ ಮನಸ್ಸಿಗೆ ವಿಷಾದ, ಗಾಬರಿ, ನೋವು ತರುವಂತಿರುತ್ತದೆ. ಗಣ್ಯವ್ಯಕ್ತಿಗಳ ವಾಹನಗಳ ಶಬ್ದ ಕುತೂಹಲ ಕೆರೆಳಿಸುತ್ತದೆ. ದೀಪಾವಳಿ, ಗಣೇಶನ ಹಬ್ಬಕ್ಕೆ ಪಟಾಕಿಗಳ ಶಬ್ದಕ್ಕೆ ಕಿವಿ ತೂತಾಗುವುದೊಂದೇ ಬಾಕಿ. ಅದೇ ಬೇರೆ ಸಮಯದಲ್ಲಿನ ಪಟಾಕಿಗಳ ಶಬ್ದ ಸಂತಸವನ್ನೋ, ಸೂತಕವನ್ನೋ, ಜಯವನ್ನೋ ಸಾರುತ್ತದೆ.
ಮನುಷ್ಯನ ನೋವು, ನಲಿವು, ಅಳುವು, ನಗುವು ಎಲ್ಲವೂ ವ್ಯಕ್ತಪಡಿಸುವುದು ಮಾತಿನಿಂದಲೇ ಆದರೂ ಆ ಮಾತುಗಳು ಕಿವಿಗೆ ಬಿದ್ದಾಗಲೇ ತಾನೇ ಅದರಲ್ಲಿನ ಭಾವಗಳ, ಭಾವನೆಗಳ ತೀವ್ರತೆ ಅರಿವಾಗುವುದು? ಕಿವುಡಾಗಿರುವವರಿಗೆ ಆಗುವ ಒಂದು ಲಾಭವೆಂದರೆ ಅನಾವಶ್ಯಕವಾದ ಚಾಡಿಮಾತುಗಳು, ಕೆಟ್ಟ ಮಾತುಗಳು, ಚುಚ್ಚುವ, ಬೈಯ್ಯುವ, ವ್ಯಂಗ್ಯ ಮಾತುಗಳು ಯಾವುದೂ ಅರಿವಾಗದ ಕಾರಣ ಜಗತ್ತಿನ ಜನರ ಒಳಗುಟ್ಟು ಗೊತ್ತಾಗದೆ ನೆಮ್ಮದಿಯಾಗಿರಬಹುದು.

ಪ್ರಕೃತಿಯಲ್ಲಿನ ಗುಡುಗು, ಮಿಂಚಿನ ಶಬ್ದ ಮಳೆಯ ಮುನ್ಸೂಚನೆಯನ್ನು ನೀಡುತ್ತದೆ. ಮಳೆಯ ಚಿಟಪಟ ಶಬ್ದ, ಹರಿಯುವ ನೀರಿನ ಜುಳುಜುಳು ಶಬ್ದ, ಸುಯ್ಯನೆ ಬೀಸೋ ಗಾಳಿಯ ಶಬ್ದಕ್ಕೆ ಅಲುಗಾಡುವ ಎಲೆಗಳ ಶಬ್ದ ಮನಸ್ಸಿಗೆ ಆಹ್ಲಾದತೆ ನೀಡುತ್ತದೆ. ಆದರೆ ಈ ಶಬ್ದಗಳನ್ನು ಆಲಿಸಲು ಒಳಗಿವಿಯನ್ನೂ ತೆರೆದಿರಬೇಕು.

– ನಳಿನಿ. ಟಿ. ಭೀಮಪ್ಪ, ಧಾರವಾಡ.

3 Responses

  1. gouri chandrakesari says:

    ಲೇಖನ ಚೆನ್ನಾಗಿದೆ .

  2. Vasundhara says:

    ಚೆಂದದ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: