ಉನ್ನತ ಶಿಕ್ಷಣದ ಸವಾಲುಗಳು

Share Button

‘ಉನ್ನತ ಶಿಕ್ಷಣ’ ಇತ್ತೀಚೆಗೆ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ. ಯುಜಿಸಿಯಂತಹ ಸಂಸ್ಠೆಗಳ ಪಾತ್ರದ ಬಗ್ಗೆ, ಉನ್ನತ ಶಿಕ್ಷಣದ ಮಾನದಂಡಗಳು, ಉಪನ್ಯಾಸಕರುಗಳಿಗೆ ಕೊಡುವ ವೇತನ ಸಹಿತ ಆಮೂಲಾಗ್ರವಾಗಿ ಪರಿಶೀಲನೆಗೊಳ್ಳುತ್ತಿರುವ ಕಾಲ ಇದು. ಹೆಚ್ಚು ಹೆಚ್ಚು ಮಂದಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳಬೆಕು ಎಂಬ ಆಶಯದೊಂದಿಗೆ, ಬದಲಾಗುತ್ತಿರುವ ಭಾರತದ ಸಾಂಸ್ಕೃತಿಕ, ಶೈಕ್ಶಣಿಕ ವಿದ್ಯಮಾನಗಳತ್ತ ಒಂದಿಷ್ಟು ಮಾತು. ನಮಗೆಲ್ಲ ಗೊತ್ತೇ ಇರುವ ಹಾಗೆ ಇದು ತಂತ್ರ ಜ್ಞಾನ ದಾಪುಗಾಲಿಕ್ಕಿತ್ತಿರುವ ಕಾಲ. ಇನ್ನು ಭಾರತವೆಂದರೆ ‘ಯಂಗ್ ಇಂಡಿಯಾ’. ಅಂಕಿ ಅಂಶಗಳ ಪ್ರಕಾರ ದೇಶದ ಜನಸಂಖ್ಯೆಯ 40 % ರಷ್ಟು 30  ವರ್ಷಕ್ಕಿತ ಕಡಿಮೆ ವಯಸ್ಸಿನವರು ಇದ್ದಾರಂತೆ. ಬದಲಾಗುತ್ತಿರುವ ಕಾಲದೊಂದಿಗೆ ಉದ್ಯೋಗದ ಸಾಧ್ಯತೆಗಳು, ಅವಕಾಶಗಳೂ ಬದಲಾಗುತ್ತಿರುತ್ತವೆ; ಬದಲಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಜಗತ್ತಿನಲ್ಲೇ ಅತ್ಯಂತ ಜವಾಬ್ದಾರಿಯ ಹುದ್ದೆಯಲ್ಲಿದ್ದಾರೆ ಎನ್ನಬಹುದು. ತಮ್ಮನ್ನು ನಂಬಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರ ಕಳಕಳಿ, ಅಂತೆಯೇ ಕನಸುಗಣ್ಣಿನ ಎಳೆಯರನ್ನು ಪೊರೆಯುವ ಜವಾಬ್ದಾರಿ ಎರಡೂ ಅವರಿಗಿದೆ.

ಶಿಕ್ಷಕ ದಿನಾಚರಣೆಯಂದು ಶಿಕ್ಷಕರಿಗೆ ಒಂದು ರೀತಿಯ ಧನ್ಯತಾ ಭಾವ ಮೂಡುವುದು ಹೌದಾದರೂ ಉನ್ನತ ಶಿಕ್ಷಣದ ಸವಾಲುಗಳು ಕಠಿಣವಾಗುತ್ತಿರುವುದು ಹೌದು. ಬದಲಾದ ಕಾಲಘಟ್ಟದಲ್ಲಿನ ಸಹಜವಾದ ಗೊಂದಲಗಳು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಹಾಗೆಯೇ ಉಪನ್ಯಾಸಕರಲ್ಲೂ ಇವೆ . ಹೀಗಾಗಿಯೇ ನಿರಂತರವಾಗಿ ಬದಲಾಗುತ್ತಿರುವ ಜಾಗತಿಕ, ಸ್ಠಳೀಯ ವಿಷಯಗಳಿಗೆ ತೆರೆದುಕೊಳ್ಳುವ ಅವಶ್ಯಕತೆ ಉಪನ್ಯಾಸಕರುಗಳಿವೆ. ಇನ್ನು ರಿಫ಼್ರೆಶರ್ ಕೋರ್ಸ್ ಗಳು, ಓರಿಯೆಂಟೇಶನ್ ಕೋರ್ಸ್ ಗಳು, ವೃತ್ತಿ ಬುನಾದಿ ತರಬೇತಿಗಳು ಹೀಗೆ ಅನೇಕ ತರಬೇತಿಗಳಿವೆ ಹಾಗೂ ಉತ್ತಮ ಸ್ಪಂದನವಿದೆ ಕೂಡ.

