ವಿಶ್ವ ಪ್ರವಾಸೋದ್ಯಮ ದಿನ-ಸೆಪ್ಟೆಂಬರ್ 27
ಇಂದಿನ ಜಗತ್ತು ಚಲನಶೀಲವಾಗಿದೆ. ಸಂಪರ್ಕ ಮಾಧ್ಯಮಗಳು ಹಾಗೂ ಸಾರಿಗೆ ಸೌಕರ್ಯಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿ ಮನೋಭಾವ ಹೆಚ್ಚುತ್ತಿದೆ .ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿಯಿಂದಾಗಿ ಪ್ರಪಂಚದ ಯಾವುದೇ ಸ್ಥಳದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದಿಂದಾಗಿ ಉಂಟಾಗುವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ, ಸಂಯುಕ್ತ ದೇಶಗಳ ಪ್ರವಾಸೋದ್ಯಮ ಸಂಸ್ಥೆಯು ( United Nations World Tourism Organization) , ಸೆಪ್ಟೆಂಬರ್ 27, 1980 ರಂದು ಕೆಲವು ನಿಯಮಾವಳಿಗಳನ್ನು ರೂಪಿಸಿತು. ಅಂದಿನಿಂದ ಸೆಪ್ಟೆಂಬರ್ 27 ನೇ ತಾರೀಕನ್ನು ‘ವಿಶ್ವ ಪ್ರವಾಸೋದ್ಯಮ ದಿನ’ ಎಂದು ಗುರುತಿಸಲಾಗುತ್ತಿದೆ.
‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನಂತೆ, ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು. ಹಿಂದಿನ ಕಾಲದಲ್ಲಿ ಭಕ್ತಿಪ್ರಧಾನವಾದ ತೀರ್ಥಯಾತ್ರೆಯೇ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು, ಬದಲಾದ ಇಂದಿನ ಕಾಲಘಟ್ಟದಲ್ಲಿ ಪ್ರವಾಸದ ಪ್ರಕಾರಗಳು ಹಲವಾರು. ವಿದ್ಯಾಭ್ಯಾಸದ ಅಂಗವಾಗಿ ಶೈಕ್ಷಣಿಕ ಪ್ರವಾಸ, ವೈದ್ಯಕೀಯ ಪ್ರವಾಸ, ಕೃಷಿ ಪ್ರವಾಸ, ಧಾರ್ಮಿಕ ಪ್ರವಾಸ, ಉದ್ಯೋಗ ನಿಮಿತ್ತ ಪ್ರವಾಸ, ಮನರಂಜನೆಗಾಗಿ ಪ್ರವಾಸ, ಸಾಹಸಮಯ ಕ್ರೀಡೆಗಳಿಗಾಗಿ ಪ್ರವಾಸ, ಪ್ರಕೃತಿ ಪ್ರಿಯರಿಗಾಗಿ ಚಾರಣ, ಪುಣ್ಯ ಸಂಪಾದನೆಗಾಗಿ ತೀರ್ಥಯಾತ್ರೆ, ಆಯಾ ಋತುವಿಗೆ ತಕ್ಕಂತೆ ವಿಶೇಷ ಪ್ರವಾಸ, ಗತವೈಭವದ ಐತಿಹ್ಯವುಳ್ಳ ಜಾಗಗಳಿಗೆ ಪ್ರವಾಸ, ಸಾಂಸ್ಕೃತಿಕ ಪ್ರವಾಸ, ಕೌಟುಂಬಿಕ ಪ್ರವಾಸ, ಏಕಾಂಗಿ ಪ್ರವಾಸ , ಏಕತಾನತೆಯನ್ನು ಮುರಿಯಲು ಪ್ರವಾಸ, ವಾರಾಂತ್ಯದ ಪ್ರವಾಸ, ಹವ್ಯಾಸವಾಗಿ ಪ್ರವಾಸ, ಹೀಗೆ ಪ್ರವಾಸದ ವಿರಾಟ್ ರೂಪವು ದಂಗುಬಡಿಸುವಂತಿದೆ. ಆಸಕ್ತರ ವಿವಿಧ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಆಯಾ ವರ್ಗದ ಪ್ರವಾಸೋದ್ಯಮವು ಬೆಳೆಯುತ್ತಿದೆ.
ಪ್ರವಾಸವನ್ನು ಪ್ರಯಾಸರಹಿತವಾಗಿ ನಿಭಾಯಿಸಲು ಸ್ವಲ್ಪ ಪೂರ್ವತಯಾರಿ ಅಗತ್ಯ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ನಲ್ಲಿ ಅಂತರ್ಜಾಲ ಸಂಪರ್ಕವಿದ್ದರೆ ಇಂದಿನ ದಿನಗಳಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಸುಲಭ.. ಹೋಗಬೇಕಾದ ಸ್ಥಳದ ಬಗ್ಗೆ ಮಾಹಿತಿ, ಪ್ರವಾಸಕ್ಕೆ ತಗಲುವ ಅಂದಾಜು ಖರ್ಚುವೆಚ್ಚ, ಹವಾಮಾನ, ಊಟ ವಸತಿಯ ಏರ್ಪಾಡು, ಟಿಕೆಟ್, ಅಗತ್ಯವಿದ್ದಲ್ಲಿ ಪಾಸ್ ಪೋರ್ಟ್, ವೀಸಾ ಇತ್ಯಾದಿಗಳನ್ನು ಖುದ್ದಾಗಿ ಮಾಡಬಹುದು ಅಥವಾ ಹೆಚ್ಚಿನ ನಗರಗಳಲ್ಲಿ ಟೂರಿಸ್ಟ್ ಏಜೆಂಟ್ ಗಳ ಸಹಾಯ ಪಡೆಯಬಹುದು.
ಪ್ರತಿ ದೇಶವೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿವೆ. ಭಾರತದಲ್ಲಿ ಖಾಸಗಿ ಸಂಸ್ಥೆಗಳ ಜೊತೆಗೆ, ಸರಕಾರಿ ಒಡೆತನದಲ್ಲಿರುವ ರೈಲ್ವೇ ಹಾಗೂ ಸಾರಿಗೆ ಸಂಸ್ಥೆಗಳು ಕೂಡ ಬಹಳಷ್ಟು ಪ್ರವಾಸಿ ಪ್ಯಾಕೇಜ್ ಗಳನ್ನು ರೂಪಿಸಿ ಜನರನ್ನು ಆಕರ್ಷಿಸುತ್ತಿವೆ. ನಮ್ಮ ದೇಶದಲ್ಲಿ ಅಗಾಧವಾದ ಭೂವೈವಿಧ್ಯತೆ, ಪ್ರಾಕೃತಿಕ ಸೊಬಗು, ಸಾಂಸ್ಕೃತಿಕ ಸಂಪತ್ತು ಎಲ್ಲವೂ ಇವೆ. ಆದರೆ ಪ್ರವಾಸೋದ್ಯಮದ ನಿರ್ವಹಣೆಯ ಗುಣಮಟ್ಟವು ನಿರಾಶಾದಾಯಕ . ಭಾರತದ ಪ್ರವಾಸೋದ್ಯಮವನ್ನು ವೃದ್ಧಿಪಡಿಸಲು ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳು, ಶುಚಿತ್ವ, ಸುರಕ್ಷತೆ ಹಾಗೂ ಶಿಸ್ತನ್ನು ಕಾಪಾಡುವುದು ಅಗತ್ಯ.
ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗಿ, ಆದಾಯ ಹೆಚ್ಚುತ್ತದೆ, ವಿಭಿನ್ನ ಸಂಸ್ಕೃತಿಯ ಪರಿಚಯವಾಗುತ್ತದೆ. ಆದರೆ ಅತಿಯಾದ ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಪರಿಸರ ಹಾಗೂ ಸಂಸ್ಕೃತಿಯ ಮೇಲೆ ದುಷ್ಪರಿಣಾಮಗಳಾಗುತ್ತಿರುವುದೂ ಸತ್ಯ.
.
– ಹೇಮಮಾಲಾ.ಬಿ
ಪ್ರವಾಸದ ಪೂರ್ವ ತಯಾರಿ ಹೇಗಿರಬೇಕೆಂಬುದನ್ನ ಉತ್ತವಾಗಿ ತಿಳಿಸಿಕೊಟ್ಟಿದ್ದಿರಿ ಮೇಡಂ ತಮಗೆ ಧನ್ಯವಾದಗಳು
ಧನ್ಯವಾದಗಳು..
ಪ್ರವಾಸದ ಗುಣಾವಗುಣಗಳು ಚೆನ್ನಾಗಿ ಮೂಡಿಬಂದಿದೆ.
ಧನ್ಯವಾದಗಳು
ಪ್ರವಾಸದ ಕುರಿತು ತುಂಬಾ ಮಾಹಿತಿಳನ್ನು ನೀಡಿದ್ದೀರಿ ಬಹಳ ಚೆನ್ನಾಗಿದೆ ಧನ್ಯವಾದಗಳು.
ಸೂಪರ್. ಚಂದದ ಮಾಹಿತಿಪೂರ್ಣ ಬರಹ. ಪ್ರವಾಸದ ವಿಷಯದಲ್ಲಿ ನಿಮ್ಮ ಜ್ಞಾನ ಭಂಡಾರ ವಿಶಾಲವಾದದ್ದು. ಅಷ್ಟು ಅನುಭವ ಇದೆ ನಿಮ್ಗೆ. ಪ್ರವಾಸದ ವಿಚಾರದಲ್ಲಿ ಏನೇ ಸಲಹೆ ಬೇಕಿದ್ದರೂ ಖಂಡಿತ ಬಹಳ ಚಂದ, ವಿಸ್ತಾರವಾಗಿ ನೀವು ನೀಡಬಲ್ಲಿರಿ.
ವೈವಿಧ್ಯಮಯ ಪ್ರವಾಸದ ವಿವರಗಳು,
ಪ್ರವಾಸ ಮಾಡಬಯಸುವವರಿಗೆ ಸೂಕ್ತವಾದ ಮಾಹಿತಿ
ಹಾಗೂ ಮಾಡಿಕೊಳ್ಳಬೇಕಾದ ವ್ಯವಸ್ಥೆಗಳು ಬಹಳ ಉಪಯುಕ್ತವಾಗಿದೆ
ಪ್ರವಾಸಮಾಡುವಾಗಿನ..ಸಂದರ್ಭದಲ್ಲಿ ಬೇಕಾಗಿರುವ ಮಾಹಿತಿಯನ್ನು ಚೆನ್ನಾಗಿ ಕೊಟ್ಟಿರುವನಿಮಗೆ ಧನ್ಯವಾದಗಳು ಗೆಳತಿ ಹೇಮಾ
ಅದೆಷ್ಟು ವೈವಿಧ್ಯಮಯ ಪ್ರವಾಸಗಳು…!! ಅದರ ಪಟ್ಟಿ ನೋಡಿಯೇ ಆಶ್ಚರ್ಯವಾಯಿತು. ಸೂಕ್ತ ಮಾಹಿತಿಗಳನ್ನು ಹೊತ್ತ ಸಕಾಲಿಕ ಬರಹ ಸೊಗಸಾಗಿದೆ.
ಲೇಖನ ಸುಂದರವಾಗಿ ಮೂಡಿಬಂದಿದೆ