ಧಾರವಾಡದಲ್ಲಿರುವ ಹೈಯರ್ ಎಜುಕೇಶನ್ ಅಕಾಡಮಿಯ ಡೈರೆಕ್ಟರ್ ಆಗಿರುವ ಪ್ರೊ. ಶಿವಪ್ರಸಾದ್ ಅವರ ಪ್ರಕಾರ ಪ್ರತಿಯೊಂದು ವಿದ್ಯಾರ್ಥಿಯೂ ಚೈತನ್ಯದ ಚಿಲುಮೆಯೇ ಆಗಿದ್ದು ಅವರನ್ನು ವಜ್ರದಂತೆ ಸಾಣೆ ಹಿಡಿಯುವ ಜವಾಬ್ದಾರಿ ಉಪನ್ಯಾಸಕರದ್ದು. ಜಗತ್ತು ತೀವ್ರವಾಗಿ ಬದಲಾಗುತ್ತಿದೆ. ರಾಜಕೀಯ ತಲ್ಲಣಗಳು, ಶರ ವೇಗದಲ್ಲಿ ಬದಲಾಗುತ್ತಿರುವ ಟೆಕ್ನಾಲಜಿ, ವಾಟ್ಸಾ‌ಅಪ್ . ಫ಼ೇಸ್ ಬುಕ್ ಗಳಂತಹ ನವ ಮಾಧ್ಯಮಗಳು.. ಶಿಕ್ಷಕರೆದುರಿನ ಸವಾಲುಗಳು ಸುಲಭವೇನಲ್ಲ. ಎಲ್ಲ ಸೌಕರ್ಯಗಳಿರುವ ಮನೆಗಳಿಂದ ಬರುವ, ಮುಚ್ಚಟೆಯಿಂದ ಪಾಲಿಸಲ್ಪಟ್ಟ ಮಕ್ಕಳು ಕೆಲವಾದರೆ ಅವರಿವರ ಮನೆ ಪಾತ್ರೆ ತೊಳೆದು, ಕಸ ಗುಡಿಸಿ, ತಿಂಡಿ ಕೂಡ ತಿನ್ನದೆ ಬರುವ ಮಕ್ಕಳು ಕೆಲವು. ಟಿ ವಿ ಸೀರಿಯಲ್, ಸಿನೆಮಾ ಪ್ರಭಾವದಿಂದಲೋ, ಇಂಟರ್ ನೆಟ್ ವೀಕ್ಷಣೆಯಿಂದಲೋ ತಮ್ಮದೇ ಆದ ಭಾವ ವಲಯವನ್ನು ಸೃಷ್ಟಿಸಿಕೊಂಡು ಅದರಲ್ಲಿಯೇ ಮುಳುಗೇಳುವ ಮಕ್ಕಳನ್ನು ತಮ್ಮ ಮಾತಿನಿಂದಲೇ ಸೆಳೆದು, ಅಕ್ಷರಗಳು ಕಾಣಿಸುವ ಬೆಳಕಿನ ಜಗತ್ತಿಗೆ ಕೊಂಡೊಯ್ಯಲು ಶಿಕ್ಷಕರಿಗೆ ಅಪಾರ ತಾಳ್ಮೆ, ಚಾಕ ಚಕ್ಯತೆ ಬೇಕು.


ಇನ್ನು ಪಾಠದಲ್ಲಿ ಕನ್ನಡ ಎಷ್ಟು ಬಳಸಬೇಕು ಎನ್ನುವುದೂ ಯೋಚಿಸುವ ವಿಷಯವೇ. ಒಂದಕ್ಷರವೂ ಕನ್ನಡ ಬಳಸದೆ ಪಾಠ ಮಾಡಬೇಕೆಂದು ಒಂದು ವಾದವಾದರೆ ಹಳ್ಳಿ ಗಾಡಿನ ಮಕ್ಕಳಿಗೆ ಇದರಿಂದ ಪಾಠವೇ ಅರ್ಥ ಆಗದಿರಬಹುದು ಎನ್ನುವುದು ಇನ್ನೊಂದು ವಾದ. ಇಡೀ ಔದ್ಯೋಗಿಕ ಮಾರುಕಟ್ಟೆಯನ್ನೇ ಇಂಗ್ಲಿಷ್ ಆವರಿಸಿಕೊಂಡಿರುವುದು, ಇಂಗ್ಲಿಷ್ ಸಂವಹನ ಸಾಧ್ಯವಾಗದವರು ಕೀಳರಿಮೆಯಿಂದ ನರಳುವುದು ಸತ್ಯ. ಅದೂ ಅಲ್ಲದೆ ಇಂಗ್ಲಿಷ್ ನಂತಹ ಭಾಷೆಯನ್ನು ಬೋಧಿಸುವಾಗ ಢಾಳಾಗಿ ಕಾಣಿಸಿಕೊಳ್ಳುವ ಸಾಂಸ್ಕೃತಿಕ ಭಿನ್ನತೆಯನ್ನು ವಿದ್ಯಾರ್ಥಿಗಳಿಗೆ ಮನಗಾಣಿಸುವುದು ಸುಲಭವೇನಲ್ಲ. ಜೀವನದಲ್ಲಿ ಒಮ್ಮೆಯೂ ‘ಡ್ಯಾಫ಼ೋಡಿಲ್ಸ್’ ನೋಡಿರದಿದ್ದರೂ ಅದರ ಬಗ್ಗೆ ಕವಿತೆ ಓದುತ್ತೇವೆ. ಹಿಮವನ್ನು ನೋಡಿಯೇ ಇರದಿದ್ದರೂ ಪಾಶ್ಚಾತ್ಯ ಕಾದಂಬರಿಗಳಲ್ಲಿ ಅದರ ದಟ್ಟ ವರ್ಣನೆಗಳನ್ನು ಕಲಿಯುತ್ತೇವೆ.

ಇವಿಷ್ಟು ಉಪನ್ಯಾಸಕರುಗಳ ಕಷ್ಟಗಳಾದರೆ ಲೇಡಿ ಟೀಚರುಗಳ ಸಮಸ್ಯೆಗಳೇ ಬೇರೆ. ಗಂಡು ಹೈಕಳಷ್ಟು ಜಗತ್ತಿನ ಅನುಭವ ಇರದ ಕಾರಣ ಸಣ್ಣ ಮಟ್ಟಿಗೆ ಅವರ ಜಗತ್ತು ಸೀಮಿತ. ಇನ್ನು ‘ಸೀರೆ’ ಎನ್ನುವ ಬಟ್ಟೆ ಅವರಿಗೆ ತಂದೊಡ್ಡುವ ಮುಜುಗರ ಅಷ್ಟಿಷ್ಟಲ್ಲ. ಸೀರೆಯ ಶ್ರೇಷ್ಟತೆ ಬಗ್ಗೆ ಆಗಿಂದೀಗ ವಿವಾದಗಳಾಗುತ್ತಿರುತ್ತದೆ. ಸೀರೆ ಒಂದು ಸಭ್ಯ ಉಡುಪೇ ಆದರೂ ಅದನ್ನು ಉಡಲು ಬೇಡುವ ಸಮಯ, ಶ್ರಮ, ಹೆಣ್ಣಿನ ದೇಹವನ್ನು ಮಾಟವಾಗಿ ಕಾಣಿಸುವ ಅದರ ಪ್ರಕೃತಿ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಲ ಮುಜುಗರ ತರುತ್ತಿರುತ್ತದೆ.

ಉಪನ್ಯಾಸಕರುಗಳಿಗಿರುವ ಇನ್ನೊಂದು ಸವಾಲು ಟೆಕ್ನಾಲಜಿಯದ್ದು. ಪವರ್ ಪಾಯಿಂಟ್ ಸ್ಲೈಡ್ ತಯಾರಿಸುವುದು ಎವರೆಸ್ಟ್ ಹತ್ತಿದಷ್ಟು ಕಷ್ಟವೇನೂ ಅಲ್ಲವಾದರೂ ಜೀವನದಲ್ಲಿ ದಶಕಗಳನ್ನು ಕ್ಲಾಸ್ ರೂಮ್ ಬೋಧನೆಗೆ ಒಗ್ಗಿಕೊಂಡ ಹಳಬರಿಗೆ ಈ ನವ ವಿಧಾನದ ಕಾನ್ಫರೆನ್ಸ್ ಗಳು ಕಷ್ಟವೇ. (‘ಟು ಸ್ಟೇಟ್ಸ್’ ಸಿನೆಮಾದಲ್ಲಿ ಈ ರೀತಿಯ ದೃಶ್ಯವಿದೆ). ಹಿಂದಿನ ಕಾಲದ ಮಕ್ಕಳಂತೆ ಈಗಿನ ಮಕ್ಕಳು ಅತಿ ಮುಗ್ಧರೇನಲ್ಲ. ಮೊಬೈಲ್ ಎಂಬ ಅಂಗೈಯಗಲದ ಪೆಟ್ಟಿಗೆಯಲ್ಲಿ ಜ್ನಾನ ಅವರ ಬೆರಳ ತುದಿಯಲ್ಲಿರುತ್ತದೆ. ಈ ಜ್ನಾನವನ್ನು ಆಸಕ್ತಿದಾಯಕವಾಗಿ ಮಾಡುವುದು ಟೀಚರುಗಳ ಸವಾಲು. ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಅರಿತು, ತಕ್ಕುದಾದ ಪ್ರಶ್ನೆಗಳನ್ನು ಕೇಳುತ್ತ, ಅವರಿಗೆ ತಿಳಿದ ವಿಷಯಗಳಿಂದ ತಿಳಿಯದ್ದನ್ನು ಅರಿತುಕೊಳ್ಳುವವರೆಗೆ ಹಂತ ಹಂತವಾಗಿ ಕೊಂಡೊಯ್ಯುವುದು ಶಿಕ್ಷಕರ ಜವಾಬ್ದಾರಿ ಆಗಿದೆ.

ಇನ್ನು ಕಾಲೇಜು ವಿದ್ಯಾರ್ಥಿಗಳು ಹದಿ ಹರಯದವರೇ ಆಗಿರುವುದರಿಂದ ಅನೇಕ ವಯೋ ಸಹಜ ಗೊಂದಲಗಳು, ತಲ್ಲಣಗಳಿಂದ ಕಳವಳಿಸುತ್ತ, ಡ್ರಗ್ಸ್ ನಂತಹ ಅನಾಹುತಕಾರಿ ಚಟಗಳಿಗೂ ಅವರು ದಾಸರಾಗುವುದು ಇದೆ. ಖ್ಯಾತ ಮನೋ ಚಿಕಿತ್ಸಕರಾದ ಡಾ. ಆನಂದ ಪಾಂಡುರಂಗಿ ಅವರ ಪ್ರಕಾರ ಯಾವ ಮಗುವೂ ಕೆಟ್ಟದಾಗಿರಲು ಸಾಧ್ಯವಿಲ್ಲ. ಮಕ್ಕಳ ಅನ್ಯ ಮನಸ್ಕತೆ, ಹೊಂದಾಣಿಕೆಯ ಕೊರತೆಗೆ ಮಕ್ಕಳ ಮನೆ, ಹೆತ್ತವರು, ಸಮಾಜ ಸೇರಿದಂತೆ ಅನೇಕ ಕಾರಣಗಳಿರುತ್ತವೆ. ಹಾಗೆ ನೋಡಿದರೆ ತಾರುಣ್ಯದಲ್ಲಿರುವ ವಿದ್ಯಾರ್ಥಿಗಳೇ (ದೊಡ್ಡವರಿಗಿಂತ) ಆದರ್ಶಗಳ, ಕನಸುಗಾರಿಕೆಯ ಚಿಲುಮೆಯಾಗಿರುತ್ತಾರೆ. ಇನ್ನು ಬ್ಲೂ ವೇಲ್, ಕಿಕಿ ಚಾಲೆಂಜ್ ನಂತಹ ಅಪಾಯಕಾರಿ ಆಟಗಳಿಂದ ಅವರನ್ನು ರಕ್ಷಿಸುವುದೂ ಅಗತ್ಯವಾಗಿದೆ.

ತಂದೆ ತಾಯಿಯರನ್ನು ಹೊರತು ಪಡಿಸಿದರೆ ಶಿಕ್ಷಕರು, ಉಪನ್ಯಾಸಕರೇ ಮಕ್ಕಳೊಂದಿಗೆ ಸಮಯ ಕಳೆಯುವ ಕಾರಣ ಅವರನ್ನು ಪ್ರಭಾವಿಸಲು ಶಿಕ್ಷಕರಿಗೆ ಖಂಡಿತ ಸಾಧ್ಯ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಅನೇಕ ದೂರುಗಳು ಇರುವಂತೆಯೇ ಬದಲಾವಣೆಗೆ ಪ್ರಯತ್ನಿಸಿದವರೂ ಹಲವರು. ಪ್ರಾಚೀನ ಭಾರತದ ಗುರು ಕುಲ ಪದ್ಧತಿ, ಇಂಗ್ಲಿಷ್ ವಿದ್ಯಾಭ್ಯಾಸ ಪದ್ಧತಿ, ಮಾಂಟೆಸ್ಸರಿ, ಶಾಂತಿ ನಿಕೇತನ ವಿದ್ಯಾಭ್ಯಾಸ ಪದ್ಧತಿ, ಸ್ವರೂಪ ಗೋಪಾಡ್ಕರ್ ಸಂಸ್ಥೆಗಳಂತಹ ಸಮಾನಾಂತರ ಶಿಕ್ಷಣ ವಿಚಾರಗಳು.. ಹೀಗೆ ಬೇರೆ ಬೇರೆ ಚಿಂತನಾ ವಿಧಾನಗಳನ್ನು ಗ್ರಹಿಸಿ, ಸಾಧ್ಯವಾದರೆ ತಮ್ಮದಾಗಿಸಿಕೊಳ್ಳುತ್ತ, ಇಲ್ಲವಾದರೆ ಭಿನ್ನತೆಯನ್ನು ಗೌರವಿಸುತ್ತ, ತಮ್ಮದೇ ವಿಧಾನಗಳನ್ನು ಶಿಕ್ಷಕರು ಕಂಡುಕೊಳ್ಳಬೇಕಾಗುತ್ತದೆ. ಜಗತ್ತಿನ ಪಲ್ಲಟಗಳು ಕ್ಲಾಸ್ ರೂಂ ಮೇಲೆ ಪ್ರಭಾವ ಬೀರುವಂತೆಯೇ ಕ್ಲಾಸ್ ರೂಮ್ ನ ಅಲೆಗಳು ಜಗತ್ತನ್ನೂ ಪಭಾವಿಸಬಹುದು. ಅಲ್ಲವೇ? ದೇಶದ ಸತ್ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಶಿಕ್ಷಕರು, ಪೋಷಕರು, ಒಟ್ಟಂದದಲ್ಲಿ ಸಮಾಜದ ಪಾತ್ರ ಬಹು ಮುಖ್ಯ.

-ಜಯಶ್ರೀ ಬಿ. ಕದ್ರಿ

6 Responses

 1. Shruthi Sharma says:

  Too good 🙂

 2. Shruthi Sharma says:

  So well written Jayakka.. Loved the mention about ‘Daffodils’. In my school days I always wondered how the daffodils would smell, after seeing its picture!

 3. Shridevi says:

  Nice writing madam

 4. ಶಂಕರ says:

  ತುಂಬಾ ಚೆನ್ನಾಗಿದೆ ಮೇಡಂ.

 5. Rekha says:

  ತುಂಬಾ ಚೆನ್ನಾಗಿ ಮೂಡಿ ಬಂದಿದೆ

 6. Anonymous says:

  Nice writing madam

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: